Attack Helicopters: ವಾಯುಬಲದ ಭದ್ರಕೋಟೆ; ಸಶಸ್ತ್ರ ಪಡೆಗಳಿಗೆ ದಾಳಿ ಹೆಲಿಕಾಪ್ಟರ್​ಗಳ ಆಸರೆ

ಹೆಲಿಕಾಪ್ಟರ್‌ಗಳು ಸಹ ಈಗ ದಾಳಿ ಮತ್ತು ರಕ್ಷಣಾ ತಂತ್ರಗಾರಿಕೆಯ ಯುದ್ಧಗಳಲ್ಲಿ ನಿರ್ಣಾಯಕ ಪಾತ್ರಗಳ ಕಾರಣದಿಂದ ಪ್ರಾಮುಖ್ಯತೆ ಪಡೆಯುತ್ತಿವೆ.

Attack Helicopters: ವಾಯುಬಲದ ಭದ್ರಕೋಟೆ; ಸಶಸ್ತ್ರ ಪಡೆಗಳಿಗೆ ದಾಳಿ ಹೆಲಿಕಾಪ್ಟರ್​ಗಳ ಆಸರೆ
ಎಚ್​ಎಎಲ್ ನಿರ್ಮಿಸಿರುವ ಹಗುರ ಯುದ್ಧ ಹೆಲಿಕಾಪ್ಟರ್ ‘ಧ್ರುವ’
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 23, 2022 | 6:00 AM

ಭಾರತೀಯ ಸೇನಾಪಡೆಗಳ ವೈಮಾನಿಕ ಯುದ್ಧ ಸಾಮರ್ಥ್ಯವು ದೀರ್ಘಕಾಲದವರೆಗೆ ರಫೇಲ್, ಸುಖೋಯ್ 30 ಮುಂತಾದ ಯುದ್ಧ ವಿಮಾನಗಳ ಪ್ರಾಬಲ್ಯದಿಂದಲೇ ತುಂಬಿತ್ತು. ಆದರೆ, ಇತ್ತೀಚೆಗೆ ಪರಿಸ್ಥಿತಿ ಬದಲಾಗಿದೆ. ಹೆಲಿಕಾಪ್ಟರ್‌ಗಳು ಸಹ ಈಗ ದಾಳಿ ಮತ್ತು ರಕ್ಷಣಾ ತಂತ್ರಗಾರಿಕೆಯ ಯುದ್ಧಗಳಲ್ಲಿ ನಿರ್ಣಾಯಕ ಪಾತ್ರಗಳ ಕಾರಣದಿಂದ ಪ್ರಾಮುಖ್ಯತೆ ಪಡೆಯುತ್ತಿವೆ. ದೊಡ್ಡ ಸಂಖ್ಯೆಯ ಯುದ್ಧ ಹೆಲಿಕಾಪ್ಟರ್‌ಗಳ ಮಾಲೀಕತ್ವ ಭಾರತೀಯ ವಾಯುಪಡೆಯ (Indian Air Force – IAF) ಕೈಯಲ್ಲೇ ಇದ್ದರೂ ಸಹ, ಇತ್ತೀಚಿನ ಸಂದರ್ಭದಲ್ಲಿ, ಬದಲಾದ ನೀತಿಯ ಕಾರಣದಿಂದಾಗಿ, ಆರ್ಮಿ ಏವಿಯೇಷನ್ ಕಾರ್ಪ್ಸ್ ಸಹ ದೊಡ್ಡ ಸಂಖ್ಯೆಯಲ್ಲಿ ಯುದ್ಧ ಹೆಲಿಕಾಪ್ಟರ್‌ಗಳನ್ನು ಸೇನೆಗೆ ಸೇರ್ಪಡೆಗೊಳಿಸುತ್ತಿದೆ. ಈಗ ಭಾರತೀಯ ವಾಯುಪಡೆ ಹಾಗೂ ಭಾರತೀಯ ಸೇನೆಗಳೆರಡೂ ಎಂಐ-35, ಎಎಚ್-64ಇ, ಎಚ್​ಎಎಲ್-ರುದ್ರ (Hindustan Aeronautics Limited – HAL) ಹಾಗೂ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್​ಗಳ (ಎಲ್‌ಸಿಎಚ್) ಪಡೆಗಳನ್ನು ಹೊಂದಿವೆ. ಇತರ ಕೆಲವು

ಎಂಐ-35 ಅಟ್ಯಾಕ್ ಹೆಲಿಕಾಪ್ಟರ್

ಎಂಐ-35 ಅಟ್ಯಾಕ್ ಹೆಲಿಕಾಪ್ಟರ್ ಒಂದು ರಷ್ಯಾ ನಿರ್ಮಿತ, ಟ್ವಿನ್ ಎಂಜಿನ್ ಹೊಂದಿರುವ, ಟರ್ಬೋಶಾಫ್ಟ್, ಅಸಾಲ್ಟ್ ಹಾಗೂ ಆ್ಯಂಟಿ ಆರ್ಮರ್ ಹೆಲಿಕಾಪ್ಟರ್ ಆಗಿದೆ. ಪ್ರಸ್ತುತ ಭಾರತೀಯ ವಾಯುಸೇನೆಯ ಬಳಿ ಎಂಐ-35ರ ಕೇವಲ ಎರಡು ಸ್ಕ್ವಾಡ್ರನ್‌ಗಳಷ್ಟೇ ಇವೆ. ಈ ಎರಡರಲ್ಲಿ ಒಂದು ಸ್ಕ್ವಾಡ್ರನ್ ಕಾರ್ಯ ನಿರ್ವಹಿಸಬಲ್ಲದಾದರೆ, ಇನ್ನೊಂದು ಪ್ರಮುಖ ಕೂಲಂಕುಷ ಪರೀಕ್ಷೆಯನ್ನು ಎದುರು ನೋಡುತ್ತಿದೆ. ಈ ಹೆಲಿಕಾಪ್ಟರ್ ಒಂದು ಟನ್ (1,000 ಕೆಜಿ) ತೂಕದ ಬಾಹ್ಯ ಶಸ್ತ್ರಾಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಶ್ಟುರ್ಮ್ ಆ್ಯಂಟಿ – ಟ್ಯಾಂಕ್ ಕ್ಷಿಪಣಿಗಳನ್ನೂ ಹೊತ್ತೊಯ್ಯಬಲ್ಲದಾಗಿದೆ. ಈ ಹೆಲಿಕಾಪ್ಟರಿನ ಮೂಗಿನಲ್ಲಿ, ನಾಲ್ಕು ಬ್ಯಾರಲ್‌ಗಳ 12.7 ಎಂಎಂ ರೋಟರಿ ಗನ್ ಸಹ ಅಳವಡಿಸಲಾಗಿದೆ. ಈ ಹೆಲಿಕಾಪ್ಟರ್ ಎಂಟು ಕಮಾಂಡೋಗಳ ದಾಳಿಯ ತಂಡವನ್ನು ಕರೆದೊಯ್ಯಬಲ್ಲದಾಗಿದ್ದು, ಗಂಟೆಗೆ 310 ಕಿಲೋಮೀಟರುಗಳ ಗರಿಷ್ಠ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಎಂಐ- 35 ಅಟ್ಯಾಕ್ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಪಡೆಗೆ ಮೂರು ದಶಕಗಳಿಂದ ದಕ್ಷ ಸೇವೆ ಸಲ್ಲಿಸಿವೆ. ಇನ್ನೂ ಒಂದು ದಶಕದ ಕಾಲ ಸೇವೆ ಸಲ್ಲಿಸಿದ ಬಳಿಕ ಈ ಹೆಲಿಕಾಪ್ಟರ್‌ಗಳು ಸೇವೆಯಿಂದ ನಿವೃತ್ತವಾಗಲಿವೆ. ಪ್ರಸ್ತುತ ಈ ಅಟ್ಯಾಕ್ ಹೆಲಿಕಾಪ್ಟರಿನ ಕೇವಲ ಒಂದು ಸ್ಕ್ವಾಡ್ರನ್ ಮಾತ್ರ ಸೇವೆಯಲ್ಲಿ ಉಳಿದಿರುವುದರಿಂದ, ವಾಯುಪಡೆಗೆ ಇವುಗಳನ್ನು ಉಪಯೋಗಿಸುವ ಸನ್ನಿವೇಶಗಳು ಬಂದಾಗ ಸಾಕಷ್ಟು ಸವಾಲುಗಳು ಎದುರಾಗಲಿವೆ.

ಎಎಚ್-64ಇ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್

ಎಎಚ್-64ಇ ಒಂದು ಬಹು ಪಾತ್ರಗಳ (Multi Role) ಅಮೆರಿಕಾ ಮೂಲದ ಬಹುರಾಷ್ಟ್ರೀಯ ಸಂಸ್ಥೆಯಾದ ಬೋಯಿಂಗ್ ಕಂಪನಿ ನಿರ್ಮಿಸಿರುವ ಅಟ್ಯಾಕ್ ಹೆಲಿಕಾಪ್ಟರ್ ಆಗಿದೆ. ಇದು ಜಗತ್ತಿನ ಅತ್ಯಂತ ಆಧುನಿಕ ಬಹುಪಾತ್ರಗಳನ್ನು ನಿರ್ವಹಿಸಬಲ್ಲ ಯುದ್ಧ ಹೆಲಿಕಾಪ್ಟರ್ ಎಂದು ಕರೆಯಲ್ಪಟ್ಟಿದೆ. ಇದನ್ನು ಅಮೇರಿಕಾದ ಸೇನಾಪಡೆಗಳು ಸಾಕಷ್ಟು ವರ್ಷಗಳಿಂದ ಉಪಯೋಗಿಸುತ್ತಾ ಬಂದಿವೆ. ಅಷ್ಟೇ ಅಲ್ಲದೆ, ಭಾರತ ಮಾತ್ರವಲ್ಲ, ಈ ಹೆಲಿಕಾಪ್ಟರ್ ಅನ್ನು ವಿಶ್ವದ ಇತರ 13 ರಾಷ್ಟ್ರಗಳು ಉಪಯೋಗಿಸುತ್ತಿವೆ.

ಭಾರತದ ಬಳಿ ಪ್ರಸ್ತುತ 22 ಎಎಚ್-64ಇ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳಿವೆ. ಅವುಗಳು ಭಾರತೀಯ ವಾಯುಪಡೆಯಲ್ಲಿ 2 ಸ್ಕ್ವಾಡ್ರನ್‌ಗಳಾಗಿ ವಿಭಾಗಿಸಲ್ಪಟ್ಟಿವೆ. ಈ ಯುದ್ಧ ಹೆಲಿಕಾಪ್ಟರ್‌ಗಳನ್ನು ಭಾರತೀಯ ವಾಯುಪಡೆಯ ಮಾನದಂಡಗಳಿಗೆ ತಕ್ಕಂತೆ ಹೊಂದಿಕೆಯಾಗುವಂತೆ ಮಾರ್ಪಡಿಸಲಾಗಿದೆ. ಭಾರತೀಯ ಸೇನೆಗಾಗಿ ಇನ್ನೂ ಆರು ಇಂತಹ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಆದೇಶಿಸಲಾಗಿದೆ. ಅಪಾಚೆ ಹೆಲಿಕಾಪ್ಟರ್‌ಗಳಿಗೆ ಅಗತ್ಯವಿರುವ ಏರೋ ಸ್ಟ್ರಕ್ಚರ್‌ಗಳನ್ನು ಜಗತ್ತಿನಾದ್ಯಂತ ಇರುವ ಗ್ರಾಹಕರಿಗೆ ಒದಗಿಸುವ ನಿಟ್ಟಿನಲ್ಲಿ ಹೈದರಾಬಾದ್ ಮೂಲದ, ಜಂಟಿ ಸಂಸ್ಥೆಯಾದ ಟಾಟಾ ಬೋಯಿಂಗ್ ಏರೋಸ್ಪೇಸ್ ಲಿಮಿಟೆಡ್ ಸಂಸ್ಥೆ ಉತ್ಪಾದಿಸುತ್ತಿದೆ.

ಅಪಾಚೆ ಹೆಲಿಕಾಪ್ಟರನ್ನು ಭಾರತೀಯ ವಾಯುಪಡೆಗೆ ಒಂದು ಗಮನಾರ್ಹವಾದ ಸಂದರ್ಭದಲ್ಲೇ ಸೇರಿಸಲಾಗಿದೆ. ಭಾರತ ಮತ್ತು ಚೀನಾಗಳ ನಡುವೆ ವಾಸ್ತವ ಗಡಿನಿಯಂತ್ರಣ ರೇಖೆಯಲ್ಲಿ (Line of Actual Control – LAC) ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದ ಇವುಗಳನ್ನು ವಾಯುಪಡೆಗೆ ಸೇರಿಸಲಾಯಿತು. ಚೀನಾ ವಿರುದ್ಧದ ಸಂಘರ್ಷದ ಮಧ್ಯದಲ್ಲೇ ನವದೆಹಲಿ ಈ ಹೆಲಿಕಾಪ್ಟರ್‌ಗಳನ್ನು ಲೇಹ್‌ನಲ್ಲಿ ನಿಯೋಜಿಸಿತು. ಅಪಾಚೆ ಹೆಲಿಕಾಪ್ಟರ್ ಅತ್ಯಂತ ಕಠಿಣವಾದ ಪರ್ವತ ಪ್ರದೇಶಗಳಲ್ಲಿ ಕಷ್ಟಕರವಾದ ವಾಯು ಕಾರ್ಯಾಚರಣೆಗಳನ್ನು ಕೈಗೊಳ್ಳುವಲ್ಲಿ ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಸಾಕಷ್ಟು ಅಭಿವೃದ್ಧಿಪಡಿಸಲಿದೆ. ಇದಷ್ಟೇ ಅಲ್ಲದೆ, ಅಪಾಚೆ ಪಡೆಯ ಸೇರ್ಪಡೆಯಿಂದಾಗಿ ಭಾರತೀಯ ಸೇನೆಯ ಕಾರ್ಯಾಚರಣೆಗಳ ಸಂದರ್ಭದಲ್ಲಿ ಭೂಸೇನಾ ಪಡೆಗಳಿಗೆ ಬೆಂಬಲ ನೀಡಲೂ ಅಪಾಚೆ ಹೆಲಿಕಾಪ್ಟರ್ ಬಳಕೆಯಾಗಲಿದೆ.

ಈ ಹೆಲಿಕಾಪ್ಟರ್ ಗಾಳಿಯಿಂದ ಭೂಮಿಗೆ ದಾಳಿ ಮಾಡುವ ಹೆಲ್ ಫೈರ್ ಕ್ಷಿಪಣಿ, 70ಎಂಎಂ ಹೈಡ್ರಾ ರಾಕೆಟ್ ಹಾಗೂ ಗಾಳಿಯಿಂದ ಗಾಳಿಗೆ ದಾಳಿ ಮಾಡುವ ಸ್ಟ್ರಿಂಜರ್ ಕ್ಷಿಪಣಿಗಳು ಸೇರಿದಂತೆ ವಿವಿಧ ಆಯುಧಗಳನ್ನು ಕೊಂಡೊಯ್ಯಲು ಸಮರ್ಥವಾಗಿದೆ. ಅದರೊಡನೆ, ಅಪಾಚೆ ಹೆಲಿಕಾಪ್ಟರ್ 30ಎಂಎಂ ಗನ್ ಹಾಗೂ 1,200 ಸುತ್ತು ದಾಳಿಗೆ ಬೇಕಾಗುವ ಮದ್ದುಗುಂಡುಗಳನ್ನು ಹೊಂದಿದೆ. ಈ ಹೆಲಿಕಾಪ್ಟರ್ ಒಂದು ಫೈರ್ ಕಂಟ್ರೋಲ್ ರೇಡಾರನ್ನೂ ಹೊಂದಿದ್ದು, ಅದು 360 ಡಿಗ್ರಿ ವ್ಯಾಪ್ತಿಯನ್ನು ಹೊಂದಿದೆ. ಅದರೊಡನೆ ಇದರ ಮೂಗಿಗೆ ಅಳವಡಿಸಲಾಗಿರುವ ಸೆನ್ಸರ್ ದಾಳಿಯ ವೇಳೆ ಗುರಿಯನ್ನು ಹೊಂದಿಸಲು ಹಾಗೂ ರಾತ್ರಿ ಕಾರ್ಯಾಚರಣೆಯ ಸಂದರ್ಭದಲ್ಲಿ ವೀಕ್ಷಣೆಗೆ ಸಹಕಾರಿಯಾಗಿದೆ.

LCH-Dhruv

ಎಚ್​ಎಎಲ್ ನಿರ್ಮಿತ ಹಗುರ ಯುದ್ಧ ಹೆಲಿಕಾಪ್ಟರ್ ’ಧ್ರುವ್’ (ಒಳಚಿತ್ರದಲ್ಲಿ ಲೇಖಕ ಗಿರೀಶ್ ಲಿಂಗಣ್ಣ)

ಎಚ್ಎಎಲ್ ರುದ್ರ

ಎಚ್ಎಎಲ್ ರುದ್ರ ಎಂಬುದು ಧ್ರುವ್ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್‌ನ (ಎಎಲ್ಎಚ್) ವೆಪನ್ ಸಿಸ್ಟಮ್ ಇಂಟಗ್ರೇಟೆಡ್ (ಡಬ್ಲ್ಯುಎಸ್ಐ) ಎಂಕೆ-IV ಆವೃತ್ತಿಯಾಗಿದೆ. ರುದ್ರ ಸಂಪೂರ್ಣವಾಗಿ ಭಾರತವೇ ನಿರ್ಮಿಸಿರುವ ಮೊದಲ ಯುದ್ಧ ಹೆಲಿಕಾಪ್ಟರ್ ಎಂಬುದಾಗಿ ವಿಶೇಷ ಹೆಸರು ಸಂಪಾದಿಸಿದೆ. ಈ ಟ್ವಿನ್ ಇಂಜಿನ್ ಹೊಂದಿರುವ ಹೆಲಿಕಾಪ್ಟರ್ ಅನ್ನು ಎಎಲ್ಎಚ್ ಡಬ್ಲ್ಯುಎಸ್ಐ ಎಂದೂ ಕರೆಯಲಾಗಿದ್ದು, ಇದರ ವಿನ್ಯಾಸ ಹಾಗೂ ನಿರ್ಮಾಣವನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಭಾರತೀಯ ಸೇನೆಗಾಗಿಯೇ ಕೈಗೊಂಡಿದೆ. ರುದ್ರ ಎಂಕೆ-IV ಆವೃತ್ತಿ 2013 ಫೆಬ್ರವರಿ ತಿಂಗಳಲ್ಲೇ ಇನಿಷಿಯಲ್ ಆಪರೇಷನಲ್ ಕ್ಲಿಯರೆನ್ಸ್ (ಐಓಸಿ) ಎಂಬ ಹಾರಾಟ ನಡೆಸುವ ಅನುಮತಿ ಪಡೆದುಕೊಂಡಿದೆ.

ರುದ್ರ ಹೆಲಿಕಾಪ್ಟರ್ ಅನ್ನು ಹಲವಾರು ಕಾರ್ಯಗಳಿಗೆ ಬಳಕೆಯಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಸೈನಿಕರ ಸಾಗಾಟ, ವಾಯು ಬೆಂಬಲ, ಸ್ಥಳ ಪರಿಶೀಲನೆ, ಹಾಗೂ ಆ್ಯಂಟಿ ಟ್ಯಾಂಕ್ ಯುದ್ಧಗಳಲ್ಲಿ ಬಳಕೆಯಾಗುತ್ತದೆ. ಎಎಎಲ್ಎಚ್ ಡಬ್ಲ್ಯುಎಸ್ಐ 6,000 ಮೀಟರ್‌ಗಳಿಗೂ ಹೆಚ್ಚಿನ ಎತ್ತರಕ್ಕೆ ಏರಬಲ್ಲ ಸಾಮರ್ಥ್ಯ ಹೊಂದಿದೆ. ಈ ಹೆಲಿಕಾಪ್ಟರ್ ಫ್ರೆಂಚ್ ನಿರ್ಮಾಣದ 20ಎಂಎಂ ಟರೆಟ್ ಗನ್, ಮುಂದಕ್ಕೆ ನೋಡುವಂತಹ ಇನ್ಫ್ರಾ ರೆಡ್ ಹಾಗೂ ಥರ್ಮಲ್ ಇಮೇಜಿಂಗ್ ಸೈಟ್ಸ್ ಇಂಟರ್ಫೇಸ್, ಹೆಲಿನಾ ಆ್ಯಂಟಿ ಟ್ಯಾಂಕ್ ನಿರ್ದೇಶಿತ ಕ್ಷಿಪಣಿಗಳು (ಎಟಿಜಿಎಂ), ಬೆಲ್ಜಿಯನ್ 70ಎಂಎಂ ರಾಕೆಟ್ ಪಾಡ್‌ಗಳು, ಎಂಬಿಡಿಎ ಇಂದ ಮಿಸ್ಟ್ರಲ್ ಗಾಳಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿಗಳನ್ನು ಹೊಂದಿದೆ. ಇದರೊಂದಿಗೆ ರುದ್ರದಲ್ಲಿ ಎಸ್ಎಎಬಿ ಇಂಟಗ್ರೇಟೆಡ್ ಡಿಫೆನ್ಸಿವ್ ಏಡ್ಸ್ ಸೂಟ್, ಐಆರ್ ಜಾಮರ್, ರೇಡಾರ್ ವಾರ್ನಿಂಗ್ ರಿಸೀವರ್, ಹಾಗೂ ಫ್ಲೇರ್ ಮತ್ತು ಚಾಫ್ ಡಿಸ್ಪೆನ್ಸರ್‌ಗಳನ್ನು ಹೊಂದಿದೆ. ರುದ್ರ 660 ಕಿಲೋಮೀಟರ್​ಗಳ ವ್ಯಾಪ್ತಿಯನ್ನೂ ಹೊಂದಿದೆ.

ಜೂನ್ 2020ರ ವೇಳೆಗೆ, ಭಾರತೀಯ ಸೇನೆಯಲ್ಲಿ 58 ರುದ್ರ ಹೆಲಿಕಾಪ್ಟರ್‌ಗಳು ಸೇವೆ ಸಲ್ಲಿಸುತ್ತಿವೆ. ನೂತನವಾಗಿ ಸೇರ್ಪಡೆಗೊಂಡ ಹೆಲಿಕಾಪ್ಟರ್‌ಗಳು ಕಾರ್ಯಾಚರಣೆಯ ಸಂದರ್ಭದಲ್ಲಿ ತಮ್ಮ ಸಾಮರ್ಥ್ಯವನ್ನು ಇನ್ನೂ ಸಾಬೀತುಪಡಿಸಬೇಕಿದೆ.

ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ, ಭಾರತೀಯ ಸೇನಾಪಡೆಗಳಿಗೆ ಎತ್ತರದ ಪ್ರದೇಶಗಳಲ್ಲಿರುವ ಗುರಿಗಳ ವಿರುದ್ಧ ಸಮರ್ಥವಾಗಿ ಕಾರ್ಯಾಚರಣೆ ನಡೆಸಬಲ್ಲ ಒಂದು ಯುದ್ಧ ಹೆಲಿಕಾಪ್ಟರ್‌ನ ಅಗತ್ಯವಿದೆ ಎಂದು ಸ್ಪಷ್ಟವಾಗಿ ಗೋಚರಿಸಿತ್ತು. ಹಾಗಾಗಿ ಎಚ್ಎಎಲ್ ಈ ಪ್ರತ್ಯೇಕ ಪರಿಸ್ಥಿತಿಯಲ್ಲಿ ಭಾರತ ಎದುರಿಸುತ್ತಿದ್ದ ಸಾಮರ್ಥ್ಯದ ಕೊರತೆಯನ್ನು ನೀಗಿಸುವಂತೆ ಮಾಡಲು ಒಂದು ಹೆಲಿಕಾಪ್ಟರ್ ನಿರ್ಮಾಣ ಕಾರ್ಯಕ್ಕೆ ತೊಡಗಿತು. ಎಚ್ಎಎಲ್ ಆ ಬಳಿಕ ಧ್ರುವ್ ಎಎಲ್ಎಚ್ ಕೇಂದ್ರಿತವಾದ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (ಎಲ್‌ಸಿಎಚ್) ನಿರ್ಮಾಣದ ಪರಿಕಲ್ಪನೆಯನ್ನು ರೂಪಿಸಿತು. ಎಲ್ಸಿಎಚ್ ನಿರ್ಮಾಣದ ಯೋಜನೆಗೆ 2006ರಲ್ಲಿ ಚಾಲನೆ ನೀಡಲಾಯಿತು. ಇದರ ಮೂಲ ಮಾದರಿ ತನ್ನ ಮೊದಲ ಹಾರಾಟವನ್ನು ಮಾರ್ಚ್ 29, 2010ರಂದು ಕೈಗೊಂಡಿತು.

ಎಲ್‌ಸಿಎಚ್ ಒಂದು ಬಹುಪಾತ್ರಗಳನ್ನು ನಿರ್ವಹಿಸಬಲ್ಲ ಅಟ್ಯಾಕ್ ಹೆಲಿಕಾಪ್ಟರ್ ಆಗಿದೆ. ಎಲ್‌ಸಿಎಚ್ ತನ್ನ ವರ್ಗದಲ್ಲಿ ಜಗತ್ತಿನಲ್ಲೇ ಅತ್ಯಂತ ಕನಿಷ್ಠ ಭಾರ ಹಾಗೂ ಅತ್ಯಂತ ಎತ್ತರದಲ್ಲಿ ಕಾರ್ಯಾಚರಣೆ ಕೈಗೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಹೆಲಿಕಾಪ್ಟರ್ನಲ್ಲಿ ಎರಡು ಎಚ್ಎಎಲ್ ಟರ್ಬೋಮೆಕಾ ಶಕ್ತಿ ಟರ್ಬೋಶಾಫ್ಟ್ ಇಂಜಿನ್‌ಗಳನ್ನು ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 270 ಕಿಲೋಮೀಟರ್ ಆಗಿದ್ದು, ಗರಿಷ್ಠ 6,500 ಮೀಟರ್ ಎತ್ತರದಲ್ಲಿ ಕಾರ್ಯಾಚರಣೆ ನಡೆಸಬಲ್ಲದಾಗಿದೆ. ಎಲ್‌ಸಿಎಚ್ 700 ಕಿಲೋಮೀಟರ್ ಚಾಲನಾ ವ್ಯಾಪ್ತಿ ಹೊಂದಿದ್ದು, 4,800 ಮೀಟರ್‌ಗೂ ಹೆಚ್ಚಿನ ಎತ್ತರದ ಪ್ರದೇಶದಲ್ಲಿ ಲ್ಯಾಂಡ್ ಮಾಡುವ ಮೂಲಕವೂ ಪರೀಕ್ಷಿಸಲ್ಪಟ್ಟಿದೆ. ಈ ಹೆಲಿಕಾಪ್ಟರ್ ಸಿಯಾಚಿನ್‌ನಲ್ಲಿ ಲ್ಯಾಂಡ್ ಆಗಿರುವ ಈ ಮಾದರಿಯ ಮೊದಲ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆ ಸಂಪಾದಿಸಿದೆ. ಈ ಹೆಲಿಕಾಪ್ಟರ್‌ಗೆ 2016ರಲ್ಲಿ ಸರ್ಟಿಫಿಕೇಷನ್ ಲಭ್ಯವಾಗಿದ್ದು, ಇದರ ಲಿಮಿಟೆಡ್ ಸೀರೀಸ್ ಮಾದರಿಯ ನಿರ್ಮಾಣ 2017ರಲ್ಲಿ ಆರಂಭವಾಯಿತು. ಈ ಮಾದರಿಯ ಒಟ್ಟು 176 ಹೆಲಿಕಾಪ್ಟರ್‌ಗಳು ನಿರ್ಮಾಣಗೊಳ್ಳುತ್ತಿದ್ದು, 114 ಹೆಲಿಕಾಪ್ಟರ್‌ಗಳು ಆರ್ಮಿ ಏವಿಯೇಷನ್ ಕಾರ್ಪ್ಸ್ ನಲ್ಲಿ ಸೇವೆ ಸಲ್ಲಿಸಲಿದ್ದು, 62 ಹೆಲಿಕಾಪ್ಟರ್‌ಗಳು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳ್ಳಲಿವೆ.

ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿ (ಸಿಸಿಎಸ್) ಇತ್ತೀಚೆಗೆ ರೂ 3,887 ಕೋಟಿ ವೆಚ್ಚದಲ್ಲಿ 15 ಎಲ್ಸಿಎಚ್ ಲಿಮಿಟೆಡ್ ಸೀರೀಸ್ ಹೆಲಿಕಾಪ್ಟರ್ ನಿರ್ಮಾಣಕ್ಕೆ ತನ್ನ ಅನುಮತಿ ನೀಡಿದೆ.

ಎಲ್‌ಸಿಎಚ್ ನಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳಿರಲಿದ್ದು, ಇದರಲ್ಲಿ ಸ್ಟೆಲ್ತ್ ವೈಶಿಷ್ಟ್ಯಗಳಾದ ಕನಿಷ್ಟ ವಿಷುವಲ್, ಆರಲ್ ಹಾಗೂ ಇನ್ಫ್ರಾ ರೆಡ್ ಸಿಗ್ನೇಚರ್​ಗಳನ್ನು ಹೊಂದಿರಲಿದೆ. ಈ ಹೆಲಿಕಾಪ್ಟರ್ ಕ್ರಾಷ್ ವರ್ತಿನೆಸ್ ವೈಶಿಷ್ಟ್ಯವನ್ನು ಹೊಂದಿದ್ದು, ಕ್ರಾಷ್ ವರ್ತಿ ತಳ ವಿನ್ಯಾಸವನ್ನು ಹೊಂದಿದ್ದು, ಅಪಘಾತವಾದ ಸಂದರ್ಭದಲ್ಲಿ ಹೆಚ್ಚಿನ ಉಳಿಯುವ ಸಾಮರ್ಥ್ಯವನ್ನು ಹೊಂದಿದೆ. ಈ ಹೆಲಿಕಾಪ್ಟರ್ ನಲ್ಲಿ ಎಎಎಂಗಳು, ಎಟಿಜಿಎಂಗಳು, 20ಎಂಎಂ ಗನ್ ಹಾಗೂ 70 ಎಂಎಂ ರಾಕೆಟ್ ಗಳನ್ನೂ ಹೊಂದಿರಲಿದೆ.

ಈ ಹೆಲಿಕಾಪ್ಟರನ್ನು ಇನ್ನು ಮುಂದಿನ 3 ರಿಂದ ನಾಲಕ್ಕು ದಶಕಗಳ ಕಾಲ ತಲೆದೋರಬಹುದಾದ ಸಂದರ್ಭಗಳಿಗೆ, ಅಗತ್ಯಗಳಿಗೆ ತಕ್ಕ ಹಾಗೆ ವಿನ್ಯಾಸಗೊಳಿಸಲಾಗಿದೆ.

(ಲೇಖಕರು: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)