Bal Gangadhar Tilak Birth Anniversary: ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರ ಜನ್ಮದಿನ; ಇಲ್ಲಿವೆ ಕೆಲವು ಕುತೂಹಲಕಾರಿ ಸಂಗತಿಗಳು
ರಾಷ್ಟ್ರವ್ಯಾಪಿ ಚಳುವಳಿಯ ಅಗತ್ಯವನ್ನು ಪ್ರತಿಪಾದಿಸುತ್ತಾ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರ 166ನೇ ಜನ್ಮ ದಿನವಿಂದು. ಇವರ ಕೆಲವು ಆಸಕ್ತಿದಾಯಿಕ ಸಂಗತಿಗಳು ಇಲ್ಲಿವೆ.
ಪೂರ್ಣ ಸ್ವರಾಜ್ಯ ಅರ್ಥ ಪೂರ್ಣ ಸ್ವಾತಂತ್ರ್ಯ ಮತ್ತು ರಾಷ್ಟ್ರವ್ಯಾಪಿ ಚಳುವಳಿಯ ಅಗತ್ಯವನ್ನು ಪ್ರತಿಪಾದಿಸುತ್ತಾ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರ 166ನೇ ಜನ್ಮ ದಿನವಿಂದು. ಭಾರತೀಯ ರಾಷ್ಟ್ರೀಯತಾವಾದಿ, ಶಿಕ್ಷಕ ಮತ್ತು ಸ್ವಾತಂತ್ರ್ಯ ಹೋರಾಟಗಾರರೂ ಆಗಿರುವ ಬಾಲಗಂಗಾಧರ್ ತಿಲಕ್, ತ್ರಿಮೂರ್ತಿಗಳೆಂದು ಕರೆಸಿಕೊಳ್ಳುತ್ತಿದ್ದ ತೀವ್ರಗಾಮಿ ಸ್ವಾತಂತ್ರ್ಯ ಹೋರಾಟಗಾರರಾದ ಲಾಲ್ ಬಾಲ್ ಪಾಲ್ ಅವರಲ್ಲಿ ಒಬ್ಬರಾಗಿದ್ದಾರೆ. ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಎಂದು ಸಿಂಹ ಘರ್ಜನೆ ಮಾಡುತ್ತಿದ್ದ ತಿಲಕರು ಯಾರು? ಅವರ ಬಗೆಗಿನ ಕೆಲವೊಂದು ಕುತೂಹಲಕಾರಿ ಸಂಗತಿಗಲು ಇಲ್ಲಿವೆ ನೋಡಿ.
ತಿಲಕರ ಜೀವನ ಚರಿತ್ರೆ
ಕೇಶವ ಗಂಗಾಧರ ತಿಲಕ್ ಅವರು ಇಂದಿನ ಮಹಾರಾಷ್ಟ್ರದ (ಆಗಿನ ಬಾಂಬೆ ಪ್ರೆಸಿಡೆನ್ಸಿ) ರತ್ನಗಿರಿ ಜಿಲ್ಲೆಯ ಪ್ರಧಾನ ಕಛೇರಿಯಾದ ರತ್ನಗಿರಿಯಲ್ಲಿ ಮರಾಠಿ ಹಿಂದೂ ಚಿತ್ಪಾವನ್ ಬ್ರಾಹ್ಮಣ ಕುಟುಂಬದಲ್ಲಿ 23 ಜುಲೈ 1856 ರಂದು ಜನಿಸಿದರು. ಪದವಿ ವ್ಯಾಸಾಂಗದ ನಂತರ 1879 ರಲ್ಲಿ ಸರ್ಕಾರಿ ಕಾನೂನು ಕಾಲೇಜಿನಲ್ಲಿ ತಮ್ಮ LLB ಪದವಿಯನ್ನು ಪಡೆದರು. ನಂತರ ಪುಣೆಯ ಖಾಸಗಿ ಶಾಲೆಯಲ್ಲಿ ಗಣಿತವನ್ನು ಕಲಿಸಲು ಪ್ರಾರಂಭಿಸಿದರು. ಹೊಸ ಶಾಲೆಯಲ್ಲಿ ಸಹೋದ್ಯೋಗಿಗಳೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಅವರು ಹಿಂದೆ ಸರಿದು ಪತ್ರಕರ್ತರಾದರು. ತಿಲಕರು ಸಾರ್ವಜನಿಕ ವ್ಯವಹಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ತಿಲಕರ ಬಗೆಗಿನ ಕೆಲವು ಕುತೂಹಲಕಾರಿ ಸಂಗತಿಗಳು
– ತಿಲಕರು ಸ್ವಾತಂತ್ರ್ಯ ಪೂರ್ವದಲ್ಲಿ ಕೇಸರಿ ಮತ್ತು ಮರಾಠ ಎಂಬ ವಾರಪತ್ರಿಕೆಗಳನ್ನು ಪ್ರಾರಂಭಿಸಿದರು. ಕೇಸರಿ ಮರಾಠಿ ಭಾಷೆಯಲ್ಲಿದ್ದರೆ, ಮರಾಠ ಪತ್ರಿಕೆ ಇಂಗ್ಲಿಷ್ ವಾರಪತ್ರಿಕೆಯಾಗಿತ್ತು.
– ಬ್ರಿಟಿಷರು ತಿಲಕ್ ಅವರ ಆಲೋಚನೆಗಳು ಮತ್ತು ಸ್ವಾತಂತ್ರ್ಯ ಹೋರಾಟದ ಮಾರ್ಗಕ್ಕಾಗಿ ಅವರನ್ನು ‘ಭಾರತೀಯ ಅಶಾಂತಿಯ ಪಿತಾಮಹ’ ಎಂದು ಬ್ರಿಟಿಷ್ ಲೇಖಕ ಸರ್ ವ್ಯಾಲೆಂಟೈನ್ ಚಿರೋಲ್ ಕರೆದರು.
– ತಿಲಕರು ಲಾಲ್ ಬಾಲ್ ಪಾಲ್ ತ್ರಿಮೂರ್ತಿಗಳ ಅವಿಭಾಜ್ಯ ಅಂಗವಾದರು. ಅವರು ಲಾಲಾ ಲಜಪತ್ ರಾಯ್ (ಲಾಲ್) ಮತ್ತು ಬಿಪಿನ್ ಚಂದ್ರ ಪಾಲ್ (ಪಾಲ್) ಅವರೊಂದಿಗೆ ಸೇರಿಕೊಂಡು ಸ್ವಾತಂತ್ರ್ಯ ಚಳವಳಿಯನ್ನು ಮುಂದುವರಿಸಿದರು.
– 1890 ರಲ್ಲಿ ತಿಲಕರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು ಮತ್ತು ಸ್ವರಾಜ್ ಚಳುವಳಿಯನ್ನು ಪ್ರಾರಂಭಿಸಿದರು.
– ತಿಲಕ್ ಅವರು ‘ಸ್ವರಾಜ್ಯ ನನ್ನ ಜನ್ಮ ಹಕ್ಕು ಮತ್ತು ನಾನು ಅದನ್ನು ಪಡೆದೇ ತೀರುತ್ತೇನೆ’ ಎಂಬ ರೋಚಕ ಘೋಷಣೆಯೊಂದಿಗೆ ಇಂಡಿಯನ್ ಹೋಮ್ ರೂಲ್ ಲೀಗ್ ಅನ್ನು ಸ್ಥಾಪಿಸಿದರು. ಮುಂದೆ ಅದರ ಅಧ್ಯಕ್ಷರಾಗಿಯೂ ಕೆಲಸ ಮಾಡಿದರು.
– ಭಾರತೀಯರ ನಡುವಿನ ಏಕತೆಯನ್ನು ಬಲಪಡಿಸಲು ಗಣೇಶ ಚತುರ್ಥಿ ಹಬ್ಬವನ್ನು ಆರಂಭಿಸಿದರು. ಆ ಮೂಲಕ ಹಲವಾರು ದಿನಗಳ ಮೆರವಣಿಗೆ, ಸಂಗೀತ ಮತ್ತು ಆಹಾರವನ್ನು ಒಳಗೊಂಡಿರುವ ಭವ್ಯವಾದ ಆಚರಣೆಗಳ ಕಲ್ಪನೆಯನ್ನು ಪ್ರಸ್ತಾಪಿಸಿದರು.
– ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನವಾದ ‘ಶಿವ ಜಯಂತಿ’ಯನ್ನು ಆಚರಿಸಲು ತಿಲಕರು ಶಿವಾಜಿ ನಿಧಿ ಸಮಿತಿಯನ್ನು ಪ್ರಾರಂಭಿಸಿದರು.
– ತಿಲಕ್ ಅವರು ಭಾರತದ ಯುವಕರಿಗೆ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಡೆಕ್ಕನ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು.
– ತಿಲಕ್ ಅವರು ಅನೇಕ ಸಂದರ್ಭಗಳಲ್ಲಿ ದೇಶದ್ರೋಹದ ಆರೋಪದ ಅಡಿಯಲ್ಲಿ ವಿಚಾರಣೆಗೆ ಒಳಗಾದರು. ಬ್ರಿಟಿಷ್ ರಾಜ್ ವಿರುದ್ಧ ಅಸಮಾಧಾನವನ್ನು ಬೋಧಿಸಿದ್ದಕ್ಕಾಗಿ ಅವರಿಗೆ 18 ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು.
– ಸೆರೆಮನೆಯಲ್ಲಿದ್ದಾಗಲೂ ಓದು, ಬರವಣಿಗೆಯನ್ನು ಮುಂದುವರಿಸಿದ ತಿಲಕರು ಗೀತಾ ರಹಸ್ಯವನ್ನು ಬರೆಯುತ್ತಾರೆ. ಈ ಪುಸ್ತಕವನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಸ್ವಾತಂತ್ರ್ಯ ಹೋರಾಟಕ್ಕೆ ದಾನ ಮಾಡಿದರು.
Published On - 9:55 am, Sat, 23 July 22