Ganga Saptami 2021: ಇಂದು ಗಂಗಾ ಸಪ್ತಮಿ.. ಇಲ್ಲಿದೆ ಈ ದಿನದ ಮಹತ್ವ
ಭೂಮಿಗಿಳಿದ ಗಂಗೆ ತಾನು ಮೋಕ್ಷದಾಯಕಳೆಂಬ ಅಹಂನಿದ ಭೋರ್ಗರೆದು ಹರಿಯಲಾರಂಭಿಸುತ್ತಾಳೆ. ಈ ವೇಳೆ ಜಹ್ನು ಮಹರ್ಷಿಯ ಆಶ್ರಮ ನೀರಿನಲ್ಲಿ ಕೊಚ್ಚಿ ಹೋಯಿತು. ಇದರಿಂದ ಕುಪಿತರಾದ ಜಹ್ನು ಮಹರ್ಷಿಗಳು ಗಂಗೆಯನ್ನು ಆಪೋಶಿಸಿದರು(ಕುಡಿದರು).
ಗಂಗಾ ಸಪ್ತಮಿ.. ಹೆಸರೇ ಸೂಚಿಸುವಂತೆ ಗಂಗಾ ಸಪ್ತಮಿ, ಗಂಗಾ ಜಯಂತಿ ಅಥವಾ ಗಂಗಾ ಪೂಜೆಯನ್ನು ಗಂಗಾ ದೇವತೆ ಅಥವಾ ಮಾ ಗಂಗಾಗೆ ಅರ್ಪಿಸಲಾಗಿದೆ. ಗಂಗಾ ಸಪ್ತಮಿ ಹಿಂದೂ ಭಕ್ತರಿಗೆ ಪವಿತ್ರ ದಿನ. ಪುರಾಣಗಳ ಪ್ರಕಾರ, ಈ ದಿನ ಗಂಗಾ ದೇವಿಯು ಭೂಮಿಯ ಮೇಲೆ ಮರುಜನ್ಮ ಪಡೆದಳು. ಗಂಗಾ ನದಿ ಮತ್ತು ಅದರ ಉಪನದಿಗಳು ಹರಿಯುವ ಸ್ಥಳಗಳಲ್ಲಿ ಈ ಹಬ್ಬವು ವಿಶೇಷವಾಗಿ ಆಚರಿಸಲಾಗುತ್ತೆ. ಗಂಗಾ ನದಿಯನ್ನು ಭಾರತದಲ್ಲಿ ಪವಿತ್ರ ನದಿ ಎಂದು ಪರಿಗಣಿಸಲಾಗಿದೆ.
ಗಂಗಾ ಸಪ್ತಮಿಯ ಮಹತ್ವವನ್ನು ‘ಪದ್ಮ ಪುರಾಣ’, ‘ಬ್ರಹ್ಮ ಪುರಾಣ’ ಹಾಗೂ ‘ನಾರದ ಪುರಾಣ’ಗಳಲ್ಲಿ ನೋಡಬಹುದು. ಭಗೀರಥನ ಪೂರ್ವಜರು ಕಪಿಲ ಮುನಿಯ ಶಾಪಕ್ಕೆ ತುತ್ತಾಗಿದ್ದರು. ಇವರ ಮುಕ್ತಿಗಾಗಿ ಭಗೀರಥ ತಪಸ್ಸು ಮಾಡಿ ಗಂಗೆಯನ್ನು ಪ್ರಾರ್ಥಿಸಿ, ಜೇಷ್ಠಮಾಸ ದಶಮಿಯಂದು ಭೂಲೋಕಕ್ಕೆ ಕರೆತಂದ. ಈ ದಿನವನ್ನು ಗಂಗಾವತರಣ ದಿನ ಎಂದು ಕರೆಯಲಾಗುತ್ತದೆ.
ಭೂಮಿಗಿಳಿದ ಗಂಗೆ ತಾನು ಮೋಕ್ಷದಾಯಕಳೆಂಬ ಅಹಂನಿದ ಭೋರ್ಗರೆದು ಹರಿಯಲಾರಂಭಿಸುತ್ತಾಳೆ. ಈ ವೇಳೆ ಜಹ್ನು ಮಹರ್ಷಿಯ ಆಶ್ರಮ ನೀರಿನಲ್ಲಿ ಕೊಚ್ಚಿ ಹೋಯಿತು. ಇದರಿಂದ ಕುಪಿತರಾದ ಜಹ್ನು ಮಹರ್ಷಿಗಳು ಗಂಗೆಯನ್ನು ಆಪೋಶಿಸಿದರು(ಕುಡಿದರು).
ಇದರಿಂದ ಗಾಭರಿಗೊಂಡ ದೇವತೆಗಳು ಹಾಗೂ ಗಂಗೆಯನ್ನು ಭುವಿಗೆ ಕರೆ ತಂದಿದ್ದ ಭಗೀರಥ, ಜಹ್ನು ಮಹರ್ಷಿಯನ್ನು ಪರಿಪರಿಯಾಗಿ ಪ್ರಾರ್ಥಿಸಿದರು. ಕೋಪದಿಂದ ಇದ್ದ ಜಹ್ನು ಮಹರ್ಷಿ, ಇವರ ಮನವಿಗೆ ಮನಸೋತು ಹನ್ನೊಂದು ತಿಂಗಳ ನಂತರ ಗಂಗೆಯನ್ನು ಹೊರಹಾಕುವುದಾಗಿ ಹೇಳಿದರು. ಅದರಂತೆ ತನ್ನ ಬಲ ಕಿವಿಯಿಂದ ವೈಶಾಖ ಶುಕ್ಲ ಪಕ್ಷ ಸಪ್ತಮಿಯಂದು ಹೊರಗೆ ಹರಿಯ ಬಿಟ್ಟರು. ಈ ದಿನ ಗಂಗೆಯು ಪುನರ್ಜನ್ಮವನ್ನು ಪಡೆದದ್ದರಿಂದ ಗಂಗೋತ್ಪತ್ತಿ ದಿನ ಎನ್ನಲಾಗುತ್ತದೆ.
ಗಂಗೆಯು ಜಗ್ನು ಋಷಿಯ ಕಿವಿಯಿಂದ ಹೊರಬಂದ ಕಾರಣ, ಋಷಿಯ ಮಗಳೆಂದು ಭಾವಿಸಿ ಜಾಹ್ನವಿ ಎಂದು ಕರೆಯಲಾಗುತ್ತದೆ. ಗಂಗೆ ಪವಿತ್ರ ನದಿಯಾಗಿರುವುದರಿಂದ ದೇಶದಲ್ಲಿನ ಎಲ್ಲ ಸರೋವರ, ನದಿ, ಕೆರೆ, ಕಲ್ಯಾಣಿ, ಕುಂಟೆ, ಬಾವಿಗಳಲ್ಲಿನ ನೀರನ್ನು ಗಂಗಾಜಲ ವೆಂದೇ ಭಾವಿಸಲಾಗುತ್ತದೆ. ನಾವು ಸ್ನಾನ ಮಾಡುವ, ಪೂಜೆಗೆ ಬಳಸುವ ಹಾಗೂ ಕುಡಿಯುವ ನೀರನ್ನು ಗಂಗೆಯೆಂದೇ ಪೂಜ್ಯ ಭಾವನೆಯಿಂದ ಬಳಸುತ್ತೇವೆ.
ಇಂದು ಇಂತಹ ಪವಿತ್ರ ನದಿ ಎರಡನೇ ಬಾರಿ ಮರುಹುಟ್ಟು ಪಡೆದ ದಿನ. ಆ ಗಂಗಾದೇವಿ ಯನ್ನು ಸ್ಮರಿಸೋಣ, ಪೂಜಿಸೋಣ.
ಇದನ್ನೂ ಓದಿ: ಪವಿತ್ರ ಗಂಗಾ ನದಿಯಲ್ಲಿ 2000 ಕೊರೊನಾ ಮೃತದೇಹಗಳು.?