Body Shaming; ಸುಮ್ಮನಿರುವುದು ಹೇಗೆ? : ಅಜ್ಜಿ ಒತ್ತಾಯಿಸಿದ ಬಾಳಂತನದ ಪಟ್ಟಿಯನ್ನು ನಾನು ಬೇಕೆಂದೇ ಹೊಟ್ಟೆಗೆ ಕಟ್ಟಿಕೊಳ್ಳಲಿಲ್ಲ

'ಶಕುಂತಲಾ ಪಾತ್ರಧಾರಿಯನ್ನು ನೋಡಿ ಒಂದು ಕ್ಷಣ ಸ್ತಬ್ಧಳಾದೆ. ಏಕೆಂದರೆ ಯಾರೂ ಊಹಿಸಲೂ ಸಾಧ್ಯವಾಗದಂತೆ, ಸಿದ್ಧಿ ಸಮುದಾಯದ ತರುಣಿಯೊಬ್ಬಳು ಆ ಪಾತ್ರ ಮಾಡಿದ್ದಳು. ಮೊದಮೊದಲು ಶಕುಂತಲಾಳನ್ನು ಅವಳಲ್ಲಿ ಕಂಡುಕೊಳ್ಳಲು ಮನಸ್ಸು ಹರಸಾಹಸಪಟ್ಟರೂ, ಅವಳ ಅಭಿನಯ ತೀವ್ರತೆ, ನೃತ್ಯದಿಂದ ಹೇಗೆ ಸೆರೆ ಹಿಡಿದಳೆಂದರೆ ನಾಟಕ ಮುಗಿಯುವಾಗ ನನ್ನ ಮನಸ್ಸಿನಲ್ಲಿದ್ದ ಶಕುಂತಲಾ ಮಾಯವಾಗಿ ಅವಳೇ ಪ್ರತಿಷ್ಠಾಪಿಸಲ್ಪಟ್ಟಳು. ಇಂದಿಗೂ ನನಗೆ ಶಕುಂತಲಾ ಎಂದಾಗಲೆಲ್ಲಾ ಅವಳ ಉತ್ಕೃಷ್ಟ ಅಭಿನಯ ನೆನಪಾಗುತ್ತದೆ ಹೊರತು, ಅಮರಚಿತ್ರಕಥೆಯ ಸ್ಟ್ಯಾಂಡರ್ಡ್​ ಅಳತೆಯ ಚಿತ್ರವಲ್ಲ.‘ ಸಿಂಧುಚಂದ್ರ

  • TV9 Web Team
  • Published On - 11:21 AM, 9 Apr 2021
Body Shaming; ಸುಮ್ಮನಿರುವುದು ಹೇಗೆ? : ಅಜ್ಜಿ ಒತ್ತಾಯಿಸಿದ ಬಾಳಂತನದ ಪಟ್ಟಿಯನ್ನು ನಾನು ಬೇಕೆಂದೇ ಹೊಟ್ಟೆಗೆ ಕಟ್ಟಿಕೊಳ್ಳಲಿಲ್ಲ
ಲೇಖಕಿ ಸಿಂಧು ಚಂದ್ರ

ಜನಪ್ರತಿನಿಧಿಗಳೇ,
ಪ್ರತಿಸ್ಫರ್ಧಿಯನ್ನು ಎದುರಿಸಲು, ಜನಾನುರಾಗಿಯಾಗಿರಲು, ಅಧಿಕಾರದಲ್ಲಿರಲು ಬಹುಮುಖ್ಯವಾಗಿ ಬೇಕಿರುವುದು ಅಂತಃಸತ್ವ. ಸದ್ಯದ ಬದುಕಿಗೆ ಮತ್ತು ವೇಗಕ್ಕೆ ತಕ್ಕಂತೆ ಆಲೋಚನಾ ವಿಧಾನಗಳಲ್ಲಿ ಏನು ಬದಲಾವಣೆ ತಂದುಕೊಳ್ಳಬೇಕು, ಯಾವುದನ್ನು ಅಲ್ಲಲ್ಲೇ ಬಿಡಬೇಕು, ಯಾವುದನ್ನು ಹೊಸದಾಗಿ ಅಳವಡಿಸಿಕೊಳ್ಳಬೇಕು ಎನ್ನುವ  ಪ್ರಯತ್ನ ಪ್ರಯೋಗಗಳಿಗೆ ಆದ್ಯತೆ ಬೇಕಿರುವುದು. ಆದರೆ ನೀವು ನಿಮ್ಮ ಮನಸಿನ ವಿಕಾರಗಳನ್ನೇ ಮತ್ತೆ ಮತ್ತೆ ಹೊರಗೆಡಹುತ್ತಿದ್ದೀರಿ. ನಿಮ್ಮ ಮಿತಿಗಳಿಂದ, ಆಳ್ವಿಕೆಯ ಲಾಲಸೆಯಿಂದ ಹೆಣ್ಣು ಎನ್ನುವ ವಿಶಿಷ್ಟ ಸಾಧ್ಯತೆಗಳುಳ್ಳ ಜೀವವನ್ನು ಕ್ಷಣಕ್ಷಣಕ್ಕೂ ಟೀಕಿಸುತ್ತಿದ್ದೀರಿ. ಅವಳ ಅರಿವನ್ನು ಬುದ್ಧಿಮತ್ತೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸದೆ ಅವಳ ದೇಹವನ್ನಷ್ಟೇ ಕಣ್ಣಾಡಿಸುವುದು ಖಂಡಿತ ಸ್ವಸ್ಥ ಮನಸ್ಸಿನ ಲಕ್ಷಣವಲ್ಲ. ಮನಸಿಗಂಟಿರುವ, ಅಂಟುವ ಪರಂಪರಾಗತ ಕೊಳೆಯನ್ನು ತೊಳೆದುಕೊಳ್ಳಲು ನಮ್ಮ ಸಂಸ್ಕೃತಿಯೇ ರೂಪಿಸಿರುವ ಹಲವಾರು ಕೌಶಲಗಳಿವೆ, ವಿಧಾನಸಾಧನಗಳಿವೆ. ಅರಿವಿಲ್ಲದೆ ಮೆಟ್ಟಿಕೊಳ್ಳುವ ಅಹಂಕಾರವನ್ನು, ಧಾರ್ಷ್ಟ್ಯತನವನ್ನು ಅವುಗಳ ಮೂಲಕವಾದರೂ ತೇಯ್ದುಕೊಳ್ಳಿ. ಮನುಷ್ಯತ್ವ ಎನ್ನುವುದು ದಿನದಿಂದ ದಿನಕ್ಕೆ ಹೃದಯದೊಳಗೆ ನವೀಕರಣಗೊಳ್ಳುವ ನಿರಂತರ ಪ್ರಕ್ರಿಯೆ.   

ನೋವು, ಅವಮಾನವೆನ್ನುವುದಕ್ಕೆ ಖಂಡಿತ ರಿಯಾಯ್ತಿ ಇಲ್ಲ, ಅದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ; ಸಾಲುಸಾಲು ಅಹಿತಕರಗಳು. ನಿರ್ಲಕ್ಷಿಸಿ ಹೋಗುವುದೇ ಸರಿ ಎಂಬ ಪ್ರತೀ ಸಲದ ಅವಳ ಗಟ್ಟಿನಿರ್ಧಾರವನ್ನು ಅವಳಾಗಿಯೇ ಮುರಿಯುವಂಥ ಸನ್ನಿವೇಶಗಳು. ತನ್ನ ದಾರಿಯ ನಿಚ್ಚಳವಾಗಿಸಿಕೊಳ್ಳಲು ಶಕ್ತಿ ತಂದುಕೊಳ್ಳಬೇಕೆಂದರೆ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳಬೇಕು. ಅದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಎಂದಿನಂತೆ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com

ಪರಿಕಲ್ಪನೆ : ಶ್ರೀದೇವಿ ಕಳಸದ

ಕವಿ, ಲೇಖಕಿ, ಸಿಂಧು ಚಂದ್ರ ಅವರ ಬರಹದಲ್ಲಿ ವೈಯಕ್ತಿಕ ಅನುಭವವೊಂದು ಸಾರ್ವತ್ರಿಕ ‘ಧ್ವನಿ’ಯಾಗಿ ರೂಪುಗೊಳ್ಳುವ ಬಗೆಯನ್ನು ಗಮನಿಸಬಹುದು. 

ಹೇಗೆ ಸುಮ್ಮನಿರುವುದು? ಇದು ಮೊದಲಿನಿಂದಲೂ ನನ್ನ ಪ್ರಶ್ನೆ. ಹೆಣ್ಣಿನ ದೇಹದ ಬಗ್ಗೆ ವರ್ಣನೆ ಮಾಡುವಾಗ, ಅವರ ದೇಹದ ಆಕಾರದಿಂದ ಅವರನ್ನುಗುರುತು ಹಿಡಿಯುವಾಗ, ಅವರ ದೇಹದ ಬಗ್ಗೆ ಅಸಂಬದ್ಧ ಕಮೆಂಟ್ ಮಾಡುವಾಗ ಹೇಗೆ ಸುಮ್ಮನಿರುವುದು? ಎಂದು ನನಗೇ ನಾನು ಬಹಳ ಬಾರಿ ಪ್ರಶ್ನಿಸಿಕೊಂಡಿದ್ದೇನೆ.

ನಾನು ಬ್ಯಾಂಕಿನ ಕೌಂಟರ್​ಗಳಲ್ಲಿ ಕಾರ್ಯ ನಿರ್ವಹಿಸುವಾಗ, ಸಾಮಾನ್ಯವಾಗಿ ಗ್ರಾಹಕರು ಕೇಳುತ್ತಿದ್ದ ಪ್ರಶ್ನೆಗಳು ನನಗೆ ಈ ಲೇಖನ ಬರೆಯುವ ಸಂದರ್ಭದಲ್ಲಿ ನೆನಪಾಗುತ್ತಿದೆ. ಆ ದಪ್ಪ ಹೆಂಗಸು ಈ ಕೌಂಟರ್​ನಲ್ಲಿ ಇರುತ್ತಿದ್ದರಲ್ಲಾ ಅವರೆಲ್ಲಿ? ಆ ತೆಳ್ಳನೆಯ ಹುಡುಗಿ ಎಲ್ಲಿ ಹೋದರು? ಫೋನಿನಲ್ಲಿ ಕೋಮಲ ಧ್ವನಿ ಕೇಳಿ ಅದು ಆ ಬಿಳಿ ಮೇಡಮ್​ದಿರಬೇಕು ಎಂದು ಭಾವಿಸಿದೆ! ಹೀಗೆ ಸಾಕಷ್ಟು ಕೇಳಿದ್ದೇನೆ. ಇದಕ್ಕೂ ಮುಂದುವರೆದು ಹೆಂಗಸರ ಸೊಂಟದಳತೆಯ ಬಗ್ಗೆ, ಎದೆಅಳತೆಯ ಬಗ್ಗೆ ಅಸಭ್ಯವಾಗಿ ಕಮೆಂಟ್ ಮಾಡುವುದು ಸುತ್ತಮುತ್ತಲಿನ ಜನರಿಂದ ಸಾಕಷ್ಟು ಬಾರಿ ಕಿವಿಯ ಮೇಲೆ ಬಿದ್ದಿದೆ. ಅವರ ಆಸ್ತಿ ಚೆನ್ನಾಗಿದೆ, ಇವರಿಗೆ ಆಸ್ತಿನೇ ಇಲ್ಲ ಈ ತರಹದ ಕೋಡ್​ವರ್ಡ್​ ಬಳಸಿ ಮಾತನಾಡುವುದಂತೂ ಸರ್ವೇಸಾಮಾನ್ಯ. ಇಂತಹವುಗಳಿಗೆ ತಕ್ಷಣವೇ ಪ್ರತಿಕ್ರಿಯಿಸಬೇಕೆಂದರೂ ಎಲ್ಲಾ ಬಾರಿಯೂ ಸಾಧ್ಯವಾಗುವುದಿಲ್ಲ.

ನಿಮ್ಮ ಉಬ್ಬುತ್ತಿರುವ ಹೊಟ್ಟೆಯ ಬಗ್ಗೆ, ಸೊರಗುತ್ತಿರುವ ಗಲ್ಲದ ಬಗ್ಗೆ, ಹೀಗೇ ಮಾತನಾಡಿದರೆ ಸಹಿಸಿಕೊಳ್ಳುತ್ತೀರಾ ಎಂದು ಹೇಳಬೇಕು ಎಂದು ನಾಲಿಗೆ ಕಡಿಯುತ್ತದೆ. ಮದುವೆಯಾದಾಗಿನಿಂದ 40-45 ಕೇಜಿ ತೂಕದ ಆಚೆಈಚೆ ಇದ್ದವಳು ಇತ್ತೀಚೆಗೆ ಊದತೊಡಗಿದಾಗ, ನೀನಿನ್ನು ಹೊಟ್ಟೆ ಕರಗಿಸುವ ವ್ಯಾಯಾಮ ಮಾಡುವುದೊಳ್ಳೆಯದು ಎಂಬ ಮಾತು ನನ್ನ ಮನೆಯಲ್ಲಿಯೇ ಕೇಳಿ ಬಂದಾಗ, ನನ್ನ ಹೊಟ್ಟೆಯಲ್ಲಿ ಭ್ರೂಣವೊಂದು ಬೆಳೆದು ಮಗುವಾಗಿ ಹೊರಬಂದಿದೆ, ಹೊಟ್ಟೆ ಅಷ್ಟು ವಿಸ್ತಾರಗೊಂಡು ಪುನಃ ಈ ಸ್ಥಿತಿಗೆ ಬಂದಿರುವುದೇ ಒಂದು ದೊಡ್ಡ ಸೋಜಿಗ, ನಿನ್ನ ಹೊಟ್ಟೆಯಲ್ಲಿಅಂತಹದ್ದೇನೂ ಆಗಲಿಲ್ಲವಲ್ಲಾ, ಆದರೂ ಯಾಕೆ ಅದು ಗೋಧಿಹಿಟ್ಟಿನ ದೊಡ್ಡ ಮುದ್ದೆಯಂತೆ ಕಾಣುತ್ತಿದೆ? ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದೆ. ಏಕೆ ಎಲ್ಲರಿಗೂ ಹೆಣ್ಣಿನ ದೇಹರಚನೆಯೇ ಚರ್ಚೆಗೆ ಒಂದು ಪ್ರಮುಖ ವಿಷಯವಾಗಿರುತ್ತದೆ? ಅದನ್ನು ಮೀರಿ ಮಾತನಾಡಲು ಅವರಿಗೆ ಏನೂ ತೋಚುವುದಿಲ್ಲ?

ಮೊನ್ನೆ ಫೇಸ್​ಬುಕ್​ನಲ್ಲಿ ಮಹಿಳೆಯೊಬ್ಬರು ತನಗೆ ಕಮೆಂಟ್ ಮಾಡಿದವರೊಬ್ಬರ ಬಗ್ಗೆ ಉಲ್ಲೇಖಿಸುತ್ತಾ, ‘ಹೆಣ್ಣು ಚಂದ ಇದ್ದರೆ ಸಾಕು, ಅವರ ಪೋಸ್ಟ್​ಗಳಿಗೆ ಬೇಕಾದಷ್ಟು ಲೈಕ್ ಬೀಳುತ್ತದೆ ಎಂದು ಹೇಳಿದವರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ನಾನೊಂದು ಕವಿತೆಯನ್ನು ಸ್ಟೇಟಸ್​ಗೆ ಹಾಕಿದಾಗ, ನಿಮ್ಮ ಡಿಪಿ ಚಂದ ಇದೆ ಎಂಬ ಕಮೆಂಟ್‍ಗೆ ನಾನು, ಕವಿತೆಯನ್ನೂ ಓದಿ ಸರ್ ಎಂದು ಪ್ರತ್ಯುತ್ತರ ಕೊಟ್ಟಿದ್ದೆ. ಹೀಗೆ ನಮ್ಮನ್ನು ನಾವು ಗುರುತಿಸಿಕೊಳ್ಳಲು ಅಥವಾ ಜೀವನ ನಿರ್ವಹಣೆಗಾಗಿ ಬೇರೆಬೇರೆ ಸೃಜನಾತ್ಮಕ ಮಾರ್ಗಗಳನ್ನು ಆಯ್ದುಕೊಂಡಾಗ ಸಹ ನಮ್ಮ ಬಾಹ್ಯಸ್ವರೂಪವೇ ಏಕೆ ಮೊದಲ ಸಾಲಿನಲ್ಲಿ ವಕ್ಕರಿಸಿಕೊಳ್ಳುತ್ತದೆ? ಇನ್ನೊಂದು ಉದಾಹರಣೆ ಹೇಳಬೇಕೆಂದರೆ, ಲಾಕ್‍ಡೌನ್ ಸಮಯದಲ್ಲಿ ಗೃಹೋದ್ಯಮದಿಂದ ನೆಲೆ ಕಂಡುಕೊಂಡ ಮಹಿಳೆಯೊಬ್ಬಳ ಕಥೆ ಇದು. ಅವಳು ಮನೆಯಲ್ಲಿ ಮಾಡಿದ ಉಪ್ಪಿನಕಾಯಿ ಇನ್ನಿತರ ಸಾಮಗ್ರಿಗಳಿಗೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲೇ ಆರ್ಡರ್​ಗಳು ಬಂದಾಗ, ಎಲ್ಲರಿಗೂ ಅವಳದ್ದೇ ಬೇಕಂತೇ! ಯಾಕೆನೋ ಎಂಬಂತಹ ಕುಹಕದ ಮಾತುಗಳು ಹಾರಿ ಬಂದವು. ಒಬ್ಬಗಂಡಸು ಬಿಸಿನೆಸ್​ನಲ್ಲಿ ಯಶಸ್ವಿ ಆದಾಗ ಇಂತಹ ಮಾತುಗಳು ಸುಳಿಯುವುದಿಲ್ಲ ಏಕೆ? ಅದರಲ್ಲೂ ಮಹಿಳೆ ಆಕರ್ಷಕವಾಗಿದ್ದರೆ ಅವಳಿಗೆ ಅವಳ ರೂಪವೇ ಸಾಕು ನೆಲೆ ಕಂಡುಕೊಳ್ಳಲು ಎಂಬಂತಹ ಟೀಕೆಗಳು ಹೆಜ್ಜೆಹೆಜ್ಜೆಗೂ ಸಿಗುತ್ತವೆ ಮತ್ತು ಬಿಡಿಸಲಾರದ ಸಿಕ್ಕಾಗುತ್ತಿವೆ.

ನಾನು ಚಿಕ್ಕವಳಿದ್ದಾಗಿಂದಲೂ ಅಕ್ಕನಿಗಿಂತ ಕಪ್ಪು ಮತ್ತು ತೀರಾ ಸಪೂರ. ನನಗೆ ನೆನಪಿದ್ದಂತೆ ಎಲ್ಲರೂ ಅಂದರೆ ಎಲ್ಲರೂ, ನಿಮ್ಮ ಮೊದಲನೇ ಮಗಳದು ಏನ್ ಕಲರ್​ ಅಲ್ವಾ? ಪಾಪ ಎರಡನೆಯವಳಿಗೆ ಆ ಕಲರೇ ಬರಲಿಲ್ಲ ಯಾಕ್ರಿ? ಅನ್ನೋರು. ಅಪ್ಪ ಕೂಡ ಬೇರೆಯವರ ಹತ್ತಿರ ಮಾತನಾಡುವ ಸಂದರ್ಭಗಳಲ್ಲಿ, ಸೀಮಾ ತುಂಬಾ ಚಂದ ಸಿಂಧುಗಿಂತ ಅಂತಿದ್ರು. ನನಗೊಂಥರಾ ಕೇಳಿ ಕೇಳಿ ಅಭ್ಯಾಸ ಆಗ್ಬಿಟಿತ್ತು ಅನ್ಸುತ್ತೆ. ಆದರೆ ನಾವು ಬೇಸಿಗೆಯ ರಜೆಗೆಂದು ಊರಿಗೆ ಹೋದಾಗ, ಅಲ್ಲಿ ಇಳಿಸಂಜೆಗಳಲ್ಲಿ ನಾವು ಅಕ್ಕ-ತಂಗಿ ಇಬ್ಬರೂ ಭರತನಾಟ್ಯ ಮಾಡುವಾಗ ಸುತ್ತಲೂ ಕೂತ್ಕೊಂಡು ನೋಡ್ತಿದ್ದ ದೊಡ್ಡಪ್ಪನ ಹೆಣ್ಣುಮಕ್ಕಳೆಲ್ಲಾ ಸಿಂಧುದೇ ಡ್ಯಾನ್ಸ್​ ಚೆಂದ. ಕಪ್ಪಗಿದ್ರೂ ಅವಳೇ ಲಕ್ಷಣ ಅಂತ ಹೇಳುವಾಗ ನಾನು ನೆಲದ ಮೇಲೆ ಇರ್ತಿರ್ಲಿಲ್ಲ. ಹೀಗೇ ಹೇಳಲಿಕ್ಕೆ ಕಾರಣ ಆ ನನ್ನ ದೊಡ್ಡಪ್ಪನ ಮಕ್ಕಳ ಎಣ್ಣೆಗಪ್ಪು ಬಣ್ಣವೂ ಇದ್ದಿರಬಹುದೆಂದು ಕಡೆಗೆ ಜ್ಞಾನೋದಯವೂ ಆಯಿತು.  ನಾನು ಎಂಟನೇ ಕ್ಲಾಸ್, ಅಕ್ಕ ಹತ್ತನೇ ಕ್ಲಾಸ್ನಲ್ಲಿ ಓದುತ್ತಿದ್ದ ಸಮಯ ಅದು. ಪೇರೆಂಟ್ಸ್​ ಮೀಟಿಂಗ್​ಗೆ ಅಪ್ಪ ಬಂದಿದ್ರು ಅನ್ಸುತ್ತೆ. ಅಲ್ಲಿ ಕಾನ್ವೆಂಟ್ ಸಿಸ್ಟರ್ ಅಪ್ಪನತ್ರ ಮಾತಾಡ್ತಾ, ನಿಮ್ಮ ಸಿಂಧು ಸ್ಮಾರ್ಟ್​ ಇದಾಳೆ ಅಂದ್ರಂತೆ. ಅಪ್ಪನಿಗೆ ಫುಲ್‍ ಕನ್ಫ್ಯೂಜನ್. ಏನು ಹೇಳ್ತಿದಾರೆ ಇವರು ಅಂತ, ಇವರು ತಿರುಗಿ ಹಾ, ಅದು ಸಿಂಧು ಅಲ್ಲ ಸೀಮಾ ಇರಬೇಕು ಅಂದಿದಾರೆ. ಅದಕ್ಕೆ ಆ ಸಿಸ್ಟರ್ ಲುಕ್ ವಿಷಯದಲ್ಲಿ ಹೇಳ್ತಾ ಇಲ್ಲ, ಸ್ಟಡಿ ಮತ್ತು ಬೇರೆ ವಿಷಯದಲ್ಲಿ ಹೇಳಿದ್ದು ಅಂದ್ರಂತೆ. ಸುಮಾರು 25 ವರ್ಷದ ಹಿಂದೆ ಈ ಸೂಕ್ಷ್ಮ ವಿಚಾರವನ್ನು ಹೇಳಿದ್ದ ಆವೆಮರಿಯಾ ಶಾಲೆಯ ಆ ಸಿಸ್ಟರ್ ಹೆಸರನ್ನು ನಾನು ಮರೆತಿರಬಹುದು. ಆದರೆ ಅವರು ಹೇಳಿದ್ದ ವಿಷಯ ಮರೆತಿಲ್ಲ. ಈ ವಿಷಯವನ್ನು ಅಪ್ಪ ಸುಮಾರು ಜನರತ್ರ ಹಂಚ್ಕೋತ ಇದ್ರು. ಆದ್ರೂ ಸೀಮಾ ಚಂದ ಸಿಂಧುನಿಗಿಂತ ಅನ್ನೋ ಮಾತನ್ನು ಮಾತ್ರ ಪುನರುಚ್ಚರಿಸುತ್ತಲೇ ಇದಾರೆ ಈಗಲೂ ಕೂಡ.

ಕಾಲೇಜಿನಲ್ಲೂ ಅಷ್ಟೇ, ಜೋರಾಗಿ ಗಾಳಿ ಬರ್ತಿದೆ ಆ ಕಡೆ ಹೋಗ್ಬೇಡ್ರೀ ಎಂದು ಗಂಡುಮಕ್ಕಳು ಕೂಗುವಾಗ ನನ್ನ ಸಪೂರ ದೇಹದ ಬಗ್ಗೆ ತೀರಾ ಕೀಳರಿಮೆ ಏನೂ ಬರ್ದಿದ್ರೂ, ನಾನೂ ದಪ್ಪಇರ್ಬೇಕಿತ್ತು ಅನ್ಸಿ ಕಡ್ಲೆಕಾಳು ನೆನೆಸಿಕೊಂಡು ತಿಂದಿದ್ದು ಸುಳ್ಳಲ್ಲ. ಒಂದೆರೆಡು ಲೆಕ್ಚರರ್ಸ್‍ ಕೂಡ, ನೀನು ದಪ್ಪ ಆಗೋದು ಯಾವಾಗ್ಲೇ ಮಾರಾಯ್ತಿ ಎಂದು ಸ್ಟಾಫ್‍ರೂಮಿನಲ್ಲೇ ಕೇಳಿದಾಗ ಇರಿಸುಮುರಿಸಾಗಿದ್ದಂತೂ ಹೌದು, ಆದರೆ ಗುಟಕಾದಿಂದ ಕೆಂಪಾಗಿದ್ದ ಹಲ್ಲುಗಳಿವೆ ನಿಮಗೆ, ಕನ್ನಡಿ ನೋಡ್ಕೊಂಡಿದೀರಾ ಒಮ್ಮೆ ಆದ್ರೂ ಅಂತ ಕೇಳುವ ಧೈರ್ಯ ಇರಲಿಲ್ಲ. ಮದುವೆ ಆದಾಗ್ಲೂ ಇದೇ ಕಥೆ. ಏನು ಚಂದ ಇದಾನೆ ಆ ಚಂದ್ರು ಆದ್ರೂ, ಏನು ನೋಡಿ ಇವಳನ್ನು ಲವ್ ಮಾಡದ್ನೋ ಅನ್ನೋ ಮಾತುಗಳು ಮೇಲಿಂದ ಮೇಲೆ ಕಿವಿಗೆ ಬೀಳ್ತಾನೇ ಇದ್ವು. ಚಂದ್ರು ಅಮ್ಮಅಂತೂ, ನನ್ನ ಮಗಂದು ಕೆನೆಹಾಲಿನ ಬಣ್ಣ, ಸಿಂಧು ಏಳು ಜನ್ಮ ಹೊತ್ತು ಬಂದ್ರೂ ಈ ಕಲರ್ ಬರಲ್ಲಅಂತ ಹೇಳ್ತಾನೇ ಆರತಿ ಎತ್ತಿ ಒಳಗೆ ಬರಮಾಡಿಕೊಂಡಿದ್ರು. ಈ ಎಲ್ಲಾ ಮಾತುಗಳನ್ನು ಅರಗಿಸಿಕೊಳ್ಳುತ್ತಾ ಅರಗಿಸಿಕೊಳ್ಳುತ್ತಾ 21 ವರ್ಷಗಳು ಉರುಳಿ ಹೋದವು. ಇತ್ತೀಚೆಗೆ ಕೆಲವೊಬ್ರು, ಚಂದ್ರು ನಿನಗಿಂತ ನಿನ್ನ ಹೆಂಡತಿನೇ ಯಂಗ್ ಅನ್ನಸ್ತಾಳಲೋ, ನಿಂಗೆ ಏಜ್‍ ಆದ ತರಹ ಅನ್ನಸುತ್ತೆ ಅಂದಾಗಲೆಲ್ಲಾ ಚಂದ್ರು ನನ್ನ ಮುಖ ನೋಡ್ತಾನೆ, ನಾನು ಆಗ ಅನುಭವಿಸಿದ್ದನ್ನು ನೀನೀಗ ಅನುಭವಿಸು ಅನ್ನೋ ಲುಕ್‍ ಕೊಡ್ತೀನಿ ನಾನೀಗ!

body shaming

ಸೌಜನ್ಯ : ಅಂತರ್ಜಾಲ

ಇನ್ನೊಂದು ವಿಷಯ ಹೇಳಬೇಕು ಅಂದ್ರೆ, ಬಾಳಂತನದಲ್ಲಿ ಸೊಂಟಕ್ಕೆ ಸೀರೆಯನ್ನು ಪಟ್ಟಿಯಂತೆ ಸುತ್ತುವ ರೂಢಿ ಬಹುಶಃ ಎಲ್ಲರಿಗೂ ಗೊತ್ತಿದೆ. ನಾನು ಫೆಬ್ರವರಿಯ ಬಿಸಿಲ ಬೇಗೆಗೆ ಬೇಸತ್ತು, ಆ ಪಟ್ಟಿ ಸುತ್ಕೊಳಲ್ಲ ಎಂದು ಹಟ ಮಾಡಿದಾಗ, ನನ್ನಅಜ್ಜಿ ಹೇಳಿದ ಮಾತು ಇಂದಿಗೂ ನೆನಪಿದೆ. ಸಪೂರ ಸೊಂಟ ಹೀಗೇ ಇರ್ಬೇಕು ಅಂತಾದ್ರೆ ಬಾಯಿ ಮುಚ್ಚಿಕೊಂಡು ಹೇಳಿದಷ್ಟು ಕೇಳು, ಇಲ್ಲ ಅಂದ್ರೆ ಹೊಟ್ಟೆ ಜೋಲಸ್ಕೊಂಡು ಓಡಾಡ್ಬೇಕಾಗುತ್ತೆ.  ಚಂದ ಕಾಣ್ಸಲ್ಲ ಅಂದಿದ್ರು. ಅವರು ಇನ್ನೇನಾದ್ರೂ ಆರೋಗ್ಯದ ಕಾರಣ ಕೊಟ್ಟಿದ್ರೂ ಸುತ್ಕೋತಿದ್ನೋ ಏನೋ, ಹೀಗಂದ್ರಲ್ಲಅನ್ನೋ ಸಿಟ್ಟಿಗೆ ಪಟ್ಟಿನೇ ಸುತ್ಕೊಳ್ಲಿಲ್ಲ ಆಗ. ತಲೆತಲಾಂತರದಿಂದ ನಮಗೆ ದೇಹ ಸೌಂದರ್ಯವೇ ಮುಖ್ಯ ಎಂಬುದನ್ನು ಹೇಗೆ ಇಂಜೆಕ್ಟ್ ಮಾಡಲಾಗಿದೆ ಮತ್ತೆ ಆ ಮನಃಸ್ಥಿತಿಯಿಂದ ಹೊರಗೆ ಬರಲು ನಾವೆಲ್ಲಾ ಹೇಗೆ ಪರದಾಡುತ್ತಿದ್ದೇವೆ ಎಂಬುದು ನೆನಪಾದಾಗಲ್ಲೆಲ್ಲಾ ವಿಷಾದ ಆವರಿಸಿಕೊಂಡುಬಿಡುತ್ತದೆ.

ಕೊನೆಯದಾಗಿ ಒಂದು ನಾಟಕದ ಬಗ್ಗೆ ಉಲ್ಲೇಖಿಸಲೇಬೇಕು. ಅದೊಂದು ಹವ್ಯಾಸಿ ಕಲಾ ತಂಡದ ನಾಟಕ ನೋಡಲು ಹೋಗಿದ್ದೆ. ನಾಟಕ ಶಕುಂತಲಾ. ನಮ್ಮೆಲ್ಲರ ಮನಸಲ್ಲಿ ಶಕುಂತಲಾ ಎಂದಕೂಡಲೇ ಕಣ್ಣೆದುರಿಗೆ ಬರುವುದು, ಸಪೂರ ಸೊಂಟದ, ಪಾರಿಜಾತದ ಬಣ್ಣದ, ಚಂದದ ಅಂಗಸೌಷ್ಟವ ಹೊಂದಿದ, ದಟ್ಟ ಕೇಶರಾಶಿಯ, ಆಕರ್ಷಕ ಕಣ್ಣಿನ, ನೀಳ ನಾಸಿಕದ ಒಟ್ಟಾರೆ ಸುಂದರಿ ಎಂಬ ಪರಿಕಲ್ಫನೆಯ ಒಂದು ಚಿತ್ರ. ನಾನೂ ಸಹ ಈ ಪರಿಕಲ್ಪನೆಯಿಂದ ಹೊರತಾಗದೆ ಆ ನಾಟಕ ನೋಡಲು ಹೋಗಿದ್ದೆ. ಆ ನಾಟಕದ ಶಕುಂತಲಾ ಪಾತ್ರಧಾರಿಯನ್ನು ನೋಡಿ ನಾನು ಒಂದು ಕ್ಷಣ ಸ್ತಬ್ಧ. ಏಕೆಂದರೆ ಯಾರೂ ಊಹಿಸಲೂ ಕೂಡ ಸಾಧ್ಯವಾಗದಂತೆ, ಸಿದ್ಧಿ ಸಮುದಾಯದ ತರುಣಿಯೊಬ್ಬಳು ಆ ಪಾತ್ರ ಮಾಡಿದ್ದಳು. ಮೊದಮೊದಲು ಶಕುಂತಲಾಳನ್ನು ಅವಳಲ್ಲಿ ಕಂಡುಕೊಳ್ಳಲು ಮನಸ್ಸು ಹರಸಾಹಸಪಟ್ಟರೂ, ಅವಳ ಅಭಿನಯ ತೀವ್ರತೆ, ಡೈಲಾಗ್‍ ಡೆಲಿವರಿ, ಕಣ್ಣುಗಳ ಚಲನೆ, ಆಂಗಿಕ ಅಭಿನಯ, ನೃತ್ಯದಿಂದ ಹೇಗೆ ಸೆರೆ ಹಿಡಿದಳೆಂದರೆ ನಾಟಕ ಮುಗಿಯುವಾಗ ನನ್ನ ಮನಸ್ಸಿನಲ್ಲಿದ್ದ ಶಕುಂತಲಾ ಮಾಯವಾಗಿ ಅವಳೇ ಪ್ರತಿಷ್ಠಾಪಿಸಲ್ಪಟ್ಟಳು ಪರಮ ಸುಂದರಿಯಾಗಿ. ಅಂದು ಅಲ್ಲಿದ್ದ ಅಷ್ಟೂ ಪ್ರೇಕ್ಷಕರಿಗೂ ಬಹುಶಃ ಇದೇ ಅನುಭವ. ಇಂದಿಗೂ ನನಗೆ ಶಕುಂತಲಾ ಎಂದಾಗಲೆಲ್ಲಾ ಅವಳ ಉತ್ಕೃಷ್ಟ ಅಭಿನಯ ನೆನಪಾಗುತ್ತದೆ ಹೊರತು, ಅಮರಚಿತ್ರಕಥೆಯ ಸ್ಟ್ಯಾಂಡರ್ಡ್​ ಅಳತೆಯ ಚಿತ್ರವಲ್ಲ.

ಒಟ್ಟಿನಲ್ಲಿ ಹೇಳುವುದಾದರೆ, ನಮ್ಮ ದೃಷ್ಟಿಯನ್ನು ವಿಭಿನ್ನ ಕೋನದಲ್ಲಿ ಅಳವಡಿಸಿಕೊಳ್ಳುವುದು ಇಂದು ಎಲ್ಲರಿಗಿರುವ ಅಗತ್ಯ. ಬರಿ ದೇಹದ ಆಧಾರದ ಮೇಲೆ ಇನ್ನೂ ಎಷ್ಟು ವರ್ಷ ನಾವು ಚರ್ಚಿಸುವುದು? ಇದನ್ನೆಲ್ಲಾ ಮೀರಿದ ಬದುಕೊಂದಿದೆ ಪ್ರತಿಯೊಬ್ಬರಿಗೆ. ಪ್ರತಿಯೊಬ್ಬರಿಂದ ಕಲಿಯುವುದು ಕೂಡ ಬೇಕಾದಷ್ಟಿದೆ. ಇಂದು Body Shaming ಎನ್ನುವುದು ನಮ್ಮೊಂದಿಗೆ ಬದುಕುತ್ತಿರುವವರಿಂದ, ನಮ್ಮದೇ ಬಳಗದವರಿಂದ, ನಮ್ಮ ಸುತ್ತಮುತ್ತಇರುವವರಿಂದ, ಗೆಳೆಯ ಗೆಳತಿ ಎನಿಸಿಕೊಂಡವರಿಂದ, ಸಂಬಂಧಿಕರಿಂದ ಮಾತ್ರವಲ್ಲದೇ ಕಾರ್ಯ ನಿರ್ವಹಿಸುವ ಸ್ಥಳಗಳಲ್ಲಿ ಸಹೋದ್ಯೋಗಿಗಳಿಂದ, ಸಾಮಾಜಿಕ ತಾಣಗಳಲ್ಲಿ ಅಪರಿಚಿತರಿಂದ, ನಾವೇ ಮತ ಹಾಕಿ ಆರಿಸಿ ಕಳಿಸಿದವರಿಂದ ಸಾರ್ವಜನಿಕವಾಗಿ ಆಗುತ್ತಿದೆ. ಬೇರೆಯವರ ದೇಹದ ಕುರಿತಂತೆ ಕಮೆಂಟ್ ಮಾಡಬೇಡ ಎಂದು ನಮಗೆ ನಾವೇ ನಿತ್ಯಪಾಠ ಮಾಡಿಕೊಳ್ಳುವ ಅನಿವಾರ್ಯತೆ ಇಂದು ಸೃಷ್ಟಿಯಾಗಿದೆ.

ಇದನ್ನೂ ಓದಿ :Body Shaming; ಸುಮ್ಮನಿರುವುದು ಹೇಗೆ? : ಎಲ್ಲಿದ್ದೀರಿ ಪ್ರೊಫೆಸರ್, ಈಗ ಹುಡುಕಿ ನೋಡೋಣ ‘ಮಲ್ನಾಡ್​ ಕಾಂಪ್ಲೆಕ್ಸ್’ 

Summaniruvudu Hege Series on Body Shaming controversial statement by Dindigul Leoni and response from writer Sindhuchandra