ನಿಮ್ಮ ಕೋಪ ನಿಮ್ಮನ್ನೇ ನಾಶ ಮಾಡುವುದು ಎಂದು ಹೇಳುವುದನ್ನು ಕೇಳಿರಬಹುದು. ಕೆಲವರಿಗೆ ಕೋಪ ಅನ್ನುವುದು ಮೂಗಿನ ತುದಿಯಲ್ಲಿರುತ್ತದೆ. ಚಿಕ್ಕ ವಿಷಯಕ್ಕೂ ಬೇಗನೆ ಕೋಪ ಬಂದು ಬಿಡುತ್ತದೆ. ಈ ರೀತಿ ಕೋಪಗೊಳ್ಳುವವರು ಒಂದು ವಿಷಯವನ್ನು ಗಮನಿಸಿದ್ದೀರಾ? ನೀವು ಕೋಪ ಮಾಡಿಕೊಂಡಾಗ ಏನಾದರೂ ಸಾಧಿಸುವ ಬದಲು ಕಳೆದುಕೊಂಡಿರುವುದೇ ಅಧಿಕವಾಗಿರುತ್ತೆ.
ನಾವು ಬೇಗನೆ ಕೋಪಕೊಳ್ಳುವುದರಿಂದ ನಮ್ಮ ಸಮೀಪದವರೆಗೂ ತೊಂದರೆ, ನಮ್ಮ ಕೋಪ ಅವರ ಮನಸ್ಸಿಗೆ ಸಾಕಷ್ಟು ನೋವುಂಟು ಮಾಡುತ್ತದೆ. ಹಾಗಂತ ಕೋಪಗೊಳ್ಳಬಾರದು ಎಂದು ಹೇಳುತ್ತಿಲ್ಲ, ಕೆಲವೊಂದು ವಿಷಯಗಳಿಗೆ ಕೋಪಗೊಳ್ಳಲೇಬೇಕು, ಆದರೆ ಶಾರ್ಟ್ ಟೆಂಪರ್ ಅನ್ನುವುದು ಇರಬಾರದಷ್ಟೆ. ಬೇಗನೆ ಕೋಪಗೊಳ್ಳುವವರಿಗೆ ತಮ್ಮ ಗುಣದ ಅರಿವು ಚೆನ್ನಾಗಿಯೇ ಇರುತ್ತದೆ. ಪ್ರತೀಬಾರಿಯೂ ನಾನು ಬೇಗನೆ ಕೋಪ ಮಾಡಿಕೊಳ್ಳಬಾರದೆಂದು ಯೋಚಿಸುತ್ತಾರೆ. ಆದರೆ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗುವುದೇ ಇಲ್ಲ. ತತ್ ತಕ್ಷಣ ಕೋಪವನ್ನು ನಿಯಂತ್ರಿಸಬೇಕೆಂದು ಬಯಸುವುದಾದರೆ ಕೆಲವೊಂದು ಉಪಾಯಗಳಿವೆ ಅವುಗಳನ್ನು ಪಾಲಿಸಿದರೆ ಮೂಗಿನ ತುದಿಯ ಕೋಪವನ್ನು ಸ್ವಲ್ಪ ಕಡಿಮೆ ಮಾಡಬಹುದು.
* 1, 2, 3 ತುಂಬಾ ಕೋಪ ಬಂದಾಗ ನಿಮ್ಮ ಕೋಪವನ್ನು ಒಂದು ಕ್ಷಣ ತಡೆದು ನಿಧಾನಕ್ಕೆ ಒಂದರಿಂದ ಹತ್ತರವರೆಗೆ ಎಣಿಸಬೇಕು. ಸಂಖ್ಯೆಗಳನ್ನು ನಿಧಾನಕ್ಕೆ ಎಣಿಸಿ. ಈ ರೀತಿ ಮಾಡಿದರೆ ನಿಮ್ಮ ಕೋಪ ಸ್ವಲ್ಪ ಕಮ್ಮಿಯಾಗುವುದು.
* ನಿಮಗೆ ಯಾರ ಮೇಲೆಯಾದ್ರು ಕೋಪ ಇದ್ರೆ ಅವರ ಎದುರು ಬಂದಾಗ ಅವರೆದುರು ನಿಲ್ಲಬೇಡಿ. ತಕ್ಷಣ ಅಲ್ಲಿಂದ ಎದ್ದು ಸ್ವಲ್ಪ ದೂರ ನಡೆಯಿರಿ. ನಿಮ್ಮ ಕೋಪ ಸ್ವಲ್ಪ ಕಡಿಮೆಯಾಗುತ್ತದೆ.
* ಕೋಪವನ್ನು ನಿಯಂತ್ರಿಸಲು ಮತ್ತೊಂದು ವಿಧಾನವೆಂದರೆ ದೀರ್ಘ ಉಸಿರು ತೆಗೆದುಕೊಳ್ಳಿ. ಈ ರೀತಿ ದೀರ್ಘ ಉಸಿರು ತೆಗೆದುಕೊಳ್ಳುವುದರಿಂದ ಮುಂಗೋಪವನ್ನು ನಿಯಂತ್ರಿಸಬಹುದು.
* ಸಾಕಷ್ಟು ಬಾರಿ ಕಾರಣವೇನೆಂದು ಡೀಪ್ ಆಗಿ ತಿಳಿಯದೆ ಕೋಪಗೊಳ್ಳುತ್ತೇವೆ. ಹಾಗೆ ಮಾಡಬೇಡಿ, ಕಾರಣವನ್ನು ತಿಳಿದರೆ ನೀವು ಕೋಪಗೊಳ್ಳುವುದರಲ್ಲಿ ಅರ್ಥ ಇದೆಯೇ, ಇಲ್ಲವೇ ಅನ್ನುವುದು ತಿಳಿಯುತ್ತದೆ.
* ನಮ್ಮ ಜೊತೆಗಿರುವವರ ಕೆಲವೊಂದು ತಪ್ಪುಗಳು ನಮಗೆ ಸಿಕ್ಕಾ ಪಟ್ಟೆ ಕೋಪ ಬರಿಸುತ್ತದೆ. ಕೋಪದಿಂದ ಕಿರುಚಾಡಿದರೆ ಅವರ ತಪ್ಪುಗಳು ಅವರಿಗೆ ಮನವರಿಕೆಯಾಗುತ್ತದೆ ಎನ್ನುವುದು ಸುಳ್ಳು, ನೀವು ಕೋಪಗೊಂಡರೆ ಅವರೂ ಕೋಪಗೊಂಡು ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಹೋಗುವುದಿಲ್ಲ. ಆದ್ದರಿಂದ ನಿಮಗೆ ಕೋಪ ಬರಿಸದಂತೆ ಅವರು ಹೇಗೆ ನಡೆದುಕೊಳ್ಳಬೇಕು ಅನ್ನುವುದನ್ನು ನಯವಾಗಿ ಹೇಳಿ.
* ಬೆಳಗ್ಗೆ ಎದ್ದು 10 ನಿಮಿಷ ಧ್ಯಾನ ಮಾಡಿ. ಈ ಅಭ್ಯಾಸ ನಿಮ್ಮ ಮಾನಸಿಕ ಆರೋಗ್ಯವನ್ನು ವೃದ್ಧಿಸುವುದು. ನಿಮ್ಮ ಸಿಡಿಮಿಡಿಗುಟ್ಟುವ ಗುಣ ಕಡಿಮೆಯಾಗುವುದು.
* ಕೆಲವೊಮ್ಮೆ ಕೆಲವೊಂದು ವಿಷಯಗಳು ನಮ್ಮ ಮನಸ್ಸಿನಲ್ಲಿಯೇ ಇದ್ದರೆ ಅದು ಕೂಡ ನಮ್ಮ ಕೋಪಕ್ಕೆ ಒಂದು ಕಾರಣವಾಗಿರುತ್ತದೆ. ನಿಮ್ಮ ಮನಸ್ಸಿನ ಭಾವನೆಗಳನ್ನು, ಉದ್ವೇಗಗಳನ್ನು ನಿಮ್ಮ ಆಪ್ತರ ಜೊತೆ ಹೇಳಿಕೊಳ್ಳುವುದರಿಂದ ಕೋಪವನ್ನು ಕಡಿಮೆ ಮಾಡಿಕೊಳ್ಳಬಹುದು.
* ತುಂಬಾ ಕೋಪ ಬಂದಾಗ ಕೋಪಕ್ಕೆ ಕಾರಣವಾದ ವಿಷಯದ ಬಗ್ಗೆ ಚಿಂತಿಸುತ್ತಿದ್ದರೆ ಕೋಪ ಮತ್ತಷ್ಟು ಹೆಚ್ಚಾಗುವುದು. ಆದ್ದರಿಂದ ನಿಮಗೆ ಇಷ್ಟ ಬಂದದ್ದನ್ನು ಮಾಡಿ. ಸ್ನೇಹಿತರ ಜೊತೆಗೆ ಹೊರಗಡೆ ಹೋಗಲು ಇಚ್ಛೆ ಪಟ್ಟರೆ ಹಾಗೇ ಮಾಡಿ ಅಥವಾ ಡ್ಯಾನ್ಸ್ ಮಾಡುವುದು, ಪೇಯಿಂಟಿಂಗ್ ಹೀಗೆ ನಿಮ್ಮ ಮನಸ್ಸನ್ನು ಬೇರೆ ಕಡೆಗೆ ತಿರುಗಿಸಿ. ಇದರಿಂದ ಕೋಪ ಕಮ್ಮಿಯಾಗಿ ಮನಸ್ಸು ಶಾಂತ ಸ್ಥಿತಿಗೆ ಬರುವುದು.
ನಾವು ಕೋಪಗೊಂಡಾಗ ಎಲ್ಲವೂ ತಪ್ಪಾಗಿಯೇ ಕಾಣುತ್ತದೆ. ಆದ್ದರಿಂದ ಕೋಪಗೊಂಡಾಗ ಪಾಸಿಟಿವ್ ಅಂಶಗಳ ಬಗ್ಗೆ ಚಿಂತಿಸಿ, ಹೀಗೆ ಮಾಡಲು ಮೊದ ಮೊದಲು ಕಷ್ಟವಾಗಬಹುದು, ನಂತರ ನಮ್ಮ ಮನಸ್ಸು ನಿಧಾನಕ್ಕೆ ಹತೋಟಿಗೆ ಬಂದು ನಮ್ಮ ಯೋಚನೆ, ನಿರ್ಧಾರ ತಿಳಿಯಾಗುವುದು.