Sign In

By signing in or creating an account, you agree with Associated Broadcasting Company's Terms & Conditions and Privacy Policy.

World Sleep Day; ನಿದ್ದೆ ಎಂಬ ಪದಕವಡೆ : ಎಂದೂ ಹಂದಾಡದ ಮಮತೆಯೆನ್ನುವ ಪದರಗಳ ನಡುವೆ

‘ಕತ್ತಲೆಗೆ ಹೆದರಿ ಕಂಗಾಲಾಗುವ ಕ್ಷಣಗಳಲ್ಲಿ, ಬೆಳಕಿಗಾಗಿ ಹಂಬಲಿಸುವ ಗಳಿಗೆಗಳಲ್ಲಿ ಕಷ್ಟವೋ ಸುಖವೋ ಎಲ್ಲ ಮರೆತು ಸುಖನಿದ್ರೆಯನ್ನು ನಮ್ಮದಾಗಿಸಿಕೊಳ್ಳುವಾಗ ದುಪ್ಪಟಿಯ ಬೆಚ್ಚನೆಯ ಮಡಿಲು ದೊರಕಿ ಕಷ್ಟ-ಸುಖಗಳ ನಡುವಿನ ತೆಳುವಾದ ಗೆರೆಯೊಂದು ಕಲೆ ಕೂಡಾ ಉಳಿಯದಂತೆ ಮಾಯವಾಗಿಬಿಡುವಂತಿದ್ದರೆ ಅದಕ್ಕಿಂತ ದೊಡ್ಡ ಸುಖ ಬೇರೇನಾದರೂ ಇದೆಯೇ!‘ ಅಂಜನಾ ಹೆಗಡೆ

World Sleep Day; ನಿದ್ದೆ ಎಂಬ ಪದಕವಡೆ : ಎಂದೂ ಹಂದಾಡದ ಮಮತೆಯೆನ್ನುವ ಪದರಗಳ ನಡುವೆ
ಅಂಜನಾ ಹೆಗಡೆ
Follow us
ಶ್ರೀದೇವಿ ಕಳಸದ
|

Updated on:Mar 19, 2021 | 4:31 PM

ಏಳಿ, ಎದ್ದೇಳಿ! ಎದ್ದು ಬರೆಯಲು ಕುಳಿತುಕೊಳ್ಳಿ. ಎಲ್ಲಿದ್ದೀರೋ ಅಲ್ಲಿಂದಲೇ ಬರೆಯಲು ಶುರುಮಾಡಿ. ಹಾಳೆಯೋ, ಪರದೆಯೋ ಏನೋ ಒಂದು ನಿಮ್ಮ ಮುಂದೆ ತೆರೆದುಕೊಂಡಿರಲಿ. ಈಗ ಕೈಗಳೆರಡನ್ನೂ ಉಜ್ಜಿಕೊಂಡು ಆ ಖಾಲಿಚೌಕದೊಳಗೆ ನಿಮಗೆ ಕೊಟ್ಟ ಪದವನ್ನು ದಾಳಕ್ಕೆ ಹಾಕಿ. ಅಂದುಕೊಂಡಿದ್ದೇ ಬಿತ್ತಾ, ಇಲ್ಲವಾ? ಮತ್ತೆ ಮತ್ತೆ ಹಾಕಿ. ನಿಮ್ಮ ಉಸಿರು ನಿಮ್ಮ ಹಿಡಿತದಲ್ಲಿಯೇ ಇದೆ ಎಂದು ನಿಮಗನ್ನಿಸುವ ತನಕ ದಾಳ ಹಾಕುತ್ತಲೇ ಇರಿ. ಇಲ್ಲಿ ಕಣ್ಣುಮುಚ್ಚಿಕೊಂಡು ನಿವೇದಿಸಿಕೊಳ್ಳುವುದಂತೂ ಸಂಪೂರ್ಣ ನಿಷಿದ್ಧ!; ಗಾಳಿಯಲ್ಲಿ ತೇಲಿ ಹೋದ ಈ ಸಂದೇಶವನ್ನು ಫಕ್ಕನೆ ಹಿಡಿದು ಬರೆಯಲು ಕುಳಿತರು ನಮ್ಮ ನಡುವಿನ ಬರಹಪ್ರಿಯರು. ‘ವಿಶ್ವ ನಿದ್ದೆ ದಿನ – World Sleep Day’ ಪ್ರಯುಕ್ತ ‘ನಿದ್ದೆ ಎಂಬ ಪದಕವಡೆ’ ಸರಣಿ.

ಪರಿಕಲ್ಪನೆ : ಶ್ರೀದೇವಿ ಕಳಸದ

ಅಜ್ಜಿಯ ಹಸಿರು ದುಪ್ಪಟಿಯ ಮಡಿಲ ನೆನಪನ್ನೊಮ್ಮೆ ಹರವಿದ್ದಾರೆ ಅಂಜನಾ ಹೆಗಡೆ

ಮೆತ್ತನೆಯ ದಿಂಬಿನ ಮೇಲೆ ತಲೆಯಿಟ್ಟು ವೆಬ್ ಸೀರೀಸ್ ನೋಡುತ್ತ ಜಗದ ಕತ್ತಲನ್ನು ಮರೆತು ಅದ್ಯಾವುದೋ ಅರ್ಥವೇ ಆಗದ ಬೇರೊಬ್ಬರ ಪ್ರಪಂಚದಲ್ಲಿ ಮುಳುಗಿಹೋಗಿರುವಾಗ ಥಟ್ಟನೆ ಅದೆಲ್ಲಿಂದಲೋ ಆಕಳಿಕೆಯೊಂದು ಪ್ರತ್ಯಕ್ಷವಾಗಿ ಬಿಡುತ್ತದೆ. ಇನ್ನೇನು ಮೊಬೈಲ್ ಪಕ್ಕಕ್ಕಿಟ್ಟು ನಿದ್ರೆಗೆ ಜಾರಬೇಕು ಎಂದುಕೊಳ್ಳುವಷ್ಟರಲ್ಲಿ ತಪ್ಪದೇ ದುಪ್ಪಟಿಯ ಸವಿನೆನಪೊಂದು ಅರೆತೆರೆದ ಕಣ್ಣುಗಳೊಳಗೆ ಸಿಹಿಗನಸಿನಂತೆ ಬೆರೆತು ನಿದ್ರೆ ಎನ್ನುವ ಸೊಗಸಾದ ಸಾಂಗತ್ಯವನ್ನು ಸಲಹುತ್ತದೆ. ಕತ್ತಲು ಎನ್ನುವುದು ನಿರ್ಭೀತಿಯಿಂದ ನಿರಾಯಾಸವಾಗಿ ಕಳೆದುಹೋಗುವುದು ಹಾಗೆ, ನಿದ್ರೆಯ ಒಡನಾಟದಲ್ಲಿ! ನಿದ್ರೆಯೇ ಇಲ್ಲದಿದ್ದರೆ ಕತ್ತಲಿನೊಂದಿಗೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೆವು ಎಂದು ಯೋಚಿಸಿದರೆ ಕರೆಂಟಿಲ್ಲದೆ ಚಿಮಣಿದೀಪದ ಬೆಳಕಿನಲ್ಲಿ ಭಜನೆ-ಓದು-ಊಟ ಎಲ್ಲವನ್ನೂ ಮುಗಿಸುತ್ತಿದ್ದ ಬಾಲ್ಯ, ಎಕ್ಸಾಮಿನ ಟೆನ್ಶನ್ನಿಗೆ ನಿದ್ರೆಬಾರದೇ ಹೊರಳಾಡುತ್ತ ಕಣ್ಣು ಮಿಟಕಿಸುತ್ತ ಕಳೆದ ಟೀನೇಜು, ಹೊಸಬದುಕಿನ ನಿರೀಕ್ಷೆಯಲ್ಲಿ ಊರುಬಿಟ್ಟು ರಾತ್ರಿಬಸ್ಸು ಹತ್ತಿ ಅರೆಬರೆ ನಿದ್ರೆಯಲ್ಲಿಯೇ ಊದಿಕೊಂಡ ಪಾದಗಳನ್ನು ನಗರದ ಫುಟ್‌ಪಾತಿನಲ್ಲಿ ಊರಿದ ದಿನಗಳೆಲ್ಲ ಒಂದೊಂದಾಗಿ ನೆನಪಾಗುತ್ತವೆ. ಪ್ರತಿ ನೆನಪಿನೊಂದಿಗೂ ಕತ್ತಲು ಕಳೆದು ಬೆಳಕು ಹರಿಯಲೆನ್ನುವ ಹಂಬಲ; ಆ ಆಕಾಂಕ್ಷೆಯ ಆಚೀಚೆ ಕನಸುಗಳನ್ನು ಕಾಪಾಡುತ್ತ, ನೆನಪುಗಳನ್ನು ನೇವರಿಸುತ್ತ ಕತ್ತಲು-ಬೆಳಕುಗಳ ಸಂಬಂಧ ಹದಗೆಡದಂತೆ ಕಾಪಾಡುತ್ತದೆ ನಿದ್ರೆ.

ನಿದ್ರೆಯ ಕಾರಣದಿಂದಾಗಿಯೇ ನನಗೆ ಆ ಹಸಿರು ದುಪ್ಪಟಿಯೊಂದಿಗೆ ಸ್ನೇಹ ಆರಂಭವಾಗಿದ್ದು; ಅದು ಅಜ್ಜಿಯ ಹಳೆಯ ಸೀರೆಗಳನ್ನು ಸೇರಿಸಿ ಹೊಲಿದ ದುಪ್ಪಟಿ! ಅಜ್ಜಿಯ ಅಚ್ಚಹಸಿರು-ಕಂದುಬಣ್ಣದ ಕಾಟನ್ ಸೀರೆಗಳೆಲ್ಲ ಬಿಸಿನೀರಿನಲ್ಲಿ ತೊಳೆದು ಬಿಸಿಲಿಗೆ ಒಣಗಿಸುತ್ತಿದ್ದ ಪರಿಣಾಮವಾಗಿ ಬಣ್ಣವನ್ನು ಕಳೆದುಕೊಳ್ಳುತ್ತಿದ್ದವಾದರೂ, ಅವುಗಳ ಸುಖೋಷ್ಣವಾದ ಫೀಲ್ ಮಾತ್ರ ಹಾಗೆಯೇ ಉಳಿದಿರುತ್ತಿತ್ತು. ಕೊಂಚ ಹಳತಾದ ಸೀರೆಗಳನ್ನೆಲ್ಲ ತನ್ನ ಟ್ರಂಕಿನಲ್ಲಿ ಜೋಡಿಸಿಟ್ಟುಕೊಂಡಿರುತ್ತಿದ್ದ ಅಜ್ಜಿ ವರ್ಷಕ್ಕೆ ಒಂದೋ, ಎರಡೋ ದುಪ್ಪಟಿಗಳನ್ನು ತಪ್ಪದೇ ಹೊಲಿಯುತ್ತಿದ್ದಳು. ದಪ್ಪನೆಯ ದಾರ, ದಬ್ಬಣಗಳನ್ನು ತನ್ನ ಹಡಪದಲ್ಲಿ ಸದಾಕಾಲ ಇಟ್ಟುಕೊಂಡಿರುತ್ತಿದ್ದ ಅವಳು ದುಪ್ಪಟಿ ಹೊಲಿಯಲಾರಂಭಿಸಿದರೆ ಅದನ್ನು ನೋಡುವುದೇ ಸಂಭ್ರಮದ ಸಂಗತಿಯಾಗಿತ್ತು. ಇದ್ದಿದ್ದರಲ್ಲಿಯೇ ಹೊಸದಾಗಿರುವ ಸೀರೆಗೆ ಮೇಲ್ಪದರಕ್ಕೆ ಆಯ್ಕೆಯಾಗುವ ಭಾಗ್ಯ ಲಭಿಸಿದರೆ, ಪೂರ್ತಿ ಬಣ್ಣಮಾಸಿದ ಸೀರೆಗಳೆಲ್ಲ ಒಳಪದರಗಳನ್ನು ಸೇರಿ ಮುಕ್ತಿಮಾರ್ಗವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ಕೊಂಚವೂ ಆಚೀಚೆಯಾಗದ ಅಂಚುಹೊಲಿಗೆ, ಪದರಗಳು ಹಂದಾಡದಂತೆ ಹೊಂದಿಸಿಟ್ಟ ಸೂಕ್ಷ್ಮವಾದ ಗಂಟುಹೊಲಿಗೆ ಎಲ್ಲವೂ ಅದೆಷ್ಟು ಮಜಬೂತಾಗಿರುತ್ತಿದ್ದವೆಂದರೆ ಸೀರೆಗಳು ಹರಿದುಹೋದರೂ ಹೊಲಿಗೆ ಮಾತ್ರ ಸ್ವಲ್ಪವೂ ಸಡಿಲವಾಗುತ್ತಿರಲಿಲ್ಲ. ಹಾಗೆ ಒಂದು ಮಂಗಳಕರವಾದ ಮುಹೂರ್ತದಲ್ಲಿ ತಯಾರಾದ ದುಪ್ಪಟಿಯೊಂದು ನನ್ನೊಂದಿಗೆ ಮಂಚವೇರಿದ ಗಳಿಗೆಯಿಂದಲೇ ನನ್ನ ನಿದ್ರೆಗೊಂದು ಹೊಸಬದುಕು ದೊರಕಿದ್ದು!

world sleep day

ಸೌಜನ್ಯ : ಅಂತರ್ಜಾಲ

ಅಂದಿನಿಂದ ನಾನು ಮತ್ತು ದುಪ್ಪಟಿ ಜೀವದ ಗೆಳತಿಯರಂತೆ, ಮನಸ್ತಾಪಗಳೇ ಇಲ್ಲದ ಪ್ರೇಮಿಗಳಂತೆ, ವೃದ್ಧಾಪ್ಯದಲ್ಲಿ ಪರಸ್ಪರ ಆಸರೆಯಾಗುವ ಗಂಡ-ಹೆಂಡತಿಯರಂತೆ ಒಬ್ಬರಿಗೊಬ್ಬರು ಜೊತೆಯಾದೆವು. ನನ್ನ ಸುಖ-ಸಂತೋಷಗಳೆಲ್ಲವೂ ದುಪ್ಪಟಿಯದೂ ಆದವು; ನನ್ನ ಕಣ್ಣೀರು ದುಪ್ಪಟಿಯ ಹೃದಯದಾಳಕ್ಕೂ ಇಳಿದು ದುಃಖದ ಭಾರ ಕಡಿಮೆಯಾಗಲಾರಂಭಿಸಿತು; ಶಬ್ದಗಳಿಗೆ ಸಿಕ್ಕದ ಮನದ ಮಾತುಗಳನ್ನೆಲ್ಲ ಜೋಪಾನವಾಗಿ ಹೆಕ್ಕಿ ತನ್ನದಾಗಿಸಿಕೊಂಡ ದುಪ್ಪಟಿಯಿಂದಾಗಿ ಮೌನಕ್ಕೊಂದು ಹೊಸ ಅರ್ಥ ದೊರಕಿತು. ಕನಸಿನ ಚಾದರದ ನೇಯ್ಗೆಗಳೆಲ್ಲ ಒಂದೊಂದಾಗಿ ಬಿಚ್ಚಿಹೋಗಿ ಚೆಲ್ಲಾಪಿಲ್ಲಿಯಾಗುತ್ತಿದ್ದ ಸಮಯದಲ್ಲೂ ಎಲ್ಲ ದುಃಸ್ವಪ್ನಗಳನ್ನೂ ತನ್ನ ಪದರಗಳೊಳಗೆ ಬಚ್ಚಿಟ್ಟುಕೊಂಡ ದುಪ್ಪಟಿ ನಿದ್ರೆಯೇ ಇಲ್ಲದ ರಾತ್ರಿಗಳನ್ನೂ ಸಹನೀಯವಾಗಿಸಿತು. ಬೆಡ್‌ರೂಮಿನ ಕಿಟಕಿಯಿಂದ ಕಾಣಿಸುತ್ತಿದ್ದ ಮಾವಿನಮರದಿಂದ ಉದುರುತ್ತಿದ್ದ ಎಲೆಗಳನ್ನು, ಮನೆಯ ಮಾಡಿಗೆ ನೇತಾಡುತ್ತಿದ್ದ ಬಾವಲಿಗಳನ್ನು, ಆಗಾಗ ಅದೆಲ್ಲಿಂದಲೋ ಹಾರಿಬಂದು ಅರ್ಥವಾಗದ ಭಾಷೆಯಲ್ಲಿ ಸಂಭಾಷಣೆ ನಡೆಸುತ್ತಿದ್ದ ಸೊಳ್ಳೆಗಳನ್ನು ನೋಡುತ್ತ ನನ್ನೊಂದಿಗೆ ದುಪ್ಪಟಿಯೂ ನಿಧಾನವಾಗಿ ನಿದ್ರೆಗೆ ಜಾರುತ್ತಿತ್ತು. ಕತ್ತಲು ಕಳೆದು ಬೆಳಕು ಹರಿಯುವ ಸುಮಧುರ ಏಕಾಂತದ ಸಮಯದಲ್ಲಿ ನಾವು ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ಮುಗುಳ್ನಗುತ್ತ ಪ್ರತಿದಿನದ ಬೆಳಗನ್ನು ನಮ್ಮದಾಗಿಸಿಕೊಂಡು ಹೊಸ ಕನಸುಗಳಿಗೆ ನಮ್ಮನ್ನು ತೆರೆದುಕೊಳ್ಳುತ್ತಿದ್ದೆವು. ದುಪ್ಪಟಿಗೆ ಸ್ವಲ್ಪವೂ ನೋವಾಗದಂತೆ ಮಾಡಿಕೆಮಾಡಿ ತಲೆದಿಂಬಿನ ಮೇಲಿಟ್ಟು, ಒಮ್ಮೆ ಪ್ರೀತಿಯಿಂದ ಮೈ ನೇವರಿಸಿ ನಾನು ದಿನನಿತ್ಯದ ಕೆಲಸಗಳಿಗೆ ತೆರಳುತ್ತಿದ್ದೆ. ದುಪ್ಪಟಿಯನ್ನು ನಿರ್ಜೀವ ವಸ್ತುವಿನಂತೆ ನಡೆಸಿಕೊಂಡ ನೆನಪು ನನಗಂತೂ ಇಲ್ಲ; ಅಷ್ಟಕ್ಕೂ ಒಬ್ಬರನ್ನೊಬ್ಬರು ದೂರುವ, ಮುನಿಸಿಕೊಂಡು ದೂರವಾಗುವ ಸಂದರ್ಭಗಳೆಂದೂ ನಮಗೆ ಎದುರಾಗಲೇ ಇಲ್ಲ!

ಈಗ ಅಜ್ಜಿಯ ಹಸಿರು ದುಪ್ಪಟಿಯನ್ನು ಕೆಂಪು-ನೀಲಿ ಬಣ್ಣಗಳ ಬಳ್ಳಿ-ಹೂವುಗಳ ಡಿಸೈನುಗಳಿರುವ ಕ್ವಿಲ್ಟುಗಳು ರಿಪ್ಲೇಸ್ ಮಾಡಿವೆ. ಮಾರ್ಕೆಟಿನಲ್ಲಿ ಸಾಲುಸಾಲಾಗಿ ಬೇರೆಬೇರೆ ಬ್ರ್ಯಾಂಡುಗಳನ್ನು ತಮ್ಮದಾಗಿಸಿಕೊಂಡು, ಪ್ರೈಸ್ ಟ್ಯಾಗುಗಳನ್ನು ಮೈಗಂಟಿಸಿಕೊಂಡು ಸ್ಪರ್ಧೆಗಿಳಿದವರಂತೆ ಮಾರಾಟವಾಗುವ ಕ್ವಿಲ್ಟುಗಳ ಮಧ್ಯದಲ್ಲಿ ತಬ್ಬಲಿಯಂತೆ ನಿಂತು ಅಜ್ಜಿಯ ಪ್ರೀತಿಯ ಸ್ಪರ್ಶಕ್ಕಾಗಿ ಹುಡುಕಾಡುತ್ತೇನೆ. ಪರ್ಸಿನಲ್ಲಿರುವ ಕ್ರೆಡಿಟ್ ಕಾರ್ಡಿನ ಸಹಾಯದಿಂದಲಾದರೂ ಸರಿಯೇ, ಹಸಿರು ದುಪ್ಪಟಿಯನ್ನು ಮತ್ತೆ ನನ್ನದಾಗಿಸಿಕೊಂಡು ಸುಖನಿದ್ರೆಗೆ ಜಾರುವ ದಿನಗಳಿಗಾಗಿ ಹಪಹಪಿಸುತ್ತೇನೆ. ಎಷ್ಟೇ ತೀವ್ರವಾದದ್ದಾದರೂ ಸರಿಯೇ, ಯಾವ ಒಡನಾಟವೂ ಇಲ್ಲಿ ಶಾಶ್ವತವಲ್ಲ ಎನ್ನುವ ಅರಿವಿದ್ದರೂ ದುಪ್ಪಟಿಯ ಮೇಲಿನ ನನ್ನ ಅನುರಾಗವನ್ನು ದೂರಮಾಡುವ ಸಂಗತಿಯೊಂದು ಸೃಷ್ಟಿಯಾಗೇ ಇಲ್ಲ ಎನ್ನುವುದೂ ಸತ್ಯ. ಬದುಕಿಗೊಂದು ಹೊಸತನ ಲಭ್ಯವಾಗಬೇಕೆಂದರೆ ಅಲ್ಲೊಂದಿಷ್ಟು ನೆನಪುಗಳು ಕನಸುಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಮಚಿತ್ತದಿಂದ ಮಾತುಕತೆ ನಡೆಸುತ್ತಿರಬೇಕು; ಎದುರಿಗಿರುವವರಿಗೆ ಅರ್ಥವಾಗದಿದ್ದರೂ ಸರಿ, ದುಪ್ಪಟಿಯಂತಹ ಸುಂದರ ಅನುಭೂತಿಯೊಂದು ಸದಾಕಾಲ ಆ ಮಾತುಕತೆಯ ಭಾಗವಾಗಿರಬೇಕು. ಆಗಲೇ ನಮ್ಮ ಬದುಕಿನ ಖಾಸಗಿಯಾದ ಸಂವೇದನೆಯೊಂದು ನಮ್ಮದೇ ಆಗಿ ನಮ್ಮೊಳಗೇ ಉಳಿದುಕೊಳ್ಳಲು ಸಾಧ್ಯವಾದೀತು! ಕತ್ತಲೆಗೆ ಹೆದರಿ ಕಂಗಾಲಾಗುವ ಕ್ಷಣಗಳಲ್ಲಿ, ಬೆಳಕಿಗಾಗಿ ಹಂಬಲಿಸುವ ಗಳಿಗೆಗಳಲ್ಲಿ ಕಷ್ಟವೋ ಸುಖವೋ ಎಲ್ಲ ಮರೆತು ಸುಖನಿದ್ರೆಯನ್ನು ನಮ್ಮದಾಗಿಸಿಕೊಳ್ಳುವಾಗ ದುಪ್ಪಟಿಯ ಬೆಚ್ಚನೆಯ ಮಡಿಲು ದೊರಕಿ ಕಷ್ಟ-ಸುಖಗಳ ನಡುವಿನ ತೆಳುವಾದ ಗೆರೆಯೊಂದು ಕಲೆ ಕೂಡಾ ಉಳಿಯದಂತೆ ಮಾಯವಾಗಿಬಿಡುವಂತಿದ್ದರೆ ಅದಕ್ಕಿಂತ ದೊಡ್ಡ ಸುಖ ಬೇರೇನಾದರೂ ಇದೆಯೇ!

***

ಪರಿಚಯ: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಪ್ರಕಟಿತ ಕವನ ಸಂಕಲನ. ಸದ್ಯದಲ್ಲೇ ಬಿಡುಗಡೆಯಾಗಲಿರುವ ಕವಿ ಸುಬ್ರಾಯ ಚೊಕ್ಕಾಡಿಯವರ ಆತ್ಮಕಥನದ ನಿರೂಪಕಿಯೂ ಹೌದು.

ಇದನ್ನೂ ಓದಿ : World Sleep Day; ನಿದ್ದೆ ಎಂಬ ಪದಕವಡೆ: ಈ ಕಲಿಯುಗದ ಕುಂಭಕರ್ಣನ ಸತಿಯು ನಾನೆಂದು ಎದೆತಟ್ಟಿ ಪೇಳುವೆನು!

Published On - 4:18 pm, Fri, 19 March 21

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ