ಈ ಔಷಧ ಎಲ್ಲಿಂದ ಬಂದಿತು, ಯಾರು ಫಾರ್ಮ್ಯುಲಾ ಬರೆದರು, ಈ ಸೂಜಿ, ಕತ್ತರಿ, ನಳಿಕೆ, ಉಪಕರಣ, ದ್ರಾವಣ, ಆಮ್ಲಜನಕ ಯಾರು ತಯಾರಿಸಿದರು, ಹೊತ್ತು ಸಾಗಿಸಿದರು, ನಮ್ಮನ್ನು ಉಪಚರಿಸುವವರ ಮೂಲವೇನು ಹಿನ್ನೆಲೆಯೇನು, ಇಂಥ ಸ್ವಾರ್ಥಪರ ಆಲೋಚನೆಗಳು ಬರುವುದುಂಟೆ? ಜೀವವೇ ಬಾಯಿಗೆ ಬಂದಾಗ ಉಳಿಯುವುದೇನು; ಮೌನ-ಪ್ರಾರ್ಥನೆ. ಎಲ್ಲ ಸ್ವಾರ್ಥ-ಪ್ರಭಾವಗಳ ತಂತು ಕತ್ತರಿಸಿಕೊಂಡು ನಾವೆಂಬ ನಾವಷ್ಟೇ ಶುದ್ಧಾನುಶುದ್ಧವಾಗಿ ಉಳಿಯಲು ಆತ್ಮಾವಲೋಕನದ ಮಹಾಸಂದರ್ಭ ಸೃಷ್ಟಿಯಾಗಿರುವ ಈ ಹೊತ್ತಿನಲ್ಲಾದರೂ ಅರಿವು-ಅನುಕಂಪ ಶಾಶ್ವತವಾಗಿ ನಮ್ಮಲ್ಲಿ ಮನೋಗತವಾಗುವುದೆ? ಯೋಚಿಸಿ, ನರನಾಡಿಗಳಲ್ಲಿ ರಕ್ತವೇರಿಸಿಕೊಳ್ಳುವಾಗ, ಅಂಗಗಳನ್ನು ಕಸಿ ಮಾಡಿಸಿಕೊಳ್ಳುವಾಗ, ಪ್ಲಾಸ್ಮಾ ನಮ್ಮ ದೇಹ ಸೇರುವಾಗ ಹೆಣ್ಣು-ಗಂಡು-ಜಾತಿ-ಮತ-ಪಂಥ-ಗಡಿ-ಪಕ್ಷಗಳೆಂಬ ವಿಷಬೀಜಗಳು ನಮ್ಮನ್ನು ತಾಕಿದ್ದಿದೆಯೇ? ಮನೆಓಣಿಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಈತನಕವೂ ನಮ್ಮ ‘ಅಸ್ತಿತ್ವ’ ಎನ್ನುವುದಕ್ಕೆ ಎಷ್ಟೆಲ್ಲ ರೂಪದಲ್ಲಿ ಕೃತ್ರಿಮ ಮತ್ತು ಪೊಳ್ಳುತನದ ಎಳೆಗಳನ್ನು ಜೋಡಿಸಿಕೊಳ್ಳುತ್ತಿದ್ದೇವೆ? ಇವೆಲ್ಲವೂ ದಾಖಲೆಯರೂಪದಲ್ಲಿ ಜಗದ್ವ್ಯಾಪಿಯಾಗಿ ನಮ್ಮನ್ನು ಮತ್ತಷ್ಟು ಬೆತ್ತಲೆಗೊಳಿಸುತ್ತವೆ ಎನ್ನುವ ಕನಿಷ್ಟ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿರುವ ನಾವುಗಳು ಆತ್ಮಸಾಕ್ಷಿಯನ್ನು ಮಾರಿಕೊಂಡು ಹೊರಟಿದ್ದಾದರೂ ಎಲ್ಲಿಗೆ? ಸಹಜವಾಗಿ ನಾವೆಲ್ಲ ಬದುಕಿದ್ದೆವು. ಆದರೆ ಬರುಬರುತ್ತ ಅದು ಸಾಧ್ಯವಾಗುತ್ತಿಲ್ಲವೇಕೆ, ಸಮತೋಲನ ತಪ್ಪಿದ್ದೆಲ್ಲಿ? ನಿಜವಾದ ಜ್ಞಾನವರಸಿ ಹೊರಟಲ್ಲೆಲ್ಲ ರಾಜಕಾರಣದ ಕಮಟು. ಪ್ರೀತಿ-ಸಹಬಾಳ್ವೆಯ ಹಾದಿಯಲ್ಲೆಲ್ಲ ಅನುಮಾನ, ಪ್ರತಿಷ್ಠೆಯ ಅಡ್ಡಗೋಡೆ. ಹೀಗಿರುವಾಗ ಕಂಗೆಡಿಸುತ್ತಿರುವ ವಾಸ್ತವಕ್ಕೆ, ಪರಿಸ್ಥಿತಿಯ ಅಸಹಾಯಕತೆಗೆ ನೆನಪುಗಳೇ ನೇವರಿಕೆ, ಜೀವಕ್ಕೆ ಗುಟುಕು.
ಇದೋ ‘ಟಿವಿ9 ಕನ್ನಡ ಡಿಜಿಟಲ್ : ಏಸೊಂದು ಮುದವಿತ್ತು’ ಸರಣಿ ನಿಮ್ಮ ಓದಿಗೆ. ನಿಮ್ಮನ್ನು ವಿಚಲಿತಗೊಳಿಸುತ್ತಿರುವ ವರ್ತಮಾನದ ಯಾವ ಸಂಗತಿಗಳೂ ನಿಮ್ಮ ಬಾಲ್ಯವನ್ನು, ಕಳೆದ ಪರಿಸರವನ್ನು, ಪ್ರವಾಸಕ್ಕೆ ಹೋದ ಊರುಗಳ ವಾತಾವರಣವನ್ನು, ಇದಿರಾದ ವ್ಯಕ್ತಿಗಳ ಒಡನಾಟವನ್ನು, ಪ್ರಸಂಗಗಳನ್ನು ನೆನಪಿಸುತ್ತಿರಬಹುದು. ತಡ ಯಾಕೆ? ನಿಮ್ಮ ಬರಹದೊಂದಿಗೆ ಆಲ್ಬಮ್ಮಿಗಂಟಿರುವ ಫೋಟೋಗಳನ್ನು ಮೆಲ್ಲಗೆ ಹಾಳೆಗಳಿಂದ ಬಿಡಿಸಿ ಇಲ್ಲಿ ತೂರಿಬಿಡಿ ಇ ಮೇಲ್ : tv9kannadadigital@gmail.com
ರಂಗಭೂಮಿ, ಕಿರುತೆರೆ, ಹಿರಿತೆರೆ ಕಲಾವಿದೆ ವಿದ್ಯಾ ಮೂರ್ತಿ ಅವರಿಲ್ಲಿ ಬಾಲ್ಯಕ್ಕೆ ಜಾರಿ ಕೊನೆಯಲ್ಲಿ ಒಂದು ಕೋರಿಕೆ ಇಟ್ಟಿದ್ದಾರೆ!
*
ಎಳವೆಯೊಂದು ಅಚ್ಚರಿ. ನಾನು ಎಳೆಯವಳಾಗಿದ್ದಾಗ, ಆ ಎಳವೆ ನನಗೆ ಸುತರಾಂ ಇಷ್ಟವಿರಲಿಲ್ಲ. ಆದರೆ ಈಗ ಈ ವಯಸ್ಸಿನ ಕಾಲಘಟ್ಟದಲ್ಲಿ ನಿಂತು ಪುನರಾವಲೋಕನ ಮಾಡಿದಾಗ, ಇಂದಿನ ಮಕ್ಕಳ ಜಂಜಾಟ, ವೇಗ, ವಯಸ್ಸಿಗೆ ಮೀರಿದ ದೊಡ್ಡತನವನ್ನು ನೋಡುವಾಗ, ಛೇ ಆಗ ಅದರ ಸವಿಯನ್ನು ಸರಿಯಾಗಿ ಅನುಭವಿಸದೇ ಬಿಟ್ಟೆನಲ್ಲ ಎಂಬ ಕೊರಗು ಈಗಲೂ ಕಾಡುತ್ತದೆ. ಇದು ನನ್ನೊಬ್ಬಳ ಭಾವನೆಯೋ ಅಥವಾ ಬಹುತೇಕರದೋ ಗೊತ್ತಿಲ್ಲ. ನನ್ನ ಬಾಲ್ಯ ಅಸಹನೀಯವಾಗಲು ಕಾರಣ ನನ್ನ ಅಪ್ಪನ ಅತಿಶಿಸ್ತು. ಐದು ಗಂಡುಗಳ ನಂತರ ಹುಟ್ಟಿದ ಏಕೈಕ ಪುತ್ರಿಯಾಗಿದ್ದರೂ ನನಗೆ ಯಾವ ಮುದ್ದುಮೆರೆಸಾಟ ಇರಲಿಲ್ಲ. ನನಗಿಂತ ನನ್ನ ಗೆಳತಿಯರೇ (ಹೆಣ್ಣುಮಕ್ಕಳೇ ಹೆಚ್ಚಿದ್ದ ಅವರ ಮನೆಗಳಲ್ಲಿ) ಎಷ್ಟೋ ಸ್ವತಂತ್ರರಾಗಿದ್ದರು. ಅವರು ತೊಡುತ್ತಿದ್ದ ದುಬಾರಿ ಉಡುಗೆ ತೊಡುಗೆಗಳು, ಹೇರ್ಬ್ಯಾಂಡ್, ಕ್ಲಿಪ್ ಇವೆಲ್ಲ ನನಗೆ ಆಕರ್ಷಕವಾಗಿ ಕಾಣುತ್ತಿದ್ದವು. ಆದರೆ, ನನ್ನ ಅಪ್ಪ ಅದೆಲ್ಲ ಅಲಂಕಾರ ವಿದ್ಯಾರ್ಥಿಗಳ ಲಕ್ಷಣವೆಂದು ದುಬಾರಿ ಬೆಲೆಯ ಬಟ್ಟೆಬರೆಗಳನ್ನು ಧರಿಸುವುದಕ್ಕಿಂತ, ಧರಿಸುವ ಬಟ್ಟೆ ಸ್ವಚ್ಛವಾಗಿರಬೇಕು ಬಾಳಿಕೆ ಬರುವಂಥದ್ದಾಗಿರಬೇಕು ಎಂದೆಲ್ಲಾ ಹೇಳಿ ನಾನು ಅಂಥವುಗಳ ಕಡೆಗೆ ಸುಲಭದಲ್ಲಿ ಆಕರ್ಷಿತಳಾಗದಂತೆ ನನ್ನ ಮನಸ್ಸನ್ನು ಸಿದ್ಧ ಮಾಡಿಬಿಟ್ಟಿದ್ದರು. ಅಪ್ಪಿತಪ್ಪಿ ಅಮ್ಮನನ್ನು ಕೇಳಿದರೂ ಅದು ಬರಬೇಕಾದದ್ದು ಅಪ್ಪನ ಮೂಲಕವೇ ಆಗಿದ್ದರಿಂದ ನಾನು ನನ್ನ ಮನಸ್ಸನ್ನು ಆದಷ್ಟು ಹಿಡಿತದಲ್ಲಿ ಇರಿಸಿಕೊಳ್ಳುತ್ತಿದ್ದೆ.
ಇಷ್ಟೆಲ್ಲಾ ಕಟ್ಟುಪಾಡುಗಳನ್ನು ಮೀರಿದ ಮೈಗಳ್ಳಿ ನಾನಾಗಿದ್ದೆ. ಹೇಗಾದರೂ ಮಾಡಿ ನನ್ನ ಪಾಲಿನ ಕೆಲಸವನ್ನು ತಪ್ಪಿಸಿಕೊಳ್ಳುವುದರಲ್ಲಿ ಸಫಲಳಾಗುತ್ತಿದ್ದೆ. ಅದಕ್ಕೆ ಒದೆ ಬೀಳುತ್ತಿದ್ದುದು ಬೇರೆ ವಿಷಯ.
ನಮ್ಮ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಸೇರುತ್ತಿದ್ದುದು ರಾತ್ರಿ ಊಟಕ್ಕೆ. ನಾವು ಆರು ಮಕ್ಕಳು ಮತ್ತು ಅಪ್ಪನಿಗೆ ಬಡಿಸಿ ನಂತರ ಅಮ್ಮನ ಊಟ. ಎಲ್ಲರ ಊಟವಾದ ಮೇಲೆ ಗೋಮೆ ಹಚ್ಚುವ ಕೆಲಸ ಮಾತ್ರ ನನ್ನ ಅಣ್ಣ ಹನ್ನೊಂದು ವರ್ಷದ ವೇಣುವಿನದಾದರೆ ಮಾರನೇ ದಿನ ಒಂಬತ್ತು ವರ್ಷದ ನನ್ನ ಪಾಲಿಗೆ. ಗಾರೆನೆಲ, ಬರೀ ಗೈಯಲ್ಲಿ ಗೋಮೆ ಹಚ್ಚಿದರೆ ಕೈಹಾಳು ಕೊಳಕು ಎಂದು ಅದಕ್ಕಾಗಿಯೇ ಪ್ರತ್ಯೇಕವಾಗಿ ಬಚ್ಚಲುಜ್ಜುವ ಬ್ರಷ್ ಇರುತ್ತಿತ್ತು. ತಟ್ಟೆ ಸುತ್ತ ಬಿದ್ದಿರುವುದನ್ನು ಆ ಬ್ರಷ್ನಿಂದ ಗೋರಿ ಅದರ ಮೇಲಿರಿಸಿ ಅದು ಕೆಳಗೆ ಬೀಳದಂತೆ ಎಚ್ಚರಿಕೆಯಿಂದ ತೆಗೆದುಕೊಂಡು ಹೋಗಿ ಕಸದ ಬುಟ್ಟಿಗೆ ಹಾಕಬೇಕಿತ್ತು.
ಇದು ನನ್ನ ಪಾಲಿಗೆ ಬಲೆ ಅಸಹ್ಯವಾದ ಕೆಲಸವಾದ್ದರಿಂದ ಹೇಗಾದರೂ ಮಾಡಿ ಇದರಿಂದ ತಪ್ಪಿಸಿಕೊಳ್ಳುವುದು ನನ್ನ ಪರಮೋಚ್ಛ ಧ್ಯೇಯವಾಗಿತ್ತು. ಅದಕ್ಕಾಗಿ ನಾನು ಸಂಜೆಯಿಂದಲೇ ಸಂಚು ಹೂಡುತ್ತಿದ್ದೆ. ಅಮ್ಮನ ಬಳಿ ನನಗೆ ಹಸಿವು ತಡೆಯಲಾಗುತ್ತಿಲ್ಲವೆಂದು ಗಲಾಟೆ ಮಾಡಿ ರಾತ್ರಿ ಊಟಕ್ಕೆ ಮೊದಲೇ ಏನಾದರೂ ತಿಂದುಬಿಡುವುದೋ ಹೊಟ್ಟೆನೋವಿನ ನೆಪಒಡ್ಡಿ ರಾತ್ರಿ ಊಟ ತಪ್ಪಿಸುವುದೋ, ಊಟಕ್ಕೆ ಕುಳಿತಾಗ ಇನ್ನೇನು ಊಟ ಕಡೆಯ ಹಂತಕ್ಕೆ ಬರುತ್ತಿದೆ ಎನ್ನುವಾಗ ಯಾವಾಗಲೂ ದೊಡ್ಡಣ್ಣ ಶ್ರೀನಿವಾಸನ ಪಕ್ಕ ಊಟಕ್ಕೆ ಕೂರುತ್ತಿದ್ದ ನಾನು ಹಾಗೇ ಮೆಲ್ಲಗೆ ತೂಕಡಿಸಿ ತೂಕಡಿಸಿ ಅವನ ಮಡಿಲಿಗೆ ಜಾರುವುದೋ ಅಂತೂ ಹೇಗಾದರೂ ಮಾಡಿ ಈ ಕೆಲಸ ತಪ್ಪಿಸುತ್ತಿದ್ದೆ. ನನ್ನ ಈ ಕಳ್ಳಾಟದ ಅರಿವಿಲ್ಲದೆ ನನ್ನ ಅಮ್ಮ ಅಣ್ಣ ತಟ್ಟೆಯಲ್ಲೇ ಕೈಬಾಯಿ ತೊಳೆದು ಪಾಪ ಮಗು (ಒಂಬತ್ತು ವರ್ಷದ ಕೊಂಟೆಕೋಣ) ವನ್ನು ಎತ್ತಿಕೊಂಡು ಹೋಗಿ ಮೊದಲೇ ಸಿದ್ಧಪಡಿಸಿದ್ದ ಹಾಸಿಗೆಯಲ್ಲಿ ಮಲಗಿಸುತ್ತಿದ್ದರು. ಇಷ್ಟೆಲ್ಲಾ ಆಗುವ ವೇಳೆಗೆ ನನಗೆ ಅಸಲಿ ನಿದ್ದೆ ಆವರಿಸುತ್ತಿದ್ದರೂ ಮುಂದೇನಾಗಬಹುದೆಂದು ತಿಳಿಯುವ ಕುತೂಹಲದಿಂದ ಎಚ್ಚರವಾಗಿರಲು ಯತ್ನಿಸುತ್ತಿದ್ದೆ. ವೇಣು, ನನ್ನ ಪಾಲಿನ ಕೆಲಸವನ್ನು ತಾನು ಮಾಡಲು ತಕರಾರು ಮಾಡುವುದು, ಅಮ್ಮ ಅವನನ್ನು ಪುಸಲಾಯಿಸಿ ಅವನಿಂದ ಆ ಕೆಲಸ ಮಾಡಿಸುವುದು, ಅವನು ಮಣಿಯದಿದ್ದರೆ ತಾನೇ ಮಾಡುವುದು ಎಲ್ಲಾ ನನಗೆ ತಿಳಿಯುತ್ತಿತ್ತು. ನನ್ನ ಪಾಲಿನ ಕೆಲಸ ವೇಣು ಮಾಡುವಾಗ ಒಂದು ತೆರನಾದ ಪಾಪಿ ಸಂತೋಷವಾಗುತ್ತಿದ್ದರೂ ಅಮ್ಮ ಆ ಕೆಲಸ ಮಾಡುವಾಗ ನಾನೇ ಪಾಪಿ ಎನ್ನಿಸುತ್ತಿತ್ತು. ಆದರೆ ಅದನ್ನು ತೋರ್ಪಡಿಸುವ ಪೆದ್ದು ಕೆಲಸ ಎಂದೂ ಮಾಡುತ್ತಿರಲಿಲ್ಲ. ಆದರೆ, ನನ್ನ ಈ ಕಳ್ಳಾಟದ ಬಗ್ಗೆ ಗುಮಾನಿ ಇದ್ದ ನನ್ನ ಅಪ್ಪ ಒಂದು ದಿನ ಇದಕ್ಕೆ ತೆರೆ ಎಳೆದೇ ಬಿಟ್ಟರು.
ಅಂದು ಎಂದಿನಂತೆ ಇನ್ನೆರಡು ತುತ್ತು ಮೊಸರನ್ನ ತಟ್ಟೆಯಲ್ಲಿ ಉಳಿದಿರುವಂತೆಯೇ ತೂಕಡಿಸಿ ಅಣ್ಣನ ಮಡಿಲಿಗೆ ಜಾರಿದ್ದೆ. ಕಿಲಾಡಿ ಅಪ್ಪ ‘ಅಯ್ಯೋ ಈವತ್ತು ರಸಪುರಿ ಒಳ್ಳೆ ಮಾವಿನಹಣ್ಣು ತಂದಿದ್ದೆ. ಯಾವುದೂ ನಾಳೆಗೆ ಇಡುವಂತಿಲ್ಲ. ಈವತ್ತೇ ತಿಂದುಬಿಡಬೇಕು ಪಾಪ ವಿದ್ಯಾಗೆ ನಿದ್ದೆ. ಬಿಡಿ ಅವಳ ಪಾಲಿನದನ್ನೂ ನಾವೇ ತಿಂದುಬಿಡಬೇಕು’ ಎಂದರು. ಅಪ್ಪನ ಈ ಮಾತು ನನಗೆ ಗುಮಾನಿ ಹುಟ್ಟಿಸಿದ್ದರಿಂದ ಮಿಸುಕಾಡದೆ ಹಾಗೇ ಮಲಗಿದ್ದೆ. ಚಿಲ್ಟಾರಿ ನಾನೇ ಅಷ್ಟು ತಲೆ ಓಡಿಸಿದಾಗ ಇನ್ನೂ ನನನ್ನ ಅಪ್ಪ ಕೇಳಬೇಕೆ? ‘ಈಗ ವಿದ್ಯಾಗೆ ನಿಜವಾಗಲೂ ನಿದ್ದೆ ಬಂದಿದ್ದರೆ ತಟ್ಟೆಯಲ್ಲಿರುವ ಅವಳ ಬಲಗೈ ಸ್ವಲ್ಪ ಅಲ್ಲಾಡುತ್ತೆ. ಆಗ ಇರುವುದರಲ್ಲೇ ಸ್ವಲ್ಪ ಗಟ್ಟಿಯಾದ ಹಣ್ಣನ್ನು ಅವಳಿಗೆಂದು ಎತ್ತಿಡೋಣ. ಅವಳು ನಿದ್ದೆಯ ನಾಟಕವಾಡುತ್ತಿದ್ದರೆ ಅವಳ ಯಾವ ಕೈಯ್ಯೂ ಅಲ್ಲಾಡದು. ಹಾಗೆಯೇ ಅವಳು ನಾಟಕವಾಡಿದ್ದಕ್ಕೆ ಶಿಕ್ಷೆ ಎಲ್ಲರಿಗೂ ಎರಡು ಹಣ್ಣಾದರೆ ಅವಳಿಗೆ ಒಂದೇ. ಜೊತೆಗೆ ಗೋಮೆಯೂ ಮಾಡಿ ಎಲ್ಲರೂ ತಿಂದ ಹಣ್ಣಿನ ಓಟೆ, ಸಿಪ್ಪೆಯಲ್ಲ ಅವಳೇ ಎತ್ತಿ ಹಾಕಬೇಕು’ ಎಂದರು. ನನ್ನ ಪಂಚಪ್ರಾಣವಾದ ಆ ಋತುವಿನ ಮೊದಲನೇ ಒಬ್ಬೆಯ ಮಾವಿನಹಣ್ಣು ನನ್ನ ಕೈತಪ್ಪಿದರೆ ಎಂಬ ಆತಂಕದಿಂದ ನನ್ನ ಪಾಲಿಗೆ ಗಲ್ಲು ಶಿಕ್ಷೆಗಿಂತಲೂ ಘೋರವಾದ ಈ ಶಿಕ್ಷೆಯಿಂದ ಪಾರಾಗಬೇಕೆಂದು ಹಿಂದೂಮುಂದೂ ಯೋಚಿಸದೆ ತಟ್ಟೆಯಲ್ಲಿ ಕೈಯ್ಯಾಡಿಸಿದೆ. ಛಟೀರ್ ಎಂದು ಕೈಮೇಲೆ ಬಿತ್ತೊಂದು ಏಟು. ಮುಂದಿನ ಕಥೆ ಪ್ರತ್ಯೇಕವಾಗಿ ತಿಳಿಸಬೇಕಿಲ್ಲ ಅಲ್ಲವೆ? ಆದರೂ ನನ್ನಲ್ಲಿ ಒಂದು ಮಟ್ಟಕ್ಕೆ ಶಿಸ್ತಿನ ಅರಿವು ಮೂಡಿಸಿದ ನನ್ನ ತೀರ್ಥರೂಪರಿಗೆ ಪ್ರೀತಿಪೂರ್ವಕ ಧನ್ಯಾಂಜಲಿ.
ಈ ನೆನಪಿನ ಜೊತೆ, ನನ್ನನ್ನು ಇಂದಿಗೂ ಕಾಡುವ, ನಾಚಿಕೆ, ಸಂಕೋಚ, ಅವಮಾನ, ಆಕ್ರೋಶ, ನಗು, ಈ ಎಲ್ಲಾ ಭಾವಗಳೂ, ಮುಂಚೂಣಿಯ ಯೋಧರಂತೆ ಒಟ್ಟೊಟ್ಟಿಗೆ ನುಗ್ಗುವ ಪ್ರಸಂಗವೊಂದನ್ನು ನಿಮ್ಮೊಡನೆ ಹಂಚಿಕೊಳ್ಳಬಯಸುವೆ. ಆದರೆ ನೀವು ನನ್ನ ಎಳವೆಯಲ್ಲಾದದ್ದನ್ನು ಓದಿ, ಥೂ ಇದು ಯಾವ ಘನಂದಾರಿ ವಿಷಯವೆಂದು ಹೀಗೆ ಜಗಜ್ಜಾಹೀರು ಮಾಡುತ್ತಿದ್ದಾಳೆ ಎಂದು ಅಸಹ್ಯಪಡಬಾರದು ಅಷ್ಟೇ. ಏಕೆಂದರೆ ಈ ಘಟನೆ ನಡೆದಾಗ ನಾನಿನ್ನೂ ಎಂಟರ ಎಳೇ ದಂಟು. ಏಳೆಂಟು ವರ್ಷಕ್ಕೇ ತಮ್ಮ ಅತಿ ಚುರುಕು ಬುದ್ಧಿಯಿಂದ ದೊಡ್ಡವರೆನಿಸಿಬಿಡುವ ಈಗಿನ ಮಕ್ಕಳಿಗೆ ಹೋಲಿಸಿದರೆ, ಆಗ ನಾನಿನ್ನೂ ನಾಲ್ಕು ವರ್ಷಗಳ ಪಾಪುವಿನಂಥ ಮಗು.
ನಾನಾಗ ಮೂರನೆಯದೋ, ನಾಲ್ಕನೆಯದೋ ತರಗತಿ ಇರಬೇಕು, ಅದು ಸರಿಯಾಗಿ ನೆನಪಿಲ್ಲ. ನಮ್ಮ ಶಾಲೆಯಲ್ಲಿ ಒಂದರಿಂದ ಏಳರವರೆಗೂ ಹುಡುಗಿ ಹುಡುಗಿಯರಿಬ್ಬರೂ ಒಟ್ಟಿಗೇ ಕಲಿಯುತ್ತಿದ್ದೆವು. ತನ್ನ ಶಿಸ್ತಿಗೆ, ಕಟ್ಟುನಿಟ್ಟಿನ ಶಿಕ್ಷಕರಿಗೆ ಪಾಠವಲ್ಲದೆ ಪಠ್ಯೇತರ ಚಟುವಟಿಕೆಗಳಿಗೂ ಹೆಸರಾಗಿತ್ತು ನಮ್ಮ ಶಾಲೆ, ಶ್ರೀ ಸರಸ್ವತೀ ವಿದ್ಯಾ ಮಂದಿರ.
ಆ ಕಾಲಕ್ಕೆ ‘ಚಕ್ರತೀರ್ಥ’ ಕನ್ನಡ ಚಿತ್ರದ ‘ಜಲಲ ಜಲಲ ಜಲ ಧಾರೆ’ ಗೀತೆ ಬಹಳ ಪ್ರಖ್ಯಾತವಾಗಿತ್ತು. ಇದರ ಉಲ್ಲೇಖ ಇಲ್ಲೇಕೆ ಎಂದು ಮುಂದೆ ನಿಮಗೇ ತಿಳಿಯುತ್ತದೆ. ನಮ್ಮಷ್ಟು ಚಿಕ್ಕಮಕ್ಕಳ ಬಾಯಲ್ಲೂ ಆ ಹಾಡಿನ ಪಲ್ಲವಿ, ಜಲಲ ಜಲಲ ಜಲ ಧಾರೆಯ ಪುನರಾವರ್ತನೆ, ಕುಂಟುಮುಟ್ಟಿಸುವಾಟ ಆಡುವಾಗ, ಕಬಡ್ಡಿ ಆಡುವಾಗಲೂ ಜಲಲ ಜಲಲ, ಮುಂದಿನ ಸಾಲು ಗೊತ್ತಿಲ್ಲ. ಶಾಲೆಯಲ್ಲಿ ಚಿತ್ರಗೀತೆ ಹಾಡಿದರೆ ಬೈಯ್ಯುತ್ತಿದ್ದ, ಶಿಸ್ತಿನ ಪ್ರತಿರೂಪವಾದ ನಮ್ಮ ಶಿಕ್ಷಕರ ಬಾಯಲ್ಲೂ ಆಗಾಗ ಇದೇ ಹಾಡಿನ ಗುನುಗು.
ನಮ್ಮ ಶಾಲೆ ಕಟ್ಟುನಿಟ್ಟಿಗೆ ಹೆಸರೆಂದು ಆಗಲೇ ಹೇಳಿದ್ದೆನಲ್ಲ, ಬೆಳಿಗ್ಗೆ ಹತ್ತುಗಂಟೆಗೆ ಪ್ರಾರ್ಥನೆಯೊಂದಿಗೆ ಆರಂಭವಾಗಿ, ಒಮ್ಮೆ ತರಗತಿಯೊಳಗೆ ಹೊಕ್ಕೆವೆಂದರೆ ಮತ್ತೆ ಮಧ್ಯಾಹ್ನ ಒಂದರಿಂದ ಒಂದೂವರೆ ಯವರೆಗೂ ಊಟದ ವಿರಾಮ. ನಂತರ ಮತ್ತೆ ಒಂದೂವರೆಯಿಂದ ನಾಲ್ಕೂವರೆಯವರೆಗೆ, ತರಗತಿಗಳು ಮುಗಿದು, ಶಾಲಾಪ್ರಾಂಗಣದಲ್ಲಿ ಎಲ್ಲರೂ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಿ, ನಂತರ, ಸರದಿಯಲ್ಲಿ ಶಾಲೆಯ ಮುಂಭಾಗದ ದೊಡ್ಡ ಗೇಟಿನ ಮೂಲಕವೇ ಹೊರಹೋಗಬೇಕು. ಶಾಲೆಯ ಹಿಂಭಾಗದಲ್ಲಿ ಇದ್ದ ಚಿಕ್ಕಬಾಗಿಲಿನ ಮೂಲಕ ಶಾಲೆಗೆ ಬಂದು ಹೋಗಿ ಮಾಡುವಂತಿರಲಿಲ್ಲ. ಆ ಹಿಂಬಾಗಿಲ ಓಡಾಟ ನಮ್ಮ ಮನೆಗೆ ಬಹಳ ಹತ್ತಿರವಾಗುತ್ತಿದ್ದರಿಂದ ಅಪ್ಪಿತಪ್ಪಿ ಶಾಲೆಗೆ ಲೇಟಾದ ದಿನವಾದರೂ ಹಾಗೆ ಹೋಗಲು ಪ್ರಯತ್ನಿಸಿದರೂ ಅದು ಅಸಾಧ್ಯವಾಗಿತ್ತು. ಕಾರಣ, ನೋಡಲು ಲಕ್ಷಣವಾಗಿದ್ದರೂ, ಶಿಕ್ಷಕರಿಗಿಂತ ಶಿಸ್ತಿನ ಆಯಾ ಮಂಗಮ್ಮಳ ಕಾವಲು. ಅವಳು ಕೈಯ್ಯಲ್ಲೊಂದು ಪುಟ್ಟ ಬೆತ್ತ ಹಿಡಿದು ಬಾಗಿಲ ಬಳಿ ನಿಂತಿದ್ದಾಳೆಂದರೆ ಅತ್ತ ಕಣ್ಣು ಹಾಯಿಸಲೂ ಭಯ ನಮಗೆ. ಮಧ್ಯಾಹ್ನ ಊಟಕ್ಕೆ ಬಿಟ್ಟಾಗಲೂ ಅಷ್ಟೇ, ತರಗತಿಯ ನಡುವಿನಲ್ಲಿ ನೀರಿಗಾಗಲೀ, ರೀಸಸ್ಗಾಗಲೀ ಹೊರ ಬಿಡದ್ದರಿಂದ (ಅತಿ ಅವಶ್ಯಕ ವಾದ ಸಂದರ್ಭ ಬಿಟ್ಟು) ಆ ಸಮಯದಲ್ಲಿ ನೂಕು ನುಗ್ಗಲಾಗದಂತೆ, ರೀಸಸ್ ಆದಮೇಲೆ ಚೆನ್ನಾಗಿ ನೀರು ಕೊಚ್ಚಿ ಹೊರಬರುವಂತೆ ನಮ್ಮನ್ನು ನಿಯಂತ್ರಿಸುತ್ತಿದ್ದಳು. ಅಂಥ ಅವಳನ್ನು ಮರೆಯಲಾಗವುದೇ?
ಅಂದು ನನ್ನ ಹುಟ್ಟುಹಬ್ಬ. ಹುಟ್ಟುಹಬ್ಬದಂದು ಬಣ್ಣದ ಬಟ್ಟೆ ಯಲ್ಲಿ ಶಾಲೆಗೆ ಹೋಗಲು ಶಾಲೆಯಲ್ಲಿ ಪರವಾನಗಿ ಇತ್ತು. ನನ್ನಮ್ಮ ನನಗೆ, ನೇರಳೆ ಬಣ್ಣದ ಒಡಲಿಗೆ ಪುಟ್ಟಪುಟ್ಟ ಮಾವಿನಕಾಯಿ ಅಂಚಿನ ಜರಿಲಂಗ ಹೊಲೆಸಿದ್ದರು. ಬೆಳಿಗ್ಗೆ ಬೇಗೆದ್ದು, ಮಿಂದು, ದೇವರಿಗೆ ನಮಿಸಿ, ಗಡದ್ದಾಗಿ ಅಮ್ಮನ ಕೈರುಚಿಯ ಮಸಾಲೆದೋಸೆ ತಿಂದು, ದಾಹ ತಣಿಸಲು ಚೆನ್ನಾಗಿ ನೀರು ಕುಡಿದು, ಜರಿಲಂಗ ತೊಟ್ಟು, ತರಗತಿಯಲ್ಲಿ ಹಂಚಲು ಪ್ಯಾರೀಸ್ ಪೆಪ್ಪರಮೆಂಟು ಇಟ್ಟುಕೊಂಡು ಗೆಳತಿಯರೊಂದಿಗೆ ಶಾಲೆಗೆ ಹೊರಟೆ. ಮನೆಗೆ ಸಮೀಪದಲ್ಲೇ ಇದ್ದ ಶಾಲೆಗೆ ನಾವು ಯಾವಾಗಲೂ ಓಡಿಕೊಂಡೇ ಹೋಗಿ, ಓಡಿಕೊಂಡೇ ಮನೆಗೆ ಬರುವುದು ಅಭ್ಯಾಸ, ನಡೆಯುವುದೇ ಗೊತ್ತಿಲ್ಲವೆಂಬಂತೆ. ಆದರೆ ಅಮ್ಮ ನೂರು ಬಾರಿ ಹೊಸಬಟ್ಟೆ, ಜೋಪಾನ ಎಂದಿದ್ದ ಎಚ್ಚರಿಕೆ ಗಂಟೆ, ಬಾರಿಬಾರಿಗೂ ಬಾರಿಸಿ, ಓಡಲು ಮುಂದಿಟ್ಟ ಕಾಲು ನಡೆಯುತ್ತಿತ್ತು, ಜೊತೆಗೆ ಹೊಟ್ಟೆ ಭಾರ. ಕೇಳಬೇಕೆ? ಆದರೂ ಗೆಳತಿಯರ ವರಾತದಿಂದಾಗಿ ಎರಡು ಹೆಜ್ಜೆ ಓಡು, ನಾಲ್ಕು ಹೆಜ್ಜೆ ನಡೆ ಎಂಬಂತಾಗಿ, ನಿತ್ಯ ಹತ್ತು ಗಂಟೆಗೆ ಶುರುವಾಗುವ ಶಾಲೆಗೆ, ಆಟವಾಡುವ ಸಲುವಾಗಿ ಒಂಬತ್ತೂವರೆಗೆಲ್ಲ ಸೇರುತ್ತಿದ್ದ ನಾವು, ನನ್ನಿಂದಾಗಿ ಅಂದು ಹದಿನೈದು ನಿಮಿಷ ತಡವಾಗಿ ತಲುಪಿದ್ದಾಯ್ತು. ತಡವಾಗಿದ್ದಕ್ಕೆ ಈ ಮಡಿ ಗುಂಡಮ್ಮನೇ ಕಾರಣ ಎಂದು ಹುಟ್ಟುಹಬ್ಬದಂದು, ಗೆಳತಿಯರಿಂದ ಬೈಸಿಕೊಂಡರೂ, ಜರಿಲಂಗ ಧರಿಸಿ ಆಟವಾಡಲಾಗದಿದ್ದ ನನಗೆ, ಒಳಗೊಳಗೇ ಖುಷಿ, ಸದ್ಯ ನನ್ನ ಬಿಟ್ಟು ಗೆಳತಿಯರು ಹೆಚ್ಚು ಹೊತ್ತು ಆಡಲಿಲ್ಲವೆಂದು.
ಹಾಂ ಶಾಲೆಯಲ್ಲಿ ನನಗೆ ‘ಮಡಿ ಗುಂಡಮ್ಮ’ನೆಂಬ ಅಡ್ಡ ಹೆಸರಿತ್ತು. ಕಾರಣ, ಬೇರೆ ಗೆಳತಿಯರೆಲ್ಲ ತಾವು ತಂದಿದ್ದ ಊಟವನ್ನು ಎಂಜಲು ಮಾಡಿಕೊಂಡಾದರೂ ಹಂಚಿಕೊಂಡು ತಿನ್ನುತ್ತಿದ್ದರು. ಅದು ನನಗೆ ಹಿಡಿಸದೆ, ನಾನು ಬೇರೆಯವರೊಂದಿಗೆ ಹಂಚಿಕೊಳ್ಳುವುದಕ್ಕಿಂತ, ನಾನು ನನ್ನ ಊಟ ಅವರಿಗೆ ಕೊಟ್ಟ ನಂತರ ಅವರು ಕೊಟ್ಟಿದ್ದನ್ನು ನಾನು ಬೇಡವೆನ್ನಲಾಗುದಿಲ್ಲ ಎಂದು, ನಾನು ಎಲ್ಲರಿಗಿಂತ ಮೊದಲೇ ತಿನ್ನಲು ಶುರುಮಾಡಿ ಬಿಡುತ್ತಿದ್ದೆ. ಅದು ಸಾಲದೆಂಬಂತೆ ನಾನು ಮನೆಯಿಂದ ಶಾಲೆಗೆ ಹೊರಡುವ ಮೊದಲು ಬಚ್ಚಲಿಗೆ ಹೋಗಿ ಬಂದರೆ, ಮತ್ತೆ ಮನೆಗೆ ಬಂದು ನಂತರವೇ ಬಚ್ಚಲಪ್ರವೇಶ. ಶಾಲೆಯಲ್ಲಿ ಹೋಗಲು ಅಸಹ್ಯ. ನಾನು ಹೀಗೆ ನಚ್ಚುನುಚ್ಚು ಮಾಡುತ್ತಿದ್ದುದಕ್ಕೆ ನನಗೆ ‘ಮಡಿ ಗುಂಡಮ್ಮ’ ಬಿರುದು ಪ್ರದಾನ. ಆದರೆ ಅಂಥದಕ್ಕೆಲ್ಲ ನಾನು ಯಾವತ್ತೂ ತಲೆ ಕೆಡಿಸಿಕೊಂಡವಳೇ ಅಲ್ಲ.
ಆ ದಿನ ದೋಸೆ ತಿಂದು, ಸಿಕ್ಕಾಪಟ್ಟೆ ನೀರು ಕುಡಿದಿದ್ದಕ್ಕೋ, ನನ್ನ ದುರಾದೃಷ್ಟಕ್ಕೋ ಊಟದ ವಿರಾಮದ ವೇಳೆಗೇ ಅವಸರ ಶುರುವಾಯಿತು. ಆದರೆ ಶಾಲೆಯ ಟಾಯ್ಲೆಟ್ನಲ್ಲಿ, ಅದರಲ್ಲೂ ಜರಿಲಂಗ ಧರಿಸಿ, ರೀಸಸ್ಗೆ ಹೋಗಲು ಅಸಹ್ಯವಾಗಿ, ಮಂಗಮ್ಮ ಅಂದು ಬಂದಿರಲಿಲ್ಲವಾದ್ದರಿಂದ ಸಂಜೆ ಶಾಲೆ ಬಿಟ್ಟಮೇಲೆ, ಹೇಗಾದರೂ ಮಾಡಿ ಹಿಂದಿನ ಬಾಗಿಲಿನಿಂದ ಹೊರಟು ಹೋಗುವ ನಿರ್ಧಾರ ಮಾಡಿ ಕಷ್ಟಪಟ್ಟು ತಡೆದುಕೊಂಡೆ.
ಅಂತೂ ಇಂತೂ ನಾಲ್ಕೂವರೆಯ ಗಂಟೆ ಬಾರಿಸಿತು. ಪ್ರಾರ್ಥನೆಗೆ ಮೊದಲು ನಿಂತರೆ, ಸರದಿಯಲ್ಲಿ ಮೊದಲು ಶಾಲೆಯಿಂದಾಚೆ ಹೋಗಬಹುದೆಂದು ತರಗತಿಯಿಂದ ಹೊರಬರುವಾಗಲೇ ನುಗ್ಗಾಟ. ಆದರೆ ಅಂದಿನ ನನ್ನ ಸ್ಥಿತಿಯಲ್ಲಿ, ನಾನು ನುಗ್ಗುವಂತಿರಲಿಲ್ಲ. ಬಿಡು ಒಳ್ಳೆಯದೇ ಆಯಿತು, ಎಲ್ಲರೂ ಹೋದಮೇಲೆ ನಾನು ನಿರಾತಂಕವಾಗಿ ಹಿಂಬಾಗಿಲಿನಿಂದ ಹೋಗಬಹುದೆಂದು ನಾನೂ ಹಿಂದೆಯೇ ಉಳಿದೆ. ಎಲ್ಲರೂ ಹೋದಮೇಲೆ ಅಲ್ಲಿಗೆ ಓಡಿದೆನಾ, ಮಂಗಮ್ಮ ಮಂಗಮಾಯದಲ್ಲಿ ಅಲ್ಲಿ ಪ್ರತ್ಯಕ್ಷ. ಮಾತಾಯಿ, ಪರಿಪರಿಯಾಗಿ ಬೇಡಿದರೂ ಬಿಡಲಿಲ್ಲ. ಪ್ರಾರ್ಥನೆಗೆ ಅಟ್ಟಿಯೇ ಬಿಟ್ಟಳು.
ಅಲ್ಲಿ ಹೋದರೆ ನನ್ನ ಗೆಳತಿಯರಾಗಲೇ ಮುಂದೆ ನಿಂತಾಗಿತ್ತು. ನನಗೆ ಹುಡುಗಿಯರ ಸಾಲಿನ ಹಿಂಭಾಗವೇ ಗತಿ, ನನ್ನ ನಂತರ ಹುಡುಗರ ಸಾಲು. ನನ್ನ ಹುಟ್ಟುಹಬ್ಬದ ಅದೃಷ್ಟವನ್ನು ಕೊಂಡಾಡುತ್ತ ರಾಷ್ಟ್ರಗೀತೆ ಹಾಡಲು ಸ್ವರವೆತ್ತಿದರೆ ಸ್ವರ ಹೊರಡದೆ, ಅಷ್ಟು ಹೊತ್ತೂ ತಡೆದಿದ್ದು ಹೊರಬರುವಂತಾಗಿ, ಎರಡು ಹನಿ ನೆಲಕ್ಕೆ ಬಿದ್ದೇ ಬಿಟ್ಟಿತು. ಅದೂ ಇನ್ನೇನು ಕಡೆಯ ಎರಡು ಸಾಲುಗಳಿವೆ ಎನ್ನುವಾಗ. ನಾನು ಸುಮ್ಮನೆ ಹಾಗೇ ನಿಂತಿದ್ದರೆ ಅದು ಯಾರಿಗೂ ತಿಳಿಯುತ್ತಿರಲಿಲ್ಲ, ಆದರೆ ದಡ್ಡಿ ನಾನು, ಹುಡುಗರಿಗೆ ಅದು ನಾನೆಂದು ತಿಳಿಯಬಾರದೆಂದು ಎರಡು ಹೆಜ್ಜೆ ಮುಂದಿಟ್ಟೆ. ಆಗ ಅದು ನನ್ನ ಹಿಂದಿದ್ದ ಶಿವಕುಮಾರಗೆ ಕಂಡೇ ಬಿಟ್ಟಿತು. ‘ಏ ನೋಡ್ರೋ ಮಳೆ ಹನೀತಿದೆ’ ಎಂದು ಬೇರೆ ಹುಡುಗರ ಗಮನ ಇತ್ತ ಸೆಳೆದ. ನನಗೆ ಫಕ್ಕನೆ ನಗು ಬಂದು ಬಿಟ್ಟಿತು. ಜೊತೆಗೆ ಅದುವರೆಗೂ ತಡೆದಿದ್ದ ಕಟ್ಟೆಯೂ ಒಡೆದು, ಗಟ್ಟಿಮಣ್ಣಿನ ನೆಲದ ಮೇಲೆ ಟರ್ರೆಂದು ಸದ್ದು ಮಾಡಿ ಹರಿಯಲಾರಂಭಿಸಿತು. ನಮ್ಮ ತರಗತಿಯ ಅತ್ಯಂತ ತಲೆ ಹರಟೆ, ಸೂರಿ ಜಲಲ ಜಲಲ ಜಲಧಾರೆ ಎಂದು ಮೆಲ್ಲಗೆ ಆರಂಭಿಸಿಯೇ ಬಿಟ್ಟ, ಮಿಕ್ಕ ಹುಡುಗರು ನಡುನಡುವಿಗೆ, ಮಡಿ ಗುಂಡಮ್ಮ, ಜಲಲ ಜಲಲ ಜಲಧಾರೆ ಎಂದು ಸೇರಿಸಿ ಹಾಡಲಾರಂಭಿಸಿದರು. ನನಗೆ ಅವಮಾನ, ನಗು, ಭಯ, ನಾಚಿಕೆ, ಜರಿಲಂಗ ಹಾಳಾದ ದುಃಖ ಎಲ್ಲಾ ಒಟ್ಟೊಟ್ಟಿಗೇ ನುಗ್ಗಿ ಬಂದು ಎಷ್ಟು ಪ್ರಯತ್ನ ಪಟ್ಟರೂ ಜಲಧಾರೆಯನ್ನು ನಿಯಂತ್ರಿಸಲು ಸಾಧ್ಯವೇ ಆಗಲಿಲ್ಲ. ಪುಣ್ಯಕ್ಕೆ, ಅಷ್ಟರ ವೇಳೆಗೆ ರಾಷ್ಟ್ರಗೀತೆ ಮುಗಿದು ಶಿಕ್ಷಕರು ಸ್ಟಾಫ್ರೂಮಿಗೆ ತೆರಳಿದ್ದರಿಂದ ನಾನು ಅಷ್ಟರ ಮಟ್ಟಿಗೆ ಬಚಾವ್. ಆದರೆ ಈ ಹುಡುಗರ ಗಾಯನದಿಂದಾಗಿ ನನ್ನ ಅಕ್ಕಪಕ್ಕದ ವರಿಗೆಲ್ಲಾ ನನ್ನ ಅವಸ್ಥೆ ಗೊತ್ತಾಗಿ ನಗು ಅಂದರೆ ನಗು. ನಾನು ಹೇಗೋ ಅವಮಾನ ಸಹಿಸಿ, ನನಗಿಂತ ಮೊದಲೇ ಹೊರಬಂದು ನನಗಾಗಿ ಕಾಯುತ್ತಿದ್ದ ಗೆಳತಿಯರನ್ನು ಕೂಡಿಕೊಂಡೆ. ಅವರಿಗೂ ನನ್ನ ಒದ್ದೆ ಲಂಗ ನೋಡಿ, ಎಲ್ಲಾ ಅರ್ಥವಾಗಿ ನಗು ಅಂದರೆ ನಗು. ಆದರೂ ಪಾಪ ತಮ್ಮ ನಗುವನ್ನು ಬೇಗನೆ ನಿಯಂತ್ರಿಸಿ ‘ನಡಿಯೇ, ಓಡಿ ಹೋಗೋಣ ಬೇಗ ಹೇಗೂ ಎಲ್ಲಾ ಖಾಲಿ ಆಗಿದೆಯಲ್ಲ’ ಎಂದರು.
ಆದರೆ ಆ ಒದ್ದೆ ಲಂಗದಲ್ಲಿ ಓಡುವುದಿರಲಿ, ನಡೆಯುವುದೂ ಅಸಾಧ್ಯವಾಗಿದ್ದ ಕಾರಣ ಗೆಳತಿಯರೆಲ್ಲ ನನ್ನ ಸುತ್ತುವರಿದು ರಸ್ತೆಯ ಇತರ ಕಣ್ಣುಗಳಿಂದ ನನ್ನನ್ನು ಮರೆಮಾಡಿ, ಮನೆ ಮುಟ್ಟಿಸಿದರು. ನಾನು ಸದ್ದಿಲ್ಲದೆ, ಮನೆಯ ಹಿಂಬದಿಯಿಂದ ಸೀದಾ ಬಚ್ಚಲು ಮನೆಗೆ ಹೋಗಿದ್ದನ್ನು ಗಮನಿಸಿದ ಅಮ್ಮ, ಏನಾಯಿತೇ ಎನ್ನುತ್ತಾ ಧಾವಿಸಿ ಬಂದರು. ನಿಜ ಹೇಳಲು ಅವಮಾನವೆನಿಸಿ, ಕೊಚ್ಚೆ ಮೇಲೆ ಬಿದ್ದೆನೆಂದು ಸುಳ್ಳು ಹೇಳಿದೆ. ಕೊಚ್ಚೆ ವಾಸನೆಗೂ ಈ ವಾಸನೆಗೂ ವ್ಯತ್ಯಾಸ ತಿಳಿಯದಿದ್ದಿತೇ ಅಮ್ಮನಿಗೆ? ಪಾಪ, ಎಂದೂ ಯಾವ ಕಾರಣಕ್ಕೂ ಯಾರು ಮೇಲೂ ಕೋಪಿಸದ ನನ್ನಮ್ಮ, ‘ಹುಚ್ಚು ಹುಡುಗಿ ಅದ್ಯಾಕೆ ಹಾಗೆ ಮಾಡ್ಕೋಬೇಕು, ಇಂಟರರವೆಲ್ನಲ್ಲಿ ಹೋಗಬಾರದಿತ್ತ, ಅನ್ಯಾಯವಾಗಿ ಜರಿಲಂಗ ಹಾಳು ಮಾಡಿಕೊಂಡೆ. ಅದೂ ಹುಟ್ಟುಹಬ್ಬದ ದಿನ ಯಾರಾದರೂ ಎರಡೆರಡು ಸಲ ಸ್ನಾನ ಮಾಡುತ್ತಾರಾ?‘ ಎಂದು ನವಿರಾಗಿ ಗದರಿ ತಾನೇ ಮೀಯಿಸಿ ಮಡಿಬಟ್ಟೆ ತೊಡಿಸಿದರು.
ನೋಡಿ, ಈ ಅರವತ್ತೈದರ ಅಂಚಿನಲ್ಲೂ, ಹಚ್ಚಹಸಿರಾದ ಈ ನೆನಪುಗಳು ಏಸೊಂದು ಮುದವೀಯುತ್ತಿವೆ. ಅಂದಿಗಿದು ಅವಮಾನದ ಸಂಗತಿಯಾಗಿದ್ದರೂ, ಈಗಲೂ ನೆನೆಸಿಕೊಂಡರೆ ನಗು ತಡೆಯಲೇ ಆಗದು. ಮನಸ್ಸು ಮತ್ತೆ ಮಗುವಾಗುತ್ತದೆ. ಹಾಂ ನೋಡಿ ಮತ್ತೆ,ಇದನ್ನು ಓದಿದ ಮೇಲೆ, ನಾವೇನಾದರೂ ಮುಖಾಮುಖಿಯಾದರೆ, ಈ ಹಾಡನ್ನು ಹಾಡಲು ಮರೆಯಬೇಡಿ, ಜಲಲ ಜಲಲ… ಮತ್ತೆ ನಗೋಣ, ನಕ್ಕು ಮಗುವಾಗೋಣ, ಮಗುವಾಗಿ ನಗೋಣ.
Published On - 5:54 pm, Tue, 22 June 21