Memories : ಏಸೊಂದು ಮುದವಿತ್ತು : ಶೆರೇದ ಶಿವಜ್ಜನೂ ಮನಸಿನ್ಯಾಗದಾನ ಮಿರ್ಚಿಭಜಿ ಕೊಡಸೂದನ್ನ ನಿಲ್ಲಿಸಿದ ಮಾವನೂ
Politics : ‘ಈಗಂತೂ ದೇವರುಗಳೂ ಎರಡು ಪಾರ್ಟಿಗಳೊಳಗ ಹಂಚಿಹೋಗ್ಯಾವು. ರಾಜಕೀಯ ಹಳ್ಳಿಗೂ ನುಗ್ಗೇದ. ಒಂದು ದಿನ ಒಂದು ಪಾರ್ಟಿಯ ದೇವರ ಜಾತ್ರೆ, ತೇರು, ನಾಟಕ. ಮತ್ತೊಂದು ದಿನ ಇನ್ನೊಂದು ಪಾರ್ಟಿಯ ಜಾತ್ರೆ, ತೇರು, ನಾಟಕ.’ ಅರ್ಚನಾ ಫಾಸಿ
ಈ ಔಷಧ ಎಲ್ಲಿಂದ ಬಂದಿತು, ಯಾರು ಫಾರ್ಮ್ಯುಲಾ ಬರೆದರು, ಈ ಸೂಜಿ, ಕತ್ತರಿ, ನಳಿಕೆ, ಉಪಕರಣ, ದ್ರಾವಣ, ಆಮ್ಲಜನಕ ಯಾರು ತಯಾರಿಸಿದರು, ಹೊತ್ತು ಸಾಗಿಸಿದರು, ನಮ್ಮನ್ನು ಉಪಚರಿಸುವವರ ಮೂಲವೇನು ಹಿನ್ನೆಲೆಯೇನು, ಇಂಥ ಸ್ವಾರ್ಥಪರ ಆಲೋಚನೆಗಳು ಬರುವುದುಂಟೆ? ಜೀವವೇ ಬಾಯಿಗೆ ಬಂದಾಗ ಉಳಿಯುವುದೇನು; ಮೌನ-ಪ್ರಾರ್ಥನೆ. ಎಲ್ಲ ಸ್ವಾರ್ಥ-ಪ್ರಭಾವಗಳ ತಂತು ಕತ್ತರಿಸಿಕೊಂಡು ನಾವೆಂಬ ನಾವಷ್ಟೇ ಶುದ್ಧಾನುಶುದ್ಧವಾಗಿ ಉಳಿಯಲು ಆತ್ಮಾವಲೋಕನದ ಮಹಾಸಂದರ್ಭ ಸೃಷ್ಟಿಯಾಗಿರುವ ಈ ಹೊತ್ತಿನಲ್ಲಾದರೂ ಅರಿವು-ಅನುಕಂಪ ಶಾಶ್ವತವಾಗಿ ನಮ್ಮಲ್ಲಿ ಮನೋಗತವಾಗುವುದೆ? ಯೋಚಿಸಿ, ನರನಾಡಿಗಳಲ್ಲಿ ರಕ್ತವೇರಿಸಿಕೊಳ್ಳುವಾಗ, ಅಂಗಗಳನ್ನು ಕಸಿ ಮಾಡಿಸಿಕೊಳ್ಳುವಾಗ, ಪ್ಲಾಸ್ಮಾ ನಮ್ಮ ದೇಹ ಸೇರುವಾಗ ಹೆಣ್ಣು-ಗಂಡು-ಜಾತಿ-ಮತ-ಪಂಥ-ಗಡಿ-ಪಕ್ಷಗಳೆಂಬ ವಿಷಬೀಜಗಳು ನಮ್ಮನ್ನು ತಾಕಿದ್ದಿದೆಯೇ? ಮನೆಓಣಿಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಈತನಕವೂ ನಮ್ಮ ‘ಅಸ್ತಿತ್ವ’ ಎನ್ನುವುದಕ್ಕೆ ಎಷ್ಟೆಲ್ಲ ರೂಪದಲ್ಲಿ ಕೃತ್ರಿಮ ಮತ್ತು ಪೊಳ್ಳುತನದ ಎಳೆಗಳನ್ನು ಜೋಡಿಸಿಕೊಳ್ಳುತ್ತಿದ್ದೇವೆ? ಇವೆಲ್ಲವೂ ದಾಖಲೆಯರೂಪದಲ್ಲಿ ಜಗದ್ವ್ಯಾಪಿಯಾಗಿ ನಮ್ಮನ್ನು ಮತ್ತಷ್ಟು ಬೆತ್ತಲೆಗೊಳಿಸುತ್ತವೆ ಎನ್ನುವ ಕನಿಷ್ಟ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿರುವ ನಾವುಗಳು ಆತ್ಮಸಾಕ್ಷಿಯನ್ನು ಮಾರಿಕೊಂಡು ಹೊರಟಿದ್ದಾದರೂ ಎಲ್ಲಿಗೆ? ಸಹಜವಾಗಿ ನಾವೆಲ್ಲ ಬದುಕಿದ್ದೆವು. ಆದರೆ ಬರುಬರುತ್ತ ಅದು ಸಾಧ್ಯವಾಗುತ್ತಿಲ್ಲವೇಕೆ, ಸಮತೋಲನ ತಪ್ಪಿದ್ದೆಲ್ಲಿ? ನಿಜವಾದ ಜ್ಞಾನವರಸಿ ಹೊರಟಲ್ಲೆಲ್ಲ ರಾಜಕಾರಣದ ಕಮಟು. ಪ್ರೀತಿ-ಸಹಬಾಳ್ವೆಯ ಹಾದಿಯಲ್ಲೆಲ್ಲ ಅನುಮಾನ, ಪ್ರತಿಷ್ಠೆಯ ಅಡ್ಡಗೋಡೆ. ಹೀಗಿರುವಾಗ ಕಂಗೆಡಿಸುತ್ತಿರುವ ವಾಸ್ತವಕ್ಕೆ, ಪರಿಸ್ಥಿತಿಯ ಅಸಹಾಯಕತೆಗೆ ನೆನಪುಗಳೇ ನೇವರಿಕೆ, ಜೀವಕ್ಕೆ ಗುಟುಕು.
ಇದೋ ‘ಟಿವಿ9 ಕನ್ನಡ ಡಿಜಿಟಲ್ : ಏಸೊಂದು ಮುದವಿತ್ತು’ ಸರಣಿ ನಿಮ್ಮ ಓದಿಗೆ. ನಿಮ್ಮನ್ನು ವಿಚಲಿತಗೊಳಿಸುತ್ತಿರುವ ವರ್ತಮಾನದ ಯಾವ ಸಂಗತಿಗಳೂ ನಿಮ್ಮ ಬಾಲ್ಯವನ್ನು, ಕಳೆದ ಪರಿಸರವನ್ನು, ಪ್ರವಾಸಕ್ಕೆ ಹೋದ ಊರುಗಳ ವಾತಾವರಣವನ್ನು, ಇದಿರಾದ ವ್ಯಕ್ತಿಗಳ ಒಡನಾಟವನ್ನು, ಪ್ರಸಂಗಗಳನ್ನು ನೆನಪಿಸುತ್ತಿರಬಹುದು. ತಡ ಯಾಕೆ? ನಿಮ್ಮ ಬರಹದೊಂದಿಗೆ ಆಲ್ಬಮ್ಮಿಗಂಟಿರುವ ಫೋಟೋಗಳನ್ನು ಮೆಲ್ಲಗೆ ಹಾಳೆಗಳಿಂದ ಬಿಡಿಸಿ ಇಲ್ಲಿ ತೂರಿಬಿಡಿ ಇ ಮೇಲ್ : tv9kannadadigital@gmail.com
ಅರ್ಚನಾ ಫಾಸಿ ಅವರ ಮನಸಿನೊಳಗ ಇಂದಿಗೂ ಶೆರೆ ಮಾಡೂ ಶಿವಜ್ಜ, ಹೊಲಕೆಲಸಾ ಮಾಡೂ ದೇವಲ್ಯಾ, ಪರಮೇಶಿ, ಮಿರ್ಚೀಭಜಿ ಕೊಡಿಸೋದನ್ನ ಈಗೀಗ ನಿಲ್ಲಿಸಿದ ಸೋದರಮಾವ ಉಳದಿದ್ದು ಯಾಕ?
*
ಬದುಕಿನ ಅತೀ ಸುಂದರ ಕಾಲ ಅಂದ್ರ ಚಿಕ್ಕವರಾಗಿರೊದು. ಮಕ್ಕಳಾಗಿದ್ದಾಗಿನ ಬದುಕು. ಅಲ್ಲಿ ಯಾವ ಸಂಕಟ ನೋವು ಕಾಣೋದೇ ಇಲ್ಲ. ಆಟ, ಊಟ, ಪಾಠ ಅಷ್ಟ. ನಾನು ಇಬ್ಬರು ಅಜ್ಜರನ್ನೂ ನೋಡಲಿಲ್ಲ. ಅವರಿಬ್ಬರೂ ನಾನು ಹುಟ್ಟುವುದರೊಳಗೆ ಈ ಜಗತ್ತಿಗೆ ವಿದಾಯ ಹೇಳಿಯಾಗಿತ್ತು. ಅಜ್ಜನ ಪ್ರೀತಿಯನ್ನು ಕೊಟ್ಟಿದ್ದು ಶಿವಜ್ಜ. ಆತ ಕಲಿಸಿದ್ದು ನಿಷ್ಕಲ್ಮಶವಾಗಿ ಪ್ರೀತಿಸೋದನ್ನ. ಬಿಳಿ ಪಂಚೆಯ ಒಂದು ಕಲೆಯಿಲ್ಲದ ಆತನ ಬಟ್ಟೆ. ನಕ್ಕರ ಬೊಚ್ಚುಬಾಯಿಯಲ್ಲಿ ಬೆಳದಿಂಗಳು ಚೆಲ್ಲಿದಂಗಾಗುತ್ತಿತ್ತು.
ನಾನಾಗ ಎರಡನೆಯ ತರಗತಿ. ಈ ಶಿವಜ್ಜ ಯಾವಾಗಲೂ ನಮ್ಮ ಹೊಲದಾಗ ಇರೋನು. ನಮ್ಮಹೊಲದ ಪಕ್ಕನೆ ಅಜ್ಜನ ಒಂಚೂರು ಜಮೀನು ಇತ್ತು. ಶಿವಜ್ಜನಿಗೆ ವಯಸ್ಸಾಗಿತ್ತು. ಆದರ ಖಡಕ್ ಇದ್ದ ಅಜ್ಜ. ಪಾರಮ್ಮ ಅವನ ಹೆಂಡತಿ. ಮಕ್ಕಳಿದ್ದರು, ಜೊತೆಗಿರಲಿಲ್ಲ.
ಶಿವಜ್ಜ ಸಾರಾಯಿ ಮಾಡ್ತಾ ಇದ್ದ. ಕಳ್ಳಬಟ್ಟಿ ಸಾರಾಯಿ. ಆ ಕಾಲಕ್ಕ ಅದು ಏನು ಅಂತ ಗೊತ್ತಿರಲಿಲ್ಲ. ಅದಕ ದರಾ ಶುಕ್ರವಾರ ಸಂತಿಗೆ ಹೋಗಿ ಕರಿಬೆಲ್ಲ ತರ್ತಾ ಇದ್ದ. ಅದನ್ನ ಮುತ್ತಲೆಲೆ ಮೇಲೆ ಇಟ್ಟು ತಿನ್ನೋಕೆ ಕೊಡ್ತಾ ಇದ್ದ. ಕರಿಬೆಲ್ಲ ಭಾರಿ ರುಚಿಯಾಗಿರೋದು ಅಥವಾ ಶಿವಜ್ಜ ತಂದುಕೊಡೋದಿಕ್ಕೆ ರುಚಿಯಾಗಿರ್ತಿತ್ತೊ? ಮತ್ತ ಆ ರುಚಿ ಸಿಗಲೇ ಇಲ್ಲ.
ಅಮ್ಮ ಬಯ್ಯತಾ ಇದ್ದಳು. ಯಾ ಕೊಳಕು ಬೆಲ್ಲ ತಂದಿರ್ತಾನೊ ಮನ್ಯಾಗ ಇರೋದು ಯಾಕ ತಿನ್ನಲ್ಲ ಅಂತ. ನಂಗೆ ಆ ಶಿವಜ್ಜ ಕೊಡೋ ಕೊಳಕು ಬೆಲ್ಲಾನ ಬ್ಹಾಳ ರುಚಿ ಅನ್ನಿಸೋದು. ಅವನು ಸಾರಾಯಿ ಮಾಡೋನು. ಅದಕ್ಕ ಏನೇನೊ ಚೆಕ್ಕಿ ಪಕ್ಕಿ ಹಾಕೋನು. ಯಾವುದೋ ಮೂಲೆಯಲಿ ಹುಗಿದು ಇಟ್ಟಿರೋನು. ಪೊಲೀಸರು ಬಂದಾಗೆಲ್ಲ ಆ ಗಡಿಗೆ ಒಡೆದು ಹೋಗೋರು.
ಅಪ್ಪ ಯಾವಾಗಲೂ ಅನ್ನೋರು. ನಮ್ಮ ಮನಿಯಾಗ ಇದ್ದುಬಿಡು ಅಂತ. ವಯಸ್ಸಾಗೇತಿ ಕೆಲಸ ಮಾಡೋದು ಬ್ಯಾಡ ಅಂತ. ಆದರ ಸ್ವಾಭಿಮಾನಿಯಾದ ಅವ ಮಾತು ಕೇಳಲೇ ಇಲ್ಲ. ಇಲ್ಲ ಸಾಹೇಬ್ರ ಸಾಯೋವರೆಗೂ ದುಡಿದು ತಿನ್ನಬೇಕು ಅಂತ ಹೇಳ್ತಾ ಕೊನೇತನಕ ದುಡಿದೇ ದುಡಿದ. ತನ್ನ ಹೊಲದಾಗ ತಾನ ಬೆಳದು ತಿನ್ನಬೇಕು ಅಂತ ಬಯಸಿ, ಒಂದಿನ ಪಕ್ಕದ ಕೆರಿಯೊಳಗಿನ ನೀರು ಕುಡಿದು ಡಯೇರಿಯಾ ಆಗಿ ಸತ್ತೇ ಹೋಗಿಬಿಟ್ಟ. ಅವತ್ತಿನಿಂದನ ನಾನು ಬೆಲ್ಲ ತಿನ್ನೋದು, ಸಿಹಿ ತಿನ್ನೋದು ಬಿಟ್ಟಬಿಟ್ಟೆ. ಶಿವಜ್ಜ ತಂದುಕೊಡೊ ಬೆಲ್ಲಕ್ಕ ಇರೋ ರುಚಿ ಮತ್ತ ಸಿಗಲೇ ಇಲ್ಲ. ಸಾವು ಅಂದ್ರ ಏನು ಅಂತ ಗೊತ್ತಾಗಿದ್ದು ಆವಾಗ. ಅವ ಜಗತ್ತನ್ನ ಹೆಂಗ ಪ್ರೀತಿಸೋದು ಅಂತ ಹೇಳಿಕೊಟ್ಟ. ಮನೆಯವರನ್ನ ಬಿಟ್ಟರ ಬ್ಯಾರೇ ಮನಷ್ಯಾರು ಅಂತ ನೋಡಿದ್ರೊಳಗ ಶಿವಜ್ಜ ಮಾತ್ರ. ಈಗಲೂ ಅವನ ಮುಖ ಮನಸಿನೊಳಗನ.
ಇನ್ನ ಚಿಕ್ಕವಳಾಗಿದ್ದಾಗ ನಮ್ಮನಿಯೊಳಗ ಪರಮೇಶಿ ಅಂತ ಕೆಲಸಕ್ಕಿದ್ದ. ಅವನು ಯಾವಾಗಲೂ ಸಿನೆಮಾ ಹಾಡು ಹೇಳೋನು. ಯಾವತ್ತೂ ತಾಯೀ ಅಂತ ಕರೀದ ಮಾತ ಇರ್ತಿರಲಿಲ್ಲ. ಟಿವಿಗಳಿಲ್ಲದ ಆ ರಾತ್ರಿಗಳಲ್ಲಿ ದಿನಾ ಒಂದು ಕಥೆ, ಸಿನೆಮಾ ಡೈಲಾಗ್ ಹೇಳಿ ನಗಿಸೋನು. ಸೀಮೆ ಎಣ್ಣೆಯ ಬೆಳಕಿನಲ್ಲಿ ಕಥೆ ಹಾಡುಗಳ ಮಧ್ಯೆ ಆಗಿನ ರಾತ್ರಿಗಳು ಕಳೆದುಹೋಗುತ್ತಿದ್ದವು. ಇನ್ನು ಮಳೆಗಾಲದಲ್ಲಿ ಹಳ್ಳ ಕೆರೆ ದಾಟಕಾಗದೆ ಆ ಕೆಸರು ಗದ್ದೆಯಲಿ ನಡೆದುಕೊಂಡು ಹೋಗುವಾಗ ಶಾಲೆಗೆ ದಿನಾ ಕಳಿಸಲು ಬರೋನು. ಭತ್ತದ ಗದ್ದೆಯಲಿ ಕಪ್ಪೆ, ಏಡಿ, ನೀರುಹಾವು ನೋಡ್ತಾ ಓಡಾಡ್ತಾ ಇದ್ವಿ . ಪರಮೇಶಿ ಪರದಾಟ ಅಂತ ನಾ ಕಾಡಿಸ್ತಾ ಇದ್ದೆ.
ಇನ್ನು ದೆವಲ್ಯಾ ಮತ್ತವನ ಹೆಂಡತಿ ಕೆಲಸಕ್ಕ ಬರೋರು. ಅಲ್ಲಿ ಯಾವ ಮೇಲುಕೀಳು ಇರಲಿಲ್ಲ. ಜಾತಿಪಾತಿ ಗೊತ್ತೇ ಇರಲಿಲ್ಲ. ಮಂಜಿನಹನಿಯಂಥಾ ಬದುಕು. ಅವರು ಮೊಗೆಮೊಗೆದು ಕೊಟ್ಟ ಪ್ರೀತಿ, ಅಕ್ಕರೆ ಬದುಕನ್ನು ಮತ್ತಷ್ಟು ಇನ್ನಷ್ಟು ಪ್ರೀತಿಸೋಕೆ ಕಲಿಸಿತು. ಈಗ ನಮ್ಮ ಹೊಲದ ತುಂಬ ಅವರ ಶ್ರಮ ಐತಿ ಆದ್ರ ಈಗ ಆ ಜೀವಗಳೆಲ್ಲ ಬದುಕಿಲ್ಲ.
ನಮ್ಮ ಶಾಲೆಯ ಬದುಕು ಮತ್ತೊಂದು ಕವಲು. ದಿನಾ ಮನೆಯಿಂದ ಶಾಲೆಗೆ ಹೋಗುವಾಗಿನ ದಾರಿಯದೆ ಮತ್ತೊಂದು ಸೊಬಗು. ದಾರಿಯ ಬೇಲಿಯ ಮೇಲಿನ ಸಿರಿಕಿ ಹಣ್ಣು, ಪರಂಗಿ ಹಣ್ಣು, ಹುಣಸೆ ಹಣ್ಣು, ನೇರಳೆ ಹಣ್ಣು, ಬೋಳು ಹಣ್ಣು ನಮ್ಮ ಬಾಯಿ ರುಚಿಯಾಗಿದ್ದವು. ಇನ್ನೂ ಮಾವಿನಕಾಯಿಯ ಸುಗ್ಗಿಯಲ್ಲಂತೂ ಮಾವಿನ ಮರ ಸುತ್ತೊದೇ ಕೆಲಸ. ಮಾವಿನಕಾಯಿ ಕದ್ದು ಕಿತ್ತು ತಂದು ಉಪ್ಪಿನ ಜೊತೆಗೆ ತಿನ್ನೋದೇ ದೊಡ್ಡ ಖುಷಿ. ಈಗ ಆ ಬೇಲಿಯೂ ಉಳಿದಿಲ್ಲ, ಮರಗಳು ಉಳಿದಿಲ್ಲ.
ಇನ್ನು ಮಧ್ಯಾಹ್ನ ಬರುವ ಇಪ್ಪತ್ತೈದು ಪೈಸೆಯ ಐಸ್ಕ್ರೀಮ್ ನಮ್ಮ ಬಹುದೊಡ್ಡ ಪಾರ್ಟಿ ಆಗ. ದಿನಾ ಒಬ್ಬೊಬ್ಬರು ಐಸ್ಕ್ರೀಮ್ ಕೊಡಿಸೋದು. ದಿನಾ ತಿಂತಾ ಇದ್ವಿ. ಒಂದು ರೂಪಾಯಿ ಅಥವಾ ಎರಡು ರೂಪಾಯಿಯಲಿ ನಮ್ಮಪಾರ್ಟಿ ಮುಗಿದು ಹೋಗ್ತಾ ಇತ್ತು. ಈಗ ಅವರೆಲ್ಲಾ ಕಳೆದುಹೋಗಿದಾರೆ ಬದುಕಿನ ನಾಗಾಲೋಟದಲಿ. ಇನ್ನ ಜಾತ್ರೆ ತೇರು ಬಂದರೆ ಮುಗಿತು ನಮ್ಮನ್ನು ಹಿಡಿಯುವವರೇ ಇರಲಿಲ್ಲ. ಎಂಟು ದಿನದ ಜಾತ್ರೆ. ಒಂದು ದಿನದ ಜಾತ್ರೆ ಆಗಿನ ಪಿಕ್ನಿಕ್ಗಳು ನಮಗೆ.
ಎತ್ತಿನ ಗಾಡಿ ಕಟ್ಟಿ ಜಾತ್ರೆಗೆ ಹೋಗೋದೇ ಚಂದ. ಎತ್ತಿನ ಕೊಂಬಿಗೆ ಬಣ್ಣ ಹಚ್ಚಿ, ಬಣ್ಣದ ಟೇಪ್ ಕಟ್ಟಿ, ಬೆನ್ನು ಮೇಲೆ ಜೂಲು ಹೂಡಿ ಹುರಿದುಂಬಿಸುತ್ತಾ ಹೊರಟರೆ ಬದುಕು ಏಳು ಬಣ್ಣಗಳ ಕಾಮನಬಿಲ್ಲು. ಅವುಗಳ ಗೆಜ್ಜೆಯನಾದವೇ ನಮ್ಮ ತಾಳ. ಐದಾರು ಚಕ್ಕಡಿ ಹಿಂದೆ ಮುಂದೆ ಹೋಗೋವು. ದೊಡ್ಡವರು ಎಲೆಅಡಿಕೆ ಹಾಕೊಂಡು ಮಾತುಗಳನ್ನಾಡ್ತಾ ಇದ್ದರೆ ನಾವು ಮಕ್ಕಳು ಜಾತ್ರೆಯಲಿ ಏನೇನು ತಗೋಬೇಕು ಅನ್ನೊ ಲೆಕ್ಕಾಚಾರದಲ್ಲಿ ಮುಳುಗಿರ್ತಾ ಇದ್ವಿ. ಮಧ್ಯೆ ಮಧ್ಯೆ ಗಾಡಿ ನಿಲ್ಲಿಸಿ ಅಲ್ಲಲ್ಲಿ ಭಜಿಮಿರ್ಚಿ ತಿಂದು ಚಾ ಕುಡಿಯೋದು ಮತ್ತ ಕಟ್ಟಿಕೊಂಡ ಹೋದ ಮೊಸರುಬುತ್ತಿ ಗುರೆಳ್ಳ ಚಟ್ನಿ, ಕಡಕ್ಕ ರೊಟ್ಟಿಯ ಊಟ ಈಗಿನ ಯಾವ ಹೋಟೆಲಿನಲಿ ಸಿಗೂದಿಲ್ಲ.
ಆ ಹೊಳೆಯೊಳಗ ಜಳಕ ಮಾಡಿ ದೇವರಿಗೆ ನಮಸ್ಕಾರ ಮಾಡಿ ತಿರುಗೋದೇ ಕೆಲಸ. ಮುಳುಮುಳು ಮರಳಿನೊಳಗ ಹೊರಳಾಡಿ ಮಕ್ಕಳೆಲ್ಲಾ ಹೊಳಿಯೊಳಗ ಆಟ ಆಡೋದೇ ದೊಡ್ಡ ಸಡಗರ. ಜಾತ್ರೆಗೆ ಹೋದರೆ ಎಂಟು ದಿನ ಶಾಲೆಗೆ ಚಕ್ಕರ್ . ಅದಂತೂ ಸಂಭ್ರಮದ ಗಳಿಗೆ. ಇನ್ನ ಜಾತ್ರೆ ಮುಗಿಸಿ ವಾಪಸ್ಸು ಬರುವಾಗ ಥೇಟರಿನಲಿ ನೋಡುವ ಕನ್ನಡ ಸಿನೆಮಾ ನಮ್ಮ ಎಲ್ಲರಿಗೂ ದೊಡ್ಡ ಹಬ್ಬ. ಅದರ ಡಯಲಾಗ್ ಎಲ್ಲ ಬಾಯಿ ತುದಿಯಲಿ. ನಾವೇ ನಾಯಕ ನಾಯಕಿಯರು. ಆಮೇಲೆ ಶಾಲೆಯಲಿ ಚಿಟ್ಟು ಹಿಡಿಸೋವಷ್ಟು ಅದರ ವರ್ಣನೆ ಎಲ್ಲರ ಮುಂದು. ಈಗ ಕಾರು ಟಿಂಪೋ ಮಾಡಿಕೊಂಡು ಒಂದು ದಿನದಲಿ ಮರಳಿ ಬಂದ್ರೆ ಜಾತ್ರೆ ಮುಗಿತು.
ಇನ್ನು ಊರಲ್ಲಿ ನಡೆಯುವ ತೇರಿಗೆ ನಾಟಕ ಮಾಡೋರು. ಆ ನಾಟಕ ನೋಡೋಕೆ ನಾವು ಮಕ್ಕಳು ಮಧ್ಯಾಹ್ನ ದಿಂದ ಹಾಸಿಗೆ ಹಾಸಿ ಕಾಯೋದು. ರಾತ್ರಿ ಪೂರ್ತಿ ನಾಟಕ ನೋಡೊದು. ಮಧ್ಯೆ ನಮ್ಮ ಮಾವ ಬಂದು ನನ್ನ ಮೇಲಿನ ಅತೀ ಪ್ರೀತಿಗೆ ಮಿರ್ಚಿಭಜಿ ಕೊಡಿಸಿಕೊಂಡು ಬರೋನು. ಅದನ್ನ ತಿಂತಾ ನೋಡೋ ಮಜಾ ಅನುಭವಿಸಿದವರಿಗೇ ಗೊತ್ತು. ಈಗ ಸೋದರ ಮಾವಾನೂ ಅದಾನ, ತೇರೂ ನಡೆಯುತ್ತ, ನಾಟಕವೂ ನಡಿಯತ್ತ (ಕೊರೊನಾ ಕಾಲ ಹೊರತುಪಡಿಸಿ) ಆದರ ಮಿರ್ಚಿ ಭಜಿ ಕೊಡಿಸೂ ಮನಸು ಕಾಲಕ್ಕೆ ತಕ್ಕಂಗ ಬದಲಾಗಿ ಹೋಯಿತು. ಈಗಂತೂ ದೇವರುಗಳೂ ಎರಡು ಪಾರ್ಟಿಗಳೊಳಗ ಹಂಚಿಹೋಗ್ಯಾವು. ರಾಜಕೀಯ ಹಳ್ಳಿಗೂ ನುಗ್ಗೇದ. ಒಂದು ದಿನ ಒಂದು ಪಾರ್ಟಿಯ ದೇವರ ಜಾತ್ರೆ, ತೇರು, ನಾಟಕ. ಮತ್ತೊಂದು ದಿನ ಇನ್ನೊಂದು ಪಾರ್ಟಿಯ ಜಾತ್ರೆ, ತೇರು, ನಾಟಕ.
ಆಗಿದ್ದ ಮನುಷ್ಯರೂ ಈಗಲೂ ಅದಾರ. ಮನಸ್ಸುಗಳು ಬದಲಾಗಿ ಹೋಗ್ಯಾವ. ಸ್ವಾರ್ಥ ತುಂಬಿ ನಿಂತದ. ಇನ್ನು ಈ ಕೊರೊನಾ ಅಂತೂ ಮನೀಗೆ ಮನೀನ ಖಾಲಿ ಮಾಡಕೋತ ಹೊಂಟದ. ಆದರೂ ನಾವು ಬುದ್ಧಿ ಕಲೀತಿಲ್ಲ. ಮನುಷ್ಯತ್ವ ಇಲ್ಲದ ವರ್ತಿಸ್ತಿದೀವಿ. ಎಲ್ಲಿ ಹೋದವೋ ಆ ದಿನಗಳು. ಎಲ್ಲಾ ಕಳೆದುಹೋಗಿ ಈಗ ವಿಷಾದ ಹೊತ್ತು ನಿಂತದ ಮನಸು.
ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ?
ಇದನ್ನೂ ಓದಿ : Love : ಏಸೊಂದು ಮುದವಿತ್ತು ; ಮಾಮಾ ಮಾಮಿ ಸಕ್ಕಾಸರಿಗೀ ಹಗ್ಗಾಮುರಿಗೀ
Published On - 6:20 pm, Tue, 8 June 21