Lunar Eclipse: ಮೇ 16ನೇ ತಾರೀಕು ತುಲಾ ರಾಶಿಯಲ್ಲಿ ಚಂದ್ರ ಗ್ರಹಣ ಹಾಗೂ ಯಾವ ರಾಶಿಗೆ ಎಂಥ ಪ್ರಭಾವ ಇಲ್ಲಿದೆ ಸಂಪೂರ್ಣ ವಿವರ
ಗ್ರಹಣ ವಿಚಾರ ಹಾಗೂ ನಿರ್ದಿಷ್ಟವಾಗಿ ಮೇ 16ರಂದು ಕೇತುಗ್ರಸ್ತ ಚಂದ್ರ ಗ್ರಹಣದ ಬಗ್ಗೆ ತಿಳಿಸಬೇಕು ಎಂಬುದು ಈ ಲೇಖನದ ಉದ್ದೇಶ
ಕೇತುಗ್ರಸ್ತ ಚಂದ್ರ ಗ್ರಹಣ ಮೇ 16ಕ್ಕೆ ಇದೆ. ಅದು ಯಾಕೆ ಬಹುತೇಕರು ಈ ಗ್ರಹಣ ವೃಶ್ಚಿಕ ರಾಶಿಯಲ್ಲಿ ನಡೆಯುವುದು ಅಂದುಕೊಂಡರೋ ಆ ಭಗವಂತನೇ ಬಲ್ಲ. ಕೇತು ಗ್ರಹ ತುಲಾ ರಾಶಿಗೆ ಹಿಂದಿನ ತಿಂಗಳೇ ಬಂದಿದೆ. ತುಲಾ ರಾಶಿಯಲ್ಲಿ ಕೇತು ಇದ್ದಾಗ, ವೃಶ್ಚಿಕ ರಾಶಿಯಲ್ಲಿ ಗ್ರಹಣ ಆಗಲು ಸಾಧ್ಯವಿಲ್ಲ. ತುಲಾ ರಾಶಿಯಲ್ಲಿಯೇ ಗ್ರಹಣ ಆಗುತ್ತಿದೆ. ಭಾರತೀಯ ಕಾಲಮಾನದ ಪ್ರಕಾರ 8.40ರ ನಂತರ ಚಂದ್ರಗ್ರಹಣ ನಡೆಯುತ್ತದೆ. 7:59ರಿಂದ 8:00 ಗಂಟೆಗೇ ಚಂದ್ರ ವೃಶ್ಚಿಕ ರಾಶಿಗೆ ಹೊರಟು ಹೋಗಿರುತ್ತಾನೆ. ಹೀಗಾಗಿ ಭಾರತದಲ್ಲಿ ಗ್ರಹಣ ಆಚರಣೆ ಇಲ್ಲ. ಯಾವ ಪ್ರದೇಶದಲ್ಲಿ 8:40ರ ನಂತರವೂ ವೃಶ್ಚಿಕದಲ್ಲಿ ಇರುತ್ತಾನೆಯೋ ಅಲ್ಲಿ ಗ್ರಹಣ ಆಚರಣೆ ಇರುತ್ತದೆ. ಆದರೆ ಗ್ರಹಣದ ಪ್ರಭಾವ ಎಲ್ಲೆಡೆ ಇರುತ್ತದೆ. ಯೂರೋಪ್, ಉತ್ತರ-ದಕ್ಷಿಣ ಅಮೆರಿಕಗಳಲ್ಲಿ ಆಚರಣೆ ಇರುತ್ತದೆ. ನಿರ್ದಿಷ್ಟವಾಗಿ ಮೇ 16ರಂದು ನಡೆಯುವ ಕೇತುಗ್ರಸ್ತ ಚಂದ್ರ ಗ್ರಹಣದ ಬಗ್ಗೆ ತಿಳಿಸಬೇಕು ಎಂಬುದು ಈ ಲೇಖನದ ಉದ್ದೇಶ. ಗ್ರಹಣ ಅಂದರೆ ಅದರಲ್ಲಿ ನಾಲ್ಕೇ ಸಾಧ್ಯತೆ: ರಾಹುಗ್ರಸ್ತ ಸೂರ್ಯ ಗ್ರಹಣ, ರಾಹುಗ್ರಸ್ತ ಚಂದ್ರ ಗ್ರಹಣ. ಇನ್ನು ಕೇತುಗ್ರಸ್ತ ಸೂರ್ಯ ಗ್ರಹಣ ಮತ್ತು ಕೇತುಗ್ರಸ್ತ ಚಂದ್ರ ಗ್ರಹಣ. ರಾಹು ಅಥವಾ ಕೇತು ಯಾವ ರಾಶಿಯಲ್ಲಿ ಇರುತ್ತಾರೋ ಅಲ್ಲೇ ಗ್ರಹಣ ಸಂಭವಿಸಬೇಕು. ಅಮಾವಾಸ್ಯೆಯಂದು ಸೂರ್ಯ ಗ್ರಹಣ, ಪೌರ್ಣಮಿಯಂದು ಚಂದ್ರ ಗ್ರಹಣ ಸಂಭವಿಸುತ್ತದೆ. ಇದು ಯಾವಾಗಲೂ ಹೀಗೆ. ಈಗ ಮೇಷ ರಾಶಿಯಲ್ಲಿ ರಾಹು ಮತ್ತು ತುಲಾ ರಾಶಿಯಲ್ಲಿ ಕೇತು ಇದೆ (ಇವೆರಡನ್ನು ಸಮ ಸಪ್ತಕಗಳು ಎನ್ನಲಾಗುತ್ತದೆ. ಏಳು ಮನೆಯ ಅಂತರದಲ್ಲೇ ಸದಾ ಸಂಚರಿಸುತ್ತವೆ). ಇನ್ನು ಚಂದ್ರ ಗ್ರಹಣದ ವಿಚಾರಕ್ಕೆ ಬಂದರೆ, ಇದು ಕೇತುಗ್ರಸ್ತ ಚಂದ್ರ ಗ್ರಹಣ. ತುಲಾ ರಾಶಿಯಲ್ಲಿ ಸಂಭವಿಸುತ್ತಿದೆ.
ಜ್ಯೋತಿಷ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಈ ಗ್ರಹಣಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೋತ್ತರ
ಗ್ರಹಣದ ಸಮಯ ಏನು? ಭಾರತದ ಕಾಲಮಾನ ಬೆಳಗ್ಗೆ 7.59ರಿಂದ 10.23
ಭಾರತದಲ್ಲಿ ಗ್ರಹಣ ಆಚರಣೆ ಇದೆಯಾ? ಇಲ್ಲ
ಯಾವ್ಯಾವ ರಾಶಿಗೆ ಗ್ರಹಣದ ಶುಭ ಫಲಗಳಿವೆ? ಸಿಂಹ, ವೃಷಭ, ಧನುಸ್ಸು, ಮಕರ
ಯಾವ್ಯಾವ ರಾಶಿಗೆ ಗ್ರಹಣದ ಅಶುಭ ಫಲಗಳಿವೆ? ಕರ್ಕಾಟಕ, ತುಲಾ, ವೃಶ್ಚಿಕ, ಮೀನ
ಯಾವ್ಯಾವ ರಾಶಿಗೆ ಗ್ರಹಣದ ಮಿಶ್ರ ಫಲಗಳಿವೆ? ಮೇಷ, ಮಿಥುನ, ಕನ್ಯಾ, ಕುಂಭ
ದ್ವಾದಶ ರಾಶಿಗಳ ಮೇಲೆ ಗ್ರಹಣದ ನಕಾರಾತ್ಮಕ ಪ್ರಭಾವ ಹೇಗಿರಲಿದೆ ಎಂಬ ವಿವರ ಇಲ್ಲಿದೆ:
ಮೇಷ: ದೂರ ಪ್ರಯಾಣ, ಮದುವೆ, ಪಾರ್ಟನರ್ಶಿಪ್ ವ್ಯವಹಾರ, ಟ್ರಾನ್ಸ್ಫರ್ಗೆ ಸಂಬಂಧಿಸಿದ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು.
ವೃಷಭ: ಸಾಲ, ಮಾಟ-ಮಂತ್ರ, ದೃಷ್ಟಿ ದೋಷ, ಶತ್ರ ಬಾಧೆ, ಆರೋಗ್ಯ ಇಂಥ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು.
ಮಿಥುನ: ಸಂತಾನ ಹಾಗೂ ದೊಡ್ಡ ದೊಡ್ಡ ಕೆಲಸಗಳಿಗೆ ಕೈ ಹಾಕಿದ್ದಲ್ಲಿ ಗ್ರಹಣದ ಪ್ರಭಾವ ಇರುತ್ತದೆ.
ಕರ್ಕಾಟಕ: ಮಾತನಾಡುವಾಗ ಜಾಗ್ರತೆ. ತಾಯಿಯ ಆರೋಗ್ಯದ ವಿಚಾರ, ವಿದ್ಯೆ, ಜ್ಞಾನ, ತಿಳಿವಳಿಕೆ (ತಪ್ಪು ತಿಳಿವಳಿಕೆ ಆಗಬಹುದು) ಬಗ್ಗೆ ಎಚ್ಚರ ಇರಲಿ.
ಸಿಂಹ: ಸಹೋದರರ ವಿಚಾರದಲ್ಲಿ ಜಾಗ್ರತೆಯಿಂದ ಇರಬೇಕು.
ಕನ್ಯಾ: ಆರ್ಥಿಕ ವಿಚಾರಗಳು ಹಾಗೂ ಕುಟುಂಬಕ್ಕೆ ಸಂಬಂಧಿಸಿದ ಸಂಗತಿಗಳಲ್ಲಿ ಎಚ್ಚರಿಕೆ ಇರಲಿ.
ತುಲಾ: ನಿಮ್ಮದೇ ರಾಶಿಯಲ್ಲಿ ಗ್ರಹಣ ನಡೆಯುವುದರಿಂದ ಮಾನಸಿಕ ಚಿಂತೆ, ಆರೋಗ್ಯ, ಉದ್ಯೋಗ ಒಟ್ಟಾರೆ ಎಲ್ಲ ವಿಚಾರದಲ್ಲೂ ಎಚ್ಚರಿಕೆ ಮುಖ್ಯ.
ವೃಶ್ಚಿಕ: ಏನನ್ನಾದರೂ ಕಳೆದುಕೊಂಡು ದುಃಖ ಅನುಭವಿಸುವಂತಾಗುತ್ತದೆ. ಆ ಬಗ್ಗೆ ನಿಗಾ ಇರಲಿ.
ಧನುಸ್ಸು: ನೀವು ವ್ಯಾಪಾರ ಮಾಡುವವರಾಗಿದ್ದರೆ, ಅಥವಾ ನಿಮಗೆ ಲಾಭಾಂಶ ಬರಬೇಕಾಗಿದ್ದಲ್ಲಿ ಅದರಲ್ಲಿ ಸಮಸ್ಯೆಗಳಾಗಬಹುದು. ಜತೆಗೆ ಆರೋಗ್ಯದ ಬಗ್ಗೆಯೂ ಗಮನ ನೀಡಿ.
ಮಕರ: ಉದ್ಯೋಗ, ಸ್ನೇಹ, ಮದುವೆ ವಿಚಾರದಲ್ಲಿ ಜಾಗ್ರತೆ ವಹಿಸುವುದು ಬಹಳ ಮುಖ್ಯ ಆಗುತ್ತದೆ.
ಕುಂಭ: ಪಿತ್ರಾರ್ಜಿತ ಆಸ್ತಿ, ಮಾಟ-ಮಂತ್ರ, ದೃಷ್ಟಿ ದೋಷ ಇಂಥ ಸಂಗತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
ಮೀನ: ನಿಮ್ಮದೇ ಆರೋಗ್ಯ, ಮಕ್ಕಳ ಆರೋಗ್ಯ ಹಾಗೂ ಸಂಗಾತಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು.
ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್, ಫೋನ್ ನಂಬರ್: 63613 35497
Published On - 9:52 am, Sun, 15 May 22