ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕೆ ಭರ್ಜರಿ ತಯಾರಿ, ಖರೀದಿ ಜೋರು; ಹೂ, ಹಣ್ಣು ತುಸು ದುಬಾರಿ

ಗೌರಿ ಗಣೇಶ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಗಲ್ಲಿ ಗಲ್ಲಿಯಲ್ಲೂ ಗಜವದನನ ಪ್ರತಿಷ್ಠಾಪಿಸಲು ಗಂಡು ಮಕ್ಕಳು ಸಜ್ಜಾಗಿದ್ದರೆ, ಅತ್ತ ಗೌರಿ ಹಬ್ಬ ಆಚರಿಸಲು ಹೆಂಗಳೆಯರು ಸಿದ್ಧರಾಗಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಹಬ್ಬದ ತಯಾರಿ ಜೋರಾಗಿದ್ದು, ಕೆಆರ್ ಮಾರ್ಕೆಟ್​​ನಲ್ಲಿ ಹಬ್ಬದ ಸಾಮಾಗ್ರಿಗಳ ಖರೀದಿ ಜೋರಾಗಿ ನಡೆದಿದೆ. ಇತ್ತ ಗೌರಿ ಗಣೇಶನ ಅಂದ ಚಂದದ ಮೂರ್ತಿಗಳಿಗೂ ಬೇಡಿಕೆ ಹೆಚ್ಚಾಗಿದ್ದು, ಹಬ್ಬದ ಖುಷಿಗೆ ಕೊಂಚ ಬೆಲೆಯೇರಿಕೆ ಬಿಸಿಯೂ ತಟ್ಟಿದೆ.

ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕೆ ಭರ್ಜರಿ ತಯಾರಿ, ಖರೀದಿ ಜೋರು; ಹೂ, ಹಣ್ಣು ತುಸು ದುಬಾರಿ
ಗೌರಿ ಗಣೇಶ ಮೂರ್ತಿಗಳ ಖರೀದಿಸುತ್ತಿರುವ ಮಹಿಳೆಯರು
Follow us
ಶಾಂತಮೂರ್ತಿ
| Updated By: Ganapathi Sharma

Updated on: Sep 06, 2024 | 7:40 AM

ಬೆಂಗಳೂರು, ಸೆಪ್ಟೆಂಬರ್ 6: ಬೆಂಗಳೂರು ನಗರವಾಸಿಗಳು ಗೌರಿ ಗಣೇಶ ಹಬ್ಬ ಸ್ವಾಗತಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಭಾದ್ರಪದ ಶುಕ್ಲ ಚೌತಿಯಂದು ಬರುವ ಗೌರಿ-ಗಣೇಶನನ್ನ ಸ್ವಾಗತಿಸಲು ಸಿಟಿ ಮಂದಿ ಸಜ್ಜಾಗಿದ್ದು, ಗುರುವಾರವೇ ಕೆಆರ್ ಮಾರ್ಕೆಟ್​​ನಲ್ಲಿ ಖರೀದಿ ಜೋರಾಗಿತ್ತು. ಹೂವು, ಹಣ್ಣು, ಗರಿಕೆ, ಎಕ್ಕದ ಹಾರದ ಜೊತೆಗೆ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯಲ್ಲಿ ಗ್ರಾಹಕರು ವ್ಯಸ್ತರಾಗಿದ್ದರು. ಇತ್ತ ಪ್ರತಿ ಬಾರಿಯಂತೆ ಈ ಸಲ ಕೂಡ ಹೂ, ಹಣ್ಣುಗಳ ಬೆಲೆ ಕೊಂಚ ಏರಿಕೆಯಾಗಿದೆ. ಇದು ಗ್ರಾಹಕರಿಗೆ ಸ್ವಲ್ಪಮಟ್ಟಿಗೆ ಬಿಸಿ ಮುಟ್ಟಿಸಿತ್ತು.

ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೊಂಚ ದರ ತಗ್ಗಿದ್ದು ಗ್ರಾಹಕರಿಗೆ ನೆಮ್ಮದಿ ಮೂಡಿಸಿತ್ತು.

ಹೂ, ಹಣ್ಣುಗಳ ದರ ವಿವರ

ಕನಕಾಂಬರ ಕೆಜಿಗೆ – 3000 ರೂ. ಮಲ್ಲಿಗೆ – ಕೆಜಿಗೆ 600 ರೂ. ಗುಲಾಬಿ- ಕೆಜಿಗೆ 250 ರೂ. ಸೇವಂತಿಗೆ – ಕೆಜಿಗೆ 180 ರೂ. ಸುಗಂಧರಾಜ-ಕೆಜಿಗೆ 240 ರೂ.

ಹಣ್ಣುಗಳ ದರ

  • ಸೇಬು- ಕೆಜಿಗೆ 120 ರಿಂದ 200ರೂ.
  • ದಾಳಿಂಬೆ- ಕೆಜಿಗೆ 160 ರೂ.
  • ಏಲಕ್ಕಿ ಬಾಳೆ – ಕೆಜಿಗೆ 120 ರೂ.
  • ಸೀತಾಫಲ- ಕೆಜಿಗೆ 100 ರೂ.
  • ಸಪೋಟ- ಕೆಜಿಗೆ 100 ರೂ.
  • ದ್ರಾಕ್ಷಿ- ಕೆಜಿಗೆ 120- 200 ರೂ.
  • ಅನಾನಸ್- ಎರಡಕ್ಕೆ 100-120 ರೂ.

ಹಬ್ಬದ ಸಾಮಾಗ್ರಿಗಳ ದರ

  • ಬಾಳೆಕಂದು- ಜೋಡಿಗೆ 60 ರೂ.
  • ಮಾವಿನ ತೋರಣ- 20 ರೂ.
  • ಗರಿಕೆ-ಕಟ್ಟಿಗೆ 30 ರೂ.
  • ಬಿಲ್ವಪತ್ರೆ- 20ರೂ.
  • ಎಕ್ಕದಹಾರ- 50 ರಿಂದ 60 ರೂ.

ಇನ್ನು ಒಂದೆಡೆ ಹಬ್ಬದ ಸಾಮಾಗ್ರಿಗಳ ಖರೀದಿಯಾದರೆ, ಮತ್ತೊಂದೆಡೆ ಮಾರ್ಕೆಟ್​​ಗೆ ಎಂಟ್ರಿಕೊಟ್ಟಿರುವ ಬಣ್ಣ ಬಣ್ಣದ ಗಣಪ, ಪರಿಸರ ಸ್ನೇಹಿ ಗಣಪ, ಮುದ್ದುಮುಖದ ಗೌರಿ ವಿಗ್ರಹಗಳಿಗೂ ಬೇಡಿಕೆ ಸೃಷ್ಟಿಯಾಗಿದೆ.

Huge preparations for Ganesh Chaturthi festival in Bangalore, Flowers and fruits are a bit expensive, Kannada news

ಗೌರಿ ಗಣೇಶನ ಮೂರ್ತಿಗಳನ್ನು ಖರೀದಿಸುವವರ ಸಂಖ್ಯೆ ಕೂಡ ಹೆಚ್ಚಾಗಿತ್ತು. ಮುಂಬೈ, ಪುಣೆ ಸೇರಿದಂತೆ ಹಲವೆಡೆಯಿಂದ ಬಂದ ಗಣಪನ ಮೂರ್ತಿಗಳು ಮಾರಾಟವಾಗಿದ್ದಕ್ಕೆ ವ್ಯಾಪಾರಿಗಳು ಖುಷಿಯಾಗಿದ್ದಾರೆ.

ಇದನ್ನೂ ಓದಿ: ಮಾನವ ಮುಖದ ಗಣೇಶನ ವಿಗ್ರಹ ಹೊಂದಿರುವ ದೇವಾಲಯವಿದು

ಒಟ್ಟಿನಲ್ಲಿ ಗೌರಿ ಗಣೇಶ ಹಬ್ಬಕ್ಕೆ ನಗರವಾಸಿಗಳು ಸಜ್ಜಾಗಿದ್ದು, ವಾರಾಂತ್ಯದಲ್ಲೇ ಹಬ್ಬ ಬಂದಿರುವುದು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ