ಹಿಂದೂ ಧರ್ಮದಲ್ಲಿ ಒಟ್ಟು ನಾಲ್ಕು ವೇದಗಳು ಮತ್ತು 18 ಮಹಾ ಪುರಾಣಗಳಿವೆ. ಇವುಗಳಲ್ಲಿ ಗರುಡ ಪುರಾಣವೂ ಸೇರಿದೆ. ಇದರಲ್ಲಿ ಮಾನವನ ಜೀವನ ಮತ್ತು ಮರಣಕ್ಕೆ ಸಂಬಂಧಿಸಿದ ಅನೇಕ ರಹಸ್ಯಗಳನ್ನು ಬಹಿರಂಗಪಡಿಸಲಾಗಿದೆ. ಈ ಪುರಾಣದಲ್ಲಿ ತಿಳಿಸಿರುವ ಕ್ರಮಗಳನ್ನು ಅನುಸರಿಸುವ ಮೂಲಕ, ಸರಿ – ತಪ್ಪುಗಳನ್ನು ಗುರುತಿಸಬಹುದು ಜೊತೆಗೆ ಧರ್ಮ- ಕರ್ಮದ ಮಾರ್ಗವನ್ನು ಅನುಸರಿಸುವ ಮೂಲಕ ಉತ್ತಮ ಜೀವನವನ್ನು ನಡೆಸಬಹುದು. ಇದೇ ರೀತಿಯಲ್ಲಿ ಒಂದು ಹೆಣ್ಣು ಯಾವ ಯಾವ ಗುಣಗಳನ್ನು ಅಳವಡಿಸಿಕೊಂಡಿರಬೇಕು ಎಂಬುದರ ಬಗ್ಗೆಯೂ ಗರುಡ ಪುರಾಣದಲ್ಲಿ ಮಾಹಿತಿ ನೀಡಲಾಗಿದೆ. ಹಾಗಾದರೆ ಯಾವ ಗುಣಗಳನ್ನು ಹೊಂದಿರಬೇಕು? ಪುರಾಣಗಳಲ್ಲಿ ಹೇಳಿರುವುದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಹೆಣ್ಣು ಮಕ್ಕಳಿಗೆ ಎಲ್ಲಕ್ಕಿಂತ ಮುಖ್ಯವಾಗಿ, ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಗುಣವಿರಬೇಕು. ಯಾವ ಮನೆ ಸ್ವಚ್ಛವಾಗಿರುತ್ತದೆಯೋ ಅಲ್ಲಿ ಲಕ್ಷ್ಮೀ ದೇವಿ ಸದಾ ನೆಲೆಸಿರುತ್ತಾಳೆ. ಮನೆಯನ್ನು ನೆನಪಾದಾಗ ಸ್ವಚ್ಛ ಮಾಡುವ ಬದಲು ಪ್ರತಿ ನಿತ್ಯವೂ ಎಲ್ಲಾ ಕೆಲಸಗಳಂತೆಯೇ ಇದನ್ನು ಮುಖ್ಯ ಎಂದು ಮಾಡುವ ಹೆಣ್ಣು, ಮನೆಗೆ ಅದೃಷ್ಟವನ್ನು ತರುತ್ತಾಳೆ. ಜೊತೆಗೆ ಅಂತಹ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ಸದಾ ನೆಲೆಯಾಗಿರುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ.
ಮನೆಗೆ ಅತಿಥಿಗಳು ಬಂದಾಗ ಅವರನ್ನು ಕಡೆಗಣಿಸದೆಯೇ ಅವರನ್ನು ಆದರ, ಆತಿಥ್ಯಗಳಿಂದ ಸತ್ಕರಿಸುವ ಗುಣವಿರಬೇಕು. ಇಂತಹ ಗುಣವಿದ್ದ ಹೆಣ್ಣಿಗೆ ಎಲ್ಲಾ ಕಡೆಗಳಲ್ಲಿಯೂ ಗೌರವ ಪ್ರಾಪ್ತವಾಗುತ್ತದೆ ಎಂದು ಪುರಾಣ ಹೇಳುತ್ತದೆ. ಮನೆಯ ಹಿರಿಮೆಯನ್ನು ಕಾಪಾಡಿ, ಹಿರಿಯರ ಗೌರವಕ್ಕೆ ದಕ್ಕೆ ಬರದಂತೆ ನೋಡಿಕೊಳ್ಳುವ ಮಹಿಳೆಯೂ ಪ್ರತಿ ಮನೆಗೂ ಅದೃಷ್ಟಶಾಲಿಯಾಗಿರುತ್ತಾಳೆ. ಅಲ್ಲದೆ ಪುರಾಣಗಳ ಪ್ರಕಾರ ಈ ಗುಣಗಳು ಹೆಣ್ಣಿಗೆ ಶ್ರೇಯಸ್ಸಾಗಿದೆ.
ತನ್ನಿಂದ ಯಾರಿಗೂ ನೋವಾಗಬಾರದು ಎಂದು ಬಯಸುವುದು ಉತ್ತಮ ಗುಣಗಳಲ್ಲಿ ಒಂದಾಗಿದೆ. ಅಂತಹ ಮಹಿಳೆ ಸಮಾಜದಲ್ಲಿ ಎಲ್ಲರ ಪ್ರೀತಿ ಮತ್ತು ಗೌರವವನ್ನು ಪಡೆಯುತ್ತಾಳೆ. ಮನದಾಳದಿಂದ ಇನ್ನೊಬ್ಬರಿಗೆ ನೋವು ಮಾಡಬಾರದು ಎಂದು ಯೋಚಿಸುವವರಿಗೆ ಎಂದಿಗೂ ಕೆಡುಕಾಗುವುದಿಲ್ಲ ಎನ್ನುತ್ತದೆ ಪುರಾಣ.
ಎಲ್ಲರಿಗೂ ನಂಬಿಕಸ್ತಳಾಗಿರುವುದೇ ಹೆಣ್ಣಿನ ಅತಿ ದೊಡ್ಡ ಗುಣವಾಗಿದ್ದು, ಮನೆಯವರಿಗಾಗಲಿ ಅಥವಾ ಮದುವೆಯಾದ ಕುಟುಂಬದಲ್ಲಾಗಲಿ ಯಾರಿಗೂ ಸುಳ್ಳು ಹೇಳದೆಯೇ, ಕುಟುವಾದ ಸತ್ಯವನ್ನು ನುಡಿಯುವ ಮಹಿಳೆಯೂ ಎಲ್ಲರ ಪ್ರೀತಿ, ಗೌರವಕ್ಕೆ ಪಾತ್ರಳಾಗುತ್ತಾಳೆ. ಬದುಕಿನಲ್ಲಿ ಒಂದು ಸುಳ್ಳನ್ನು ಮುಚ್ಚಲು ಇನ್ನೊಂದು ಸುಳ್ಳು ಹೇಳುವ ಮನಸ್ಥಿತಿ ಎಂದಿಗೂ ಒಳ್ಳೆಯದಲ್ಲ. ಹಾಗಾಗಿ ಹೆಣ್ಣು ಎಂದಿಗೂ ನಂಬಿಕೆಗೆ ಅರ್ಹಳಾಗಿರಬೇಕು ಎನ್ನುತ್ತದೆ ಪುರಾಣ.
ಇಂತಹ ಹೆಣ್ಣಿರುವ ಮನೆಯೂ ಸುಖ, ಶಾಂತಿ, ನೆಮ್ಮದಿಯಿಂದ ಕೊಡಿರುತ್ತದೆ. ಅದಲ್ಲದೆ ಆಕೆಯ ಮುಂದಿನ ದಾಂಪತ್ಯ ಜೀವನವೂ ಸುಖಮಯವಾಗಿರುತ್ತದೆ. ಇದು ಹೆಣ್ಣು ಮಕ್ಕಳು ಹೀಗೆ ಇರಬೇಕು ಎಂಬುದಲ್ಲ, ಬದಲಾಗಿ ಇಂತಹ ಗುಣಗಳು ಹೆಣ್ಣು ಮಕ್ಕಳಿಗೆ ಗೌರವ ತಂದು ಕೊಡುತ್ತದೆ. ಜೊತೆಗೆ ಗರುಡ ಪುರಾಣದಲ್ಲಿ ತಿಳಿಸಿರುವ ಅಂಶಗಳನ್ನು ಅಳವಡಿಸಿಕೊಂಡಲ್ಲಿ ಜೀವನ ಇನ್ನಷ್ಟು ಸುಂದರ ಗೊಳ್ಳುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:01 pm, Tue, 5 March 24