Garuda Purana: ಇಂತಹ ಜನರ ಸಹವಾಸ ನಿಮಗೂ ಇದೆಯಾ? ಹೌದಾದಲ್ಲಿ, ಆದಷ್ಟು ಬೇಗ ದೂರ ಸರಿಯಿರಿ
ಗರುಡ ಪುರಾಣವು ಸಾವಿನ ನಂತರದ ರಹಸ್ಯಗಳನ್ನು ವಿವರಿಸುವುದು ಮಾತ್ರವಲ್ಲದೇ, ಮಾನವನ ಜೀವನವನ್ನು ಸುಧಾರಿಸುವ ಎಲ್ಲಾ ನೀತಿಗಳ ಬಗ್ಗೆ ವಿವರಿಸುತ್ತದೆ. ಇಂದಿನ ಈ ಲೇಖನದಲ್ಲಿ ಗರುಡ ಪುರಾಣದಲ್ಲಿ ಉಲ್ಲೇಖಿಸಲಾದ 5 ವಿಧದ ಜನರ ಬಗ್ಗೆ ಹಾಗೂ ಅವರಿಂದ ಏಕೆ ದೂರವಿರಬೇಕು ಎನ್ನುವುದರ ಕುರಿತು ವಿವರಿಸಲಾಗಿದೆ.
ಗರುಡ ಪುರಾಣವೆಂದರೆ ಅದು ಸಾವಿನ ನಂತರ ಆತ್ಮದ ಸ್ಥಿತಿಯನ್ನು ವಿವರಿಸುವ ಗ್ರಂಥ. ಸೂತಕದ ಮನೆಯನ್ನು ಹೊರತುಪಡಿಸಿ ಬೇರೆಡೆಗೆ ಅದನ್ನು ಓದುವುದು ಸರಿಯಲ್ಲ ಎಂಬೆಲ್ಲಾ ನಂಬಿಕೆಗಳು ಇಂದಿಗೂ ಚಾಲ್ತಿಯಲ್ಲಿದೆ. ಆದರೆ, ಆ ರೀತಿಯ ನಂಬಿಕೆಗಳಿಂದಾಗಿ ಗರುಡ ಪುರಾಣದಲ್ಲಿನ ಎಷ್ಟೋ ವಿಚಾರಗಳು ಜನರನ್ನು ತಲುಪದೇ ಹಾಗೆ ಉಳಿದಿದೆ ಎನ್ನುವುದು ಸತ್ಯ. ಗರುಡ ಪುರಾಣವು ಸಾವಿನ ನಂತರದ ರಹಸ್ಯಗಳನ್ನು ವಿವರಿಸುವುದು ಮಾತ್ರವಲ್ಲದೇ, ಮಾನವನ ಜೀವನವನ್ನು ಸುಧಾರಿಸುವ ಎಲ್ಲಾ ನೀತಿಗಳ ಬಗ್ಗೆ ವಿವರಿಸುತ್ತದೆ. ಇಂದಿನ ಈ ಲೇಖನದಲ್ಲಿ ಗರುಡ ಪುರಾಣದಲ್ಲಿ ಉಲ್ಲೇಖಿಸಲಾದ 5 ವಿಧದ ಜನರ ಬಗ್ಗೆ ಹಾಗೂ ಅವರಿಂದ ಏಕೆ ದೂರವಿರಬೇಕು ಎನ್ನುವುದರ ಕುರಿತು ವಿವರಿಸಲಾಗಿದೆ.
1. ಸದಾ ನಕಾರಾತ್ಮಕವಾಗಿ ಮಾತನಾಡುವ, ನಕಾರಾತ್ಮಕ ಆಲೋಚನೆಗಳಿಂದ ತುಂಬಿರುವ, ಇತರರ ಯಶಸ್ಸಿಗೆ ಅಸೂಯೆಪಡುವ ಮತ್ತು ಇತರರು ಮುಂದುವರಿಯುವುದನ್ನು ತಡೆಯಲು ಪ್ರಯತ್ನಿಸುವ ಜನರಿಂದ ಯಾವಾಗಲೂ ದೂರವಿರಬೇಕು. ಅಂತಹವರ ಸಹವಾಸ ನೆಮ್ಮದಿಯ ಬದುಕಿಗೆ ಮುಳುವಾಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.
2. ಯಾರು ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳುವುದಿಲ್ಲವೋ, ಯಾರು ಅದನ್ನು ವ್ಯರ್ಥ ಮಾಡುತ್ತಾರೋ ಅವರು ತಮ್ಮ ಸಮಯವನ್ನು ಹಾಳು ಮಾಡಿಕೊಳ್ಳುವುದರ ಜತೆಗೆ ಇತರರನ್ನು ಅನಗತ್ಯ ವಿಷಯಗಳಲ್ಲಿ ಸಿಲುಕಿಸಿ ತೊಂದರೆ ಕೊಡುತ್ತಾರೆ. ಅಂತಹ ಜನರಿಂದ ದೂರವಿರುವುದು ಏಳ್ಗೆಯ ದೃಷ್ಠಿಯಿಂದ ಬಹಳ ಒಳ್ಳೆಯದು.
3. ಅದೃಷ್ಟವೇ ಸರ್ವಸ್ವ ಎಂದು ನಂಬುವವರು ಯಾವತ್ತಿದ್ದರೂ ತಾವು ಪ್ರಾಮಾಣಿಕವಾಗಿ ಶ್ರಮ ಪಡುವುದರಿಂದ, ಕರ್ತವ್ಯ ನಿರ್ವಹಿಸುವುದರಿಂದ ದೂರ ಸರಿಯುತ್ತಾರೆ. ಅಂತಹ ಜನರು ಪ್ರತಿ ಬಾರಿಯೂ ತಮ್ಮ ವೈಫಲ್ಯಕ್ಕೆ ಅದೃಷ್ಟ ಇಲ್ಲ ಎಂಬ ಹಣೆಪಟ್ಟಿ ನೀಡುತ್ತಾರೆ. ಅದೃಷ್ಟವನ್ನು ಅವಲಂಬಿಸಿರುವ ಈ ಜನರು ಬೇರೆಯವರನ್ನೂ ಯಶಸ್ವಿಯಾಗಲು ಬಿಡುವುದಿಲ್ಲ. ಹಾಗಾಗಿ ಅವರಿಂದ ದೂರವಿರುವುದು ಉತ್ತಮ.
4. ಕೆಲ ಜನರು ತಮಗೆ ಎಲ್ಲವೂ ಗೊತ್ತಿದೆ ಎಂದು ನಟಿಸಿ ಬೇರೆಯವರನ್ನು ಮೂರ್ಖರನ್ನಾಗಿಸುತ್ತಿರುತ್ತಾರೆ. ಇನ್ನೊಬ್ಬರಿಗೆ ಒಳಿತು ಮಾಡಬೇಕೆಂದೇ ತಾವು ಒದ್ದಾಡುತ್ತಿರುವಂತೆ ನಟಿಸುತ್ತಾರೆ. ಆದರೆ, ಆತ್ಮಸಾಕ್ಷಿಯಾಗಿ ಅವರು ಒಳ್ಳೆಯದು ಮಾಡುತ್ತಿರುವುದಿಲ್ಲ. ಅವರ ಉದ್ದೇಶದಲ್ಲಿ ಕಲ್ಮಶ ತುಂಬಿಕೊಂಡಿರುತ್ತದೆ. ಅಂತಹ ಜನರ ಸಹವಾಸದಿಂದ ತಪ್ಪಿಸಿಕೊಳ್ಳಬೇಕು.
5. ಸೋಮಾರಿಗಳಿಂದ ದೂರವಿರುವುದು ವೈಯಕ್ತಿಕ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದು. ಎಲ್ಲವನ್ನೂ ನಾಳೆಗೆ ಮುಂದೂಡುವವರೊಂದಿಗೆ ಬೆರೆತರೆ ನಮ್ಮ ಕೆಲಸವೂ ಸಮಯಕ್ಕೆ ಸರಿಯಾಗಿ ಆಗುವುದಿಲ್ಲ. ಅಂತಹ ಜನರು ಯಾವುದೇ ಕೆಲಸದಲ್ಲಿ ಯಶಸ್ವಿಯಾಗದೇ ವೈಫಲ್ಯಕ್ಕೆ ಸಬೂಬು ಹುಡುಕುತ್ತಲೇ ಇರುತ್ತಾರೆ. ಅಂತಹವರ ಜತೆ ಸೇರುವುದು ಒಳ್ಳೆಯದಲ್ಲ.
ಇದನ್ನೂ ಓದಿ: ಗರುಡ ಪುರಾಣದಲ್ಲಿ ಹೇಳುವಂತೆ ಬೆಳಗಿನ ವೇಳೆ ಈ 5 ಕೆಲಸ ಮಾಡಿದರೆ ಇಡೀ ದಿನ ಶುಭವಾಗುತ್ತದೆ; ದಿನನಿತ್ಯ ಅಭ್ಯಾಸ ಮಾಡಿಕೊಳ್ಳಿ
(Garuda Purana these 5 types of people will cause lot of trouble in your life do not stay with them)