ಭೂಲೋಕ ವೈಕುಂಠ ಗುರುವಾಯೂರು: ಶ್ರೀಕೃಷ್ಣನ ದಿವ್ಯಕ್ಷೇತ್ರದ ಪೌರಾಣಿಕ ಕಥೆ ಇಲ್ಲಿ ತಿಳಿಯಿರಿ

ಗುರುವಾಯೂರು ಶ್ರೀಕೃಷ್ಣ ದೇವಾಲಯವು ಕೇರಳದ ಪ್ರಸಿದ್ಧ ಯಾತ್ರಾಸ್ಥಳವಾಗಿದೆ, ಇದನ್ನು ‘ಭೂಲೋಕ ವೈಕುಂಠ’ ಮತ್ತು ‘ದಕ್ಷಿಣ ದ್ವಾರಕೆ’ ಎಂದು ಕರೆಯುತ್ತಾರೆ. ಗುರುವಾಯೂರು ಹೆಸರು ಗುರು ಮತ್ತು ವಾಯು ದೇವರಿಂದ ಬಂದಿದ್ದು, ಇಲ್ಲಿ ಬಾಲಕೃಷ್ಣನನ್ನು 'ಗುರುವಾಯೂರಪ್ಪ' ಎಂದು ಪೂಜಿಸಲಾಗುತ್ತದೆ. ಭಕ್ತರಿಗೆ ಆಧ್ಯಾತ್ಮಿಕ ಶಾಂತಿ, ಇಷ್ಟಾರ್ಥ ಸಿದ್ಧಿ ಮತ್ತು ಮೋಕ್ಷ ಕರುಣಿಸುವ ಈ ದಿವ್ಯ ಕ್ಷೇತ್ರವು ಪ್ರತಿದಿನ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ.

ಭೂಲೋಕ ವೈಕುಂಠ ಗುರುವಾಯೂರು: ಶ್ರೀಕೃಷ್ಣನ ದಿವ್ಯಕ್ಷೇತ್ರದ ಪೌರಾಣಿಕ ಕಥೆ ಇಲ್ಲಿ ತಿಳಿಯಿರಿ
ಗುರುವಾಯೂರು
Image Credit source: frenzyholidays

Updated on: Sep 04, 2026 | 9:03 AM

ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ವಿಶೇಷ ಸ್ಥಾನವಿದೆ. ಭಕ್ತರ ಪಾಲಿಗೆ ಇದು ಕೇವಲ ದೇವಾಲಯವಲ್ಲ; ಭಕ್ತಿ, ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಸಂಗಮವಾಗಿರುವ ಪವಿತ್ರ ಕ್ಷೇತ್ರ. ಶ್ರೀಕೃಷ್ಣನ ದಿವ್ಯಸ್ವರೂಪವನ್ನು ಇಲ್ಲಿ ಆರಾಧಿಸಲಾಗುವುದರಿಂದ ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಪ್ರತಿದಿನ ಗುರುವಾಯೂರಿಗೆ ಆಗಮಿಸುತ್ತಾರೆ. ಈ ಕಾರಣಕ್ಕಾಗಿಯೇ ಈ ಕ್ಷೇತ್ರವನ್ನು ಭಕ್ತರು ಪ್ರೀತಿಯಿಂದ ‘ಭೂಲೋಕ ವೈಕುಂಠ’ ಹಾಗೂ ‘ದಕ್ಷಿಣ ದ್ವಾರಕೆ’ ಎಂದು ಕರೆಯುತ್ತಾರೆ.

ಗುರುವಾಯೂರು ಎಂಬ ಹೆಸರು ಬಂದಿದ್ದು ಹೇಗೆ?

ಗುರುವಾದೂರು ಕ್ಷೇತ್ರದ ಪೌರಾಣಿಕ ಹಿನ್ನೆಲೆ ಶ್ರೀಕೃಷ್ಣನೊಂದಿಗೆ ನೇರವಾಗಿ ಸಂಬಂಧ ಹೊಂದಿದೆ ಎಂದು ಸ್ಥಳಪುರಾಣಗಳು ಹೇಳುತ್ತವೆ. ದ್ವಾಪರಯುಗದ ಅಂತ್ಯದಲ್ಲಿ ಶ್ರೀಕೃಷ್ಣನು ತನ್ನ ಅವತಾರವನ್ನು ಮುಗಿಸಿದ ಬಳಿಕ ದ್ವಾರಕಾ ನಗರವು ಸಮುದ್ರದಲ್ಲಿ ಮುಳುಗಿತು ಎಂಬ ನಂಬಿಕೆಯಿದೆ. ಆ ಸಂದರ್ಭದಲ್ಲಿ ದ್ವಾರಕೆಯಲ್ಲಿ ಪೂಜಿಸಲ್ಪಡುತ್ತಿದ್ದ ಶ್ರೀಕೃಷ್ಣನ ದಿವ್ಯವಿಗ್ರಹವು ಸಮುದ್ರದಲ್ಲಿ ತೇಲುತ್ತಿತ್ತು. ದೇವತೆಗಳ ಗುರುವಾದ ಬೃಹಸ್ಪತಿ (ಗುರು) ಹಾಗೂ ವಾಯುದೇವ ಈ ದಿವ್ಯವಿಗ್ರಹವನ್ನು ಸಮುದ್ರದಿಂದ ಹೊರತೆಗೆದು ಸೂಕ್ತ ಸ್ಥಳದಲ್ಲಿ ಪ್ರತಿಷ್ಠಾಪಿಸಿದರು ಎಂಬುದು ಸ್ಥಳಪುರಾಣದ ನಂಬಿಕೆ. ಗುರು ಮತ್ತು ವಾಯುದೇವರು ಸೇರಿ ಪ್ರತಿಷ್ಠಾಪಿಸಿದ ಸ್ಥಳವಾದ್ದರಿಂದ ಈ ಪ್ರದೇಶಕ್ಕೆ ‘ಗುರು-ವಾಯೂರು’, ನಂತರ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.

‘ಗುರುವಾಯೂರಪ್ಪ’ ಎಂದು ಕರೆಯುವುದೇಕೆ?

ಗುರು ಮತ್ತು ವಾಯುದೇವರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀಕೃಷ್ಣನನ್ನು ಭಕ್ತರು ಪ್ರೀತಿಯಿಂದ ‘ಗುರುವಾಯೂರಪ್ಪ’ ಎಂದು ಕರೆಯುತ್ತಾರೆ. ದ್ರಾವಿಡ ಸಂಪ್ರದಾಯದಲ್ಲಿ ‘ಅಪ್ಪನ್’ ಎಂದರೆ ತಂದೆ ಎಂಬ ಅರ್ಥವೂ ಇದೆ. ತಮ್ಮನ್ನು ನಂಬಿ ಬರುವ ಭಕ್ತರನ್ನು ಸ್ವಂತ ಮಕ್ಕಳಂತೆ ಕಾಪಾಡುವ ತಂದೆಯ ರೂಪದಲ್ಲಿ ಶ್ರೀಕೃಷ್ಣನನ್ನು ಇಲ್ಲಿ ಆರಾಧಿಸಲಾಗುತ್ತದೆ. ಗುರುವಾಯೂರಿನಲ್ಲಿ ಆರಾಧಿಸಲ್ಪಡುವ ಶ್ರೀಕೃಷ್ಣನ ಸ್ವರೂಪವು ಬಾಲಕೃಷ್ಣನ ರೂಪವನ್ನು ಹೋಲುತ್ತದೆ. ಈ ದಿವ್ಯ ರೂಪವನ್ನು ಕಣ್ತುಂಬಿಕೊಳ್ಳುವುದು ಭಕ್ತರಿಗೆ ಅಪಾರ ಆನಂದ ಮತ್ತು ಮನಃಶಾಂತಿಯನ್ನು ನೀಡುತ್ತದೆ ಎಂಬ ನಂಬಿಕೆಯಿದೆ.

ಗುರುವಾಯೂರು ಕ್ಷೇತ್ರದ ಮಹತ್ವವೇನು?

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಮೋಕ್ಷಪ್ರಾಪ್ತಿಗಾಗಿ ಮಹರ್ಷಿಗಳು ಮತ್ತು ಯೋಗಿಗಳು ವರ್ಷಗಳ ಕಾಲ ಕಠಿಣ ತಪಸ್ಸು ಮಾಡುತ್ತಿದ್ದರು. ಆದರೆ ಗುರುವಾದೂರಪ್ಪನನ್ನು ಭಕ್ತಿಶ್ರದ್ಧೆಯಿಂದ ದರ್ಶನ ಮಾಡಿದರೆ ಅಪಾರ ಪುಣ್ಯಫಲ ಮತ್ತು ಆಧ್ಯಾತ್ಮಿಕ ಅನುಗ್ರಹ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆ. ಶ್ರೀಕೃಷ್ಣನು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕಲ್ಪವೃಕ್ಷನಂತೆ ಹಾಗೂ ಸಂಕಷ್ಟಗಳನ್ನು ನಿವಾರಿಸುವ ದಯಾಮಯನಂತೆ ಭಕ್ತರ ಮನಸ್ಸಿನಲ್ಲಿ ನೆಲೆಸಿದ್ದಾನೆ. ಹೀಗಾಗಿ ಪ್ರತಿದಿನ ಸಾವಿರಾರು ಭಕ್ತರು ಗುರುವಾದೂರು ಕ್ಷೇತ್ರಕ್ಕೆ ಭೇಟಿ ನೀಡಿ ಗುರುವಾಯೂರಪ್ಪನ ದರ್ಶನ ಪಡೆಯುತ್ತಾರೆ.

ಕೇರಳದ ಪ್ರಮುಖ ಯಾತ್ರಾಕ್ಷೇತ್ರಗಳಲ್ಲಿ ಒಂದು:

ಕೇರಳದ ತ್ರಿಶೂರ್ ನಗರದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಗುರುವಾಯೂರು, ರಾಜ್ಯದ ಪ್ರಮುಖ ಧಾರ್ಮಿಕ ಹಾಗೂ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಶತಮಾನಗಳಿಂದ ಭಕ್ತರ ಆರಾಧನೆಯ ಕೇಂದ್ರವಾಗಿರುವ ಈ ಕ್ಷೇತ್ರಕ್ಕೆ ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಾರೆ. ದೇವಾಲಯದ ಧಾರ್ಮಿಕ ಆಚರಣೆಗಳು, ಪೂಜೆಗಳು ಮತ್ತು ಸಂಪ್ರದಾಯಗಳು ಕ್ಷೇತ್ರದ ಆಧ್ಯಾತ್ಮಿಕ ವಾತಾವರಣವನ್ನು ಮತ್ತಷ್ಟು ವಿಶೇಷವಾಗಿಸುತ್ತವೆ.

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ 2026: ಒಂದೇ ದಿನದಲ್ಲಿ ಬೆಂಗಳೂರಿನ 4 ಪ್ರಸಿದ್ಧ ಕೃಷ್ಣ ದೇವಾಲಯಗಳ ದರ್ಶನ ಪಡೆಯಿರಿ

ದೇವಾಲಯ ಪ್ರವೇಶಿಸಿದರೆ ದಿವ್ಯ ಅನುಭವ:

ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದ ಆವರಣಕ್ಕೆ ಕಾಲಿಡುತ್ತಿದ್ದಂತೆಯೇ ಅಲ್ಲಿನ ಆಧ್ಯಾತ್ಮಿಕ ವಾತಾವರಣ ಭಕ್ತರ ಮನಸ್ಸನ್ನು ಸೆಳೆಯುತ್ತದೆ. ಮಂತ್ರೋಚ್ಚಾರಣೆ, ಗಂಟಾನಾದ, ಧೂಪ-ದೀಪಗಳ ಪರಿಮಳ ಹಾಗೂ ಶ್ರೀಕೃಷ್ಣನ ದರ್ಶನಕ್ಕಾಗಿ ಕಾದಿರುವ ಭಕ್ತರ ಭಕ್ತಿ—ಇವೆಲ್ಲವೂ ಸೇರಿ ಇಲ್ಲೊಂದು ವಿಶಿಷ್ಟ ಅನುಭವವನ್ನು ಮೂಡಿಸುತ್ತವೆ. ಬಾಲಕೃಷ್ಣನ ದಿವ್ಯಸ್ವರೂಪವನ್ನು ದರ್ಶನ ಮಾಡುವ ಕ್ಷಣ ಭಕ್ತರಿಗೆ ಮರೆಯಲಾಗದ ಅನುಭೂತಿಯನ್ನು ನೀಡುತ್ತದೆ. ಹೀಗಾಗಿ ಗುರುವಾದೂರು ಕೇವಲ ಒಂದು ಪವಿತ್ರ ದೇವಾಲಯವಲ್ಲ; ಶ್ರೀಕೃಷ್ಣನ ಸಾನ್ನಿಧ್ಯವನ್ನು ಅನುಭವಿಸುವ ಆಧ್ಯಾತ್ಮಿಕ ತಾಣವಾಗಿದೆ.

ಭಕ್ತಿಯ ಪರಿಮಳ ಬೀರುವ ‘ಭೂಲೋಕ ವೈಕುಂಠ’:

ಶ್ರೀಕೃಷ್ಣ ಭಕ್ತರ ಪಾಲಿಗೆ ಗುರುವಾಯೂರು ಒಂದು ಅತ್ಯಂತ ಪವಿತ್ರ ಕ್ಷೇತ್ರ. ಭಕ್ತಿ, ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಸಮ್ಮಿಲನವಾಗಿರುವ ಈ ದಿವ್ಯಕ್ಷೇತ್ರದಲ್ಲಿ ಗುರುವಾಯೂರಪ್ಪನ ದರ್ಶನ ಪಡೆಯುವುದು ಜೀವನದ ವಿಶೇಷ ಅನುಭವವೆಂದು ಭಕ್ತರು ಭಾವಿಸುತ್ತಾರೆ. ಅದಕ್ಕಾಗಿಯೇ ಗುರುವಾದೂರು ‘ಭೂಲೋಕ ವೈಕುಂಠ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತನ ಮನಸ್ಸಿನಲ್ಲಿ ಶ್ರೀಕೃಷ್ಣನ ಭಕ್ತಿ ಇನ್ನಷ್ಟು ಗಾಢವಾಗುತ್ತದೆ ಎಂಬ ನಂಬಿಕೆಯೊಂದಿಗೆ ಈ ಕ್ಷೇತ್ರ ಇಂದಿಗೂ ಲಕ್ಷಾಂತರ ಜನರನ್ನು ತನ್ನತ್ತ ಸೆಳೆಯುತ್ತಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us