ರಾಮ ಜನ್ಮ ಭೂಮಿ ವಿವಾದ: ನ್ಯಾಯಾಲಯ ಹೋರಾಟದಲ್ಲಿ ಜಯ ಗಳಿಸಿಕೊಟ್ಟ ಇಂದಿರಾಗಾಂಧಿ ಪರಮಾಪ್ತ, ಪದ್ಮವಿಭೂಷಣ, ದಿಟ್ಟ ನ್ಯಾಯವಾದಿ ಇವರೇ!

Keshava Parasaran: ಪರಾಶರನ್ ಅವರು ನಾನೊಬ್ಬ ರಾಜಕೀಯೇತರ ವ್ಯಕ್ತಿ. ನಾನು ರಾಜಕೀಯೇತರವಾಗಿಯೇ ಇರಲು ಬಯಸುತ್ತೇನೆ. ಹಾಗಿಲ್ಲದಿದ್ದರೆ, ವಾಜಪೇಯಿ ಅವರು ನನಗೆ ಪದ್ಮಭೂಷಣ ಮತ್ತು ಮನಮೋಹನ ಸಿಂಗ್ ಅವರು ಪದ್ಮವಿಭೂಷಣ ಕೊಡುತ್ತಿದ್ದರಾ ಎಂದು ಪ್ರಶ್ನಿಸುತ್ತಾರೆ.

ರಾಮ ಜನ್ಮ ಭೂಮಿ ವಿವಾದ: ನ್ಯಾಯಾಲಯ ಹೋರಾಟದಲ್ಲಿ ಜಯ ಗಳಿಸಿಕೊಟ್ಟ ಇಂದಿರಾಗಾಂಧಿ ಪರಮಾಪ್ತ, ಪದ್ಮವಿಭೂಷಣ, ದಿಟ್ಟ ನ್ಯಾಯವಾದಿ ಇವರೇ!
ರಾಮಜನ್ಮಭೂಮಿ ವಿವಾದ ಹೋರಾಟದಲ್ಲಿ ಜಯ ಗಳಿಸಿಕೊಟ್ಟ ದಿಟ್ಟ ನ್ಯಾಯವಾದಿ ಇವರೇ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 10, 2024 | 10:21 AM

ಅಯೋಧ್ಯೆಯಲ್ಲಿ ರಾಮನು ಜನಿಸಿದ ಸ್ಥಳದಲ್ಲಿ ರಾಮ ಮಂದಿರ ಪುನರ್ ನಿರ್ಮಾಣಕ್ಕೆ ಕಳೆದ 500 ವರ್ಷದಲ್ಲಿ ನೂರಾರು ಯುದ್ಧಗಳು ನಡೆದು ಸಾವಿರಾರು ಜನರ ಬಲಿದಾನವಾಗಿದೆ. 80 ರ ದಶಕದಲ್ಲಿ ಕರಸೇವಕರು ಮತ್ತೆ ಮಂದಿರ ಕಟ್ಟುವ ದೃಢ ನಿಶ್ಚಯದಲ್ಲಿ ನಿರ್ಣಾಯಕ ಹಂತದ ಹೋರಾಟ ಕೈಗೊಂಡಾಗ ಪೊಲೀಸರ ಗುಂಡಿಗೆ ನೂರಾರು ಜನ ಬಲಿದಾನವಾಯಿತು. 1992ರಲ್ಲಿ ನಡೆದ ಕರಸೇವೆಯ ಸಮಯದಲ್ಲಿ ವಿವಾದಿತ ಕಟ್ಟಡವು ರಾಮಭಕ್ತರ ಆಕ್ರೋಶದಲ್ಲಿ ನೆಲಸಮವಾಗಿ, ತಾತ್ಕಲಿಕವಾದ ರಾಮ ಮಂದಿರವು ತಲೆಯೆತ್ತಿತು. ಮಂದಿರದ ಹೋರಾಟದ ಕೊನೆಯ ಚರಣವು ನ್ಯಾಯಾಲಯದ ಅಂಗಳ ತಲುಪಿತು. ಉಭಯ ಕೋಮುಗಳ ನಡುವೆ ವಿವಾದವನ್ನು ಬಗೆಹರಿಸಲು ಕೈಗೊಂಡ ಎಲ್ಲ ಸಂಧಾನಗಳು ವಿಫಲವಾದ ತರುವಾಯ ಸರ್ವೋಚ್ಚ ನ್ಯಾಯಾಲಯವು ದೈನಂದಿನ ವಿಚಾರಣೆಯ ಮೂಲಕ ಜಟಿಲವಾದ ಸಮಸ್ಯೆಗೆ ತೆರೆಯೆಳೆಯುವ ತೀರ್ಮಾನಕ್ಕೆ ಬರುತ್ತದೆ.

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದಾಗ ಪರಾಶರನ್ ರವರು ನಾಯರ್ ಸೇವಾ ಸೊಸೈಟಿ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ದ ಸಂವಿಧಾನದ ಪೀಠದ ಮುಂದೆ ವಾದ ಮಾಡುತ್ತಾರೆ. ಅಯ್ಯಪ್ಪ ಸ್ವಾಮಿಯು ಬ್ರಹ್ಮಚಾರಿ ದೈವವು ಆ ದೇವಸ್ಥಾನದ ಪಾವಿತ್ರತೆ ಕಾಪಾಡಲು ನಿರ್ದಿಷ್ಚ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸುವುದು ಅತ್ಯಾವಶ್ಯಕ ಎಂದು ಪ್ರತಿಪಾದಿಸುತ್ತಾರೆ. 2008 ರಲ್ಲಿ ರಾಮಸೇತು ಉಳಿವಿಗಾಗಿ ಸುಪ್ರೀಂಕೋರ್ಟಿನಲ್ಲಿ ವಾದ ಮಂಡಿಸಿ ಅದನ್ನು ಉಳಿಸಿದ ಕೀರ್ತಿಗೆ ಪಾತ್ರರಾಗಿದ್ದ 96 ವರ್ಷದ (9 October 1927) ಕೇಶವ ಪರಾಶರನ್ ರವರನ್ನು ಹೋರಾಟದ ಮುಂಚೂಣಿಯಲ್ಲಿದ್ದ ರಾಮಜನ್ಮಭೂಮಿ ಟ್ರಸ್ಟ್ ಮೊರೆ ಹೋಯಿತು.

ಆರು ದಶಕಗಳ ಕಾಲ ವಕೀಲ ವೃತ್ತಿಯನ್ನು ಕೈಗೊಂಡು ವಯಸ್ಸು 85 ತಲುಪಿದಾಗ ವೃತ್ತಿಯಿಂದ ನಿವೃತ್ತಿ ಪಡೆದು ಚೆನ್ನೈನಲ್ಲಿ ನೆಲಸಿದ್ದರು. ಶ್ರೀರಾಮನ ಪರಮಭಕ್ತರು ಹಾಗೂ ಪ್ರತಿನಿತ್ಯ ವಾಲ್ಮೀಕಿ ರಾಮಾಯಣದ ಶ್ಲೋಕಗಳನ್ನು ಪಾರಾಯಣ ಮಾಡುತ್ತಿದ್ದ ಪರಾಶರನ್ ರವರಿಗೆ ರಾಮಜನ್ಮಭೂಮಿ ಟ್ರಸ್ಟ್ ಮನವಿಯನ್ನು ತಿರಸ್ಕರಿಸಲಾಗಲಿಲ್ಲ.

ಪರಾಶರನ್ ತಂದೆಯವರಾದ ಕೇಶವ ಅಯ್ಯಂಗಾರ್ ಅವರು ವಕೀಲರು ಮತ್ತು ವೈದಿಕ ವಿದ್ವಾಂಸರಾಗಿದ್ದರು. ಪರಾಶರನ್ ರವರು ತಮ್ಮ ಪದವಿ ಮುಗಿದ ಮೇಲೆ ಕೆಲಸಕ್ಕೆ ಸೇರುತ್ತಾರೆ. ಆದರೆ ಕೆಲವೇ ದಿನದಲ್ಲಿ ಅದನ್ನು ಬಿಟ್ಟು ಕಾನೂನು ಪದವಿ ಮಾಡಲು ಮತ್ತೆ ಕಾಲೇಜಿಗೆ ದಾಖಲಾಗುತ್ತಾರೆ. ಕಾನೂನು ಪದವಿಯಲ್ಲಿ ಮೂರು ಪದಕಗಳನ್ನು ಪಡೆದು, ತಮ್ಮ ತಂದೆಯವರ ಸಲಹೆ ಮೇರೆಗೆ ಸ್ವತಂತ್ರವಾಗಿ ವಕೀಲ ವೃತ್ತಿ ಮಾಡಲು ಆರಂಭಿಸುತ್ತಾರೆ. ಪರಾಶರನ್ ರವರು ಬಿಜೆಪಿಯಾಗಲೀ ಅಥವಾ ಸಂಘಪರಿವಾರಕ್ಕೆ ಸೇರಿದವರಲ್ಲ.

ಅವರು ಇಂದಿರಾಗಾಂಧಿಗೆ ಪರಮಾಪ್ತರಾಗಿದ್ದವರು.1983 ರಿಂದ ಮತ್ತು ರಾಜೀವ್ ಗಾಂಧಿ ಯವರ ಆಡಳಿತದ ಕೊನೆಯವರೆಗೂ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ವಾಜಪೇಯಿಯವರು 2003ರಲ್ಲಿ ಇವರಿಗೆ ಪದ್ಮಭೂಷಣ ಮತ್ತು 2011 ರಲ್ಲಿ ಮನಮೋಹನ ಸಿಂಗ್​ ಅವರು ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡುತ್ತಾರೆ. ಯುಪಿಎ ಸರ್ಕಾರವು 2012 ರಲ್ಲಿ ಇವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುತ್ತದೆ.

ಪರಾಶರನ್ ಅವರು ನಾನೊಬ್ಬ ರಾಜಕೀಯೇತರ ವ್ಯಕ್ತಿ “ನಾನು ಎಂದಿಗೂ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ನಾನು ರಾಜಕೀಯೇತರವಾಗಿಯೇ ಇರಲು ಬಯಸುತ್ತೇನೆ. ಹಾಗಿಲ್ಲದಿದ್ದರೆ, ವಾಜಪೇಯಿ ಅವರು ನನಗೆ ಪದ್ಮಭೂಷಣ ಮತ್ತು ಮನಮೋಹನ ಸಿಂಗ್ ಅವರು ಪದ್ಮವಿಭೂಷಣ ಕೊಡುತ್ತಿದ್ದರಾ ಎಂದು ಪ್ರಶ್ನಿಸುತ್ತಾರೆ. ಮೋದಿ ಸರಕಾರದ ಅವಧಿಯಲ್ಲಿ NJAC ಕಾಯಿದೆಯನ್ನು ರಾಜ್ಯಸಭೆಯಲ್ಲಿ ಬಲವಾಗಿ ಬೆಂಬಲಿಸಿದ್ದರು. ತಮ್ಮ ರಾಜ್ಯಸಭಾ ಅವಧಿಯಲ್ಲಿ ಪಕ್ಷಾತೀತರಾಗಿಯೇ ಉಳಿದು ತಮ್ಮ ನಿಲುವಿಗೆ ಬದ್ದರಾಗಿದ್ದರು.

ರಾಮ ಜನ್ಮಭೂಮಿ ಮೊಕದ್ದಮೆಯನ್ನು ಸುಪ್ರೀಂಕೋರ್ಟಿನಲ್ಲಿ 40 ದಿನಗಳು ಯಶಸ್ವಿಯಾಗಿ ವಾದಿಸಿ ಐದು ಶತಮಾನದ ಹೋರಾಟಕ್ಕೆ ಅಂತ್ಯ ಹೇಳಿ ರಾಮ ಮಂದಿರ ನಿರ್ಮಾಣವನ್ನು ಸಾಕಾರ ಮಾಡಿದ ಕೇಶವ ಪರಾಶರನ್ ರವರನ್ನು ಕುರಿತು ಭಾರತೀಯ ಕಾನೂನುಗಳ ‘ಪಿತಾಮಹ’ ಎಂದು ಮದ್ರಾಸ್ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಕರೆಯುತ್ತಾರೆ. ವಕೀಲ ವೃತ್ತಿಯಲ್ಲಿ ಧರ್ಮದೊಂದಿಗೆ ರಾಜಿ ಮಾಡಿಕೊಳ್ಳದೆ ಸಾಕಷ್ಟು ಕೊಡುಗೆ ನೀಡಿದವರು ಎಂದು ಅವರ ಪ್ರಶಂಸುತ್ತಾರೆ.

ಸುಪ್ರೀಂಕೋರ್ಟಿನಲ್ಲಿ ವಾದಿಸುವಾಗ ಬೆಟ್ಟದಷ್ಟು ಕಡತಗಳನ್ನು ನೋಡಬೇಕಿತ್ತು. ಸಾವಿರಾರು ಸಾಕ್ಷ್ಯಾಧಾರಗಳನ್ನು ಉಲ್ಲೇಖಿಸಬೇಕಿತ್ತು. ಇವರಿಗೆ ಹನ್ನೆರಡಕ್ಕೂ ಹೆಚ್ಚು ವಕೀಲರು ಸಹಾಯಕರಾಗಿದ್ದರು. ಇವರ ತಂಡದ ಪ್ರಮುಖ ಆರು ವಕೀಲರು ಯೋಗೇಶ್ವರನ್, ಅನಿರುದ್ದ ಶರ್ಮಾ, ಶ್ರೀಧರ್ ಪೊಟ್ಟರಾಜು, ಅದಿತಿ ದಾನಿ, ಅಶ್ವಿನಿ ಕುಮಾರ್ ಡಿ. ಎಸ್. ಮತ್ತು ಭಕ್ತಿ ವರದನ್ ಸಿಂಗ್ ರವರುಗಳು.

ರಾಮ ಮಂದಿರದ ಕೇಸ್ ಅನ್ನು ನ್ಯಾಯಾಲಯದಲ್ಲಿ ವಾದಿಸುವಾಗ ಮುಖ್ಯ ನ್ಯಾಯಾಧೀಶರಾಗಿದ್ದ ರಂಜನ್ ಗೋಗೋಯ್ ರವರು 93 ವರ್ಷದ ಪರಾಶರನ್ ರವರಿಗೆ ಅವರ ಹಿರಿತನವನ್ನು ಪರಿಗಣಿಸಿ ಕುಳಿತೇ ವಾದ ಮಂಡಿಸಲು ಸೂಚಿಸುತ್ತಾರೆ. ಆದರೆ ಇವರು ನಾನು ಶ್ರೀರಾಮನ ಪರವಾಗಿ ವಾದ ಮಂಡಿಸುತ್ತಿರುವುದು ಆದ್ದರಿಂದ ನಿಂತೇ ವಾದ ಮಾಡುವೆ ಎನ್ನುತ್ತಾರೆ ಮತ್ತು ವಾದ ಮಾಡುವಾಗ ಅವರು ಕಾಲಿಗೆ ಪಾದರಕ್ಷೆಯನ್ನು ಧರಿಸುವುದಿಲ್ಲ ಆ ಮಟ್ಟಿಗೆ ಅವರ ಶ್ರೀರಾಮನಲ್ಲಿ ಅಚಲವಾದ ಶ್ರದ್ಧೆ ಮತ್ತು ಭಗವಂತನ ಕೆಲಸವನ್ನು ಮಾಡುತ್ತಿರುವೆ ಎಂಬ ಬಲವಾದ ನಂಬಿಕೆಯುಳ್ಳವರಾಗಿದ್ದರು.

ಪರಾಶರನ್ ರವರು ರಾಮಜನ್ಮಭೂಮಿ ಪ್ರಕರಣವನ್ನು ಕೋರ್ಟಿನಲ್ಲಿ ವಾದ ಮಾಡುವಾಗ ಅನೇಕ ಹಿಂದೂ ಧರ್ಮಗ್ರಂಥಗಳನ್ನು ಮತ್ತು ಶ್ಲೋಕಗಳನ್ನು ಸುಲಲಿತವಾಗಿ ಉದಾಹರಣೆಯ ರೂಪದಲ್ಲಿ ಸಂದರ್ಭೋಚಿತವಾಗಿ ಬಳಸಿಕೊಂಡು ತಮ್ಮ ವಾದಕ್ಕೆ ಬಲ ತುಂಬುತ್ತಿದ್ದರು.

ಒಮ್ಮೆ ಮಸೀದಿಯಾದರೆ ಅದು ಎಂದಿಗೂ ಮಸೀದಿಯು ಎಂದು ಪ್ರತಿವಾದಿಗಳು ವಿತಂಡವಾದ ಮಾಡಿದಾಗ, ಅಯ್ಯೋಧ್ಯೆಯಲ್ಲಿ 40 ರಿಂದ 50 ಮಸೀದಿಗಳು ಇದೆ ಮುಸಲ್ಮಾನರು ಎಲ್ಲಿ ಬೇಕಾದರು ಪ್ರಾರ್ಥನೆ ಸಲ್ಲಿಸಬಹುದು ಆದರೆ ಹಿಂದುಗಳಿಗೆ ರಾಮನು ಜನಿಸಿದ ಜಾಗ ಇದೊಂದೆ, ಬೇರೆ ಜಾಗವನ್ನು ರಾಮನು ಜನಿಸಿದ ಸ್ಥಳವೆಂದು ಪೂಜೆ ಮಾಡಲು ಸಾಧ್ಯವಿಲ್ಲ ಎಂದು ಮಾರುತ್ತರ ನೀಡುತ್ತಾರೆ.

ನ್ಯಾಯಾಲಯದಲ್ಲಿ ರಾಮ ಮಂದಿರದ ಬಗ್ಗೆ ವಾದ ಮಾಡುವಾಗ ಒಮ್ಮೆಯೂ ತಾಳ್ಮೆ ಕಳೆದುಕೊಳ್ಳಲಿಲ್ಲ ಮತ್ತು ಎದುರಾಳಿ ವಕೀಲರ ಮೇಲೆ ಸಹನೆ ಕಳೆದುಕೊಂಡು ಕೂಗಾಡುವುದಿಲ್ಲ. ಸುನ್ನಿ ವಕ್ಫ್ ಮಂಡಳಿಯ ವಕೀಲ ರಾಜೀವ್ ಧವನ್ ರವರು ಅನೇಕ ಬಾರಿ ವಾದ ಮಾಡುವ ಸಂದರ್ಭದಲ್ಲಿ ಸಹನೆ ಕಳೆದುಕೊಂಡು ಕೂಗಾಡುತ್ತಿದ್ದರು.

ಪರಾಶರನ್ ರವರು ತಮ್ಮ ಕೊನೆಯ ವಾದವನ್ನು ಮಂಡಿಸಿದ ತರುವಾಯ ಕೋರ್ಟ್ ಹಾಲ್ ನಿಂದ ಹೊರಬಂದು ರಾಜೀವ್ ಧವನ್ ರವರು ಹೊರ ಬರುವವರೆಗೆ ಕಾದು ಅವರೊಂದಿಗೆ ಭಾವಚಿತ್ರ ತೆಗೆದುಕೊಂಡು ಅವರಿಗೆ ಶುಭ ಕೋರುತ್ತಾರೆ. ನಮ್ಮ ನಡುವಿನ ಕಾದಾಟ ಕೋರ್ಟ್ ಹಾಲ್ ನೊಳಗೆ ಮಾತ್ರ, ಹೊರಗಡೆ ಬಂದಾಗ ಯಾವುದೇ ಕಹಿಯು ಮನಸ್ಸಿನಲ್ಲಿ ಇರುವುದಿಲ್ಲ ಎನ್ನುತ್ತಾರೆ.

ತಮ್ಮ ವಕೀಲರ ತಂಡದೊಂದಿಗೆ ವಾರದ ಎಲ್ಲಾ ಏಳು ದಿನಗಳು ಕೆಲಸ ಮಾಡುತ್ತಿದ್ದರು. “ನಾವು ಕೆಲಸ ಮಾಡುವಾಗ ನಾವ್ಯಾರು ಹಸಿದಿಲ್ಲ ಎಂದು ಸರ್ ಖಚಿತಪಡಿಸಿಕೊಳ್ಳುತ್ತಾರೆ” ಒಬ್ಬ ನ್ಯಾಯಶಾಸ್ತ್ರದ ವ್ಯಕ್ತಿಯಾಗಿ ದೇವತೆಗಾಗಿ ವಾದಿಸಿದವರು ಕೇಶವ ಪರಾಶರನ್ ಎಂದು ಅವರ ತಂಡದ ಸದಸ್ಯರಾದ ಅದಿತಿ ದಾನಿ ಹೇಳುತ್ತಾರೆ.

ಇದನ್ನೂ ಓದಿ: ಶಿಡ್ಲಘಟ್ಟ ತಾಲ್ಲೂಕಿನ ರಾಮಲಿಂಗೇಶ್ವರ ಬೆಟ್ಟದಲ್ಲಿದೆ ರಾಮ, ಲಕ್ಷ್ಮಣ, ಸೀತೆಯ ಹೆಜ್ಜೆ ಗುರುತುಗಳು

ಪರಾಶರನ್ ರವರಿಗೆ ಅದ್ಭುತವಾದ ಪೋಟೋಗ್ರಾಫಿಕ್ ನೆನಪಿನ ಶಕ್ತಿಯು. ಯಾವುದೇ ಪುಸ್ತಕದ ಸಹಾಯವಿಲ್ಲದೆ ಇತಿಹಾಸ, ಧಾರ್ಮಿಕ ಗ್ರಂಥ ಹಾಗೂ ಸಂಸ್ಕೃತ ಪುಸ್ತಕಗಳನ್ನು ತಮ್ಮ ವಾದದ ನಡುವೆ ಸುಲಲಿತವಾಗಿ ಉಲ್ಲೇಖಿಸುತ್ತಿದ್ದರು ಎನ್ನುತ್ತಾರೆ ಅವರ ಸಹಾಯಕ ವಕೀಲ ಅನಿರುದ್ದ ಶರ್ಮಾ.

ತಮ್ಮ ವಕೀಲರ ತಂಡದೊಂದಿಗೆ, ವಾರದ ಎಲ್ಲಾ ಏಳು ದಿನಗಳು ಕೆಲಸ ಮಾಡಿದರು. “ ನಾವು ಕೆಲಸ ಮಾಡುವಾಗ ನಾವು ಎಂದಿಗೂ ಹಸಿದಿಲ್ಲ ಎಂದು ಖಚಿತಪಡಿಸಿಕೊಳ್ಳುತ್ತಿದ್ದರು“ಎಂದು ತಂಡದ ಸದಸ್ಯರಲ್ಲಿ ಒಬ್ಬರಾದ ಅದಿತಿ ದಾನಿ ನೆನಪಿಸಿಕೊಳ್ಳುತ್ತಾರೆ.

ರಾಮ ಮಂದಿರದ ಕೇಸ್ ವಾದಿಸಲು ಒಂದು ನಯಾ ಪೈಸೆಯನ್ನು ಪಡೆಯದೆ ದೈವದ ಕೆಲಸವೆಂದು ಕೈಗೊಳ್ಳುತ್ತಾರೆ. ಕೋರ್ಟಿನಲ್ಲಿ ಎಂಟು ಗಂಟೆಗಳ ವಾದ ಪ್ರತಿವಾದದ ನಂತರ ಕಚೇರಿಗೆ ಬಂದು ಮತ್ತೆ ಮರುದಿನದ ವಾದಕ್ಕೆ ಬೇಕಾದ ಅಂಶಗಳನ್ನು ನೋಟ್ ಮಾಡಿಕೊಳ್ಳಲು ತೊಡಗಿಸಿಕೊಳ್ಳುತ್ತಿದ್ದರಂತೆ. ಅವರ ವಯಸ್ಸು 93 ಆಗಿತ್ತು ಎಂಬುದನ್ನು ಮರೆಯಬಾರದು. ಅವರದು ಎಂತಹ ಸಮರ್ಪಣಾ ಮನೋಭಾವ ಎಂಬುದು ಊಹೆಗೂ ನಿಲುಕದ್ದು.

ರಾಮ ಜನ್ಮಭೂಮಿ ಕೇಸ್ ತೀರ್ಪು ಬಂದ ದಿನ ಪರಾಶರನ್ ರವರು ತಮ್ಮ ದೆಹಲಿಯಲ್ಲಿ ಫ್ಲಾಟ್ ಗೆ ವಾಪಸ್ ಬಂದಾಗ ಆಶ್ಚರ್ಯದ ಘಟನೆ ನಡೆದಿರುತ್ತದೆ. ಅಲ್ಲಿಯವರೆಗೂ ಕಾಣದಿದ್ದ ಕೋತಿಗಳು ಏಕಾಏಕೀ ಕಾಣಿಸಿಕೊಂಡು ಅಲ್ಲಿನ ಗಿಡ ಮರಗಳ ಮೇಲೆ ಎಗರಾಡಿ ಅವಾಂತರ ಎಬ್ಬಿಸಿರುತ್ತದೆ. ಪ್ರಾಯಶ: ಹನುಮಂತನು ತನ್ನ ರಾಮನಿಗೆ ಮಂದಿರ ದೊರೆಯುತ್ತದೆಯೆಂದು ಸಂತಸದಿಂದ ಹೀಗೆ ಮಾಡಿದ್ದೇನೊ ಎಂದು ಹೇಳಿ ಕೊಂಡರು ಎಂದು ಭಾರತ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದ ಖ್ಯಾತ ವಕೀಲ ನರಗುಂದ್ ರವರು ನೆನಪಿಸಿಕೊಳ್ಳುತ್ತಾರೆ.

ನಾನು ರಾಮ ಜನ್ಮಭೂಮಿ ಮತ್ತು ಶಬರಿಮಲೆ ಪ್ರಕರಣಗಳಲ್ಲಿ ಹಾಜರಾಗಲು ನಿವೃತ್ತಿಯಿಂದ ಹೊರಬಂದೆ ಎಂದು ಹೇಳುವುದು ಸಂಪೂರ್ಣವಾಗಿ ಸರಿಯಲ್ಲ. ಈ ಕಾರಣಗಳಲ್ಲಿ ಕಾಣಿಸಿಕೊಳ್ಳಲು ನನ್ನನ್ನು ಆಯ್ಕೆ ಮಾಡಿರುವುದು ಭಗವಂತನ ಇಚ್ಛೆ ಎಂದು ನಾನು ನಂಬುತ್ತೇನೆ. ಭಗವದ್ಗೀತೆಯಲ್ಲಿ ಭಗವಂತ ಹೇಳುವಂತೆ, ನಾನು ನಿಮಿತ್ತ ಮಾತ್ರ ಮಾತ್ರ ಅತ್ಯಂತ ಸೌಜನ್ಯದಿಂದ ಉತ್ತರಿಸುತ್ತಾರೆ.

ಕೋಟ್ಯಾಂತರ ಹಿಂದುಗಳು ಐದು ಶತಮಾನಗಳಿಂದ ಕಾಯುತ್ತಿದ್ದ ರಾಮ ಮಂದಿರ ನಿರ್ಮಾಣಕ್ಕೆ ನ್ಯಾಯಾಲಯದಲ್ಲಿ ಕೇಸ್ ಗೆಲ್ಲುವುದು ಅನಿವಾರ್ಯವಾಗಿರುತ್ತದೆ. ತಮ್ಮ ವೃತ್ತಿಯಲ್ಲಿ ಸಂಪಾದಿಸಿದ್ದ ಸಂಪೂರ್ಣ ಗೌರವ ಮತ್ತು ಕೀರ್ತಿಯನ್ನು ಇಳಿ ವಯಸ್ಸಿನಲ್ಲಿ ಪಣಕ್ಕಿಟ್ಟು ನ್ಯಾಯಾಲಯದಲ್ಲಿ ವಾದಿಸಿ ಗೆಲಲ್ಲು ಅಖಾಡಕ್ಕೆ ಧುಮುಕುತ್ತಾರೆ. ಶ್ರೀರಾಮನ ಆಶೀರ್ವಾದ ಫಲ ತಮ್ಮ ಪ್ರಯತ್ನದಲ್ಲಿ ಜಯಶೀಲರಾಗಿ ಮತ್ತೆಷ್ಟು ಎತ್ತರಕ್ಕೆ ತಮ್ಮ ಕೀರ್ತಿ ಪತಾಕೆಯನ್ನು ಹಾರಿಸುತ್ತಾರೆ. ತಾವು ಮತ್ತೇ ಕೋರ್ಟ್ ಗೆ ಬರುವುದಿಲ್ಲವಾ? ಎಂದು ಪತ್ರಕರ್ತರು ಪ್ರಶ್ನಿಸಿದಾಗ “ವಕೀಲರಿಗೆ ನಿವೃತ್ತಿ ಇಲ್ಲ” ಎಂದುತ್ತರಿಸಿದರಂತೆ.

ಲೇಖಕರು- ಪ್ರಕಾಶ್​​ ಶೇಷರಾಘವಾಚಾರ್​, ಕೃಪೆ -ವಿಶ್ವವಾಣಿ

ಶ್ರೀರಾಮನ ಕುರಿತು ಮತ್ತಷ್ಟು ವಿಚಾರಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Published On - 12:44 pm, Tue, 9 January 24