ಚುನಾಯಿತ ಸರ್ಕಾರ ಕಿತ್ತಾಕುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸ: ದಸರಾ ಉದ್ಘಾಟನೆ ಬಳಿಕ ಸಿಎಂ ಸಿದ್ದರಾಮಯ್ಯ ಮಾತು

| Updated By: ಗಣಪತಿ ಶರ್ಮ

Updated on: Oct 03, 2024 | 11:25 AM

ಮುಡಾ ಹಗರಣದ ಸಂಕಷ್ಟದ ಮಧ್ಯೆಯೇ ಸಿಎಂ ಸಿದ್ದರಾಮಯ್ಯ ಗುರುವಾರ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು. ಬಳಿಕ ಭಾಷಣ ಮಾಡಿದ ಅವರ ಮಾತಿನುದ್ದಕ್ಕೂ ರಾಜಕೀಯ ಬೆಳವಣಿಗೆಗಳ ಉಲ್ಲೇಖವೇ ಢಾಳಾಗಿ ಕಾಣಿಸಿತು. ದಸರಾ ಉದ್ಘಾಟನೆ ಬಳಿಕ ಸಿದ್ದರಾಮಯ್ಯ ಆಡಿದ ಮಾತುಗಳ ವಿವರ ಇಲ್ಲಿದೆ.

ಚುನಾಯಿತ ಸರ್ಕಾರ ಕಿತ್ತಾಕುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸ: ದಸರಾ ಉದ್ಘಾಟನೆ ಬಳಿಕ ಸಿಎಂ ಸಿದ್ದರಾಮಯ್ಯ ಮಾತು
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಭಾಷಣ
Follow us on

ಮೈಸೂರು, ಅಕ್ಟೋಬರ್ 3: ಚುನಾಯಿತ ಸರ್ಕಾರವನ್ನು ಕಿತ್ತಾಕುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಜನರ ಆಶೀರ್ವಾದದಿಂದ ನಾವು 136 ಸ್ಥಾನ ಗೆದ್ದಿದ್ದೇವೆ. 5 ವರ್ಷಗಳ ಅಭಿವೃದ್ಧಿ ಕೆಲಸ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ದೇವರಾಜ ಅರಸು ಬಿಟ್ಟರೆ ಸಿಎಂ ಆಗಿ 5 ವರ್ಷ ಪೂರೈಸಿದ್ದು ಸಿದ್ದರಾಮಯ್ಯ ಮಾತ್ರ. ಜಿಟಿ ದೇವೇಗೌಡ ಮುಡಾದ ಸದಸ್ಯರಾಗಿದ್ದಾರೆ, ಅವರಿಗೆ ಸತ್ಯ ಗೊತ್ತಿದೆ. ಅದಕ್ಕೇ ಅವರು ಸತ್ಯ ಹೇಳಿದ್ದಾರೆ ಎಂದರು.

ಜನರ ಆಶೀರ್ವಾದ ಇರುವವರೆಗೂ ಯಾರು ಏನೂ ಮಾಡಲು ಆಗಲ್ಲ. ಜನರು, ಚಾಮುಂಡಿ ಆಶೀರ್ವಾದಿಂದ 2ನೇ ಬಾರಿ ಸಿಎಂ ಆಗಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಆತ್ಮಸಾಕ್ಷಿಯ ನ್ಯಾಯಾಲಯ ದೊಡ್ಡದು: ಸಿದ್ದರಾಮಯ್ಯ

ಆತ್ಮಸಾಕ್ಷಿಗೆ ಅನುಗುಣವಾಗಿ ನಾವು ನಡೆದುಕೊಳ್ಳುತ್ತಿದ್ದೇವೆ. ಎಲ್ಲಾ ನ್ಯಾಯಾಲಯಗಳಿಗಿಂತಲೂ ಆತ್ಮಸಾಕ್ಷಿಯ ನ್ಯಾಯಾಲಯ ದೊಡ್ಡದು. ಸತ್ಯಕ್ಕೆ ಯಾವಾಗಲೂ ನ್ಯಾಯ ಸಿಗುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಮೈಸೂರು ದಸರಾ ರೋಮಾಂಚನ ಎಂದ ಸಿಎಂ

ಮೈಸೂರು ದಸರಾ ಅಂದರೆ ಒಂದು ರೀತಿ ರೋಮಾಂಚನ ಮತ್ತು ಹರ್ಷ. ಕಳೆದ ಬಾರಿ ಮೈಸೂರು ದಸರಾವನ್ನು ಸರಳವಾಗಿ ಆಚರಣೆ ಮಾಡಿದ್ದೆವು. ಈ ಬಾರಿ ಅದ್ದೂರಿಯಾಗಿ ಮೈಸೂರು ದಸರಾ ಆಚರಣೆಗೆ ನಿರ್ಧಾರ ಮಾಡಿದ್ದೇವೆ. ಈ ಬಾರಿ ರಾಜ್ಯದಲ್ಲಿ ಶೇ 98.99ರಷ್ಟು ಬಿತ್ತನೆ ಕಾರ್ಯ ಆಗಿದೆ. ನಮ್ಮ ನಿರೀಕ್ಷೆಗಿಂತ ಹೆಚ್ಚು ಬೆಳೆ ಬೆಳೆಯಲೆಂದು ಪ್ರಾರ್ಥನೆ ಮಾಡುತ್ತೇನೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಸರ್ಕಾರ ಉರುಳಿಸುವ ಕೆಲಸಕ್ಕೆ ಮುಂದಾಗಬಾರದು, ದಸರಾ ಉದ್ಘಾಟನೆ ವೇಳೆ ಹಂಪ ನಾಗರಾಜಯ್ಯ ಪಾಠ

ಇಂದು ಹಂಪ ನಾಗರಾಜಯ್ಯರಿಂದ ಮೈಸೂರು ದಸರಾ ಉದ್ಘಾಟನೆಯಾಗಿದೆ. ನನಗೆ ಮೈಸೂರು ದಸರಾ ಉದ್ಘಾಟಕರ ಆಯ್ಕೆ ಜವಾಬ್ದಾರಿ ಕೊಟ್ಟಿದ್ದರು. ಹಂಪ ನಾಗರಾಜಯ್ಯ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:25 am, Thu, 3 October 24