
ಮಂಗಳೂರು ನಗರದ ಹೃದಯಭಾಗದಲ್ಲಿರುವ ಶ್ರೀ ಶರವು ಮಹಾಗಣಪತಿ ದೇವಸ್ಥಾನವು ಕರಾವಳಿ ಕರ್ನಾಟಕದ ಅತ್ಯಂತ ಪವಿತ್ರ ಹಾಗೂ ಪ್ರಾಚೀನ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ವಿಘ್ನವಿನಾಶಕ ಹಾಗೂ ಜ್ಞಾನದ ಅಧಿಪತಿಯಾದ ಗಣೇಶನು ಇಲ್ಲಿ ಸಿದ್ಧಿಲಕ್ಷ್ಮಿ ಸಮೇತನಾಗಿ ಆರಾಧಿಸಲ್ಪಡುತ್ತಿದ್ದಾನೆ. ಮಂಗಳಾದೇವಿ ಅಮ್ಮನವರೊಂದಿಗೆ ಮಂಗಳೂರು ನಗರವನ್ನು ಪೋಷಿಸುತ್ತಿರುವ ಪ್ರಮುಖ ಆರಾಧ್ಯ ದೈವವಾಗಿ ಶರವು ಮಹಾಗಣಪತಿ ಕ್ಷೇತ್ರ ಪ್ರಸಿದ್ಧಿ ಪಡೆದಿದೆ.
ಸುಮಾರು 800 ವರ್ಷಗಳ ಹಿಂದೆ ತುಳುನಾಡನ್ನು ಆಳುತ್ತಿದ್ದ ರಾಜ ವೀರಬಾಹು ಒಮ್ಮೆ ಸ್ವರ್ಣ ಕದಲಿ ಎಂಬ ದಟ್ಟಾರಣ್ಯಕ್ಕೆ ಬೇಟೆಗೆ ತೆರಳಿದ್ದನು. ಅಲ್ಲಿ ಹಸುವಿನ ಬಳಿ ನಿಂತಿದ್ದ ಹುಲಿಯನ್ನು ಕೊಲ್ಲಲು ರಾಜನು ಬಾಣ (ಶರ) ಹೂಡಿದನು. ಆದರೆ, ಆ ಬಾಣವು ಅಕಸ್ಮಾತ್ತಾಗಿ ಹುಲಿಗೆ ತಾಗದೆ ಹಸುವಿಗೆ ತಾಗಿ ಗೋಹತ್ಯೆಯಾಯಿತು. ಅರಿಯದೆ ಮಾಡಿದ ಈ ಪಾಪಪ್ರಾಯಶ್ಚಿತ್ತಕ್ಕಾಗಿ ರಾಜ ವೀರಬಾಹುವು ಭಾರದ್ವಾಜ ಮುನಿಗಳ ಅಭಯ ಕೋರಿದನು. ಮುನಿಗಳ ಮಾರ್ಗದರ್ಶನದಂತೆ, ರಾಜನ ಬಾಣ ಬಿದ್ದ ಜಾಗದಲ್ಲೇ ಶಿವಲಿಂಗವನ್ನು ಸ್ಥಾಪಿಸಿ ಪೂಜಿಸಲಾಯಿತು. ‘ಶರ’ (ಬಾಣ) ಬಿದ್ದ ಸ್ಥಳದಲ್ಲಿ ನಿರ್ಮಾಣಗೊಂಡಿದ್ದರಿಂದ ಈ ಕ್ಷೇತ್ರಕ್ಕೆ ‘ಶರವು’ ಎಂದೂ, ಇಲ್ಲಿನ ಶಿವಲಿಂಗಕ್ಕೆ ‘ಶರಭೇಶ್ವರ’ ಎಂದೂ ಹೆಸರು ಬಂತು. ಶಿವಲಿಂಗದ ಅಭಿಷೇಕಕ್ಕಾಗಿ ರಾಜನು ಕೆರೆಯನ್ನು ನಿರ್ಮಿಸಿದಾಗ, ಭಾರದ್ವಾಜ ಮುನಿಗಳು ತಪೋಶಕ್ತಿಯಿಂದ ನೇತ್ರಾವತಿ ನದಿಯ ನೀರು ಹರಿಯುವಂತೆ ಮಾಡಿ ಅದಕ್ಕೆ ‘ಶರ ತೀರ್ಥ’ ಎಂದು ಹೆಸರಿಟ್ಟರು.
ಕಾಲಾನಂತರದಲ್ಲಿ ಶರಭೇಶ್ವರ ಗರ್ಭಗುಡಿಯ ದಕ್ಷಿಣ ಭಾಗದ ಗೋಡೆಯಲ್ಲಿ ಹತ್ತು ಕೈಗಳನ್ನು ಹೊಂದಿರುವ ದಶಭುಜ ಶ್ರೀ ಮಹಾಗಣಪತಿಯು ಸಿದ್ಧಿಲಕ್ಷ್ಮಿ ಸಮೇತನಾಗಿ ಸ್ವಯಂ ಆವಿರ್ಭವಿಸಿದನು. ಸಿದ್ಧಿಲಕ್ಷ್ಮಿಯೊಂದಿಗೆ ಪ್ರತ್ಯಕ್ಷಗೊಂಡ ಈ ಗಣಪತಿಯನ್ನು ಆರಾಧಿಸುವುದರಿಂದ ಭಕ್ತರಿಗೆ ಸಕಲ ವಿಘ್ನಗಳು ನಿವಾರಣೆಯಾಗಿ ಐಶ್ವರ್ಯ ಮತ್ತು ಅಭಿವೃದ್ಧಿ ಲಭಿಸುತ್ತದೆ ಎಂಬ ದೃಢ ನಂಬಿಕೆಯಿದೆ.
ಶರವು ಮಹಾಗಣಪತಿಯು ತುಳುನಾಡನ್ನು ಆಕ್ರಮಣದಿಂದ ಕಾಪಾಡಿದ ಐತಿಹಾಸಿಕ ಪವಾಡವೂ ಜಾನಪದ ವಾಡಿಕೆಯಲ್ಲಿದೆ. ಟಿಪ್ಪು ಸುಲ್ತಾನನು ತುಳುನಾಡಿನ ಮೇಲೆ ದಾಳಿ ಮಾಡಲು ಸೈನ್ಯದೊಂದಿಗೆ ಗಡಿಯಲ್ಲಿ ಬಿಡಾರ ಹೂಡಿದಾಗ, ಆತನ ಕನಸಿನಲ್ಲಿ ನಿರಂತರವಾಗಿ ಆನೆಯೊಂದು ಬಂದು ತುಳಿಯುವಂತೆ ಭಾಸವಾಯಿತು. ಈ ಕನಸಿನ ತಾತ್ಪರ್ಯವನ್ನು ಹಿಂದೂ ಜ್ಯೋತಿಷಿಗಳಲ್ಲಿ ಕೇಳಿದಾಗ, ಅದು ಶರವು ಗಣಪತಿಯ ಕೋಪಕ್ಕೆ ಕಾರಣವೆಂದು ತಿಳಿಯಿತು. ತಕ್ಷಣವೇ ಜಾಗೃತನಾದ ಟಿಪ್ಪು ಸುಲ್ತಾನನು ಕ್ಷೇತ್ರಕ್ಕೆ ಭೇಟಿ ನೀಡಿ ಕಪ್ಪ-ಕಾಣಿಕೆಗಳನ್ನು ಅರ್ಪಿಸಿ ಕ್ಷಮೆ ಯಾಚಿಸಿ ವಾಪಸ್ ತೆರಳಿದನೆಂದು ಹೇಳಲಾಗುತ್ತದೆ.
ಇದನ್ನೂ ಓದಿ: ಗಣೇಶ ಮೂರ್ತಿಯನ್ನು ಎಷ್ಟು ದಿನ ಇಡುವುದು ಶುಭ? ಸಂಪೂರ್ಣ ಧಾರ್ಮಿಕ ವಿವರಣೆ ಇಲ್ಲಿದೆ
ದೇವಾಲಯದ ಪಶ್ಚಿಮ ಭಾಗದಲ್ಲಿ ಶ್ರೀ ಶರಭೇಶ್ವರ ಗರ್ಭಗುಡಿ ಹಾಗೂ ದಕ್ಷಿಣ ಭಾಗದಲ್ಲಿ ಶ್ರೀ ಮಹಾಗಣಪತಿಯ ಗರ್ಭಗುಡಿಗಳಿವೆ. ಇಲ್ಲಿ ವಿಶೇಷ ಸೇವೆಯಾಗಿ ಪ್ರತಿದಿನ ಮಹಾಗಣಹೋಮ ಜರುಗುತ್ತದೆ. ಪ್ರತಿ ಭಾನುವಾರ ಸಂಜೆ ದೇವಾಲಯದ ಆವರಣದಲ್ಲಿ ಯಕ್ಷಗಾನ ಹಾಗೂ ತಾಳಮದ್ದಳೆ ಕಾರ್ಯಕ್ರಮಗಳು ನಡೆಯುತ್ತವೆ. ಗಣೇಶ ಚತುರ್ಥಿ, ಸಂಕಷ್ಟ ಚತುರ್ಥಿ ಹಾಗೂ ವಾರ್ಷಿಕ ಲಕ್ಷ ದೀಪೋತ್ಸವಗಳು ಇಲ್ಲಿ ಅತ್ಯಂತ ವೈಭವದಿಂದ ಜರುಗಲಿದ್ದು, ದೇಶ-ವಿದೇಶಗಳಿಂದ ಸಹಸ್ರಾರು ಭಕ್ತಾದಿಗಳು ಆಗಮಿಸುತ್ತಾರೆ.
ಈ ದೇವಸ್ಥಾನವು ಮಂಗಳೂರು ನಗರದ ಮುಖ್ಯ ಭಾಗವಾದ ಹಂಪನಕಟ್ಟೆಯ (K.S. ರಾವ್ ರಸ್ತೆ ಸಮೀಪ) ಅತ್ಯಂತ ಸುಲಭವಾಗಿ ತಲುಪಬಹುದಾದ ಸ್ಥಳದಲ್ಲಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ