AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದು ಎನ್ನುವುದೇಕೆ? ಆಕಸ್ಮಿಕವಾಗಿ ನೋಡಿದ್ರೆ ಹೀಗೆ ಮಾಡಿ!

ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದು ಎಂಬ ನಂಬಿಕೆ ಹಿಂದಿದೆ ಪೌರಾಣಿಕ ಕಥೆ. ಒಂದು ವೇಳೆ ತಿಳಿಯದೆ ಚಂದ್ರನನ್ನು ನೋಡಿದರೆ ಮಿಥ್ಯ ದೋಷ ಉಂಟಾಗುತ್ತದೆ, ಸುಳ್ಳು ಆರೋಪ ಅಥವಾ ಅಪವಾದ ಎದುರಾಗಬಹುದು ಎಂಬ ನಂಬಿಕೆ ಇದೆ. ಹಾಗಾದರೆ ಈ ಆಚರಣೆಯ ಹಿಂದಿರುವ ಪೌರಾಣಿಕ ಕಥೆ ಏನು? ಆಕಸ್ಮಿಕವಾಗಿ ಚಂದ್ರನನ್ನು ನೋಡಿದರೆ ಏನು ಮಾಡಬೇಕು? ಎಂಬುದರ ಮಾಹಿತಿ ಇಲ್ಲಿದೆ.

ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದು ಎನ್ನುವುದೇಕೆ? ಆಕಸ್ಮಿಕವಾಗಿ ನೋಡಿದ್ರೆ ಹೀಗೆ ಮಾಡಿ!
ಗಣೇಶ ಚತುರ್ಥಿImage Credit source: Getty Images
ಅಕ್ಷತಾ ವರ್ಕಾಡಿ
|

Updated on: Sep 13, 2026 | 8:54 AM

Share

ಗಣೇಶ ಚತುರ್ಥಿ ಎಂದರೆ ಗಣಪತಿ ಆರಾಧನೆಯ ಜೊತೆಗೆ ಹಲವು ಪೌರಾಣಿಕ ನಂಬಿಕೆ, ಆಚರಣೆಗಳು ಮತ್ತು ಸಂಪ್ರದಾಯಗಳಿಗೂ ಮಹತ್ವವಿದೆ. ಈ ಪೈಕಿ ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದು ಎಂಬ ನಂಬಿಕೆ ಪ್ರಮುಖವಾಗಿದೆ. ಒಂದು ವೇಳೆ ತಿಳಿಯದೆ ಚಂದ್ರನನ್ನು ನೋಡಿದರೆ ಮಿಥ್ಯ ದೋಷ ಉಂಟಾಗುತ್ತದೆ, ಸುಳ್ಳು ಆರೋಪ ಅಥವಾ ಅಪವಾದ ಎದುರಾಗಬಹುದು ಎಂಬ ನಂಬಿಕೆ ಇದೆ. ಹಾಗಾದರೆ ಈ ಆಚರಣೆಯ ಹಿಂದಿರುವ ಪೌರಾಣಿಕ ಕಥೆ ಏನು? ಆಕಸ್ಮಿಕವಾಗಿ ಚಂದ್ರನನ್ನು ನೋಡಿದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ.

ಗಣೇಶ ಚತುರ್ಥಿಯಂದು ಚಂದ್ರನನ್ನು ಏಕೆ ನೋಡಬಾರದು?

ಹಿಂದೂ ಪೌರಾಣಿಕ ನಂಬಿಕೆಗಳ ಪ್ರಕಾರ, ಭಾದ್ರಪದ ಶುಕ್ಲ ಚತುರ್ಥಿಯಂದು ಚಂದ್ರನನ್ನು ನೋಡುವುದರಿಂದ ಮಿಥ್ಯ ದೋಷ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಇದರ ಪರಿಣಾಮವಾಗಿ ವ್ಯಕ್ತಿಯು ತಾನು ಮಾಡದ ತಪ್ಪಿಗೂ ನಿಂದನೆ, ಅಪವಾದ ಅಥವಾ ಸುಳ್ಳು ಆರೋಪಗಳನ್ನು ಎದುರಿಸಬೇಕಾಗಬಹುದು ಎಂಬ ನಂಬಿಕೆ ಇದೆ. ಈ ನಂಬಿಕೆಯ ಹಿಂದೆ ಗಣೇಶ ಮತ್ತು ಚಂದ್ರನಿಗೆ ಸಂಬಂಧಿಸಿದ ಪ್ರಸಿದ್ಧ ಪೌರಾಣಿಕ ಕಥೆಯಿದೆ.

ಗಣೇಶನನ್ನು ನೋಡಿ ಚಂದ್ರನು ನಕ್ಕಿದ್ದೇಕೆ?

ದಂತಕಥೆಯ ಪ್ರಕಾರ, ಗಣೇಶನು ಭಕ್ತರು ಅರ್ಪಿಸಿದ ಮೋದಕಗಳನ್ನು ಸ್ವೀಕರಿಸಿ ತನ್ನ ವಾಹನವಾದ ಇಲಿಯ ಮೇಲೆ ಕುಳಿತು ಸಾಗುತ್ತಿದ್ದನು. ದಾರಿಯಲ್ಲಿ ಹಾವು ಕಾಣಿಸಿಕೊಂಡಾಗ ಇಲಿ ಹೆದರಿ ಓಡಿತು. ಇದರಿಂದ ಗಣೇಶನು ಕೆಳಗೆ ಬಿದ್ದನು. ಆತನ ಹೊಟ್ಟೆಯಲ್ಲಿದ್ದ ಮೋದಕಗಳೂ ಕೆಳಗೆ ಬಿದ್ದವು. ಗಣೇಶನು ಮೋದಕಗಳನ್ನು ಮತ್ತೆ ತೆಗೆದುಕೊಂಡು ತನ್ನ ಹೊಟ್ಟೆಯನ್ನು ಅದೇ ಹಾವಿನಿಂದ ಕಟ್ಟಿಕೊಂಡನು. ಈ ದೃಶ್ಯವನ್ನು ನೋಡಿದ ಚಂದ್ರನು ಗಣೇಶನನ್ನು ನೋಡಿ ನಕ್ಕು ಅಣಕಿಸಿದನೆಂದು ಪೌರಾಣಿಕ ಕಥೆ ಹೇಳುತ್ತದೆ.

ಚಂದ್ರನಿಗೆ ಗಣೇಶನ ಶಾಪ:

ಚಂದ್ರನ ವರ್ತನೆಯಿಂದ ಕೋಪಗೊಂಡ ಗಣೇಶನು ಚಂದ್ರನಿಗೆ ಶಾಪ ನೀಡಿದನೆಂದು ನಂಬಲಾಗಿದೆ. ತನ್ನನ್ನು ನೋಡುವವರು ಸುಳ್ಳು ಆರೋಪ ಮತ್ತು ಅಪವಾದಕ್ಕೆ ಗುರಿಯಾಗಲಿ ಎಂದು ಗಣೇಶನು ಶಪಿಸಿದನೆಂಬುದು ಈ ಕಥೆಯ ಪ್ರಮುಖ ಅಂಶ.ನಂತರ ತನ್ನ ತಪ್ಪನ್ನು ಅರಿತ ಚಂದ್ರನು ಗಣೇಶನಲ್ಲಿ ಕ್ಷಮೆಯಾಚಿಸಿದನು. ದೇವತೆಗಳ ಮನವಿಯ ಬಳಿಕ ಗಣೇಶನು ಶಾಪದ ತೀವ್ರತೆಯನ್ನು ಕಡಿಮೆ ಮಾಡಿದನೆಂದು ದಂತಕಥೆ ಹೇಳುತ್ತದೆ.

ಆಕಸ್ಮಿಕವಾಗಿ ಚಂದ್ರನನ್ನು ನೋಡಿದರೆ ಏನು ಮಾಡಬೇಕು?

ಗಣೇಶ ಚತುರ್ಥಿಯಂದು ತಿಳಿಯದೆ ಚಂದ್ರನನ್ನು ನೋಡಿದರೆ ಭಯಪಡುವ ಅಗತ್ಯವಿಲ್ಲ. ಧಾರ್ಮಿಕ ಸಂಪ್ರದಾಯಗಳ ಪ್ರಕಾರ, ಶ್ರೀಕೃಷ್ಣನ ಸ್ಯಮಂತಕ ಮಣಿ ಕಥೆಯನ್ನು ಓದುವುದು ಅಥವಾ ಕೇಳುವುದು ಹಾಗೂ ಗಣೇಶನನ್ನು ಭಕ್ತಿಯಿಂದ ಸ್ಮರಿಸುವುದು ಪರಿಹಾರವಾಗಿ ಆಚರಿಸಲಾಗುತ್ತದೆ. ಕೆಲವು ಸಂಪ್ರದಾಯಗಳಲ್ಲಿ ಸ್ಯಮಂತಕ ಮಣಿ ಕಥೆಗೆ ಸಂಬಂಧಿಸಿದ ಶ್ಲೋಕವನ್ನು ಪಠಿಸಿ ನಂತರ ನೀರು ಕುಡಿಯುವ ಪದ್ಧತಿಯೂ ಇದೆ. ಆದರೆ ಇಂತಹ ಧಾರ್ಮಿಕ ಪರಿಹಾರಗಳಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂಬುದನ್ನು ಗಮನಿಸಬೇಕು.

ಇದನ್ನೂ ಓದಿ: ಗಣೇಶ ಮೂರ್ತಿಯನ್ನು ಎಷ್ಟು ದಿನ ಇಡುವುದು ಶುಭ? ಸಂಪೂರ್ಣ ಧಾರ್ಮಿಕ ವಿವರಣೆ ಇಲ್ಲಿದೆ

ಈ ಆಚರಣೆಯ ಹಿಂದಿರುವ ಸಂದೇಶವೇನು?

ಗಣೇಶ ಮತ್ತು ಚಂದ್ರನ ಕಥೆ ಕೇವಲ ಚಂದ್ರನನ್ನು ನೋಡಬಾರದು ಎಂಬ ನಂಬಿಕೆಗೆ ಸೀಮಿತವಾಗಿಲ್ಲ. ಅಹಂಕಾರದಿಂದ ಇತರರನ್ನು ಅವಮಾನಿಸಬಾರದು ಹಾಗೂ ವ್ಯಕ್ತಿಯ ಬಾಹ್ಯ ರೂಪ ಅಥವಾ ನೋಟವನ್ನು ಆಧರಿಸಿ ಗೇಲಿ ಮಾಡಬಾರದು ಎಂಬ ನೈತಿಕ ಸಂದೇಶವನ್ನೂ ಈ ಕಥೆ ನೀಡುತ್ತದೆ ಎಂದು ಭಕ್ತರು ನಂಬುತ್ತಾರೆ.

ಹೀಗಾಗಿ ಗಣೇಶ ಚತುರ್ಥಿಯಂದು ಚಂದ್ರನ ದರ್ಶನ ಮಾಡದಿರುವ ಸಂಪ್ರದಾಯವು ಇಂದಿಗೂ ಹಲವು ಕಡೆಗಳಲ್ಲಿ ಆಚರಣೆಯಲ್ಲಿದೆ. ಆಕಸ್ಮಿಕವಾಗಿ ಚಂದ್ರನನ್ನು ನೋಡಿದರೆ ಆತಂಕಪಡದೆ, ತಮ್ಮ ನಂಬಿಕೆಯಂತೆ ಗಣೇಶನನ್ನು ಸ್ಮರಿಸಿ ಸ್ಯಮಂತಕ ಮಣಿ ಕಥೆಯನ್ನು ಓದುವುದು ಅಥವಾ ಕೇಳುವುದು ಸಂಪ್ರದಾಯದಲ್ಲಿ ಹೇಳಲಾಗಿರುವ ಪರಿಹಾರವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More