
ಪ್ರತಿ ವರ್ಷ ಭಾದ್ರಪದ ಮಾಸದ ಚತುರ್ಥಿಯ ಮುನ್ನಾದಿನ ಸ್ವರ್ಣ ಗೌರಿ ವ್ರತವನ್ನು ಅತ್ಯಂತ ಶ್ರದ್ಧೆ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಬಂಗಾರದಂತೆ ಹೊಳೆಯುವ ಜಗನ್ಮಾತೆ ಗೌರಿಯನ್ನು ಈ ದಿನ ಷೋಡಶೋಪಚಾರಗಳಿಂದ ಪೂಜಿಸಿ ಆರಾಧಿಸುವುದು ಸನಾತನ ಧರ್ಮದ ಪ್ರಮುಖ ಪರಂಪರೆಯಾಗಿದೆ. ಸ್ವರ್ಣ ಗೌರಿ ಹಬ್ಬವು ಕೇವಲ ಒಂದು ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಅದು ಕೌಟುಂಬಿಕ ಪ್ರೀತಿ, ವಾತ್ಸಲ್ಯ ಮತ್ತು ಸಾಮರಸ್ಯದ ದಿವ್ಯ ಸಂಕೇತವಾಗಿದೆ. ಈ ಹಬ್ಬವನ್ನು ತವರುಮನೆಗೆ ಆಗಮಿಸುವ ಮುದ್ದಿನ ಮಗಳನ್ನು ಅತ್ಯಂತ ಪ್ರೀತಿ-ಆದರಗಳಿಂದ ಸ್ವಾಗತಿಸುವ ರೀತಿಯಲ್ಲಿ ಆಚರಿಸಲಾಗುತ್ತದೆ. ಮನೆಯಲ್ಲಿ ಎಷ್ಟೇ ಕಷ್ಟ-ಕಾರ್ಪಣ್ಯಗಳಿದ್ದರೂ ಅವುಗಳನ್ನು ಬದಿಗಿಟ್ಟು, ಮನೆಗೆ ಬಂದ ಮಗಳಿಗೆ ಸುಖ-ಸಂತೋಷದಿಂದ ಭೂರೀ ಭಕ್ಷ್ಯ-ಭೋಜ್ಯಗಳ ನೈವೇದ್ಯ ಅರ್ಪಿಸಿ ಆತಿಥ್ಯ ನೀಡುವಂತೆ ಸ್ವರ್ಣ ಗೌರಿ ತಾಯಿಯನ್ನು ಗೌರವದಿಂದ ಬರಮಾಡಿಕೊಳ್ಳಲಾಗುತ್ತದೆ. ಈ ವ್ರತದ ಆಚರಣೆಯಿಂದ ಕುಟುಂಬದಲ್ಲಿನ ವೈಮನಸ್ಸುಗಳು ನಿವಾರಣೆಯಾಗಿ, ದಾಂಪತ್ಯದಲ್ಲಿ ಪ್ರೀತಿ ಮತ್ತು ಬಾಂಧವ್ಯ ಗಟ್ಟಿಯಾಗುತ್ತದೆ.
ಈ ವ್ರತಕ್ಕಾಗಿ ಪ್ರಕೃತಿದತ್ತವಾದ ಮಣ್ಣಿನಿಂದ ಮಾಡಿದ ಅಥವಾ ಅರಿಶಿನದ ಗೌರಿ ಮೂರ್ತಿಯನ್ನು ಬಳಸಲಾಗುತ್ತದೆ. ತಾಯಿಯ ಮೂರ್ತಿಯನ್ನು ಮನೆಗೆ ತಂದು, ಪೂರ್ವಾಭಿಮುಖವಾಗಿ ಅಕ್ಕಿಯ ಪೀಠದ ಮೇಲೆ ಶ್ರದ್ಧೆಯಿಂದ ಪ್ರತಿಷ್ಠಾಪಿಸಬೇಕು. ಮನೆಯ ಮಂಟಪವನ್ನು ಬಾಳೆ ಕಂದು ಮತ್ತು ಮಾವಿನ ತೋರಣಗಳಿಂದ ಶೃಂಗರಿಸಿ, ಗೌರಿ ದೇವಿಗೆ ಹೊಸ ವಸ್ತ್ರ ಹಾಗೂ ಆಭರಣಗಳನ್ನು ತೊಡಿಸಿ ಅಲಂಕರಿಸಲಾಗುತ್ತದೆ. ನಂತರ ಶಸ್ತ್ರಾನುಸಾರ ಒಬ್ಬಟ್ಟು, ಪಾಯಸ ಹಾಗೂ ವಿವಿಧ ರೀತಿಯ ಸಿಹಿ ತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ.
ಈ ಪಾವನ ದಿನದಂದು ತ್ರಿಕಾಲ ಪೂಜೆಗೆ ವಿಶೇಷವಾದ ಮಹತ್ವವಿದೆ. ಬೆಳಗಿನ ಬ್ರಾಹ್ಮಿ ಮುಹೂರ್ತ, ಮಧ್ಯಾಹ್ನದ ಅಭಿಜಿನ್ ಮುಹೂರ್ತ ಮತ್ತು ಸಂಜೆಯ ಗೋದೂಳಿ ಮುಹೂರ್ತದಲ್ಲಿ ತಾಯಿಗೆ ವಿಶೇಷ ಅರ್ಚನೆಗಳನ್ನು ಸಲ್ಲಿಸುವುದು ಅತ್ಯಂತ ಶ್ರೇಷ್ಠ. ಮಂತ್ರಗಳು ಅಥವಾ ಸಂಕೀರ್ಣ ಪೂಜಾ ವಿಧಿಗಳು ತಿಳಿಯದಿದ್ದರೂ, ಕೇವಲ ನಿಷ್ಕಲ್ಮಶ ಭಕ್ತಿಯಿಂದ ಪ್ರಾರ್ಥಿಸಿದರೆ ತಾಯಿ ಗೌರಿ ಪ್ರಸನ್ನಳಾಗುತ್ತಾಳೆ. ಗೌರಿ ಹಬ್ಬದ ಮರುದಿನವೇ ಗಣೇಶ ಚತುರ್ಥಿ ಬರುತ್ತದೆ. ಗೌರಿ ಪೂಜೆಯ ನಂತರ, ತಾಯಿಯನ್ನು ಕರೆದೊಯ್ಯಲು ಬರುವ ಮಗನಂತೆ ಅಥವಾ ಅಜ್ಜಿ ಮನೆಗೆ ಬರುವ ಮೊಮ್ಮಗನಂತೆ ವಿಘ್ನನಿವಾರಕ ಗಣಪತಿಯನ್ನು ಮರುದಿನ ಅತ್ಯಂತ ವಿಜೃಂಭಣೆಯಿಂದ ಮನೆಗೆ ಬರಮಾಡಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ಗಣೇಶ ಮೂರ್ತಿಯನ್ನು ಎಷ್ಟು ದಿನ ಇಡುವುದು ಶುಭ? ಸಂಪೂರ್ಣ ಧಾರ್ಮಿಕ ವಿವರಣೆ ಇಲ್ಲಿದೆ
ಸ್ವರ್ಣ ಗೌರಿ ವ್ರತದ ನಿಯಮಿತ ಆಚರಣೆಯಿಂದ ದೇವಿಯ ಅಪಾರ ಆಶೀರ್ವಾದ ಲಭಿಸುತ್ತದೆ. ಸುಮಂಗಲೆಯರಿಗೆ ಸುಖೀ ದಾಂಪತ್ಯದೊಂದಿಗೆ ಸುದೀರ್ಘ ಮಾಂಗಲ್ಯ ಭಾಗ್ಯ ಪ್ರಾಪ್ತಿಯಾದರೆ, ಪತಿಗೆ ದೀರ್ಘಾಯುಷ್ಯ ದೊರೆಯುತ್ತದೆ. ವಿವಾಹಾಕಾಂಕ್ಷಿಗಳಿಗೆ ಎದುರಾಗುತ್ತಿದ್ದ ಅಡೆತಡೆಗಳು ನಿವಾರಣೆಯಾಗಿ ಶೀಘ್ರ ಕಲ್ಯಾಣ ಯೋಗ ಕೂಡಿಬರುತ್ತದೆ ಹಾಗೂ ಸಂತಾನಾಪೇಕ್ಷಿಗಳಿಗೆ ಸತ್ಸಂತಾನ ಪ್ರಾಪ್ತಿಯಾಗುತ್ತದೆ. ಜೊತೆಗೆ, ಜಾತಕದಲ್ಲಿನ ನವಗ್ರಹ ದೋಷಗಳು ಮತ್ತು ಮಾನಸಿಕ ಅಶಾಂತಿ ನಿವಾರಣೆಯಾಗಿ ಆತ್ಮಸ್ಥೈರ್ಯ, ಐಶ್ವರ್ಯ ಮತ್ತು ಸಕಲ ಶುಭಫಲಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆಯಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ