Pooja Rituals: ಹೋಮ-ಹವನ ಮಾಡುವಾಗ ಎದ್ದು ಹೊರಗೆ ಹೋಗಬಾರದು ಯಾಕೆ ಗೊತ್ತಾ?
ಹೋಮ, ಹವನ ಮತ್ತು ಪೂಜೆಗಳಂತಹ ಧಾರ್ಮಿಕ ವಿಧಿಗಳ ಸಮಯದಲ್ಲಿ ಪೂಜಾ ಸ್ಥಳವನ್ನು ಬಿಟ್ಟು ಹೊರಗೆ ಹೋಗಬಾರದು ಎಂದು ಹೇಳಲಾಗುತ್ತದೆ. ಈ ಬಗ್ಗೆ ಡಾ. ಬಸವರಾಜ್ ಗುರೂಜಿ ನೀಡಿರುವ ಮಾಹಿತಿ ಇಲ್ಲಿದೆ. ಸಂಕಲ್ಪದೊಂದಿಗೆ ಪ್ರಾರಂಭಿಸಿದ ಯಾವುದೇ ವ್ರತವನ್ನು ಶ್ರದ್ಧೆ, ಭಕ್ತಿ ಮತ್ತು ಶಿಸ್ತಿನಿಂದ ಪೂರ್ಣಗೊಳಿಸುವುದು ಅತ್ಯಗತ್ಯ. ಮಧ್ಯದಲ್ಲಿ ಸ್ಥಳ ತ್ಯಜಿಸಿದರೆ ಪೂಜೆಯ ಫಲ ಸಿಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಸಂಕಲ್ಪಪೂರ್ವಕವಾಗಿ ಮಾಡುವ ಪೂಜೆ, ವ್ರತ, ಯಜ್ಞ ಯಾಗಾದಿ, ಹೋಮಗಳ ಸಂದರ್ಭದಲ್ಲಿ, ಎಷ್ಟೇ ಕ್ಲಿಷ್ಟ ಅಥವಾ ಕಠಿಣ ಸಮಸ್ಯೆ ಎದುರಾದರೂ ಪೂಜಾ ಸ್ಥಳವನ್ನು ಬಿಟ್ಟು ಹೊರಗೆ ಬರಬಾರದು ಎಂಬುದು ನಿಯಮ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಅನೇಕ ಜನರು ಹೋಮ, ಯಜ್ಞಾದಿಗಳ ಸಮಯದಲ್ಲಿ ಫೋನ್ ಕರೆಗಳು, ವಿಐಪಿಗಳ ಆಗಮನ ಅಥವಾ ಇತರೆ ಕಾರಣಗಳಿಗಾಗಿ ಎದ್ದು ಹೋಗಿ ಮಾತನಾಡುತ್ತಾರೆ. ಇಂತಹ ಸಮಯದಲ್ಲಿ ಆ ಪೂಜೆಯು ಪರಿಪೂರ್ಣವಾಗುವುದಿಲ್ಲ. ಅಷ್ಟೇ ಅಲ್ಲ, ಮನೆಯಲ್ಲಿ ಗಣಪತಿ ಹೋಮ, ಮೃತ್ಯುಂಜಯ ಹೋಮ, ಸತ್ಯನಾರಾಯಣ ಹೋಮ, ಸುದರ್ಶನ ಹೋಮ, ನವಗ್ರಹ ಹೋಮ, ಆಯುಷ್ ಹೋಮಗಳಂತಹ ಯಾವುದೇ ಹೋಮ ಮಾಡುತ್ತಿರುವಾಗ, ಪುರೋಹಿತರು ಒಂದೆರಡು ನಿಮಿಷಗಳ ವಿರಾಮ ನೀಡಿದರೂ ಸಹ, ಹೋಮ ಮಾಡುವವರು ಹೊಸಲನ್ನು ದಾಟಿ ಹೊರಗೆ ಹೋಗಬಾರದು. ಇದರಿಂದ ಪೂಜೆಯ ಪಾವಿತ್ರತೆ ಮತ್ತು ಸಂಕಲ್ಪಕ್ಕೆ ಭಂಗ ಬರುತ್ತದೆ.
ಇದಕ್ಕೆ ಉದಾಹರಣೆಯಾಗಿ ರಾಮಾಯಣದಲ್ಲಿ ಬರುವ ಸೀತಾದೇವಿಯ ಪ್ರಸಂಗವನ್ನು ಸ್ಮರಿಸಬಹುದು. ವಾಲ್ಮೀಕಿ ಆಶ್ರಮದಲ್ಲಿ ಸೀತಾದೇವಿ ವ್ರತ ಮಾಡುತ್ತಿದ್ದಾಗ, ಮಧ್ಯದಲ್ಲಿ ಎದ್ದು ಸ್ವಲ್ಪ ಆಚೆ ಹೋದ ಕಾರಣದಿಂದ ಅನೇಕ ಸಂಕಟಗಳನ್ನು ಎದುರಿಸಬೇಕಾಯಿತು ಎಂದು ಹೇಳಲಾಗುತ್ತದೆ. ಹಾಗಾಗಿ, ಯಾವುದೇ ಪೂಜೆ, ವ್ರತ ಮಾಡುವಾಗ ಶ್ರದ್ಧೆ, ಭಕ್ತಿ, ನಂಬಿಕೆ, ಸಂಕಲ್ಪ, ವ್ರತದ ವಿಧಾನ ಮತ್ತು ಶಿಸ್ತು ಅತ್ಯಗತ್ಯ. ಇವುಗಳನ್ನು ಪಾಲಿಸಿದಾಗ ಮಾತ್ರ ವ್ರತವು ಪರಿಪೂರ್ಣವಾಗುತ್ತದೆ.
ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ
ಗೃಹ ಪ್ರವೇಶದಂತಹ ದೊಡ್ಡ ಸಮಾರಂಭಗಳಲ್ಲಿ ಅಥವಾ ಶ್ರೀಮಂತರು, ರಾಜಕೀಯ ವ್ಯಕ್ತಿಗಳು ಮಾಡುವ ಪೂಜೆಗಳಲ್ಲಿಯೂ ಸಹ ಕೆಲವರು ಮಧ್ಯದಲ್ಲಿ ಎದ್ದು ಓಡಾಡುತ್ತಾರೆ. ಇದರಿಂದ ಸಂಪೂರ್ಣ ಪೂಜೆಯು ವ್ಯರ್ಥವಾಗುತ್ತದೆ ಮತ್ತು ಅದರ ಫಲ ಲಭಿಸುವುದಿಲ್ಲ. ಒಂದು ವೇಳೆ ಪೂಜೆ ಮಾಡುವವರಿಗೆ ಅನಿವಾರ್ಯ ಕಾರಣಗಳಿಂದ ಎದ್ದು ಹೋಗಬೇಕಾದರೆ, ಆರಂಭದಿಂದಲೂ ಪೂಜೆಯಲ್ಲಿ ಪಾಲ್ಗೊಂಡಿದ್ದ ಬೇರೊಬ್ಬರನ್ನು ಪೂರ್ಣಗೊಳಿಸಲು ಬಿಡಬೇಕು. ಮಧ್ಯದಲ್ಲಿ ಇನ್ನೊಬ್ಬರನ್ನು ಕೂರಿಸಲು ಸಾಧ್ಯವಿಲ್ಲ.
ಇವೆಲ್ಲವೂ ಆಚಾರದ ಭಾಗಗಳು. “ಆಚಾರವೇ ಸ್ವರ್ಗ, ಅನಾಚಾರವೇ ನರಕ” ಎಂಬ ಮಾತಿನಂತೆ, ಪ್ರತಿಯೊಂದು ನಂಬಿಕೆಯ ಆಧಾರದ ಮೇಲೆ ಈ ಆಚಾರಗಳನ್ನು ಪಾಲಿಸಬೇಕು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:35 am, Thu, 16 April 26




