ಸಾಮಾನ್ಯ ಭಕ್ತರಿಗೆ ಬಿಗ್ ರಿಲೀಫ್: ತಿರುಪತಿಯಲ್ಲಿ ಸೆಪ್ಟೆಂಬರ್ 13 ರಂದು ವಿಐಪಿ ದರ್ಶನ ಸಂಪೂರ್ಣ ರದ್ದು!

ತಿರುಮಲದಲ್ಲಿ ಭಕ್ತರ ದಟ್ಟಣೆ ಹೆಚ್ಚಿದ್ದು, ಟಿಟಿಡಿ VIP ದರ್ಶನ ರದ್ದುಪಡಿಸಿದೆ. ಸಾಮಾನ್ಯ ಭಕ್ತರಿಗೆ ತ್ವರಿತ ದರ್ಶನ ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಭಕ್ತರ ದಟ್ಟಣೆಯ ನಡುವೆಯೇ ತಿರುಮಲ ಶ್ರೀವಾರಿಯ ಹುಂಡಿ ಕಾಣಿಕೆಯಲ್ಲಿ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ. ಸೆಪ್ಟೆಂಬರ್ 15 ರಿಂದ ಸಾಲಕಟ್ಲ ಬ್ರಹ್ಮೋತ್ಸವ ನಡೆಯಲಿದ್ದು, ಈ ಅವಧಿಯಲ್ಲಿ ವಿಶೇಷ ಸೇವೆಗಳು ರದ್ದಾಗಲಿದೆ. ಭಕ್ತರು ಸಹಕರಿಸುವಂತೆ ಟಿಟಿಡಿ ಮನವಿ ಮಾಡಿದೆ.

ಸಾಮಾನ್ಯ ಭಕ್ತರಿಗೆ ಬಿಗ್ ರಿಲೀಫ್: ತಿರುಪತಿಯಲ್ಲಿ ಸೆಪ್ಟೆಂಬರ್ 13 ರಂದು ವಿಐಪಿ ದರ್ಶನ ಸಂಪೂರ್ಣ ರದ್ದು!
ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ
Image Credit source: Getty Images

Updated on: Sep 11, 2026 | 9:36 AM

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಭಕ್ತರ ದಟ್ಟಣೆ ಮತ್ತೆ ಗಣನೀಯವಾಗಿ ಹೆಚ್ಚಾಗಿದೆ. ಸತತ ರಜೆಗಳು ಹಾಗೂ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ತಿರುಮಲಕ್ಕೆ ಆಗಮಿಸುತ್ತಿದ್ದು, ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಹಾಗೂ ಸರತಿ ಸಾಲುಗಳು ಭಕ್ತಾದಿಗಳಿಂದ ಕಿಕ್ಕಿರಿದು ತುಂಬಿವೆ. ಅನಿರೀಕ್ಷಿತ ಜನಸಂದಣಿಯನ್ನು ನಿರ್ವಹಿಸಲು ಮತ್ತು ಸಾಮಾನ್ಯ ಭಕ್ತರಿಗೆ ಶೀಘ್ರ ದರ್ಶನ ಸೌಲಭ್ಯ ಕಲ್ಪಿಸಲು ತಿರುಮಲ ತಿರುಪತಿ ದೇವಸ್ಥಾನಂ (TTD) ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಸೆಪ್ಟೆಂಬರ್ 13 ರಂದು ಸಂಪೂರ್ಣವಾಗಿ ವಿಐಪಿ ಬ್ರೇಕ್ ದರ್ಶನಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ಸೆಪ್ಟೆಂಬರ್ 12 ರಂದು ಯಾವುದೇ ವಿಐಪಿ ಶಿಫಾರಸು ಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ. ಈ ವಿಐಪಿ ವಿರಾಮದ ಸಮಯವನ್ನು ಸಾಮಾನ್ಯ ಭಕ್ತರ ದರ್ಶನಕ್ಕಾಗಿ ವಿನಿಯೋಗಿಸಲಾಗುತ್ತಿದ್ದು, ಪ್ರಸ್ತುತ ಸರತಿ ಸಾಲಿನಲ್ಲಿರುವ ಭಕ್ತರಿಗೆ ಶ್ರೀವಾರಿಯ ದರ್ಶನ ಪಡೆಯಲು ಸುಮಾರು 24 ಗಂಟೆಗಳ ಕಾಲಾವಕಾಶ ಬೇಕಾಗುತ್ತಿದೆ.

ಶ್ರೀವಾರಿ ಹುಂಡಿ ಆದಾಯದಲ್ಲಿ 6.93 ಕೋಟಿ ರೂ. ಹೊಸ ದಾಖಲೆ:

ಭಕ್ತರ ದಟ್ಟಣೆಯ ನಡುವೆಯೇ ತಿರುಮಲ ಶ್ರೀವಾರಿಯ ಹುಂಡಿ ಕಾಣಿಕೆಯಲ್ಲಿ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ. ಬುಧವಾರ ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೆ ಬಂದ ಕಾಣಿಕೆಗಳನ್ನು ಎಣಿಸಿದಾಗ ಬರೋಬ್ಬರಿ 6.93 ಕೋಟಿ ರೂಪಾಯಿ ಆದಾಯ ಬಂದಿದೆ. ಟಿಟಿಡಿ ಇತಿಹಾಸದಲ್ಲೇ ಹುಂಡಿ ಆದಾಯ 6 ಕೋಟಿ ರೂಪಾಯಿ ದಾಟಿರುವುದು ಇದು ಮೂರನೇ ಬಾರಿಯಾಗಿದ್ದು, ಕೆಲವು ಅನಾಮಧೇಯ ದಾನಿಗಳು ನೀಡಿದ ಭಾರಿ ಪ್ರಮಾಣದ ಕಾಣಿಕೆಯೇ ಈ ದಾಖಲೆಗೆ ಮುಖ್ಯ ಕಾರಣ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮನಿ ಪ್ಲಾಂಟ್‌ಗಿಂತಲೂ ಪವರ್‌ಫುಲ್ ಈ ಗಿಡ; ಮನೆಯಲ್ಲಿದ್ದರೆ ಕುಬೇರನ ಕೃಪೆಯಿಂದ ಅದೃಷ್ಟ ಖುಲಾಯಿಸುವುದು ಖಚಿತ!

ಸೆಪ್ಟೆಂಬರ್ 15 ರಿಂದ ಸಾಲಕಟ್ಲ ಬ್ರಹ್ಮೋತ್ಸವ ಸಂಭ್ರಮ:

ತಿರುಮಲದಲ್ಲಿ ಶ್ರೀವಾರಿ ಸಾಲಕಟ್ಲ ಬ್ರಹ್ಮೋತ್ಸವಗಳು ಸೆಪ್ಟೆಂಬರ್ 14 ರಿಂದ ಚಾಲನೆಗೊಂಡು, ಸೆಪ್ಟೆಂಬರ್ 15 ರಿಂದ 23 ರವರೆಗೆ ಅದ್ದೂರಿಯಾಗಿ ನಡೆಯಲಿವೆ. ಈ ಬ್ರಹ್ಮೋತ್ಸವದ ಒಂಬತ್ತು ದಿನಗಳ ಕಾಲ ಸಕಲ ವಿಶೇಷ ಸೇವೆಗಳು ಮತ್ತು ವಿಶೇಷ ಪ್ರವೇಶ ದರ್ಶನಗಳನ್ನು ಟಿಟಿಡಿ ರದ್ದುಗೊಳಿಸಿದೆ. ಇದೇ ಬ್ರಹ್ಮೋತ್ಸವದ ಶುಭ ಸಂದರ್ಭದಲ್ಲಿ ನವೀಕರಿಸಲಾದ ಆಧುನಿಕ ಎಸ್‌ವಿ ವಸ್ತುಸಂಗ್ರಹಾಲಯವನ್ನು (SV Museum) ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ತಿರುಮಲಕ್ಕೆ ಆಗಮಿಸುತ್ತಿರುವ ಅಪಾರ ಸಂಖ್ಯೆಯ ಭಕ್ತಾದಿಗಳು ಟಿಟಿಡಿಯ ಈ ಬದಲಾವಣೆಗಳು ಮತ್ತು ನಿಯಮಾವಳಿಗಳನ್ನು ಗಮನಿಸಿ ಸಂಪೂರ್ಣವಾಗಿ ಸಹಕರಿಸಬೇಕಾಗಿ ಆಡಳಿತ ಮಂಡಳಿ ಕೋರಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us