Navratri: ನವರಾತ್ರಿಯ ನಾಲ್ಕು ಮತ್ತು ಐದನೇಯ ದಿನದ ದೇವಿಯ ಸ್ವರೂಪ ಮತ್ತು ನೈವೇದ್ಯ ಭಕ್ಷ್ಯ ಯಾವುದು?
ನವರಾತ್ರಿಯ ಪರ್ವಕಾಲದಲ್ಲಿ ತಾಯಿ ದುರ್ಗೆಯನ್ನು ಅನನ್ಯವಾಗಿ ಪೂಜಿಸಿ ಅದ್ಭುತ ಫಲಗಳನ್ನು ಹೊಂದಿದ ಕಥೆಯನ್ನು ನಾವು ಕೇಳಿರುತ್ತೇವೆ. ಅಂತಹ ಶುಭವನ್ನು ನಾವು ಪಡೆಯಲು ಏನು ಮಾಡಬೇಕು ? ಎನ್ನುವುದಕ್ಕುತ್ತರ ಆಯಾಯ ದಿನದ ವಿಶೇಷ ತಿಳಿದು ಆ ಕ್ರಮದಲ್ಲೇ ಪೂಜಿಸಬೇಕು ಎಂದು.
ನವರಾತ್ರಿಯ ಪರ್ವಕಾಲದಲ್ಲಿ ತಾಯಿ ದುರ್ಗೆಯನ್ನು ಅನನ್ಯವಾಗಿ ಪೂಜಿಸಿ ಅದ್ಭುತ ಫಲಗಳನ್ನು ಹೊಂದಿದ ಕಥೆಯನ್ನು ನಾವು ಕೇಳಿರುತ್ತೇವೆ. ಅಂತಹ ಶುಭವನ್ನು ನಾವು ಪಡೆಯಲು ಏನು ಮಾಡಬೇಕು ? ಎನ್ನುವುದಕ್ಕುತ್ತರ ಆಯಾಯ ದಿನದ ವಿಶೇಷ ತಿಳಿದು ಆ ಕ್ರಮದಲ್ಲೇ ಪೂಜಿಸಬೇಕು ಎಂದು. ಈಗ ನಾವು ನಾಲ್ಕು ಮತ್ತು ಐದನೇಯ ದಿನದ ಮಹತ್ವವನ್ನು ತಿಳಿಯೋಣ.
ನಾಲ್ಕನೇ ದಿನ – ದುರ್ಗೆಯ “ಶೈಲಜಾ” ಎನ್ನುವ ರೂಪ ಅಥವಾ “ಕೂಷ್ಮಾಂಡಾ” ಎನ್ನುವ ರೂಪದಲ್ಲಿ ಪೂಜಿಸಬೇಕು. ಈ ಸ್ವರೂಪದ ತಾತ್ಪರ್ಯ ಮಹತ್ತರವಾದ ಶಕ್ತಿಯುಳ್ಳ ಭಗವತೀ ಎಂದು. ಈ ರೂಪವನ್ನು
ರಕ್ತವರ್ಣಾಂ ಚತುರ್ಬಾಹುಂ ರಕ್ತವಸ್ತ್ರಾದ್ಯಲಂಕೃತಾಂ |
ಪಾಶಾಮಂಕುಶಾಂ ಮಾತುಲಿಂಗಧರಾಂ ಮೂಷಿಕವಾಹಿನೀಂ ||
ಎಂಬ ಮಂತ್ರದಿಂದ ಧ್ಯಾನಿಸಿ. ಕೆಂಪು ಬಣ್ಣದ ವಸ್ತ್ರವನ್ನು ಇಟ್ಟು ಮತ್ತು ಉಟ್ಟು; ತಾಯಿಗೆ ಇಂದಿನ ದಿನ “ಮಧು ಪ್ರೀತಾ” ಎನ್ನುವರು. ಅಂದರೆ ನವರಾತ್ರಿಯ ನಾಲ್ಕನೇಯ ದಿನದಂದು ಶ್ರೀದೇವಿಗೆ ಮಧು ( ಜೇನುತುಪ್ಪ) ವನ್ನು ನೈವೇದ್ಯ ಮಾಡಬೇಕು. ಈ ದಿನ ಅವಳಿಗೆ ಅದು ಅತ್ಯಂತ ಪ್ರಿಯವಾಗಿರುತ್ತದೆ. ಕೂಷ್ಮಾಂಡದಂತೆ ಇರುವ ನಮ್ಮ ಪಾಪದ ಸಂಗ್ರಹವನ್ನು ನಾಶ ಮಾಡುವ ಶಕ್ತಿಯುಳ್ಳ ಆ ತಾಯಿಯನ್ನು ಇಂದು ಪೂಜಿಸಿವುದರಿಂದ ನಮ್ಮ ಪಾಪವೆಲ್ಲಾ ಕರಗುವುದು.
ಐದನೇಯ ದಿನ – – ನವರಾತ್ರಿಯ ಈ ದಿನ ಅತ್ಯಂತ ಪುಣ್ಯಕಾಲವಾಗಿದೆ. ಈ ದಿನವನ್ನು ಲಲಿತಾಪಂಚಮೀ ಎಂದು ಕರೆಯುವರು. ಈ ಸಲ 30/9/22 ರಂದು ಲಲಿತಾ ಪಂಚಮೀ ಇದೆ. ಇಂದು “ಧೂಮ್ರಹಾ” ಅಥವಾ “ಸ್ಕಂದಮಾತಾ” ಎಂಬ ಹೆಸರಿನಿಂದ ಪೂಜಿಸುವರು. ಧೂಮ್ರಹಾ ಎಂದರೆ ಧೂಮ್ರಾಕ್ಷ ಎಂಬ ರಾಕ್ಷಸನ್ನು ಹನನ ಮಾಡಿದವಳು ಎಂದು ಅರ್ಥ. ಸ್ಕಂದ ಮಾತಾ ಎಂದರೆ ಸುಬ್ರಹ್ಮಣ್ಯನ ತಾಯಿ ಎಂದು. ಈ ಎರಡೂ ರೂಪವೂ ಒಂದೇ ಆಗಿದೆ.
ಈ ದಿನದಂದು ತಾಯಿಗೆ “ದಧ್ಯನ್ನಾಸಕ್ತ ಹೃದಯಾ” ಎಂದು ಕರೆಯುವರು. ಯಾಕೆಂದರೆ ಲಲಿತಾ ಪಂಚಮಿಯಂದು ದಧ್ಯನ್ನ (ಮೊಸರನ್ನವನ್ನು) ವನ್ನು ಮಾಡಿ ಅದನ್ನು ತಾಯಿ ಲಲಿತೆಗೆ ನೈವೇದ್ಯ ಮಾಡಿ ಯಾರು ಪೂಜಿಸುತ್ತಾರೋ ಅವರಿಗೆ ಅವರ ಅಭೀಷ್ಟಸಿದ್ಧಿಸುವುದು ಮತ್ತು ಆ ದಧ್ಯವನ್ನು ಪ್ರಸಾದವಾಗಿ ಮಕ್ಕಳಿಗೆ ನೀಡಿದರೆ ಒಳ್ಳೆಯ ಬುದ್ಧಿಶಕ್ತಿಯೊಂದಿಗೆ ಸದ್ವಿದ್ಯೆಯು ಪ್ರಾಪ್ತವಾಗುವುದು. ಈ ದಿನ ಸಾಯಂಕಾಲ ಸುಮಾರು ಮುಸ್ಸಂಜೆ ವೇಳೆಯಲ್ಲಿ ತುಪ್ಪ ದೀಪವನ್ನು ಬೆಳಗಿಸಿ ಲಲಿತಾ ಸಹಸ್ರನಾಮ ಪಠಿಸಿ ಸಮಸ್ತ ಅಮಂಗಲ ದೂರವಾಗುವುದು. ಹಾಗೆಯೇ –
ಚತುರ್ಭುಜಾಂ ಸುವರ್ಣಾಭಾಂ ಶಂಖಚಕ್ರಗದಾಂಬುಜಾಂ |
ಪಂಚಮ್ಯಾಂ ಪೂಜಯೇತ್ ದೇವೀಂ ಸದಾ ಮಕರವಾಹಿನೀಂ ||
ಎಂಬ ಶ್ಲೋಕವನ್ನು ಹೇಳುತ್ತಾ ಧ್ಯಾನಿಸಿ ಪುಷ್ಪಾರ್ಚನೆ ಮಾಡಿರಿ. ಮತ್ತು ದಧ್ಯನ್ನವನ್ನು ನೈವೇದ್ಯ ಮಾಡಿ ಪೂಜಿಸಿ. ಸತ್ಫಲವು ಪ್ರಾಪ್ತವಾಗುವುದು.
ಡಾ.ಕೇಶವಕಿರಣ ಬಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು, kkmanasvi@gamail.com