ವಾಲಿ ಸುಗ್ರೀವ ಮತ್ತು ಕರ್ಣ ಅರ್ಜುನ ಏನಿದರ ಮರ್ಮ?
ರಾಮನಿಗೆ ಸುಗ್ರೀವ ಮಿತ್ರನಾಗಿ ಸಹಕರಿಸಿದ. ಸುಗ್ರೀವನ ಅಣ್ಣ ವಾಲಿ. ಅವರಿಬ್ಬರೂ ಅನ್ಯೋನ್ಯವಾದ ಅಣ್ಣ ತಮ್ಮಂದಿರಾಗಿದ್ದರೂ ಒಂದು ತಪ್ಪು ಚಿಂತನೆ ಎಂಬುದು ಅವರನ್ನು ಬದ್ಧ ವೈರಿಗಳನ್ನಾಗಿ ಮಾಡಿತು. ರಾಮನ ಮಿತ್ರನಾದ ಸುಗ್ರೀವ ಶತ್ರು ರಾಮನಿಗೂ ಶತ್ರುವಾದ. ಅವನು ರಾಮನಿಂದ ಹತನಾದ. ಈ ವಾಲಿ ಸುಗ್ರೀವರು ಯಾರು ಎಂಬುದನ್ನು ರಾಮಾಯಣ ಹೀಗೆ ಹೇಳುತ್ತದೆ.
ರಾಮಾಯಣ ಕಾಲದ ವಾಲಿ ಸುಗ್ರೀವರು ಮಹಾಭಾರತ ಕಾಲದಲ್ಲಿ ಇದ್ದರೇ? ಇದ್ದರೆ ಅವರು ಯಾವ ರೂಪದಲ್ಲಿ ಯಾರ ವರಪ್ರಸಾದವಾಗಿದ್ದರು? ಭಗವಂತ ಯಾವ ರೀತಿಯಾಗಿ ಭಾವನೆಗಳಿಗೆ ಸ್ಪಂದಿಸುವನು ನೋಡಿ. ಯಾವುದೇ ಕಾಲದಲ್ಲಿರಲಿ ಭಗವಂತ ಅವತಾರ ಮಾಡುವುದು ನಿಶ್ಚಯವಾದ ತಕ್ಷಣ ಬ್ರಹ್ಮದೇವನು ಎಲ್ಲಾ ದೇವತೆಗಳಿಗೆ ಒಂದೊಂದು ರೂಪದಲ್ಲಿ ಭೂಮಿಯಲ್ಲಿ ಜನಿಸಲು ಸ್ವರೂಪ ವ್ಯವಸ್ಥೆಯನ್ನು ಮಾಡುತ್ತಾನೆ ಎಂಬುದು ರಾಮಾಯಣವೇ ಮೊದಲಾದ ಇತಿಹಾಸ ಕಾವ್ಯಗಳನ್ನು ಓದಿದಾಗ ತಿಳಿಯುತ್ತದೆ. ಅದರಲ್ಲೂ ಕೆಲವು ಸಲ ವಿಶೇಷವಾದ ಸನ್ನಿವೇಶಗಳನ್ನು ಸಾಕ್ಷಾತ್ ಭಗವಂತ ನಿರ್ಮಿಸಿಬಿಡುತ್ತಾನೆ. ರಾಮಾವತಾರದಲ್ಲಿ ಆದಿಶೇಷನು ರಾಮನ ತಮ್ಮ ಲಕ್ಷ್ಮಣನ ರೂಪದಲ್ಲಿ ಅವತಾರವೆತ್ತಿದ. ಅದೇ ಶೇಷನು ದ್ವಾಪರದಲ್ಲಿ ಬಲರಾಮನಾಗಿ ಬಂದ. ಅಂತಹ ಸನ್ನಿವೇಶಗಳು ಒಂದು ವಿಶೇಷ ಸಂದೇಶವನ್ನು ನೀಡುತ್ತದೆ. ಅದರಲ್ಲಿ ಇದೊಂದು ವಾಲಿ ಸುಗ್ರೀವರ ಸನ್ನಿವೇಶ.
ರಾಮನಿಗೆ ಸುಗ್ರೀವ ಮಿತ್ರನಾಗಿ ಸಹಕರಿಸಿದ. ಸುಗ್ರೀವನ ಅಣ್ಣ ವಾಲಿ. ಅವರಿಬ್ಬರೂ ಅನ್ಯೋನ್ಯವಾದ ಅಣ್ಣ ತಮ್ಮಂದಿರಾಗಿದ್ದರೂ ಒಂದು ತಪ್ಪು ಚಿಂತನೆ ಎಂಬುದು ಅವರನ್ನು ಬದ್ಧ ವೈರಿಗಳನ್ನಾಗಿ ಮಾಡಿತು. ರಾಮನ ಮಿತ್ರನಾದ ಸುಗ್ರೀವ ಶತ್ರು ರಾಮನಿಗೂ ಶತ್ರುವಾದ. ಅವನು ರಾಮನಿಂದ ಹತನಾದ. ಈ ವಾಲಿ ಸುಗ್ರೀವರು ಯಾರು ಎಂಬುದನ್ನು ರಾಮಾಯಣ ಹೀಗೆ ಹೇಳುತ್ತದೆ.
ಸೂರ್ಯ ಪುತ್ರಂ ಚ ಸುಗ್ರೀವಂ ಶಕ್ರಪುತ್ರಂ ಚ ವಾಲಿನಮ್|
ಭ್ರಾತರಾವುಪತಸ್ಥುಸ್ತೇ ಸರ್ವೇ ಚ ಹರಿ ಯೂಥಪಾಃ ||
ಸುಗ್ರೀವನು ಸೂರ್ಯ ಪುತ್ರನು ಮತ್ತು ವಾಲಿಯು ಇಂದ್ರ ಪುತ್ರನು (ಅರ್ಥಾತ್ ಅವರ ವರ ಪ್ರಸಾದದಿಂದ ಜನಿಸಿದವರು) ಇವರಿಬ್ಬರೂ ಅಣ್ಣ ತಮ್ಮಂದಿರು ಹರಿಯ (ರಾಮನ) ಸಹಾಯಕ್ಕಾಗಿ ಸೂರ್ಯ ಇಂದ್ರರ ಅನುಗ್ರಹದಿಂದ ಜನಿಸಿದರು. ಎಂದು ಶ್ಲೋಕದ ಅರ್ಥ.
ರಾಮಾಯಣದಲ್ಲಿ ಸುಗ್ರೀವ ರಾಮನ ಮಿತ್ರನಾಗಿ ಅವನ ಆಜ್ಞೆಯಂತೆ ಎಲ್ಲವನ್ನೂ ಮಾಡಿದ. ರಾಮನು ಸುಗ್ರೀವನ ಸಾತ್ವಿಕ ಚಿಂತನೆಗೆ ಬೆಲೆಕೊಟ್ಟು ಅವನ ಸಖ್ಯ ಮಾಡಿದ. ಅದೇ ವಾಲಿಯು ಬಲಶಾಲಿಯಾಗಿದ್ದರೂ ತನ್ನ ಕೆಲವು ರಜೋಭೂಯಿಷ್ಠವಾದ ನಿರ್ಧಾರದಿಂದ ಅಪರೋಕ್ಷವಾಗಿ ರಾಮನ ಬಾಣದಿಂದ ಸುಗ್ರೀವನ ಕುರಿತಾಗಿ ಹತನಾದ.
ಅದೇ ಮಹಾಭಾರತದಲ್ಲಿ ಸೂರ್ಯನ ಮಗನಾಗಿ ಜನಿಸಿದ ಕರ್ಣ ಇಂದ್ರನ ಮಗನಾಗಿ ಜನಿಸಿದ ಅರ್ಜುನ (ಇಲ್ಲೂ ವರಪ್ರಸಾದವೇ ಕಾರಣ) . ಆದರೆ ಇಲ್ಲಿ ಇಂದ್ರ ಪುತ್ರ ಅರ್ಜುನ ಭಗವಾನ್ ಶ್ರೀಕೃಷ್ಣನ ಮಿತ್ರನಾದ ಸೂರ್ಯ ಪುತ್ರನಾದ ಕರ್ಣ ತನ್ನ ಕೆಲವು ರಜೋಭೂಯಿಷ್ಠ ನಿರ್ಧಾರಗಳಿಂದ ದುರ್ಯೋಧನನ ಸ್ವಾರ್ಥಕ್ಕೆ ತನಗೆ ಅರಿಯದಂತೆ ವಶನಾಗಿಬಿಟ್ಟ. ರಾಮಾಯಣದ ವಾಲಿ ಸುಗ್ರೀವರಂತೆ ಇಲ್ಲೂ ಕರ್ಣ ಅರ್ಜುನರು ಅಣ್ಣತಮ್ಮಂದಿರೇ ಆಗಿದ್ದಾರೆ ಮತ್ತು ಎರಡೂ ಕಡೆ ಇವರುಗಳು ಸೂರ್ಯ ಇಂದ್ರರ ವರಪ್ರಸಾದಿತ ಪುತ್ರರೇ ಆಗಿದ್ದಾರೆ. ಅಲ್ಲದೇ ವಾಲಿ ಸುಗ್ರೀವನ ಕಾರಣದಿಂದ ರಾಮನಿಂದ ಹತನಾದ ಕರ್ಣ ಅರ್ಜುನನಿಗಾಗಿ ಭಗವಂತನ ಪ್ರೇರೇಪಣೆಯಿಂದ ಮರಣವನ್ನಪ್ಪಿದ.
ಇದನ್ನೂ ಓದಿ:Spiritual: ಕಾರ್ತಿಕದಲ್ಲಿ ಆಕಾಶದೀಪ, ಇದು ಶಾಸ್ತ್ರೀಯವೇ? ಇದರ ಮಹತ್ವವೇನು?
ಈಗ ಎರಡೂ ಸಂದರ್ಭಗಳನ್ನು ಗಮನಿಸಿ ಒಂದೆಡೆ ಸೂರ್ಯಪುತ್ರ ಭಗವಂತನ ಮಿತ್ರನಾಗಿ ಧರ್ಮೋದ್ಧಾರಕ್ಕೆ ಸಹಕರಿಸಿದ. ಇನ್ನೊಂದೆಡೆಗೆ ಇಂದ್ರ ಪುತ್ರ ಭಗವಂತನ ಮಿತ್ರನಾಗಿ ಧರ್ಮ ಸಂರಕ್ಷಿಸಿದ. ಭಗವಂತನ ಪ್ರತೀ ವ್ಯಕ್ತಿಯ ಪರಿಶುದ್ಧವಾದ ಭಾವಕ್ಕೆ ಸ್ಪಂದಿಸಿಯೇ ಸ್ಪಂದಿಸುತ್ತಾನೆ. ವಾಲಿಯು ತನ್ನ ಕೊನೆಯ ಕಾಲದಲ್ಲಿ ಶ್ರೀರಾಮನಿಗೆ ಹೇಳುತ್ತಾನೆ ನೀನು ಬಯಸಿದ್ದರೆ ನಾನೇ ತನ್ನ ಬಾಲದಲ್ಲಿರುವ ಸಹಸ್ರ ನೇತ್ರಗಳಿಂದ ಸೀತಾಮಾತೆಯನ್ನು ಹುಡುಕಿ ತಿಳಿಸುತ್ತಿದ್ದೆ ಆದರೆ ನನ್ನ ಮೇಲೆ ಬಾಣ ಹೂಡಿ ನನ್ನ ಪಾಲಿನ ಸೇವೆಯನ್ನು ಇಲ್ಲವಾಗಿಸಿದೆಯಾ ಪ್ರಭು ಎಂದು ತನ್ನ ಪ್ರಾಣತ್ಯಾಗ ಮಾಡುತ್ತಾನೆ. ಅದರ ನಿಮಿತ್ತದಿಂದಲೇ ಎಂಬಂತೆ ದ್ವಾಪರದಲ್ಲಿ ಅರ್ಜುನನಾಗಿ ಸೇವೆಯನ್ನಿತ್ತ ವಾಲಿ. ಒಂದು ಸಣ್ಣ ಅಧರ್ಮಕ್ಕೆ ಕಾರಣನಾದ ಸುಗ್ರೀವ ಕರ್ಣನಾಗಿ ಅಧರ್ಮದ ಬಣದಲ್ಲಿ ಧರ್ಮಿಷ್ಠನಾಗಿದ್ದು ಅಧರ್ಮದಿಂದಲೇ ಮರಣವನ್ನು ಹೊಂದುತ್ತಾನೆ.
ಆತ್ಮೀಯರೇ ಜಗತ್ತಿನ ನಿಯಮವೇ ಹಾಗೆ ನಾವು ಸಾತ್ವಿಕವಾಗಿ ಯೋಚಿಸಿದರೆ ಅದರ ಫಲ ಸಾತ್ವಿಕವಾಗಿಯೇ ಇರುವುದು. ಕರ್ಮಫಲವೆಂಬುದು ಅನುಭವಿಸಲೇಬೇಕು. ಹಾಗೆಯೇ ಶುದ್ಧ ಭಾವಕ್ಕೆ ಅತ್ಯಂತ ಶ್ರೇಷ್ಠ ಫಲವೂ ಇದೆ ಅದನ್ನೂ ಭಗವಂತ ಕರುಣಿಸಿಯೇ ಕರುಣಿಸುತ್ತಾನೆ. ಯಾವುದನ್ನೂ ಭಗವಂತ ಮತ್ತು ಪ್ರಕೃತಿ ಹಾಗೆಯೇ ಇಟ್ಟುಕೊಳ್ಳುವುದಿಲ್ಲ. ಕರ್ಮಕ್ಕೆ ತಕ್ಕ ಫಲ ನಿಶ್ಚಯ.
ಡಾ.ಗೌರಿ ಕೇಶವಕಿರಣ ಬಿ
ಧಾರ್ಮಿಕ ಚಿಂತಕರು