
2026ರ ಏಷ್ಯನ್ ಗೇಮ್ಸ್ನಲ್ಲಿ ಇಡೀ ಕ್ರೀಡಾಲೋಕವೇ ಹುಬ್ಬೇರಿಸುವಂತಹ ಐತಿಹಾಸಿಕ ದಾಖಲೆಯೊಂದು ಸೃಷ್ಟಿಯಾಗಿದೆ. ಜಪಾನ್‌ನ 11 ವರ್ಷದ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಯುಕಿ ಕುರಿಹರಾ, ಇ-ಸ್ಪೋರ್ಟ್ಸ್‌ನ ಜನಪ್ರಿಯ ಪಝಲ್ ಗೇಮ್ ‘ಪುಯೋ ಪುಯೋ ಚಾಂಪಿಯನ್ಸ್’ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಜಗತ್ತನ್ನೇ ಬೆರಗುಗೊಳಿಸಿದ್ದಾರೆ.
ಈ ಅದ್ಭುತ ಗೆಲುವಿನ ಮೂಲಕ ಯುಕಿ ಕುರಿಹರಾ, 1951 ರಲ್ಲಿ ಆರಂಭವಾದ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಚಿನ್ನದ ಪದಕ ವಿಜೇತ ಎಂಬ ಸಾರ್ವಕಾಲಿಕ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.
‘ಪುಯೋ ಪುಯೋ ಚಾಂಪಿಯನ್ಸ್’ ಸ್ಪರ್ಧೆಯಲ್ಲಿ ಪುರುಷರ ವೈಯಕ್ತಿಕ ವಿಭಾಗದ ಫೈನಲ್ ಪಂದ್ಯದಲ್ಲಿ, “ಯುಕಿ” ಎಂಬ ಹೆಸರಿನಿಂದ ಸ್ಪರ್ಧಿಸಿದ ಈ ಬಾಲ ಪ್ರತಿಭೆ ಎದುರಿಸಿದ್ದು ಸೌತ್ ಕೊರಿಯಾದ 24 ವರ್ಷದ ಅನುಭವಿ ಆಟಗಾರ ಕಾಂಗ್ ಡಾಂಗ್-ಶಿನ್ ಅವರನ್ನು. ವಯಸ್ಸು ಮತ್ತು ಅನುಭವದಲ್ಲಿ ತನಗಿಂತ ದುಪ್ಪಟ್ಟಿದ್ದ ಆಟಗಾರನನ್ನು ಯುಕಿ ಕೇವಲ 10-2 ರ ಅಂತರದಿಂದ ಹೀನಾಯವಾಗಿ ಸೋಲಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾನೆ.
ಇಡೀ ಟೂರ್ನಮೆಂಟ್‌ನಲ್ಲಿ ಯುಕಿ ತೋರಿದ ತಾಂತ್ರಿಕ ನಿಖರತೆ ಎಂಥವರನ್ನೂ ಬೆರಗುಗೊಳಿಸುವಂತಿತ್ತು. ಪಂದ್ಯದ ವೇಳೆ ಎದುರಾಳಿಗಳಿಗೆ ಯೋಚಿಸಲು ಸಮಯವೇ ನೀಡದಂತೆ ಅತ್ಯಂತ ವೇಗವಾಗಿ ಬ್ಲಾಕ್‌ಗಳನ್ನು ಜೋಡಿಸಿ, ಬೃಹತ್ ‘ಚೈನ್ ರಿಯಾಕ್ಷನ್’ಗಳನ್ನು ಸೃಷ್ಟಿಸುತ್ತಿದ್ದನು. ಕ್ವಾರ್ಟರ್‌ಫೈನಲ್‌ನಲ್ಲಿ ಸಿಂಗಾಪುರದ ಆಟಗಾರನನ್ನು 5-0 ಇಂದ ಹಾಗೂ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ 28 ವರ್ಷದ ಆಟಗಾರನನ್ನು 10-1 ರಂಗುಗಳಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದನು.
ಯುಕಿ ಕೇವಲ 6 ವರ್ಷದವನಿದ್ದಾಗ ಕ್ರಿಸ್‌ಮಸ್ ಉಡುಗೊರೆಯಾಗಿ ಸಿಕ್ಕ ‘ಪುಯೋ ಪುಯೋ ಟೆಟ್ರಿಸ್ 2’ ಗೇಮ್ ಆಡಲು ಶುರುಮಾಡಿದ್ದನು. ಗೇಮಿಂಗ್‌ನಲ್ಲಿ ಆತನ ಚಾಣಾಕ್ಷತನವನ್ನು ಕಂಡು, ಈ ವರ್ಷದ ಏಪ್ರಿಲ್ (2026) ತಿಂಗಳಷ್ಟೇ ಆತನಿಗೆ ಅಧಿಕೃತವಾಗಿ ವೃತ್ತಿಪರ ಗೇಮರ್ ಪರವಾನಗಿ ನೀಡಲಾಗಿತ್ತು.
ಈ ಪರವಾನಗಿಯೊಂದಿಗೆ ಈ ಬಾರಿಯ ಏಷ್ಯನ್ ಗೇಮ್ಸ್ಗೆ ಅರ್ಹತೆ ಪಡೆ ಯುಕಿ ಇದೀಗ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಬಂಗಾರದ ಪದಕ ಗೆದ್ದ ಅತ್ಯಂತ ಕಿರಿಯ ಸ್ಪರ್ಧಾಳು ಎಂಬ ದಾಖಲೆಯನ್ನು ಬರೆದಿದ್ದಾರೆ.
‘ಪುಯೋ ಪುಯೋ ಚಾಂಪಿಯನ್ಸ್’ ಎಂಬುದು ವಿಶ್ವದ ಅತ್ಯಂತ ಜನಪ್ರಿಯ ಮತ್ತು ಅತ್ಯಂತ ಹಳೆಯ ಆಕ್ಷನ್-ಪಝಲ್ ವಿಡಿಯೋ ಗೇಮ್.ಈ ವಿಡಿಯೋ ಗೇಮ್ ಪರದೆಯ ಮೇಲ್ಭಾಗದಿಂದ ಜೋಡಿಯಾಗಿ ಬೀಳುವ ಬಣ್ಣ ಬಣ್ಣದ ಜೆಲ್ಲಿಯಂತಹ ಬ್ಲಾಕ್‌ಗಳನ್ನು (ಪುಯೋಗಳನ್ನು) ಕೆಳಗೆ ಬೀಳುವ ಮುನ್ನವೇ ತಿರುಗಿಸಿ, ಒಂದೇ ಬಣ್ಣದ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪುಯೋಗಳು ಪರಸ್ಪರ ಸ್ಪರ್ಶಿಸುವಂತೆ ಜೋಡಿಸಿ ಸ್ಫೋಟಿಸಬೇಕು.
ಹೀಗೆ ಸ್ಫೋಟಿಸುವಾಗ ಅವುಗಳ ಮೇಲಿದ್ದ ಬ್ಲಾಕ್‌ಗಳು ಕೆಳಗೆ ಬಿದ್ದು ಮತ್ತೊಂದು ಸರಣಿ ಸ್ಫೋಟವನ್ನು (ಚೈನ್ ರಿಯಾಕ್ಷನ್) ಸೃಷ್ಟಿಸುವಂತೆ ಮುಂಚಿತವಾಗಿಯೇ ಯೋಜಿಸಿ ಜೋಡಿಸಿದರೆ ಎದುರಾಳಿಯ ಪರದೆಯ ಮೇಲೆ ನಿರುಪಯುಕ್ತ ಬ್ಲಾಕ್‌ಗಳು ಹೋಗಿ ಬೀಳುತ್ತವೆ ಮತ್ತು ಎದುರಾಳಿಯ ಪರದೆಯು ಮೇಲ್ಭಾಗದವರೆಗೂ ಬ್ಲಾಕ್‌ಗಳಿಂದ ತುಂಬಿ ಅವರು ಔಟ್ ಆಗುವಂತೆ ಮಾಡುವುದೇ ಈ ಆಟದ ಮುಖ್ಯ ತಂತ್ರವಾಗಿದೆ.
ಇದನ್ನೂ ಓದಿ: ಟೀಮ್ ಇಂಡಿಯಾಗೆ ಇಂದು ಏಕದಿನ ಪಂದ್ಯ, ನಾಳೆ ಟಿ20 ಪಂದ್ಯ
ಇಲ್ಲಿ ಎದುರಾಳಿಗಿಂತ ವೇಗವಾಗಿ ಬೃಹತ್ ಚೈನ್ ರಿಯಾಕ್ಷನ್ (ಸರಣಿ ಸ್ಫೋಟ) ಸೃಷ್ಟಿಸಿ, ಅವರ ಪರದೆಯ ಮೇಲೆ ನಿರುಪಯುಕ್ತ ಬ್ಲಾಕ್‌ಗಳನ್ನು ಸುರಿದು, ಅವರ ಇಡೀ ಪರದೆಯು ಮೇಲ್ಭಾಗದವರೆಗೂ ತುಂಬಿ ಔಟ್ ಆಗುವಂತೆ ಮಾಡುವ ಮೂಲಕ ಪಂದ್ಯವನ್ನು ಗೆಲ್ಲಲಾಗುತ್ತದೆ.