5 ಪಂದ್ಯಗಳಲ್ಲಿ ಬರೋಬ್ಬರಿ 58 ಗೋಲುಗಳು: ಸೆಮಿಫೈನಲ್ಗೇರಿದ ಭಾರತ
Asian Games: ಈ ಬಾರಿ ಏಷ್ಯನ್ ಗೇಮ್ಸ್ನಲ್ಲಿ ಭಾರತ ಹಾಕಿ ತಂಡ ಇದುವರೆಗೆ 5 ಪಂದ್ಯಗಳನ್ನಾಡಿದೆ. ಈ ಐದು ಪಂದ್ಯಗಳಲ್ಲಿ ಬಾರಿಸಿದ ಒಟ್ಟು ಗೋಲುಗಳ ಸಂಖ್ಯೆ ಬರೋಬ್ಬರಿ 58. ಇದೇ ವೇಳೆ ಹೊಡೆಸಿಕೊಂಡ ಗೋಲುಗಳ ಸಂಖ್ಯೆ ಕೇವಲ 5 ಮಾತ್ರ. ಅಂದರೆ ಮೊದಲ ಐದು ಪಂದ್ಯಗಳಲ್ಲಿ ಭಾರತ ತಂಡವು ಪಾರುಪತ್ಯ ಮೆರೆದಿದ್ದು, ಸೆಮಿಫೈನಲ್ನಲ್ಲೂ ಗೆದ್ದು ಫೈನಲ್ಗೇರುವ ವಿಶ್ವಾಸದಲ್ಲಿದೆ.

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನ ಪುರುಷರ ಹಾಕಿ ಪಂದ್ಯಾಟದಲ್ಲಿ ಬಾಂಗ್ಲಾದೇಶ್ ತಂಡವನ್ನು ಮಣಿಸಿ ಭಾರತ ತಂಡವು ಸೆಮಿಫೈನಲ್ಗೇರಿದೆ. ಆರಂಭದಿಂದಲೇ ಏಕಪಕ್ಷೀಯವಾಗಿ ಸಾಗಿದ್ದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮುನ್ಪಡೆ ಆಟಗಾರರು ಅದ್ಭುತ ಆಟ ಪ್ರದರ್ಶಿಸಿದರು.
ಆರಂಭದಲ್ಲೇ ಕಂಡು ಸಾಂಘಿಕ ಪ್ರದರ್ಶನದ ಫಲವಾಗಿ ನಾಯಕ ಹರ್ಮನ್ಪ್ರೀತ್ ಸಿಂಗ್ 2ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರೆ, 4ನೇ ನಿಮಿಷದಲ್ಲಿ ಮತ್ತೊಂದು ಗೋಲುಗಳಿಸಿದರು. ಆರಂಭದಲ್ಲೇ ಭಾರತ ತಂಡ ಬಾರಿಸಿದ ಗೋಲುಗಳಿಂದ ಬಾಂಗ್ಲಾದೇಶ್ ಆಟಗಾರರು ಒತ್ತಡಕ್ಕೊಳಗಾದರು.
ಇದರ ಸಂಪೂರ್ಣ ಲಾಭ ಪಡೆದ ಮನ್ದೀಪ್ ಸಿಂಗ್ 18ನೇ ನಿಮಿಷದಲ್ಲಿ 3ನೇ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ 23ನೇ ನಿಮಿಷದಲ್ಲಿ ಸಿಕ್ಕ ಅತ್ಯುತ್ತಮ ಪಾಸ್ ಅನ್ನು ಗೋಲ್ ಆಗಿ ಪರಿವರ್ತಿಸುವಲ್ಲಿ ಲಲಿತ್ ಕುಮಾರ್ ಉಪಾಧ್ಯಾಯ ಯಶಸ್ವಿಯಾದರು.
4-0 ಅಂತರದಿಂದ ಬೀಗಿದ್ದ ಟೀಮ್ ಇಂಡಿಯಾ ಪರ ಮನದೀಪ್ ಸಿಂಗ್ 24ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದರು. ಇತ್ತ ಗೆಲುವು ಖಚಿತವಾಗುತ್ತಿದ್ದಂತೆ ಭಾರತೀಯ ಆಟಗಾರರು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು.
ಪರಿಣಾಮ 28ನೇ ನಿಮಿಷದಲ್ಲಿ ಅಮಿತ್ ರೋಹಿದಾಸ್ ಸ್ಟಿಕ್ನಿಂದ ಗೋಲು ಬಂದರೆ, 32ನೇ ನಿಮಿಷದಲ್ಲಿ ಹರ್ಮನ್ಪ್ರೀತ್ ಸಿಂಗ್ ಚೆಂಡನ್ನು ಗೋಲು ಬಲೆಯೊಳಗೆ ತಲುಪಿಸುವಲ್ಲಿ ಯಶಸ್ವಿಯಾದರು.
ಇನ್ನು 41ನೇ ನಿಮಿಷದಲ್ಲಿ ಅಭಿಷೇಕ್ ಗೋಲು ಬಾರಿಸಿದರೆ, 46ನೇ ನಿಮಿಷದಲ್ಲಿ ಮನ್ದೀಪ್ ಸಿಂಗ್ ಮೂರನೇ ಗೋಲುಗಳಿಸಿದರು. ಇದರ ಬೆನ್ನಲ್ಲೇ 47ನೇ ನಿಮಿಷದಲ್ಲಿ ನೀಲಕಂಠ ಅವರ ಅತ್ಯಾಕರ್ಷಕ ಶಾಟ್ ಗೋಲಾಗಿ ಪರಿವರ್ತನೆಯಾಯಿತು. ಇದರೊಂದಿಗೆ ಭಾರತದ ಸ್ಕೋರ್ 10-0 ಅಂತರಕ್ಕೇರಿತು.
ಇದರ ಬೆನ್ನಲ್ಲೇ 56ನೇ ನಿಮಿಷದಲ್ಲಿ ಸುಮಿತ್ 11ನೇ ಯಶಸ್ಸು ತಂದುಕೊಟ್ಟರೆ, ಮರು ನಿಷಯದಲ್ಲೇ ಅಭಿಷೇಕ್ ಮತ್ತೊಂದು ಗೋಲುಗಳಿಸಿದರು. ಈ ಮೂಲಕ ಭಾರತ ತಂಡವು 12-0 ಅಂತರದಿಂದ ಬಾಂಗ್ಲಾದೇಶ್ ತಂಡವನ್ನು ಬಗ್ಗು ಬಡಿದು ಸೆಮಿಫೈನಲ್ಗೇರಿದೆ.
ಬರೋಬ್ಬರಿ 58 ಗೋಲುಗಳು:
ಈ ಬಾರಿ ಏಷ್ಯನ್ ಗೇಮ್ಸ್ನಲ್ಲಿ ಭಾರತ ಹಾಕಿ ತಂಡ ಇದುವರೆಗೆ 5 ಪಂದ್ಯಗಳನ್ನಾಡಿದೆ. ಈ ಐದು ಪಂದ್ಯಗಳಲ್ಲಿ ಬಾರಿಸಿದ ಒಟ್ಟು ಗೋಲುಗಳ ಸಂಖ್ಯೆ ಬರೋಬ್ಬರಿ 58. ಇದೇ ವೇಳೆ ಹೊಡೆಸಿಕೊಂಡ ಗೋಲುಗಳ ಸಂಖ್ಯೆ ಕೇವಲ 5 ಮಾತ್ರ. ಅಂದರೆ ಮೊದಲ ಐದು ಪಂದ್ಯಗಳಲ್ಲಿ ಭಾರತ ತಂಡವು ಪಾರುಪತ್ಯ ಮೆರೆದಿದ್ದು, ಸೆಮಿಫೈನಲ್ನಲ್ಲೂ ಗೆದ್ದು ಫೈನಲ್ಗೇರುವ ವಿಶ್ವಾಸದಲ್ಲಿದೆ.
ಇದನ್ನೂ ಓದಿ: ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಕಠಿಣ ಎದುರಾಳಿ ಯಾರು? ಇಲ್ಲಿದೆ ಮಾಹಿತಿ
ಏಷ್ಯನ್ ಗೇಮ್ಸ್ನಲ್ಲಿ ಭಾರತ ಹಾಕಿ ತಂಡದ ಪ್ರದರ್ಶನದ ಝಲಕ್ ಇಲ್ಲಿದೆ:
- ಭಾರತ vs ಉಜ್ಬೇಕಿಸ್ತಾನ್: 16-0
- ಭಾರತ vs ಸಿಂಗಾಪುರ್: 16-1
- ಭಾರತ vs ಜಪಾನ್: 4-2
- ಭಾರತ vs ಪಾಕಿಸ್ತಾನ್: 10-2.
- ಭಾರತ vs ಬಾಂಗ್ಲಾದೇಶ್: 12-0.
