T20 World Cup: ಭಾರತದ ನೆಲದಲ್ಲಿ ಆಡುವುದಿಲ್ಲ ಎಂದ ಬಾಂಗ್ಲಾ; ತಕ್ಕ ಪ್ರತ್ಯುತ್ತರ ನೀಡಿದ ಬಿಸಿಸಿಐ
T20 World Cup 2026: 2026ರ ಟಿ20 ವಿಶ್ವಕಪ್‌ಗೆ ಮುನ್ನ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಭಾರತದಲ್ಲಿ ಆಡಲು ನಿರಾಕರಿಸಿದೆ. ಮುಸ್ತಾಫಿಜುರ್ ರೆಹಮಾನ್ ಐಪಿಎಲ್‌ನಿಂದ ಹೊರಗಿಟ್ಟಿದ್ದಕ್ಕೆ ಕೋಪಗೊಂಡ BCB, ಭದ್ರತಾ ಕಾರಣ ನೀಡಿ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಐಸಿಸಿಗೆ ಇಮೇಲ್ ಮಾಡಿದೆ. ಆದರೆ BCCI ವೇಳಾಪಟ್ಟಿ ಬದಲಾವಣೆಗೆ ಅಸಾಧ್ಯ ಎಂದಿದೆ, ಇದರಿಂದ ಉಭಯ ಮಂಡಳಿಗಳ ನಡುವೆ ತೀವ್ರ ವಿವಾದ ಸೃಷ್ಟಿಯಾಗಿದೆ.

2026 ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಫೆಬ್ರವರಿ 7 ರಂದು ಭಾರತ ಮತ್ತು ಶ್ರೀಲಂಕಾದಲ್ಲಿ ಆರಂಭವಾಗಲಿದೆ. ಈ ವಿಶ್ವಕಪ್‌ಗೆ ಬಹುತೇಕ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಪಂದ್ಯಾವಳಿಗಾಗಿ ಎಲ್ಲಾ 20 ತಂಡಗಳನ್ನು ಅಂತಿಮಗೊಳಿಸಲಾಗಿದೆ ಮತ್ತು ಎಲ್ಲಾ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಟಿಕೆಟ್ ಮಾರಾಟವೂ ಪ್ರಾರಂಭವಾಗಿದೆ. ಆದಾಗ್ಯೂ, ಪಂದ್ಯಾವಳಿ ಪ್ರಾರಂಭವಾಗುವ ಸುಮಾರು ಒಂದು ವಾರಕ್ಕೂ ಮೊದಲು, ಐಸಿಸಿಗೆ ಹೊಸ ತಲೆನೋವು ಶುರುವಾಗಿದೆ. ಭಾರತದ ನೆರೆಯ ರಾಷ್ಟ್ರ ಬಾಂಗ್ಲಾದೇಶ ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸದಿರಲು ನಿರ್ಧರಿಸಿದೆ. ಹಾಗೆಯೇ ಬಾಂಗ್ಲಾ ತಂಡದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಗೆ (ICC) ಇಮೇಲ್ ಮಾಡಿದೆ. ಆದರೆ ಬಾಂಗ್ಲಾದೇಶದ ಈ ಬೆದರಿಕೆಗೆ ತಕ್ಕ ಪ್ರತ್ಯುತ್ತರ ನೀಡಿರುವ ಬಿಸಿಸಿಐ (BCCI), ಈಗ ಟಿ20 ವಿಶ್ವಕಪ್ ವೇಳಾಪಟ್ಟಿಯಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದಿದೆ.
ಭಾರತದ ನೆಲದಲ್ಲಿ ಆಡುವುದಿಲ್ಲ
ಬಾಂಗ್ಲಾ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ರನ್ನು ಐಪಿಎಲ್‌ನಿಂದ ಹೊರಗಿಟ್ಟಿರುವುದರಿಂದ ಕೆರಳಿರುವ ಬಾಂಗ್ಲಾ ಕ್ರಿಕೆಟ್ ಮಂಡಳಿ, ಭಾರತಕ್ಕೆ ತನ್ನ ತಂಡವನ್ನು ಕಳುಹಿಸದಿರಲು ನಿರ್ಧರಿಸಿದೆ. ವಾಸ್ತವವಾಗಿ ಬಾಂಗ್ಲಾ ತಂಡವನ್ನು ಭಾರತಕ್ಕೆ ಕಳುಹಿಸುವುದರ ಬಗ್ಗೆ ಚರ್ಚಿಸಲು 17 ಬಿಸಿಬಿ ನಿರ್ದೇಶಕರು ಸಭೆ ಸೇರಿದ್ದರು. ಈ ಸಭೆಯಲ್ಲಿ ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ಹೊಸ ನಿರ್ಧಾರ ತೆಗೆದುಕೊಂಡಿದ್ದು, ಬಾಂಗ್ಲಾದೇಶ ತನ್ನ ಯಾವುದೇ ವಿಶ್ವಕಪ್ ಪಂದ್ಯಗಳನ್ನು ಭಾರತದ ನೆಲದಲ್ಲಿ ಆಡದಿರಲು ನಿರ್ಧರಿಸಲಾಗಿದೆ. ಹಾಗೆಯೇ ಭದ್ರತಾ ಕಾರಣಗಳಿಂದಾಗಿ, ಟಿ20 ವಿಶ್ವಕಪ್‌ಗಾಗಿ ತಂಡವನ್ನು ಭಾರತಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಬಿಸಿಬಿ, ಐಸಿಸಿಗೆ ಮೇಲ್ ಮಾಡಿದೆ.
ವ್ಯವಸ್ಥಾಪನಾ ದೃಷ್ಟಿಯಿಂದ ಅಸಾಧ್ಯ
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಕಳುಹಿಸಿರುವ ಈಮೇಲ್ಗೆ ಇದುವರೆಗೆ ಐಸಿಸಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದಾಗ್ಯೂ ಬಾಂಗ್ಲಾದೇಶ ತಂಡದ ಪಂದ್ಯಗಳನ್ನು ಸ್ಥಳಾಂತರಿಸುವ ಕಲ್ಪನೆಯನ್ನು ಬಿಸಿಸಿಐ ತಳ್ಳಿಹಾಕಿದ್ದು, ವೇಳಾಪಟ್ಟಿಯನ್ನು ಈಗ ಬದಲಿಸುವುದು ವ್ಯವಸ್ಥಾಪನಾ ದೃಷ್ಟಿಯಿಂದ ಅಸಾಧ್ಯ ಎಂದಿದೆ. ಹೀಗಾಗಿ ಬಿಸಿಸಿಐ ಹಾಗೂ ಬಿಸಿಬಿ ನಡುವಿನ ಈ ಪ್ರತಿಷ್ಠೆಯ ಹೋರಾಟದಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಬಾಂಗ್ಲಾದೇಶ ವಿಶ್ವಕಪ್ ವೇಳಾಪಟ್ಟಿ
- ಬಾಂಗ್ಲಾದೇಶ vs ವೆಸ್ಟ್ ಇಂಡೀಸ್: ಫೆಬ್ರವರಿ 7, ಕೋಲ್ಕತ್ತಾ
- ಬಾಂಗ್ಲಾದೇಶ vs ಇಟಲಿ: ಫೆಬ್ರವರಿ 9, ಕೋಲ್ಕತ್ತಾ
- ಬಾಂಗ್ಲಾದೇಶ vs ಇಂಗ್ಲೆಂಡ್: ಫೆಬ್ರವರಿ 14, ಕೋಲ್ಕತ್ತಾ
- ಬಾಂಗ್ಲಾದೇಶ vs ನೇಪಾಳ: ಫೆಬ್ರವರಿ 17, ಮುಂಬೈ
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
