ಕೇಪ್‌ಟೌನ್ ಮಾತ್ರವಲ್ಲ, ಡರ್ಬನ್‌ನಲ್ಲೂ ಬಾಲ್ ಟ್ಯಾಂಪರಿಂಗ್..! ಡಿವಿಲಿಯರ್ಸ್ ಹೊಸ ಬಾಂಬ್

2018ರ ಸ್ಯಾಂಡ್‌ಪೇಪರ್ ಗೇಟ್ ವಿವಾದದ ಬಗ್ಗೆ ಎಬಿ ಡಿವಿಲಿಯರ್ಸ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಆಸ್ಟ್ರೇಲಿಯಾ ತಂಡದ ಪ್ರತಿಯೊಬ್ಬ ಆಟಗಾರನಿಗೂ ಬಾಲ್ ಟ್ಯಾಂಪರಿಂಗ್ ಬಗ್ಗೆ ತಿಳಿದಿತ್ತು. ಇದು ಕೇವಲ ಕೇಪ್‌ಟೌನ್ ಟೆಸ್ಟ್‌ನಲ್ಲಿ ಮಾತ್ರವಲ್ಲ, ಡರ್ಬನ್ ಟೆಸ್ಟ್‌ನಲ್ಲೂ ನಡೆದಿತ್ತು ಎಂದಿದ್ದಾರೆ. ಚೆಂಡಿನ ಸ್ವರೂಪ ಬದಲಿಸುವ ಯೋಜನೆಯ ಬಗ್ಗೆ ತಂಡದ ಎಲ್ಲರಿಗೂ ಮೊದಲೇ ತಿಳಿದಿತ್ತು ಎಂಬುದು ಡಿವಿಲಿಯರ್ಸ್ ಅವರ ಅಭಿಪ್ರಾಯ.

ಕೇಪ್‌ಟೌನ್ ಮಾತ್ರವಲ್ಲ, ಡರ್ಬನ್‌ನಲ್ಲೂ ಬಾಲ್ ಟ್ಯಾಂಪರಿಂಗ್..! ಡಿವಿಲಿಯರ್ಸ್ ಹೊಸ ಬಾಂಬ್
ಎಬಿ ಡಿವಿಲಿಯರ್ಸ್​, ಆಸ್ಟ್ರೇಲಿಯಾ ತಂಡ

Updated on: Nov 23, 2026 | 3:54 PM

2018ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ನಡೆದಿದ್ದ ಬಾಲ್ ಟ್ಯಾಂಪರಿಂಗ್ ಪ್ರಕರಣ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ‘ಸ್ಯಾಂಡ್‌ಪೇಪರ್ ಗೇಟ್’ ಎಂದೇ ಪ್ರಸಿದ್ಧಿಯಾಗಿರುವ ಈ ವಿವಾದದ ಬಗ್ಗೆ ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಉಸ್ಮಾನ್ ಖವಾಜಾ ಮತ್ತು ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ಇತ್ತೀಚೆಗೆ ನೀಡಿರುವ ಹೇಳಿಕೆಗಳಿಗೆ ಎಬಿ ಡಿವಿಲಿಯರ್ಸ್ ಪ್ರತಿಕ್ರಿಯಿಸಿದ್ದು, ‘ಆಸ್ಟ್ರೇಲಿಯಾ ತಂಡದ ಪ್ರತಿಯೊಬ್ಬ ಆಟಗಾರನಿಗೂ ಬಾಲ್ ಟ್ಯಾಂಪರಿಂಗ್ ಬಗ್ಗೆ ತಿಳಿದಿತ್ತು. ಈ ವಿಚಾರದಲ್ಲಿ ನನಗೆ ಶೇ.100ರಷ್ಟು ಖಚಿತತೆ ಇದೆ ಎಂದಿದ್ದಾರೆ.

2018ರ ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಡಿವಿಲಿಯರ್ಸ್, ಮೊದಲ ಇನ್ನಿಂಗ್ಸ್‌ನಲ್ಲಿ 64 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 63 ರನ್ ಗಳಿಸಿದ್ದರು. ಅವರ ಪ್ರಕಾರ, ಬಾಲ್ ಟ್ಯಾಂಪರಿಂಗ್ ಕೇವಲ ಕೇಪ್‌ಟೌನ್ ಟೆಸ್ಟ್‌ನಲ್ಲಿ ಮಾತ್ರ ನಡೆದಿರಲಿಲ್ಲ. ಸರಣಿಯ ಮೊದಲ ಪಂದ್ಯವಾದ ಡರ್ಬನ್ ಟೆಸ್ಟ್‌ನಲ್ಲೂ ಚೆಂಡಿನ ವಿರೂಪ ನಡೆದಿದೆ ಎಂದು ಅವರು ಹೇಳಿದ್ದಾರೆ.

Loading...

ನನಗೆ ಬಲವಾದ ಅಭಿಪ್ರಾಯಗಳಿವೆ

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಡಿವಿಲಿಯರ್ಸ್, ‘ನಾನು ಯಾರನ್ನೂ ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ಮಾತನಾಡಲು ಬಯಸುವುದಿಲ್ಲ. ಹಾಗೆಯೇ ಒಬ್ಬರು ಸರಿ, ಮತ್ತೊಬ್ಬರು ತಪ್ಪು ಎಂದೂ ಹೇಳುತ್ತಿಲ್ಲ. ಆದರೆ ಕೆಲವು ವಿಚಾರಗಳ ಬಗ್ಗೆ ನನಗೆ ಬಲವಾದ ಅಭಿಪ್ರಾಯಗಳಿವೆ. ಅವುಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ಉಸ್ಮಾನ್ ತಮ್ಮ ಪುಸ್ತಕ ಬಿಡುಗಡೆ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ 2026ರಲ್ಲಿ ಈ ವಿಚಾರವನ್ನು ಮತ್ತೆ ಪ್ರಸ್ತಾಪಿಸಿರುವ ಸಮಯ ಮಾತ್ರ ಸ್ವಲ್ಪ ವಿಚಿತ್ರವಾಗಿದೆ’ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ಎಲ್ಲರೂ ಒಪ್ಪಿಕೊಳ್ಳುತ್ತಿರುವಂತೆ ಕಾಣುತ್ತಿದೆ

ಈ ವಿವಾದದಲ್ಲಿ ಭಾಗಿಯಾಗಿದ್ದ ಆಟಗಾರರ ಬಗ್ಗೆ ಅನುಕಂಪ ವ್ಯಕ್ತಪಡಿಸಿರುವ ಡಿವಿಲಿಯರ್ಸ್, ‘ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಇದು ವೈಯಕ್ತಿಕ ವಿಚಾರವಾಗಿ ಪರಿಣಮಿಸಿದೆ. ಅವರ ಪರಿಸ್ಥಿತಿಯ ಬಗ್ಗೆ ನನಗೆ ಅನುಕಂಪವಿದೆ. ಆದರೆ ಆ ದಿನ ನಡೆದ ಘಟನೆಗೆ ಅಥವಾ ಅದಕ್ಕೂ ಮೊದಲು ಎಷ್ಟು ಪಂದ್ಯಗಳಲ್ಲಿ ಇಂತಹ ಕೃತ್ಯ ನಡೆದಿದೆಯೋ ಅದಕ್ಕೆ ನನ್ನ ಬೆಂಬಲವಿಲ್ಲ. ಪೋರ್ಟ್ ಎಲಿಜಬೆತ್ ಟೆಸ್ಟ್‌ನಲ್ಲೂ ಬಾಲ್ ಟ್ಯಾಂಪರಿಂಗ್ ನಡೆದಿತ್ತು ಎಂಬುದನ್ನು ಈಗ ಎಲ್ಲರೂ ಒಪ್ಪಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಆದರೆ ಡರ್ಬನ್‌ನಲ್ಲೂ ಇದೇ ರೀತಿಯ ಘಟನೆ ನಡೆದಿತ್ತು ಎಂದು ನಾನು ಖಚಿತವಾಗಿ ಹೇಳಬಲ್ಲೆ. ಆ ಪಂದ್ಯದ ವಿಡಿಯೋ ದೃಶ್ಯಗಳನ್ನು ಮತ್ತೊಮ್ಮೆ ನೋಡಿ. ಈ ವಿಚಾರದಲ್ಲಿ ನನಗೆ ಯಾವುದೇ ಅನುಮಾನವಿಲ್ಲ’.

‘ಅಹಂಕಾರಿ ಮತ್ತು ಗರ್ವಿಷ್ಠ’; ಕೊಹ್ಲಿಯ ಬಗ್ಗೆ ಡಿವಿಲಿಯರ್ಸ್ ಅಚ್ಚರಿಯ ಹೇಳಿಕೆ..!

ನಾವೇಕೆ ಇಷ್ಟೊಂದು ಚರ್ಚೆ ಮಾಡಬೇಕು?

‘ಈಗ ಎಲ್ಲರೂ ಸ್ಯಾಂಡ್‌ಪೇಪರ್ ಬಗ್ಗೆ ಮಾತನಾಡುತ್ತಿದ್ದಾರೆ. ಸ್ಯಾಂಡ್‌ಪೇಪರ್ ಬಳಸಿದ್ದು ಯಾರಿಗೆ ಗೊತ್ತಿತ್ತು ಎಂಬ ಚರ್ಚೆ ನಡೆಯುತ್ತಿದೆ. ಆದರೆ ಅಕ್ರಮವಾಗಿ ಏನಾದರೂ ಮಾಡಿ ನಿಯಮ ಮೀರುವ ನಿರ್ಧಾರವನ್ನು ತಂಡದ ಪ್ರತಿಯೊಬ್ಬರೂ ಮೊದಲೇ ತಿಳಿದಿದ್ದರು. ಈ ಪ್ರಮುಖ ವಿಚಾರವನ್ನೇ ಎಲ್ಲರೂ ಮರೆತಿದ್ದಾರೆ. ಚೆಂಡಿನ ಸ್ವರೂಪ ಬದಲಿಸಲು ಯಾವ ವಸ್ತುವನ್ನು ಬಳಸಿದರು ಎಂಬುದರ ಬಗ್ಗೆ ನಾವೇಕೆ ಇಷ್ಟೊಂದು ಚರ್ಚೆ ಮಾಡಬೇಕು? ಮೈದಾನದಲ್ಲಿ ಅಕ್ರಮ ಎಸಗಲು ಮೊದಲೇ ಯೋಜನೆ ರೂಪಿಸಲಾಗಿತ್ತು ಎಂಬುದೇ ಇಲ್ಲಿ ಮುಖ್ಯವಾದ ವಿಚಾರ. ಹೀಗಾಗಿ ಆಸ್ಟ್ರೇಲಿಯಾದ ಪ್ರತಿಯೊಬ್ಬ ಆಟಗಾರನಿಗೂ ಈ ಬಗ್ಗೆ ತಿಳಿದಿತ್ತು. ಈ ವಿಚಾರದಲ್ಲಿ ನನಗೆ ಶೇ.100ರಷ್ಟು ಖಚಿತತೆ ಇದೆ’ ಎಂದು ಡಿವಿಲಿಯರ್ಸ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us