ಏಕದಿನ ವಿಶ್ವಕಪ್ ಬಳಿಕ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಪ್ರಮುಖ ವೇಗಿ ಮೊಹಮ್ಮದ್ ಶಮಿ ಕಂಬ್ಯಾಕ್ ಯಾವಾಗ? ಈ ಪ್ರಶ್ನೆಗೆ ಖುದ್ದು ಆಯ್ಕೆ ಸಮಿತಿ ಮುಖ್ಯ ಅಜಿತ್ ಅಗರ್ಕರ್ ಉತ್ತರ ನೀಡಿದ್ದಾರೆ. ಸೋಮವಾರ ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಗರ್ಕರ್ ಶಮಿ ಅವರ ಬಗ್ಗೆಗಿನ ಪ್ರಮುಖ ಅಪ್ಡೇಟ್ ನೀಡಿದರು.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಮೊಹಮ್ಮದ್ ಶಮಿ ಅವರನ್ನು ಏಕೆ ಆಯ್ಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅಜಿತ್ ಅಗರ್ಕರ್, ಶಮಿ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಅಲ್ಲದೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಸೆಪ್ಟೆಂಬರ್ನಲ್ಲಿ ನಡೆಯಲಿರುವ ಬಾಂಗ್ಲಾದೇಶ್ ವಿರುದ್ಧದ ಸರಣಿ ಮೂಲಕ ಅವರು ಕಂಬ್ಯಾಕ್ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
2023ರ ಏಕದಿನ ವಿಶ್ವಕಪ್ನಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದ ಶಮಿ, ವರ್ಲ್ಡ್ ಕಪ್ ಬಳಿಕ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು. ಏಕದಿನ ವಿಶ್ವಕಪ್ ವೇಳೆ ಶಮಿ ಅವರ ಪಾದದಲ್ಲಿ ನೋವು ಕಾಣಿಸಿಕೊಂಡಿತ್ತು. ಈ ನೋವಿನ ನಡುವೆಯೂ ಅವರು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದರು. ಇದರಿಂದ ಅವರ ಪಾದದ ಸಮಸ್ಯೆಯು ಬಿಗಡಾಯಿಸಿದೆ.
ಹೀಗಾಗಿ ಅವರು ಏಕದಿನ ವಿಶ್ವಕಪ್ ಬಳಿಕ ಯಾವುದೇ ಪಂದ್ಯವಾಡಿರಲಿಲ್ಲ. ಅಲ್ಲದೆ ವೈದ್ಯಕೀಯ ಪರಿಶೀಲನೆ ವೇಳೆ ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಕಂಡು ಬಂದಿತ್ತು. ಅದರಂತೆ ಕಳೆದ ಫೆಬ್ರವರಿ ತಿಂಗಳಲ್ಲಿ ಮೊಹಮ್ಮದ್ ಶಮಿ ಸರ್ಜರಿಗೆ ಒಳಗಾಗಿದ್ದರು. ಇದೇ ಕಾರಣದಿಂದಾಗಿ ಐಪಿಎಲ್ನಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಶಮಿ ಅಭ್ಯಾಸವನ್ನು ಶುರು ಮಾಡಿದ್ದಾರೆ.
ಸದ್ಯ ಮೊಹಮ್ಮದ್ ಶಮಿ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಅವರ ಫಿಟ್ನೆಸ್ ಬಗ್ಗೆ ಎನ್ಸಿಎ ಕಡೆಯಿಂದ ಕ್ಲೀನ್ ಚಿಟ್ ಸಿಕ್ಕರೆ, ಸೆಪ್ಟೆಂಬರ್ 19 ರಿಂದ ಶುರುವಾಗಲಿರುವ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಗೆ ಅವರು ಆಯ್ಕೆಯಾಗಲಿದ್ದಾರೆ. ಹೀಗಾಗಿ ಬಾಂಗ್ಲಾ ವಿರುದ್ಧದ ಸರಣಿಯೊಂದಿಗೆ ಶಮಿ ಅವರ ಕಂಬ್ಯಾಕ್ ಅನ್ನು ಎದುರು ನೋಡಬಹುದು ಎಂದು ಅಜಿತ್ ಅಗರ್ಕರ್ ತಿಳಿಸಿದ್ದಾರೆ.
ಇದನ್ನೂ ಓದಿ: RCB… ಅದೊಂದು ತಂಡವೇ ಅಲ್ಲ: ಮಾಜಿ ಆಟಗಾರ ಕಿಡಿ
ಏಕದಿನ ವಿಶ್ವಕಪ್ 2023 ರಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಮೊಹಮ್ಮದ್ ಶಮಿ 24 ವಿಕೆಟ್ ಕಬಳಿಸಿ ಮಿಂಚಿದ್ದರು. ಅಲ್ಲದೆ ಮೊಹಮ್ಮದ್ ಶಮಿ ಅವರ ಕರಾರುವಾಕ್ ದಾಳಿಯ ನೆರವಿನಿಂದ ಭಾರತ ತಂಡವು ಫೈನಲ್ಗೆ ಪ್ರವೇಶಿಸಿತ್ತು ಎಂದರೆ ತಪ್ಪಾಗಲಾರದು. ಇದಾಗ್ಯೂ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿ ಏಕದಿನ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳುವ ಅವಕಾಶ ಕೈಚೆಲ್ಲಿಕೊಂಡಿತ್ತು. ಆ ಬಳಿಕ ಭಾರತ ತಂಡದಿಂದ ಹೊರಗುಳಿದಿರುವ ಶಮಿ ಟೆಸ್ಟ್ ಸರಣಿಯ ಮೂಲಕ ಮತ್ತೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ.