ಬರೋಬ್ಬರಿ 63 ರನ್: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ಬೌಲಿಂಗ್..!
IPL 2026 LSG vs CSK: ಏಕನಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್‌ಗಳಲ್ಲಿ 187 ರನ್ ಕಲೆಹಾಕಿದ್ದರು. ಈ ಗುರಿಯನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ 16.4 ಓವರ್‌ಗಳಲ್ಲಿ ಚೇಸ್ ಮಾಡಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

IPL 2026: ಐಪಿಎಲ್ನಲ್ಲಿ ಹೀರೋ ಆಗಿದ್ದವನು ಕೇವಲ 2.4 ಓವರ್‌ಗಳಲ್ಲಿ ಝೀರೋ ಆಗಬಹುದು ಎಂಬುದಕ್ಕೆ ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯವೇ ಸಾಕ್ಷಿ. ಪಂದ್ಯದ ಆರಂಭದವರೆಗೂ ಸಿಎಸ್‌ಕೆ ತಂಡದ ಪ್ರಮುಖ ಅಸ್ತ್ರವಾಗಿದ್ದ ಅನ್ಶುಲ್ ಕಂಬೋಜ್, ಪಂದ್ಯ ಮುಗಿಯುವ ಹೊತ್ತಿಗೆ ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಬೌಲರ್ ಆಗಿ ಹೊರಹೊಮ್ಮಿದ್ದರು.
ಈ ಪಂದ್ಯದಲ್ಲಿ ಅನ್ಶುಲ್ ಕಂಬೋಜ್ ಅವರ ಬೌಲಿಂಗ್ ಅನ್ನು ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟರ್‌ಗಳು ಧೂಳೀಪಟ ಮಾಡಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಕನಿಷ್ಠ 2 ಓವರ್‌ಗಳಿಗಿಂತ ಹೆಚ್ಚು ಬೌಲಿಂಗ್ ಮಾಡಿದ ಬೌಲರ್‌ಗಳ ಪೈಕಿ ಅತ್ಯಧಿಕ ಎಕಾನಮಿ ರೇಟ್ (Economy Rate) ನೀಡಿದ ಬೌಲರ್ ಎಂಬ ಮುಜುಗರದ ದಾಖಲೆಯನ್ನು ತಮ್ಮದಾಗಿಸಿಕೊಂಡರು.
- ಓವರ್‌ಗಳು: 2.4
- ರನ್‌ಗಳು: 63
- ವಿಕೆಟ್: 0
- ಎಕಾನಮಿ ರೇಟ್: 23.62
- ನೀಡಿದ ಸಿಕ್ಸರ್‌ಗಳು: 8
ಹಳೆಯ ದಾಖಲೆ ಬ್ರೇಕ್!
ಇದಕ್ಕೂ ಮುನ್ನ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಳಪೆ ಎಕಾನಮಿ ರೇಟ್ ಹೊಂದಿದ್ದ ದಾಖಲೆ ವಾಷಿಂಗ್ಟನ್ ಸುಂದರ್ ಹೆಸರಿನಲ್ಲಿತ್ತು. ಐಪಿಎಲ್ 2024 ರಲ್ಲಿ ಸುಂದರ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 2 ಓವರ್‌ಗಳಲ್ಲಿ 46 ರನ್ ನೀಡಿದ್ದರು. ಅಂದರೆ 23ರ ಎಕಾನಮಿ ರೇಟ್ನಲ್ಲಿ ರನ್ ಬಿಟ್ಟು ಕೊಟ್ಟಿದ್ದರು. ಈ ಮೂಲಕ ಐಪಿಎಲ್ನಲ್ಲಿ 2 ಓವರ್‌ಗಳಲ್ಲಿ ಗರಿಷ್ಠ ಎಕಾನಮಿ ರೇಟ್ನಲ್ಲಿ ರನ್ ನೀಡಿದ ಹೀನಾಯ ದಾಖಲೆ ಬರೆದಿದ್ದರು.
ಇದೀಗ ಈ ಹೀನಾಯ ದಾಖಲೆಯನ್ನು ಅನ್ಶುಲ್ ಕಂಬೋಜ್ (23.62 ಎಕಾನಮಿ) ತಮ್ಮದಾಗಿಸಿಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟರ್‌ಗಳು ಅನ್ಶುಲ್ ಎಸೆದ 16 ಎಸೆತಗಳಲ್ಲಿ ಬರೋಬ್ಬರಿ 63 ರನ್ ಚಚ್ಚಿದ್ದಾರೆ.
ಇದನ್ನೂ ಓದಿ: RCB ಕೈಯಲ್ಲಿ CSK ಪ್ಲೇಆಫ್ ಭವಿಷ್ಯ: ಹೀಗಿದೆ ಲೆಕ್ಕಾಚಾರ
ಇನ್ನು ಈ 16 ಎಸೆತಗಳಲ್ಲಿ ಅನ್ಶುಲ್ ಕಂಬೋಜ್ ಬರೋಬ್ಬರಿ 8 ಸಿಕ್ಸರ್‌ಗಳನ್ನು ಹೊಡೆಸಿಕೊಂಡಿದ್ದಾರೆ. ಈ ಮೂಲಕ ಐಪಿಎಲ್ ಪಂದ್ಯವೊಂದರ ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ನೀಡಿದ ಜಂಟಿ ಬೌಲರ್ ಎಂಬ ಹೀನಾಯ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2023 ರಲ್ಲಿ ಯಶ್ ದಯಾಳ್ 8 ಸಿಕ್ಸರ್ ಹೊಡೆಸಿಕೊಂಡಿದ್ದರು. ಇದೀಗ ಕಂಬೋಜ್ ಕೂಡ 8 ಸಿಕ್ಸರ್ ಚಚ್ಚಿಸಿಕೊಂಡಿದ್ದಾರೆ.
ಫಲಿತಾಂಶದ ಮೇಲೆ ಪರಿಣಾಮ:
ಅನ್ಶುಲ್ ಕಂಬೋಜ್ ಅವರ ಈ ಕಳಪೆ ಬೌಲಿಂಗ್ ಪ್ರದರ್ಶನದಿಂದಾಗಿ ಸಿಎಸ್‌ಕೆ ತಂಡವು ಆರಂಭದಲ್ಲೇ ಪಂದ್ಯವನ್ನು ಕೈಚೆಲ್ಲಿಕೊಂಡಿದ್ದರು. ಏಕೆಂದರೆ ಸ್ಫೋಟಕ ಆರಂಭ ಪಡೆದ ಲಕ್ನೋ ಸೂಪರ್ ಜೈಂಟ್ಸ್ ಆ ಬಳಿಕ ಹಿಂತಿರುಗಿ ನೋಡಿರಲಿಲ್ಲ. ಸಿಎಸ್‌ಕೆ ನೀಡಿ 188 ರನ್ಗಳ ಗುರಿಯನ್ನು ಕೇವಲ 16.4 ಓವರ್‌ಗಳಲ್ಲಿ ಚೇಸ್ ಮಾಡಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

