Ashes 2021: ನಾವು ತಪ್ಪುಗಳಿಂದ ಪಾಠ ಕಲಿಯುತ್ತಿಲ್ಲ! ಸೋಲಿನ ಬಳಿಕ ತಂಡದ ವಿರುದ್ಧ ಗರಂ ಆದ ಜೋ ರೂಟ್

Ashes 2021: ಮ್ಮ ಬೌಲರ್‌ಗಳು ಸರಿಯಾದ ಲೆಂತ್‌ನಲ್ಲಿ ಬೌಲಿಂಗ್ ಮಾಡಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ನಾವು ಲೆಂತ್ ಬದಲಾಯಿಸಿದ ತಕ್ಷಣ, ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಸುವುದು ಕಷ್ಟಕರವಾಗಿತ್ತು.

Ashes 2021: ನಾವು ತಪ್ಪುಗಳಿಂದ ಪಾಠ ಕಲಿಯುತ್ತಿಲ್ಲ! ಸೋಲಿನ ಬಳಿಕ ತಂಡದ ವಿರುದ್ಧ ಗರಂ ಆದ ಜೋ ರೂಟ್
ಜೋ ರೂಟ್
Updated By: ಪೃಥ್ವಿಶಂಕರ

Updated on: Dec 20, 2021 | 8:17 PM

ಬ್ರಿಸ್ಬೇನ್‌ನಲ್ಲಿನ ಹೀನಾಯ ಸೋಲಿನ ನಂತರ, ಅಡಿಲೇಡ್‌ನಲ್ಲಿ ಇಂಗ್ಲೆಂಡ್ ಉತ್ತಮ ಪುನರಾಗಮನ ಮಾಡುವುದೆಂದು ನಿರೀಕ್ಷಿಸಿತ್ತು ಆದರೆ ಅದು ಸಂಭವಿಸಲಿಲ್ಲ. ಹೇಜಲ್‌ವುಡ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ ಅವರಂತಹ ಬೌಲರ್‌ಗಳಿಲ್ಲದೆ ಆಸ್ಟ್ರೇಲಿಯ ತಂಡವು ಅಡಿಲೇಡ್‌ನಲ್ಲಿ ಇಂಗ್ಲೆಂಡ್ ಅನ್ನು 275 ರನ್‌ಗಳಿಂದ ತುಳಿದಿತ್ತು. ಆಸ್ಟ್ರೇಲಿಯಾ ನೀಡಿದ್ದ 486 ರನ್‌ಗಳ ಬೃಹತ್ ಗುರಿಗೆ ಇಂಗ್ಲೆಂಡ್ ತಂಡ ಕೇವಲ 192 ರನ್‌ಗಳಿಗೆ ಆಲೌಟ್ ಆಯಿತು. ಪ್ರವಾಸಿ ತಂಡ ಈಗ ಸರಣಿಯಲ್ಲಿ 2-0 ಹಿನ್ನಡೆಯಲ್ಲಿದೆ. ಅಡಿಲೇಡ್‌ನಲ್ಲಿ ಇಂಗ್ಲೆಂಡ್‌ನ ಕಳಪೆ ಪ್ರದರ್ಶನದ ಬಗ್ಗೆ ನಾಯಕ ಜೋ ರೂಟ್ ತುಂಬಾ ಅಸಮಾಧಾನಗೊಂಡಿದ್ದಾರೆ. ಪಂದ್ಯದ ನಂತರ, ಜೋ ರೂಟ್ ತಮ್ಮ ತಂಡಕ್ಕೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಅಡಿಲೇಡ್‌ನಲ್ಲಿನ ಹೀನಾಯ ಸೋಲಿನ ನಂತರ, ಜೋ ರೂಟ್ ಮೊದಲು ಬೌಲರ್‌ಗಳನ್ನು ಬೆಂಡೆತ್ತಿದರು. ಜೋ ರೂಟ್, ನಮ್ಮ ಬೌಲರ್‌ಗಳು ಸರಿಯಾದ ಲೆಂತ್‌ನಲ್ಲಿ ಬೌಲಿಂಗ್ ಮಾಡಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ನಾವು ಲೆಂತ್ ಬದಲಾಯಿಸಿದ ತಕ್ಷಣ, ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಿಗೆ ಇದು ಕಷ್ಟಕರವಾಗಿತ್ತು. ಹೀಗಾಗಿ ನಾವು ಇದನ್ನು ಮೊದಲ ಇನ್ನಿಂಗ್ಸ್​ನಿಂದಲೂ ಮಾಡಬೇಕಿತ್ತು. ನಾವು ಅದೇ ತಪ್ಪುಗಳನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಿದ್ದೇವೆ. ನಾಲ್ಕು ವರ್ಷಗಳ ಹಿಂದೆ ನಾವು ಮಾಡಿದ ತಪ್ಪುಗಳು ಈಗಲೂ ಮಾಡುತ್ತಿದ್ದೇವೆ ಎಂದು ಗರಂ ಆಗಿದ್ದಾರೆ.

ಬ್ಯಾಟ್ಸ್‌ಮನ್‌ಗಳಿಗೂ ಪಾಠ
ಇಂಗ್ಲೆಂಡ್ ನಾಯಕ ಜೋ ರೂಟ್ ಕೂಡ ಬ್ಯಾಟ್ಸ್‌ಮನ್‌ಗಳಿಗೆ ಆಕ್ರಮಣಕಾರಿ ವಿಧಾನವನ್ನು ಅನುಸರಿಸಲು ಸಲಹೆ ನೀಡಿದರು. ಮೊದಲ 20 ನಿಮಿಷದಲ್ಲಿ ನಾವು ಎಚ್ಚರಿಕೆಯಿಂದ ಆಡಬೇಕು ಆದರೆ ನಂತರ ನಾವು ರನ್‌ಗಳಿಗೆ ಹಾತೋರಿಯಬೇಕು ಎಂದಿದ್ದಾರೆ.

ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ಕಳಪೆ ಪ್ರದರ್ಶನ
ಮೊದಲೆರಡು ಟೆಸ್ಟ್ ಪಂದ್ಯಗಳ ಬಗ್ಗೆ ಮಾತನಾಡುವುದಾದರೆ ಇಂಗ್ಲೆಂಡ್ ತಂಡ ಸಂಪೂರ್ಣ ಸೋಲೊಪ್ಪಿಕೊಂಡಿದೆ ಎಂಬುದು ಕಾಣುತ್ತಿದೆ. ಬ್ಯಾಟ್ಸ್‌ಮನ್‌ಗಳು ಅಬ್ಬರಿಸುತ್ತಿಲ್ಲ ಅಥವಾ ಬೌಲರ್‌ಗಳು ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇಂಗ್ಲೆಂಡ್‌ನ ಬ್ಯಾಟಿಂಗ್ ಕ್ರಮಾಂಕ ತೀರಾ ದುರ್ಬಲವಾಗಿದೆ. ಆರಂಭಿಕ ಜೋಡಿ ಇಂಗ್ಲೆಂಡ್‌ಗೆ ಹೆಚ್ಚಿನ ಚಿಂತೆಗೆ ಕಾರಣವಾಗಿದೆ. ರೋರಿ ಬರ್ನ್ಸ್ ಮತ್ತು ಹಸೀಬ್ ಹಮೀದ್ ಮೊದಲ ಎರಡು ಟೆಸ್ಟ್‌ಗಳಲ್ಲಿ ನಿರಾಸೆ ಮೂಡಿಸಿದ್ದಾರೆ. ಬೆನ್ ಸ್ಟೋಕ್ಸ್ ಕೂಡ ಬ್ಯಾಟ್‌ನೊಂದಿಗೆ ರನ್ ಗಳಿಸಲಿಲ್ಲ. ಬೌಲಿಂಗ್ ಬಗ್ಗೆ ಮಾತನಾಡುವುದಾದರೆ, ಇಂಗ್ಲೆಂಡ್ ತನ್ನ ಪ್ರಮುಖ ಸ್ಪಿನ್ನರ್ ಜಾಕ್ ಲೀಚ್ ಮೇಲೆ ಹೆಚ್ಚಿನ ನಂಬಿಕೆ ಇಡಲಿಲ್ಲ. ಮೊದಲ ಟೆಸ್ಟ್‌ನಲ್ಲಿ ಕೆಟ್ಟ ಸೋಲಿನ ನಂತರ ಜಾಕ್ ಲೀಚ್‌ಗೆ ಅಡಿಲೇಡ್‌ನಲ್ಲಿ ಅವಕಾಶ ನೀಡಲಿಲ್ಲ. ಜೋ ರೂಟ್ ಸ್ವತಃ ಸ್ಪಿನ್ ಬೌಲಿಂಗ್ ಮಾಡಿದರು. ಆದರೆ ಗಾಯದ ನಂತರ, ವೇಗದ ಬೌಲರ್ ಓಲಿ ರಾಬಿನ್ಸನ್ ನಾಲ್ಕನೇ ದಿನದಲ್ಲಿ ಸ್ಪಿನ್ ಬೌಲಿಂಗ್ ಮಾಡಬೇಕಾಯಿತು. ಇಂಗ್ಲೆಂಡಿನ ಇಂತಹ ಸ್ಥಿತಿ ನೋಡಿದರೆ ಜೋ ರೂಟ್ ಪಡೆ ಆಶಸ್ ಸರಣಿಯಲ್ಲಿ ಯಾವುದೇ ಪಂದ್ಯವನ್ನು ಗೆಲ್ಲುವುದು ಕಷ್ಟ ಎಂಬ ಊಹಾಪೋಹಗಳು ವ್ಯಕ್ತವಾಗುತ್ತಿವೆ.