AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

AUS vs ENG: 104 ವರ್ಷಗಳ ಬಳಿಕ ಎರಡೇ ದಿನದಲ್ಲಿ ಮುಗಿದ ಟೆಸ್ಟ್ ಪಂದ್ಯ..!

Australia vs England, 1st Test: ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಲಾಗಿದ್ದ ಆ್ಯಶಸ್ ಸರಣಿಯ ಮೊದಲ ಪಂದ್ಯವು ಕೇವಲ 2 ದಿನಗಳಲ್ಲೇ ಮುಗಿದಿದೆ. ಅದು ಕೂಡ ಆಸ್ಟ್ರೇಲಿಯಾ ತಂಡದ ಭರ್ಜರಿ ಜಯದೊಂದಿಗೆ. ಈ ಮೂಲಕ ಆಸೀಸ್ ಪಡೆ 104 ವರ್ಷಗಳ ಬಳಿಕ ಇತಿಹಾಸವನ್ನು ಪುನರಾವರ್ತಿಸಿದ್ದಾರೆ.

AUS vs ENG: 104 ವರ್ಷಗಳ ಬಳಿಕ ಎರಡೇ ದಿನದಲ್ಲಿ ಮುಗಿದ ಟೆಸ್ಟ್ ಪಂದ್ಯ..!
Aus Vs Eng
ಝಾಹಿರ್ ಯೂಸುಫ್
|

Updated on: Nov 22, 2025 | 3:49 PM

Share

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಪ್ರತಿಷ್ಠಿತ ಆ್ಯಶಸ್ ಸರಣಿಯ ಮೊದಲ ಪಂದ್ಯವು ಎರಡೇ ದಿನಗಳಲ್ಲಿ ಕೊನೆಗೊಂಡಿದೆ. ಪರ್ತ್​ನ ಆಪ್ಟಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಂಗ್ಲ ಪಡೆಗೆ ಮಿಚೆಲ್ ಸ್ಟಾರ್ಕ್​ ಆಘಾತ ನೀಡಿದ್ದರು.

ಕರಾರುವಾಕ್ ದಾಳಿ ಸಂಘಟಿಸಿದ ಮಿಚೆಲ್ ಸ್ಟಾರ್ಕ್​ 12.5 ಓವರ್​ಗಳಲ್ಲಿ 58 ರನ್ ನೀಡಿ 7 ವಿಕೆಟ್ ಕಬಳಿಸಿದರು. ಪರಿಣಾಮ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 172 ರನ್​ಗಳಿಸಿ ಆಲೌಟ್ ಆಯಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಆಸ್ಟ್ರೇಲಿಯಾ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಬೆನ್ ಸ್ಟೋಕ್ಸ್ ಹಾಗೂ ಬ್ರೈಡನ್ ಕಾರ್ಸ್ ದಾಳಿಗೆ ತತ್ತರಿಸಿದ ಆಸೀಸ್ ಪಡೆ 132 ರನ್​ಗಳಿಸಿ ಆಲೌಟ್ ಆಯಿತು.

ಇಂಗ್ಲೆಂಡ್​ಗೆ 40 ರನ್​ಗಳ ಮುನ್ನಡೆ:

ಮೊದಲ ಇನಿಂಗ್ಸ್​ನಲ್ಲಿ 40 ರನ್​ಗಳ ಮುನ್ನಡೆ ಪಡೆದ ಇಂಗ್ಲೆಂಡ್ ತಂಡವು ಮತ್ತದೇ ತಪ್ಪು ಎಸೆಗಿದರು. ಆಸೀಸ್ ವೇಗಿಗಳ ದಾಳಿ ಮುಂದೆ ಸೆಟೆದು ನಿಲ್ಲಲು ಪರದಾಡಿದ ಆಂಗ್ಲರು ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ ಇಂಗ್ಲೆಂಡ್ ತಂಡದ ದ್ವಿತೀಯ ಇನಿಂಗ್ಸ್​ ಕೇವಲ 164 ರನ್​ಗಳಿಗೆ ಕೊನೆಗೊಂಡಿತು.

ಮೊದಲ ಇನಿಂಗ್ಸ್​ನಲ್ಲಿನ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 205 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾಗೆ ಟ್ರಾವಿಸ್ ಹೆಡ್ ಸಿಡಿಲಬ್ಬರದ ಆರಂಭ ಒದಗಿಸಿದರು. ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಹೆಡ್ ಕೇವಲ 69 ಎಸೆತಗಳಲ್ಲಿ ಶತಕ ಪೂರೈಸಿದರು.

ಅಲ್ಲದೆ 83 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 16 ಫೋರ್​ಗಳೊಂದಿಗೆ 123 ರನ್ ಬಾರಿಸಿದರು. ಟ್ರಾವಿಸ್ ಹೆಡ್ ಅವರ ಈ ಸ್ಫೋಟಕ ಸೆಂಚುರಿ ನೆರವಿನೊಂದಿಗೆ ಆಸ್ಟ್ರೇಲಿಯಾ ತಂಡವು 28.2 ಓವರ್​ಗಳಲ್ಲಿ 205 ರನ್ ಬಾರಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

104 ವರ್ಷಗಳ ಬಳಿಕ ಟು ಡೇ ಟೆಸ್ಟ್ ಪಂದ್ಯ..!

ಬರೋಬ್ಬರಿ 104 ವರ್ಷಗಳ ಬಳಿಕ ಆ್ಯಶಸ್ ಸರಣಿಯ ಪಂದ್ಯವೊಂದು ಕೇವಲ 2 ದಿನಗಳಲ್ಲಿ ಮುಗಿದಿದೆ. ಅಂದರೆ ಕೊನೆಯ ಬಾರಿ ಉಭಯ ತಂಡಗಳ ಮುಖಾಮುಖಿ 2 ದಿನಗಳಲ್ಲಿ ಅಂತ್ಯಗೊಂಡಿದ್ದು 1921 ರಲ್ಲಿ. ನಾಟಿಂಗ್​ಹ್ಯಾಮ್​ನ ಟ್ರೆಂಟ್ ಬಿಡ್ಜ್​ ಮೈದಾನದಲ್ಲಿ ನಡೆದ ಅಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪ್ರಥಮ ಇನಿಂಗ್ಸ್​ನಲ್ಲಿ 112 ರನ್​ಗಳಿಗೆ ಆಲೌಟ್ ಆಗಿತ್ತು. ಆ ಬಳಿಕ ಮೊದಲ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ ಕಲೆಹಾಕಿದ್ದು 232 ರನ್​ಗಳು.

ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ಕೇವಲ 147 ರನ್​ಗಳಿಗೆ ಆಲೌಟ್ ಆಗಿದ್ದರು. ಅದರಂತೆ ಕೊನೆಯ ಇನಿಂಗ್ಸ್​ನಲ್ಲಿ 30 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ 2ನೇ ದಿನದಾಟದಲ್ಲೇ ಪಂದ್ಯ ಮುಗಿಸಿ 10 ವಿಕೆಟ್​ಗಳ ಜಯ ಸಾಧಿಸಿದ್ದರು.

ಇದೀಗ ಬರೋಬ್ಬರಿ 104 ವರ್ಷಗಳ ಬಳಿಕ ಆಸ್ಟ್ರೇಲಿಯಾ ಪರ ಮೊತ್ತೊಮ್ಮೆ ಆ್ಯಶಸ್ ಸರಣಿಯ ಪಂದ್ಯವನ್ನು ಎರಡನೇ ದಿನದಲ್ಲಿ ಮುಗಿಸಿದ್ದಾರೆ.

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖ್ವಾಜಾ, ಜೇಕ್ ವೆದರಾಲ್ಡ್, ಮಾರ್ನಸ್ ಲ್ಯಾಬುಶೇನ್, ಸ್ಟೀವ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಬ್ರೆಂಡನ್ ಡಾಗೆಟ್, ಸ್ಕಾಟ್ ಬೋಲ್ಯಾಂಡ್, ನಾಥನ್ ಲಿಯಾನ್.

ಇದನ್ನೂ ಓದಿ: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಟ್ರಾವಿಸ್ ಹೆಡ್

ಇಂಗ್ಲೆಂಡ್ ಪ್ಲೇಯಿಂಗ್ 11: ಬೆನ್ ಸ್ಟೋಕ್ಸ್ (ನಾಯಕ), ಜೋಫ್ರಾ ಆರ್ಚರ್,  ಗಸ್ ಅಟ್ಕಿನ್ಸನ್, ಹ್ಯಾರಿ ಬ್ರೂಕ್,ಬ್ರೈಡನ್ ಕಾರ್ಸ್, ಝಾಕ್ ಕ್ರಾಲಿ, ಬೆನ್ ಡಕೆಟ್, ಒಲೀ ಪೋಪ್, ಜೋ ರೂಟ್, ಜೇಮೀ ಸ್ಮಿತ್ (ವಿಕೆಟ್ ಕೀಪರ್), ಮಾರ್ಕ್ ವುಡ್.

Follow Us