T20 World Cup: ಶೂನಲ್ಲಿ ಬಿಯರ್ ಕುಡಿದ ಆಟಗಾರರು: ಆಸ್ಟ್ರೇಲಿಯನ್ನರ ವಿಚಿತ್ರ ಸಂಭ್ರಮಾಚರಣೆ
T20 World Cup 2021 Final: ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್, ನಾಯಕ ಕೇನ್ ವಿಲಿಯಮ್ಸನ್ ಅವರ ಅಮೋಘ 85 ರನ್ಗಳ ನೆರವಿನಿಂದ 172 ರನ್ ಪೇರಿಸಿತು.

ಟಿ20 ವಿಶ್ವಕಪ್ನಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಆಸ್ಟ್ರೇಲಿಯಾ (Australia) ತಂಡದ ಸಂಭ್ರಮ ಮುಗಿಲುಮುಟ್ಟಿತ್ತು. ನ್ಯೂಜಿಲೆಂಡ್ (New Zealand) ತಂಡವನ್ನು 8 ವಿಕೆಟ್ಗಳಿಂದ ಮಣಿಸಿ ಮೊದಲ ಬಾರಿಗೆ ಟಿ20 ಕಿರೀಟ ಮುಡಿಗೇರಿಸಿಕೊಂಡ ಆಸೀಸ್ ಆಟಗಾರರು ತಡರಾತ್ರಿಯವರೆಗೆ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಇದೇ ವೇಳೆ ಶೂನಲ್ಲಿ ಬಿಯರ್ ಸುರಿದು ಕುಡಿಯುವ ಮೂಲಕ ಗಮನ ಸೆಳೆದರು. ಸೋಷಿಯಲ್ ಮೀಡಿಯಾದಲ್ಲಿ ಐಸಿಸಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಆಸ್ಟ್ರೇಲಿಯಾ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್, ತನ್ನ ಎಡ ಶೂ ತೆಗೆದು ಅದರಲ್ಲಿ ಬಿಯರ್ ಸುರಿದು ಕುಡಿದಿದ್ದಾರೆ. ಇದರ ಬೆನ್ನಲ್ಲೇ ಮಾರ್ಕಸ್ ಸ್ಟೊಯಿನಿಸ್ ಕೂಡ ವೇಡ್ ಶೂ ಅನ್ನು ಬಿಯರ್‌ನಿಂದ ತೊಳೆದು, ಬಳಿಕ ಶೂ ಒಳಗೆ ಬಿಯರ್ ಸುರಿದು ಕುಡಿದರು. ಇನ್ನು ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಕೂಡ ಅದೇ ರೀತಿ ಮಾಡಿದರು.
ಸಾಮಾನ್ಯವಾಗಿ ಆಸ್ಟ್ರೇಲಿಯಾದಲ್ಲಿ ಶೂ ನಲ್ಲಿ ಬಿಯರ್ ಸುರಿದು ಕುಡಿಯುವುದು ಸಂಭ್ರಮದ ಒಂದು ಭಾಗ. ಅದರಲ್ಲೂ ಅದೃಷ್ಟದ ಗೆಲುವು ಅಥವಾ ರೋಮಾಂಚನಕಾರಿ ಜಯದ ಬಳಿಕ ಆಟಗಾರರು ಅಥವಾ ಇನ್ನಿತರ ಸೆಲೆಬ್ರಿಟಿಗಳು ಈ ರೀತಿಯಾಗಿ ವಿಭಿನ್ನವಾಗಿ ಸಂಭ್ರಮಿಸುತ್ತಾರೆ. ಅದೇ ಮಾದರಿಯಲ್ಲೇ ಮ್ಯಾಥ್ಯೂ ವೇಡ್ ಕೂಡ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ ಮಾಡಿದ್ದರು. ವೇಡ್ ಅವರ ನಡೆಯಿಂದ ಸಂತಸಗೊಂಡ ಮಾರ್ಕಸ್ ಸ್ಟೊಯಿನಿಸ್ ಕೂಡ ಶೂ-ಬಿಯರ್ ಸಂಭ್ರಮಕ್ಕೆ ಕಿಚ್ಚು ಹಚ್ಚಿದರು. ಈ ಸಖತ್ ಸಂಭ್ರಮದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
How’s your Monday going? ?#T20WorldCup pic.twitter.com/7AyODVF4HM
— T20 World Cup (@T20WorldCup) November 15, 2021
ಇದಕ್ಕೂ ಮುನ್ನ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್, ನಾಯಕ ಕೇನ್ ವಿಲಿಯಮ್ಸನ್ ಅವರ ಅಮೋಘ 85 ರನ್ಗಳ ನೆರವಿನಿಂದ 172 ರನ್ ಪೇರಿಸಿತು. ಆದರೆ ಆಸ್ಟ್ರೇಲಿಯಾ ಬ್ಯಾಟರುಗಳಾದ ಡೇವಿಡ್ ವಾರ್ನರ್ (53), ಮಿಚೆಲ್ ಮಾರ್ಷ್ (77) ಅಬ್ಬರಕ್ಕೆ ಅದು ಸುಲಭ ಸವಾಲಾಗಿತ್ತು. ಅದರಂತೆ 18.5 ಓವರ್ಗಳಲ್ಲಿ 173 ರನ್ ಬಾರಿಸುವ ಮೂಲಕ ಆಸ್ಟ್ರೇಲಿಯಾ ಚೊಚ್ಚಲ ಬಾರಿ ಟಿ20 ವಿಶ್ವಕಪ್ಗೆ ಮುತ್ತಿಕ್ಕಿತು.
ಇದನ್ನೂ ಓದಿ: T20 World Cup 2021: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಗೆ ಸಿಕ್ಕ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?
ಇದನ್ನೂ ಓದಿ: T20 World Cup Winners: 7 ಟಿ20 ವಿಶ್ವಕಪ್: ಚಾಂಪಿಯನ್ ಪಟ್ಟಕ್ಕೇರಿದ 6 ತಂಡಗಳು
ಇದನ್ನೂ ಓದಿ: Sourav Ganguly: ದ್ರಾವಿಡ್ ಅವರ ಮಗ ಕರೆ ಮಾಡಿ ಅಪ್ಪ ತುಂಬಾ ಕಟ್ಟುನಿಟ್ಟು, ನೀವು ಅವರನ್ನು ಕರ್ಕೊಂಡು ಹೋಗಿ ಎಂದರು..!
(Australian players drink from shoe to celebrate T20 World Cup win)
