
BBL 2023-24: ಬಿಗ್ ಬ್ಯಾಷ್ ಲೀಗ್ನ 13ನೇ ಸೀಸನ್ ಶುರುವಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಈ ಲೀಗ್ನ ಮೊದಲ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ಹಾಗೂ ಮೆಲ್ಬೋರ್ನ್ ಸ್ಟಾರ್ಸ್ ತಂಡಗಳು ಮುಖಾಮುಖಿಯಾಗಿತ್ತು. ದಿ ಗಾಬಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕ ಗ್ಲೆನ್ ಮ್ಯಾಕ್ಸ್ವೆಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಬ್ರಿಸ್ಬೇನ್ ಸ್ಟಾರ್ಸ್ ತಂಡಕ್ಕೆ ಉಸ್ಮಾನ್ ಖ್ವಾಜಾ (28) ಹಾಗೂ ಕಾಲಿನ್ ಮನ್ರೊ ಉತ್ತಮ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ಗೆ 66 ಪೇರಿಸಿ ಉಸ್ಮಾನ್ ಖ್ವಾಜಾ ಔಟಾದರು. ಇದಾಗ್ಯೂ ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಎಡಗೈ ದಾಂಡಿಗ ಕಾಲಿನ್ ಮನ್ರೊ ಮೆಲ್ಬೋರ್ನ್ ಸ್ಟಾರ್ಸ್ ಬೌಲರ್ಗಳ ಬೆಂಡೆತ್ತಿದರು. ಮನ್ರೊಗೆ ಉತ್ತಮ ಸಾಥ್ ನೀಡಿದ ಮಾರ್ನಸ್ ಲಾಬುಶೇನ್ 30 ರನ್ಗಳ ಕೊಡುಗೆ ನೀಡಿದರು. ಇನ್ನು ಸ್ಯಾಮ್ ಬಿಲ್ಲಿಂಗ್ಸ್ 18 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಅಂತಿಮ ಓವರ್ಗಳ ವೇಳೆ ಜೊತೆಯಾದ ಕಾಲಿನ್ ಮನ್ರೊ ಹಾಗೂ ಮ್ಯಾಕ್ಸ್ ಬ್ರ್ಯಾಂಟ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಪರಿಣಾಮ ಅಂತಿಮ ಓವರ್ನಲ್ಲಿ ಶತಕ ಪೂರೈಸಲು ಕಾಲಿನ್ ಮನ್ರೊಗೆ ಕೇವಲ 3 ರನ್ಗಳ ಅವಶ್ಯಕತೆಯಿತ್ತು. ಕೊನೆಯ ಓವರ್ನ ಮೊದಲ ಎಸೆತದಲ್ಲಿ ಮನ್ರೊ ಒಂದು ರನ್ ಓಡಿದರು. ಇನ್ನು 2ನೇ ಎಸೆತದಲ್ಲಿ ಮ್ಯಾಕ್ಸ್ ಕೂಡ 1 ರನ್ ಬಾರಿಸಿದರು. 3ನೇ ಎಸೆತದಲ್ಲಿ ಮನ್ರೊ ಬ್ಯಾಟ್ನಿಂದ ಮತ್ತೊಂದು ರನ್.
ಇತ್ತ ಕೊನೆಯ ಮೂರು ಎಸೆತಗಳನ್ನು ಎದುರಿಸಿದ ಮ್ಯಾಕ್ಸ್ ಬ್ರ್ಯಾಂಟ್ ಹ್ಯಾಟ್ರಿಕ್ ಫೋರ್ ಬಾರಿಸಿದರು. ಇದರಿಂದ ನಾನ್ ಸ್ಟ್ರೈಕ್ನಲ್ಲಿದ್ದ ಕಾಲಿನ್ ಮನ್ರೊ 1 ರನ್ಗಳಿಂದ ಶತಕ ವಂಚಿತರಾಗಿ ಅಜೇಯರಾಗಿ ಉಳಿದರು.
ಇನ್ನು ಈ ಪಂದ್ಯದಲ್ಲಿ 61 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಕಾಲಿನ್ ಮನ್ರೊ ಅಜೇಯ 99 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಬ್ರಿಸ್ಬೇನ್ ಹೀಟ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 214 ರನ್ ಕಲೆಹಾಕಿತು.
215 ರನ್ಗಳ ಕಠಿಣ ಗುರಿ ಬೆನ್ನತ್ತಿದ ಮೆಲ್ಬೋರ್ನ್ ಸ್ಟಾರ್ಸ್ ಪರ ನಾಯಕ ಗ್ಲೆನ್ ಮ್ಯಾಕ್ಸ್ವೆಲ್ 23 ರನ್ ಬಾರಿಸಿದರೆ, ಹಿಲ್ಟನ್ ಕಾರ್ಟ್ರೈಟ್ 33 ರನ್ ಸಿಡಿಸಿದರು. ಇದರ ಹೊರತಾಗಿ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 15.1 ಓವರ್ಗಳಲ್ಲಿ 111 ರನ್ಗಳಿಗೆ ಮೆಲ್ಬೋರ್ನ್ ಸ್ಟಾರ್ಸ್ ತಂಡವು ಆಲೌಟ್ ಆಯಿತು.
ಈ ಮೂಲಕ ಬಿಗ್ ಬ್ಯಾಷ್ ಲೀಗ್ ಸೀಸನ್ 13 ರ ಮೊದಲ ಪಂದ್ಯದಲ್ಲೇ ಬ್ರಿಸ್ಬೇನ್ ಹೀಟ್ ತಂಡವು 103 ರನ್ಗಳ ಅಮೋಘ ಗೆಲುವು ದಾಖಲಿಸಿದೆ.
ಬ್ರಿಸ್ಬೇನ್ ಹೀಟ್ ಪ್ಲೇಯಿಂಗ್ ಇಲೆವೆನ್: ಕಾಲಿನ್ ಮನ್ರೊ , ಉಸ್ಮಾನ್ ಖ್ವಾಜಾ (ನಾಯಕ) , ಮಾರ್ನಸ್ ಲಾಬುಶೇನ್, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್) , ಮ್ಯಾಕ್ಸ್ ಬ್ರ್ಯಾಂಟ್ , ಪಾಲ್ ವಾಲ್ಟರ್ , ಮೈಕೆಲ್ ನೆಸರ್ , ಕ್ಸೇವಿಯರ್ ಬಾರ್ಟ್ಲೆಟ್ , ಸ್ಪೆನ್ಸರ್ ಜಾನ್ಸನ್ , ಮಿಚೆಲ್ ಸ್ವೆಪ್ಸನ್ , ಮ್ಯಾಥ್ಯೂ ಕುಹ್ನೆಮನ್.
ಇದನ್ನೂ ಓದಿ: IPL 2024: ಐಪಿಎಲ್ ಹರಾಜಿಗೆ ಶಾರ್ಟ್ ಲೀಸ್ಟ್ ಮಾಡುವುದು ಹೇಗೆ?
ಮೆಲ್ಬೋರ್ನ್ ಸ್ಟಾರ್ಸ್ ಪ್ಲೇಯಿಂಗ್ ಇಲೆವೆನ್: ಥಾಮಸ್ ರೋಜರ್ಸ್ , ಸ್ಯಾಮ್ ಹಾರ್ಪರ್ (ವಿಕೆಟ್ ಕೀಪರ್) , ಜೋ ಬರ್ನ್ಸ್ , ಗ್ಲೆನ್ ಮ್ಯಾಕ್ಸ್ವೆಲ್ (ನಾಯಕ) , ಮಾರ್ಕಸ್ ಸ್ಟೊಯಿನಿಸ್ , ಹಿಲ್ಟನ್ ಕಾರ್ಟ್ರೈಟ್ , ಲಿಯಾಮ್ ಡಾಸನ್ , ಉಸಾಮಾ ಮಿರ್ , ಜೋಯಲ್ ಪ್ಯಾರಿಸ್ , ನಾಥನ್ ಕೌಲ್ಟರ್-ನೈಲ್ , ಓಲಿ ಸ್ಟೋನ್.