ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) 2024-25ನೇ ಸಾಲಿನ ಭಾರತೀಯ ಮಹಿಳಾ ಕ್ರಿಕೆಟಿಗರ ಹೊಸ ಒಪ್ಪಂದ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿಯ ವಾರ್ಷಿಕ ಕೇಂದ್ರೀಯ ಒಪ್ಪಂದದಲ್ಲಿ 16 ಮಹಿಳಾ ಆಟಗಾರ್ತಿಯರಿಗೆ ಸ್ಥಾನ ಲಭಿಸಿದೆ. ನೂತನ ವಾರ್ಷಿಕ ಒಪ್ಪಂದ ಪಟ್ಟಿಯನ್ನು ಮೂರು ವಿಭಾಗಗಳಾಗಿ ವಿಂಗಡಿಸಿದ್ದು, ಇದರಲ್ಲಿ ಮೂವರು ಆಟಗಾರ್ತಿಯರು ಎ ದರ್ಜೆಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಬಿ ಗ್ರೇಡ್‌ನಲ್ಲಿ ನಾಲ್ವರು ಆಟಗಾರ್ತಿಯರಿದ್ದು, ಉಳಿದ 9 ಆಟಗಾರ್ತಿಯರು ಸಿ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಈ ಒಪ್ಪಂದವು ಅಕ್ಟೋಬರ್ 1, 2024 ರಿಂದ ಸೆಪ್ಟೆಂಬರ್ 30, 2025 ರವರೆಗೆ ಚಾಲ್ತಿಯಲ್ಲಿರಲಿದೆ.
ಮಾಧ್ಯಮ ವರದಿಗಳ ಪ್ರಕಾರ, ‘ಎ’ ಗ್ರೇಡ್‌ನಲ್ಲಿ ಕಾಣಿಸಿಕೊಂಡಿರುವ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಮತ್ತು ದೀಪ್ತಿ ಶರ್ಮಾ ಅವರಿಗೆ ವಾರ್ಷಿಕ ತಲಾ 50 ಲಕ್ಷ ರೂ. ಸಿಗಲಿದೆ. ರೇಣುಕಾ ಠಾಕೂರ್, ಜೆಮಿಮಾ ರೊಡ್ರಿಗಸ್, ರಿಚಾ ಘೋಷ್ ಮತ್ತು ಶೆಫಾಲಿ ವರ್ಮಾ ಅವರಿಗೆ ವಾರ್ಷಿಕ ತಲಾ 30 ಲಕ್ಷ ರೂ. ನೀಡಲಾಗುತ್ತದೆ. ಇನ್ನು ಸಿ ಗ್ರೇಡ್‌ಗೆ ಆಯ್ಕೆಯಾಗಿರುವ ಎಲ್ಲಾ 9 ಆಟಗಾರ್ತಿಯರು ವಾರ್ಷಿಕವಾಗಿ ತಲಾ 10 ಲಕ್ಷ ರೂ.ಗಳನ್ನು ಪಡೆಯಲಿದ್ದಾರೆ.
ಬಿಸಿಸಿಐ ಪುರುಷ ಮತ್ತು ಮಹಿಳಾ ಆಟಗಾರ್ತಿಯರಿಗೆ ಒಂದೇ ರೀತಿಯ ಪಂದ್ಯ ಶುಲ್ಕವನ್ನು ಪಾವತಿಸುತ್ತದೆ. ಆದರೆ ಕೇಂದ್ರ ಒಪ್ಪಂದದಲ್ಲಿ ಅಗಾಧ ವ್ಯತ್ಯಾಸವಿದೆ. ಪುರುಷ ಆಟಗಾರರ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಗ್ರೇಡ್ ಎ ಪ್ಲಸ್ ಸೇರಿದಂತೆ ನಾಲ್ಕು ವಿಭಾಗಗಳಿವೆ.
ಇದನ್ನೂ ಓದಿ: IPL 2025: ದ್ವಿತೀಯ ಪಂದ್ಯಕ್ಕಾಗಿ RCB ಬರೋಬ್ಬರಿ 1383 ಕಿ.ಮೀ ಪಯಣ
ಇಲ್ಲಿ ಎ ಪ್ಲಸ್ ದರ್ಜೆಯ ಆಟಗಾರರು ವಾರ್ಷಿಕವಾಗಿ 7 ಕೋಟಿ ರೂ. ಪಡೆಯುತ್ತಾರೆ. ಅದೇ ಸಮಯದಲ್ಲಿ, ಗ್ರೇಡ್ ಎ ವರ್ಗದ ಆಟಗಾರರು ವಾರ್ಷಿಕವಾಗಿ 5 ಕೋಟಿ ರೂ., ಗ್ರೇಡ್ ಬಿ ವರ್ಗದ ಆಟಗಾರರು 3 ಕೋಟಿ ರೂ. ಮತ್ತು ಗ್ರೇಡ್ ಸಿ ವಿಭಾಗದ ಆಟಗಾರರು ವಾರ್ಷಿಕವಾಗಿ 1 ಕೋಟಿ ರೂ. ಪಡೆಯುತ್ತಾರೆ. ಅಂದರೆ ಪುರುಷ ಆಟಗಾರರಿಗೆ ಹೋಲಿಸಿದರೆ ಮಹಿಳಾ ಆಟಗಾರ್ತಿಯರಿಗೆ ವಾರ್ಷಿಕ ವೇತನ ಕಡಿಮೆ ಎಂದೇ ಹೇಳಬಹುದು.
Published On - 2:18 pm, Mon, 24 March 25