ಪಾಕ್ ಪಡೆಯನ್ನು ಸೋಲಿಸಿದ ಟೀಮ್ ಇಂಡಿಯಾಗೆ ಬಿಗ್ ಗಿಫ್ಟ್ ನೀಡಿದ ಬಿಸಿಸಿಐ
India vs Pakistan Final 2025: ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.1 ಓವರ್ಗಳಲ್ಲಿ 146 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಟೀಮ್ ಇಂಡಿಯಾ 19.4 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಬಿಸಿಸಿಐ ಭಾರತ ತಂಡಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ.

ಏಷ್ಯಾಕಪ್ 2025 ರ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನು ಟೀಮ್ ಇಂಡಿಯಾ ಬಗ್ಗು ಬಡಿದಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಮತ್ತೊಮ್ಮೆ ಏಷ್ಯನ್ ಚಾಂಪಿಯನ್ ಎನಿಸಿಕೊಂಡಿದೆ. ವಿಶೇಷ ಎಂದರೆ ಈ ಬಾರಿ ಭಾರತ ತಂಡ ಪಾಕ್ ಪಡೆಯನ್ನು ಮೂರು ಬಾರಿ ಸೋಲಿಸಿದೆ. ಮೊದಲ ಸುತ್ತಿನ ಪಂದ್ಯದಲ್ಲಿ 7 ವಿಕೆಟ್ಗಳ ಜಯ ಸಾಧಿಸಿದ್ದ ಟೀಮ್ ಇಂಡಿಯಾ ದ್ವಿತೀಯ ಸುತ್ತಿನಲ್ಲಿ 6 ವಿಕೆಟ್ಗಳ ಗೆಲುವು ದಾಖಲಿಸಿತ್ತು. ಇದೀಗ ಫೈನಲ್ನಲ್ಲಿ 5 ವಿಕೆಟ್ಗಳ ಜಯ ಸಾಧಿಸಿದೆ. ಈ ಮೂಲಕ ಪಾಕಿಸ್ತಾನ್ ವಿರುದ್ಧ ಹ್ಯಾಟ್ರಿಕ್ ಗೆಲುವು ದಾಖಲಿಸಿದ ಟೀಮ್ ಇಂಡಿಯಾಗೆ ಬಿಸಿಸಿಐ ವಿಶೇಷ ಉಡುಗೊರೆ ನೀಡಿದೆ.
ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳಲ್ಲೂ ಪ್ರಾಬಲ್ಯ ಸಾಧಿಸಿ ಗಮನಾರ್ಹ ವಿಜಯ ದಾಖಲಿಸಿರುವ ಟೀಮ್ ಇಂಢಿಯಾಗೆ ಬಿಸಿಸಿಐ ಬರೋಬ್ಬರಿ ₹21 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿದೆ. ಈ ಬಹುಮಾನವು ತಂಡದ ಮನೋಸ್ಥೈರ್ಯವನ್ನು ಹೆಚ್ಚಿಸುವುದಲ್ಲದೆ, ಭವಿಷ್ಯದಲ್ಲಿ ಯುವ ಆಟಗಾರರು ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಸ್ಫೂರ್ತಿ ನೀಡುತ್ತದೆ. ಇದೀಗ ಬಿಸಿಸಿಐ ನಡೆಗೆ ಕ್ರಿಕೆಟ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಏಟಿಗೆ ಎದಿರೇಟು:
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿ ಮತ್ತು ಮೇ 7 ರಂದು ನಡೆದ ಆಪರೇಷನ್ ಸಿಂಧೂರ್ ನಂತರ ಎರಡೂ ದೇಶಗಳ ಕ್ರಿಕೆಟ್ ತಂಡಗಳು ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಈ ಭಯೋತ್ಪಾದಕ ದಾಳಿಯಲ್ಲಿ ಇಪ್ಪತ್ತಾರು ಜನರು ಸಾವನ್ನಪ್ಪಿದ್ದರು. ಹೀಗಾಗಿಯೇ ಈ ಬಾರಿಯ ಭಾರತ ಮತ್ತು ಪಾಕ್ ನಡುವಣ ಮುಖಾಮುಖಿ ಮಹತ್ವ ಪಡೆದುಕೊಂಡಿತ್ತು.
ಇತ್ತ ಆರಂಭದಲ್ಲೇ ಪಾಕ್ ಆಟಗಾರರೊಂದಿಗೆ ಹ್ಯಾಂಡ್ಶೇಕ್ ಮಾಡದೇ ಟೀಮ್ ಇಂಡಿಯಾ ಆಟಗಾರರು ದಿಟ್ಟ ನಿರ್ಧಾರ ಪ್ರದರ್ಶಿಸಿದ್ದರು. ಆ ಬಳಿಕ ಪಂದ್ಯದ ನಡುವೆ ಮಾತಿನ ಚಕಮಕಿ ಕೂಡ ಕಂಡು ಬಂದಿತ್ತು. ಅಲ್ಲದೆ ಅಂತಿಮವಾಗಿ ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿ ಅಚಲ ನಿರ್ಧಾರವನ್ನು ಮುಂದುವರೆಸಿದ್ದರು.
ಇದನ್ನೂ ಓದಿ: VIDEO: ಪಾಕ್ಗೆ ಭಾರೀ ಮುಖಭಂಗ: ಟ್ರೋಫಿ ಸ್ವೀಕರಿಸದೇ ಸಂಭ್ರಮಿಸಿದ ಟೀಮ್ ಇಂಡಿಯಾ
ಈ ಮೂಲಕ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈ ಸಂದೇಶದೊಂದಿಗೆ ಏಷ್ಯಾಕಪ್ ಕಿರೀಟ ಮುಡಿಗೇರಿಸಿಕೊಂಡಿರುವ ಭಾರತ ತಂಡಕ್ಕೆ ಇದೀಗ ಬಿಸಿಸಿಐ ಕಡೆಯಿಂದಲೂ 21 ಕೋಟಿ ರೂ.ಗಳ ಬಹುಮಾನ ಮೊತ್ತ ಸಿಕ್ಕಿರುವುದು ವಿಶೇಷ.
9ನೇ ಬಾರಿ ಚಾಂಪಿಯನ್:
ಭಾರತ ತಂಡವು ಏಷ್ಯಾಕಪ್ನಲ್ಲಿ ಟ್ರೋಫಿ ಎತ್ತಿ ಹಿಡಿದಿರುವುದು ಇದು 9ನೇ ಬಾರಿ. ಇದಕ್ಕೂ ಮುನ್ನ ಟೀಮ್ ಇಂಡಿಯಾ 1984, 1988, 1990-91, 1995, 2010, 2016, 2018 ಮತ್ತು 2023 ರಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಈ ಬಾರಿ ಒಂದೇ ಒಂದು ಪಂದ್ಯ ಸೋಲದೇ ಏಷ್ಯನ್ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿರುವುದು ವಿಶೇಷ.
