RCB ಮೌಲ್ಯ ಹೆಚ್ಚಳ: ಐಪಿಎಲ್ ಆದಾಯದಲ್ಲಿ ಭಾರೀ ಕುಸಿತ..!
IPL 2026: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ನ ಆದಾಯದಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಕಳೆದ ಕೆಲ ವರ್ಷಗಳಿಂದ ಏರಿಕೆಯಲ್ಲಿ ಐಪಿಎಲ್ ಇಕೊಸಿಸ್ಟಂ ಆದಾಯವು ಕಳೆದ ಎರಡು ವರ್ಷಗಳಿಂದ ಇಳಿಮುಖದತ್ತ ಸಾಗತ್ತಿದ್ದು, ಇದು ಭಾರತೀಯ ಕ್ರಿಕೆಟ್ ಮಂಡಳಿಯ ಚಿಂತೆಯನ್ನು ಹೆಚ್ಚಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL) ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ರೀಡಾ ಲೀಗ್ ಆಗಿಯೂ ಐಪಿಎಲ್ ಗುರುತಿಸಿಕೊಂಡಿದೆ. ಆದರೆ ಮೊದಲ ಬಾರಿಗೆ, ಐಪಿಎಲ್ ಬೆಳವಣಿಗೆಯಲ್ಲಿ ಭಾರೀ ಕುಸಿತ ಕಂಡಿದೆ. 2008 ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಲೀಗ್ ಅನ್ನು ಪ್ರಾರಂಭಿಸಿದಾಗ, ಅದರ ಮೌಲ್ಯ 19,500 ಕೋಟಿ ರೂ.ಗಳಷ್ಟಿತ್ತು. ಆ ಸಂಖ್ಯೆ ಇದೀಗ 76,100 ಕೋಟಿ ರೂ.ಗಳನ್ನು ತಲುಪಿದೆ. ಆದರೆ ಇದು ಕುಸಿತದೊಂದಿಗೆ ಎಂಬುದು ಇಲ್ಲಿ ಉಲ್ಲೇಖಾರ್ಹ.
ಅಕ್ಟೋಬರ್ 15 ರಂದು ಬಿಡುಗಡೆಯಾದ D&P ಸಲಹಾ ಸಂಸ್ಥೆಯ ವರದಿಯ ಪ್ರಕಾರ, IPL ನ ಇಕೊಸಿಸ್ಟಂ ಮೌಲ್ಯವು ಸುಮಾರು 8% ರಷ್ಟು ಕಡಿಮೆಯಾಗಿದೆ. ಅಂದರೆ 2024 ರಲ್ಲಿ ಐಪಿಎಲ್ ಇಕೊಸಿಸ್ಟಂ ಮೌಲ್ಯ 82,700 ಕೋಟಿ ರೂ. ಇತ್ತು. ಈ ಬಾರಿ ಅದು 76,100 ಕೋಟಿ ರೂ.ಗೆ ಇಳಿದಿದೆ. ಅಂದರೆ ಒಂದೇ ವರ್ಷದಲ್ಲಿ ಐಪಿಎಲ್ ಮೌಲ್ಯಮಾಪನದಲ್ಲಿ 6,600 ಕೋಟಿ ರೂ. ವ್ಯತ್ಯಾಸ ಕಂಡು ಬಂದಿದೆ.
ಇದು ಬಿಸಿಸಿಐ ಆದಾಯದ ಮೇಲೂ ಭಾರಿ ಪರಿಣಾಮ ಬೀರಲಿದೆ. ಏಕೆಂದರೆ 2023 ರಲ್ಲಿ 92,500 ಕೋಟಿ ರೂ.ಗೆ ತಲುಪಿದ್ದ ಐಪಿಎಲ್ ಮೌಲ್ಯ ಕಳೆದ ಎರಡು ವರ್ಷಗಳಿಂದ ಇಳಿಮುಖವಾಗುತ್ತಿದೆ. ಅಂದರೆ ಐಪಿಎಲ್ ಇಕೊಸಿಸ್ಟಂ ಮೌಲ್ಯವು ಕೇವಲ 3 ವರ್ಷಗಳಲ್ಲಿ 17.73% ರಷ್ಟು ಕುಸಿತವಾಗಿದೆ.
ಐಪಿಎಲ್ ಮೌಲ್ಯದ ಕುಸಿತಕ್ಕೆ ಕಾರಣವೇನು?
ಐಪಿಎಲ್ನ ಮೌಲ್ಯಗಳ ದಿಢೀರ್ ಕುಸಿತಕ್ಕೆ ಪ್ರಮುಖ ಕಾರಣ ಆನ್‌ಲೈನ್ ಗೇಮಿಂಗ್ ಬಿಲ್ 2025 ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ ಹಾಗೂ ಜಿಯೋಸಿನಿಮಾ-ಡಿಸ್ನಿ+ ಹಾಟ್‌ಸ್ಟಾರ್ ವಿಲೀನ ಎಂದು ಬಿಯಾಂಡ್ 22 ಯಾರ್ಡ್ಸ್ನ – ‘ದಿ ಪವರ್ ಆಫ್ ಪ್ಲಾಟ್‌ಫಾರ್ಮ್ಸ್, ದಿ ಪ್ರೈಸ್ ಆಫ್ ರೆಗ್ಯುಲೇಷನ್’ ವರದಿಯಲ್ಲಿ ತಿಳಿಸಲಾಗಿದೆ.
ಆನ್‌ಲೈನ್ ಗೇಮಿಂಗ್ ಬಿಲ್‌ನಿಂದಾಗಿ, ಐಪಿಎಲ್ ಇಕೊಸಿಸ್ಟಂ ವಾರ್ಷಿಕ ಜಾಹೀರಾತು ಮತ್ತು ಪ್ರಾಯೋಜಕತ್ವದ ಆದಾಯದಲ್ಲಿ ಸುಮಾರು 1,500 ರಿಂದ 2,000 ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸಿತು. ಜಿಯೋ-ಡಿಸ್ನಿ ವಿಲೀನವು ಪ್ರಸಾರ ಮತ್ತು ಸ್ಟ್ರೀಮಿಂಗ್ ಹಕ್ಕುಗಳ ಹರಾಜಿನಲ್ಲಿ ಸ್ಪರ್ಧೆಯಲ್ಲಿ ಇಳಿಕೆಯನ್ನು ಕಂಡಿತು. ಇವುಗಳೆಲ್ಲವೂ ಸೇರಿ, ಎರಡು ವರ್ಷಗಳಲ್ಲಿ ಐಪಿಎಲ್ ಇಕೊಸಿಸ್ಟಂ ಮೌಲ್ಯದಲ್ಲಿ 16,400 ಕೋಟಿ ರೂಪಾಯಿಗಳ ಇಳಿಕೆಯಾಗಿದೆ ಎಂದು ತಿಳಿಸಲಾಗಿದೆ.
RCB ನಂಬರ್ ಒನ್:
ಒಂದೆಡೆ ಐಪಿಎಲ್ ಇಕೊಸಿಸ್ಟಂ ಮೌಲ್ಯದಲ್ಲಿ ಕುಸಿತವಾಗಿದ್ದರೆ, ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಶ್ರೇಯಾಂಕಗಳ ಗಮನಾರ್ಹ ಪುನರ್ರಚನೆಯಲ್ಲಿ ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಆರ್‌ಸಿಬಿ ತನ್ನ ಬ್ರ್ಯಾಂಡ್ ವಾಲ್ಯೂ ಅನ್ನು ಹೆಚ್ಚಿಸಿಕೊಂಡಿದ್ದು, ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಹಿಂದಿಕ್ಕಿದೆ.
ಆರ್‌ಸಿಬಿ ಫ್ರಾಂಚೈಸಿಯ ಬ್ರ್ಯಾಂಡ್ ಮೌಲ್ಯವು 2024 ರಲ್ಲಿ $227 ಮಿಲಿಯನ್ ಇತ್ತು. ಈ ಬಾರಿ ಅದು $269 ಮಿಲಿಯನ್‌ಗೆ ಏರಿದೆ. ಈ ಮೂಲಕ ಇತರೆ ಚಾಂಪಿಯನ್ ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಇನ್ನು ಮುಂಬೈ ಇಂಡಿಯನ್ಸ್ $242 ಮಿಲಿಯನ್‌ನೊಂದಿಗೆ ಎರಡನೇ ಸ್ಥಾನಕ್ಕೆ ಏರಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ $235 ಮಿಲಿಯನ್‌ನೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ.
ಇದನ್ನೂ ಓದಿ: ಐಸಿಸಿ ಹೊಸ ನಿಯಮ: ಈ ಶಾಟ್ ಹೊಡೆದ್ರೆ ಇನ್ಮುಂದೆ ರನ್ ಇಲ್ಲ..!
ಹಾಗೆಯೇ ಈ ಬಾರಿಯ ಐಪಿಎಲ್ನಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿರುವ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಬ್ರ್ಯಾಂಡ್ ಮೌಲ್ಯದಲ್ಲಿ ಗಮನಾರ್ಹ 39.6% ಹೆಚ್ಚಳವನ್ನು ಪಡೆದುಕೊಂಡಿದೆ. ಈ ಮೂಲಕ ಒಟ್ಟು ಮೌಲ್ಯವನ್ನು $141 ಮಿಲಿಯನ್‌ಗೆ ಏರಿಸಿದೆ.
ಐಪಿಎಲ್ ತಂಡಗಳ ಬ್ರ್ಯಾಂಡ್ ಮೌಲ್ಯ ( ಹೌಲಿಹಾನ್ ಲೋಕೆ):
- ರಾಯಲ್ ಚಾಲೆಂಜರ್ಸ್ ಬೆಂಗಳೂರು – 269 ಮಿಲಿಯನ್ ಡಾಲರ್
- ಮುಂಬೈ ಇಂಡಿಯನ್ಸ್ – 242 ಮಿಲಿಯನ್ ಡಾಲರ್
- ಚೆನ್ನೈ ಸೂಪರ್ ಕಿಂಗ್ಸ್ – 235 ಮಿಲಿಯನ್ ಡಾಲರ್
- ಕೊಲ್ಕತ್ತಾ ನೈಟ್ ರೈಡರ್ಸ್– 227 ಮಿಲಿಯನ್ ಡಾಲರ್
- ಸನ್ರೈಸರ್ಸ್ ಹೈದರಾಬಾದ್ – 154 ಮಿಲಿಯನ್ ಡಾಲರ್
- ಡೆಲ್ಲಿ ಕ್ಯಾಪಿಟಲ್ಸ್– 152 ಮಿಲಿಯನ್ ಡಾಲರ್
- ರಾಜಸ್ಥಾನ್ ರಾಯಲ್ಸ್– 146 ಮಿಲಿಯನ್ ಡಾಲರ್
- ಗುಜರಾತ್ ಟೈಟಾನ್ಸ್– 142 ಮಿಲಿಯನ್ ಡಾಲರ್
- ಪಂಜಾಬ್ ಕಿಂಗ್ಸ್– 141 ಮಿಲಿಯನ್ ಡಾಲರ್
- ಲಕ್ನೋ ಸೂಪರ್ ಜೈಂಟ್ಸ್ – 122 ಮಿಲಿಯನ್ ಡಾಲರ್.
Published On - 12:00 pm, Sat, 18 October 25
