WPL 2025: ಎರಡು ನಗರಗಳಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್
Women’s Premier League (WPL 2025): ವುಮೆನ್ಸ್ ಪ್ರೀಮಿಯರ್ ಲೀಗ್ನ ಚೊಚ್ಚಲ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇನ್ನು ದ್ವಿತೀಯ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಈ ಟೂರ್ನಿಯ ಮೂರನೇ ಸೀಸನ್ಗಾಗಿ ಸಿದ್ಧತೆಗಳು ಶುರುವಾಗಿದೆ.
ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಅನ್ನು ಎರಡು ನಗರಗಳಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಅದರಂತೆ WPL 2025 ಬರೋಡಾ ಮತ್ತು ಲಕ್ನೋದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ 2024ರ ವುಮೆನ್ಸ್ ಪ್ರೀಮಿಯರ್ ಲೀಗ್ ಆವೃತ್ತಿಯನ್ನು ಬೆಂಗಳೂರು ಮತ್ತು ದೆಹಲಿ ನಗರಗಳಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಮೊದಲಾರ್ಧದ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದರೆ, ದ್ವಿತೀಯಾರ್ಧದ ಮ್ಯಾಚ್ಗಳು ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಜರುಗಿತ್ತು.
ಹೀಗೆ ಎರಡು ಸ್ಟೇಡಿಯಂನಲ್ಲಿ ಟೂರ್ನಿ ಆಯೋಜಿಸಿ ಯಶಸ್ವಿಯಾಗಿರುವುದರಿಂದ ಈ ಬಾರಿ ಕೂಡ ಎರಡು ನಗರಗಳನ್ನು ಕೇಂದ್ರೀಕರಿಸಿ ಇಡೀ ಟೂರ್ನಿ ನಡೆಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಅದರಂತೆ ಮೊದಲಾರ್ಧದ ಪಂದ್ಯಗಳು ಲಕ್ನೋದಲ್ಲಿ ನಡೆಯುವ ಸಾಧ್ಯತೆಯಿದ್ದು, ಫೈನಲ್ ಸೇರಿದಂತೆ ದ್ವಿತೀಯಾರ್ಧದ ಪಂದ್ಯಗಳಿಗೆ ಬರೋಡಾ ಆತಿಥ್ಯವಹಿಸಲಿದೆ.
ಈ ಬಗ್ಗೆ ಈಗಾಗಲೇ ಭಾರತೀಯ ಕ್ರಿಕೆಟ್ ಮಂಡಳಿಯು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (UPCA) ಮತ್ತು ಬರೋಡಾ ಕ್ರಿಕೆಟ್ ಸಂಸ್ಥೆ (BCA) ಯೊಂದಿಗೆ ಅನೌಪಚಾರಿಕ ಚರ್ಚೆ ನಡೆಸಿದೆ ಎಂದು ತಿಳಿದುಬಂದಿದೆ. ಹೀಗಾಗಿ ಈ ಎರಡು ನಗರಗಳಲ್ಲಿನ ಸ್ಟೇಡಿಯಂಗಳಲ್ಲೇ ವುಮೆನ್ಸ್ ಪ್ರೀಮಿಯರ್ ಲೀಗ್ ಜರುಗುವುದು ಖಚಿತ ಎನ್ನಬಹುದು.
ವುಮೆನ್ಸ್ ಪ್ರೀಮಿಯರ್ ಲೀಗ್ ಯಾವಾಗ ಶುರು?
ಪ್ರಸ್ತುತ ಮಾಹಿತಿ ಪ್ರಕಾರ ವುಮೆನ್ಸ್ ಪ್ರೀಮಿಯರ್ ಲೀಗ್ನ 3ನೇ ಆವೃತ್ತಿಯನ್ನು ಫೆಬ್ರವರಿ 6 ಅಥವಾ 7 ರಂದು ಶುರು ಮಾಡಲು ಬಿಸಿಸಿಐ ಯೋಜನೆ ರೂಪಿಸಿದೆ. ಇನ್ನು ಫೈನಲ್ ಪಂದ್ಯವು ಮಾರ್ಚ್ 8 ಅಥವಾ 9 ರಂದು ನಡೆಯಲಿದೆ.
ಇದನ್ನೂ ಓದಿ: ಅವರಿಲ್ಲ, ಇವರಿಲ್ಲ… ಸಿರಾಜ್ ಬೆನ್ನು ಮೂಳೆ ಮುರಿಯುತ್ತಿರುವ ಬಿಸಿಸಿಐ
23 ಪಂದ್ಯಗಳ ವುಮೆನ್ಸ್ ಪ್ರೀಮಿಯರ್ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡಗಳು ಕಣಕ್ಕಿಳಿಯುವ ಸಾಧ್ಯತೆಯಿದೆ.