BBL: 14 ಎಸೆತಗಳಲ್ಲಿ 76 ರನ್..! ಮ್ಯಾಕ್ಸ್‌ವೆಲ್ ಕೈಬಿಟ್ಟು ತಪ್ಪು ಮಾಡ್ತಾ ಆರ್‌ಸಿಬಿ?
Glenn Maxwell: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅದ್ಭುತ ಪ್ರದರ್ಶನ ಮುಂದುವರೆದಿದೆ. ಮೆಲ್ಬೋರ್ನ್ ಸ್ಟಾರ್ಸ್ ಪರ ಆಡುತ್ತಿರುವ ಅವರು 52 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 4 ಬೌಂಡರಿಗಳ ಸಹಿತ 90 ರನ್ ಗಳಿಸಿದ್ದಾರೆ. ತಮ್ಮ ಆಕರ್ಷಕ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದ ಮ್ಯಾಕ್ಸ್‌ವೆಲ್ ಅವರನ್ನು ಆರ್‌ಸಿಬಿ ತಂಡ ಕೈಬಿಟ್ಟಿರುವುದು ಅಭಿಮಾನಿಗಳಲ್ಲಿ ನಿರಾಶೆಯನ್ನುಂಟು ಮಾಡಿದೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಸ್ಫೋಟಕ ಆಟದ ಮೂಲಕ ಮೈದಾನದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಈ ಲೀಗ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪರ ಕಣಕ್ಕಿಳಿಯುತ್ತಿರುವ ಮ್ಯಾಕ್ಸ್‌ವೆಲ್ 6ನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿದು ಬೌಂಡರಿ ಸಿಕ್ಸರ್ಗಳ ಮಳೆಗರಿದಿದ್ದಾರೆ. ಎದುರಾಳಿ ತಂಡದ ಪ್ರತಿಯೊಬ್ಬ ಬೌಲರ್ಗಳನ್ನು ಕಾಡಿದ ಮ್ಯಾಕ್ಸ್‌ವೆಲ್ ಕೇವಲ 52 ಎಸೆತಗಳಲ್ಲಿ 4 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್ಗಳ ಸಹಿತ 90 ರನ್‌ಗಳ ಗೆಲುವಿನ ಇನ್ನಿಂಗ್ಸ್ ಆಡಿದ್ದಾರೆ. ಅಂದರೆ ಮ್ಯಾಕ್ಸ್‌ವೆಲ್ ಕೇವಲ ಬೌಂಡರಿ ಹಾಗೂ ಸಿಕ್ಸರ್ಗಳಿಂದಲೇ ಬರೋಬ್ಬರಿ 76 ರನ್ ಕಲೆಹಾಕಿದ್ದಾರೆ.
ಮೆಲ್ಬೋರ್ನ್ ಸ್ಟಾರ್ಸ್ಗೆ ಆರಂಭಿಕ ಆಘಾತ
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೆಲ್ಬೋರ್ನ್ ಸ್ಟಾರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 165 ರನ್ ಕಲೆಹಾಕಿತು. ಮ್ಯಾಕ್ಸ್‌ವೆಲ್ ಕ್ರೀಸ್ಗೆ ಇಳಿಯುವವರೆಗೂ ಈ ತಂಡ ನೂರರ ಗಡಿ ದಾಟುವುದು ಕಷ್ಟ ಎಂದು ತೋರುತ್ತಿತ್ತು. ಆದರೆ ಬಂದೊಡನೆ ಹೊಡಿಬಡಿ ಆಟಕ್ಕೆ ಮುಂದಾದ ಮ್ಯಾಕ್ಸ್‌ವೆಲ್ ತಂಡವನ್ನು ಸ್ಪರ್ಧಾತ್ಮಕ ಸ್ಕೋರ್ಗೆ ಕೊಂಡೊಯ್ಯವಲ್ಲಿ ಯಶಸ್ವಿಯಾದರು. ಮ್ಯಾಕ್ಸ್ವೆಲ್ಗೂ ಮುನ್ನ ತಂಡದ ಐವರು ಬ್ಯಾಟ್ಸ್ಮನ್ಗಳಲ್ಲಿ ಇಬ್ಬರು ಶೂನ್ಯಕ್ಕೆ ಔಟಾಗಿದ್ದರೆ, ಉಳಿದ ಮೂವರು 25,15,18 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡಿದ್ದರು.
ಮ್ಯಾಕ್ಸ್‌ವೆಲ್ ಸ್ಫೋಟಕ ಇನ್ನಿಂಗ್ಸ್
ಹೀಗಾಗಿ 7ನೇ ಓವರ್ವರೆಗೆ ತಂಡ 4 ವಿಕೆಟ್ ಕಳೆದುಕೊಂಡು 45 ರನ್ ಗಳಿಸಿತ್ತು. ಈ ವೇಳೆ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ಗೆ ಬಂದರು. ಆ ಬಳಿಕವೂ ತಂಡದ ಪೆವಿಲಿಯನ್ ಪರೇಡ್ ಮುಂದುವರೆದ ಕಾರಣ 11 ಓವರ್‌ಗಳಲ್ಲಿ 75 ರನ್ ಕಲೆಹಾಕುವಷ್ಟರಲ್ಲಿ 7 ವಿಕೆಟ್‌ಗಳು ಉರುಳಿದವು. ಹೀಗಾಗಿ ಇಡೀ ತಂಡದ ಇನ್ನಿಂಗ್ಸ್ ಜವಾಬ್ದಾರಿ ವಹಿಸಿಕೊಂಡ ಮ್ಯಾಕ್ಸ್‌ವೆಲ್, 9 ನೇ ಕ್ರಮಾಂಕದಲ್ಲಿ ಬಂದ ಉಸಾಮಾ ಮಿರ್ ಅವರ ಜೊತೆಗೂಡಿ ತಂಡವನ್ನು 150 ರನ್‌ಗಳ ಗಡಿ ದಾಟಿಸಿದರು.
Just another INSANE Glenn Maxwell knock 🤯
Enjoy all the boundaries from the man himself! #BBL14 pic.twitter.com/UByut1mox5
— KFC Big Bash League (@BBL) January 12, 2025
19ನೇ ಓವರ್‌ನಲ್ಲಿ ಉಸಾಮಾ ಮಿರ್ ಔಟಾಗುವ ಹೊತ್ತಿಗೆ, ಮ್ಯಾಕ್ಸ್‌ವೆಲ್ ಕೇವಲ 46 ಎಸೆತಗಳಲ್ಲಿ 81 ರನ್‌ಗಳ ಪ್ರಮುಖ ಪಾಲುದಾರಿಕೆಯನ್ನು ಮಾಡಿದ್ದರು. ಆದರೆ ಈ ಅವಧಿಯಲ್ಲಿ ಉಸಾಮಾ ಕೇವಲ 5 ಎಸೆತಗಳನ್ನು ಎದುರಿಸಿದರೂ ಒಂದೇ ಒಂದು ರನ್ ಗಳಿಸಲಿಲ್ಲ ಎಂಬುದು ಕುತೂಹಲಕಾರಿ ಸಂಗತಿ. ಈ ಜೊತೆಯಾಟದಲ್ಲಿ ಮ್ಯಾಕ್ಸ್‌ವೆಲ್ 46 ಎಸೆತಗಳಲ್ಲಿ 79 ರನ್ ಗಳಿಸಿದರೆ, 2 ಹೆಚ್ಚುವರಿ ರನ್‌ಗಳಿ ತಂಡದ ಖಾತೆ ಸೇರಿದ್ದವು.
ತಪ್ಪು ಮಾಡ್ತಾ ಆರ್‌ಸಿಬಿ?
ಈ ಪಂದ್ಯಕ್ಕೂ ಮುನ್ನ ನಡೆದಿದ್ದ ಸಿಡ್ನಿ ಸಿಕ್ಸರ್ ತಂಡದ ವಿರುದ್ಧವೂ ಮ್ಯಾಕ್ಸ್‌ವೆಲ್ 52 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಇದೀಗ ಮ್ಯಾಕ್ಸ್‌ವೆಲ್ ಅವರ ಆಟವನ್ನು ನೋಡಿದ ಆರ್‌ಸಿಬಿ ಅಭಿಮಾನಿಗಳು, ಆರ್‌ಸಿಬಿ ಫ್ರಾಂಚೈಸಿ ಮ್ಯಾಕ್ಸ್‌ವೆಲ್ ಅವರನ್ನು ತಂಡದಿಂದ ಕೈಬಿಟ್ಟು ದೊಡ್ಡ ತಪ್ಪು ಮಾಡಿದೆ ಎನ್ನುತ್ತಿದ್ದಾರೆ. ವಾಸ್ತವವಾಗಿ ಮ್ಯಾಕ್ಸ್‌ವೆಲ್ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುತ್ತಿದ್ದರು. ಆದರೆ ಕಳೆದ ಸೀಸನ್ನಲ್ಲಿ ಅವರ ಪ್ರದರ್ಶನ ತೀರ ಕಳಪೆಯಾಗಿತ್ತು. ಹೀಗಾಗಿ ಅವರನ್ನು ಹರಾಜಿಗೂ ಮುನ್ನವೇ ತಂಡದಿಂದ ಕೈಬಿಡಲಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ