IND vs AUS: ಸೆಮಿಫೈನಲ್ ಪಂದ್ಯಕ್ಕೆ ಭಾರತ ತಂಡದಲ್ಲಾಗುತ್ತಾ ಬದಲಾವಣೆ? ಯಾರು ಇನ್, ಯಾರು ಔಟ್?
India vs Australia Semi-Final: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ. ನ್ಯೂಜಿಲೆಂಡ್ ವಿರುದ್ಧದ ಗೆಲುವಿನ ಸಂಯೋಜನೆಯೇ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ನಿರೀಕ್ಷೆ ಇದೆ. ವರುಣ್ ಚಕ್ರವರ್ತಿ ಮತ್ತೆ ತಂಡದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ.

2025 ರ ಚಾಂಪಿಯನ್ಸ್ ಟ್ರೋಫಿಯ (Champions Trophy 2025) ಮೊದಲ ಸೆಮಿಫೈನಲ್‌ಗೆ ಕ್ಷಣಗಣನೆ ಆರಂಭವಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಸೆಮೀಸ್ ಕಾಳಗ ಮಾರ್ಚ್ 4 ರಂದು ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಎರಡೂ ತಂಡಗಳು ಇಲ್ಲಿಯವರೆಗೆ ಟೂರ್ನಿಯಲ್ಲಿ ಅಜೇಯವಾಗಿದ್ದು, ನಿರ್ಣಾಯಕ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ. ಈ ಪಂದ್ಯದಲ್ಲಿ ಸೋತ ತಂಡ ಪಂದ್ಯಾವಳಿಯಿಂದ ಹೊರಗುಳಿಯಬೇಕಾಗುತ್ತದೆ. ಹೀಗಾಗಿ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಉತ್ತಮ ತಂಡವನ್ನು ಕಟ್ಟಿಕೊಂಡು ಕಣಕ್ಕಿಳಿಯುವುದು ಬಹಳ ಮುಖ್ಯ. ಆದ್ದರಿಂದ ಟೀಂ ಇಂಡಿಯಾ ನಾಯಕ ಈ ರೋಹಿತ್ ಶರ್ಮಾ ಈ ಹೈವೋಲ್ಟೇಜ್ ಕದನಕ್ಕೆ ಯಾವ ಪ್ಲೇಯಿಂಗ್ 11ನೊಂದಿಗೆ ಕಣಕ್ಕಿಳಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ವಾಸ್ತವವಾಗಿ ಲೀಗ್ನ ಮೊದಲೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಮೂವರು ವೇಗದ ಬೌಲರ್ಗಳು ಹಾಗೂ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿತ್ತು. ಆದರೆ ಕಿವೀಸ್ ವಿರುದ್ಧದ ಪಂದ್ಯಲ್ಲಿ ಹರ್ಷಿತ್ ರಾಣಾರನ್ನು ತಂಡದಿಂದ ಹೊರಗಿಟ್ಟು, ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವತಿಗೆ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಅವಕಾಶ ಸಿಗುತ್ತಿದ್ದಂತೆ ಅದನ್ನು ಎರಡು ಕೈಗಳಿಂದ ಬಾಚಿಕೊಂಡಿದ್ದ ವರುಣ್ ಚಾಂಪಿಯನ್ಸ್ ಟ್ರೋಫಿಯ ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿ ಮಿಂಚಿದ್ದರು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧವೂ ರೋಹಿತ್ ಅದೇ ಫಾರ್ಮುಲಾವನ್ನು ಬಳಸುತ್ತಾರಾ ಅಥವಾ ಮತ್ತೊಬ್ಬ ವೇಗಿಯನ್ನು ಕಣಕ್ಕಿಳಿಸುತ್ತಾರಾ? ಎಂಬುದು ಪ್ರಶ್ನೆಯಾಗಿದೆ.
ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ
ಮೇಲೆ ಹೇಳಿದಂತೆ ನ್ಯೂಜಿಲೆಂಡ್ ವಿರುದ್ಧದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡವು 4 ಸ್ಪಿನ್ನರ್‌ಗಳು ಮತ್ತು ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿದಿತ್ತು. ಈ ತಂತ್ರ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು. ಭಾರತ ಕಲೆಹಾಕಿದ್ದ 249 ರನ್‌ಗಳ ಸ್ಕೋರ್ ಅನ್ನು ರಕ್ಷಿಸುವಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರವಹಿಸಿದ್ದರು. ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ನ 10 ವಿಕೆಟ್‌ಗಳಲ್ಲಿ 9 ವಿಕೆಟ್‌ಗಳನ್ನು ಸ್ಪಿನ್ನರ್‌ಗಳೇ ಕಬಳಿಸಿದರು. ಅಂತಹ ಪರಿಸ್ಥಿತಿಯಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲೂ ತಂಡದಲ್ಲಿ ಯಾವುದೇ ಬದಲಾವಣೆಗೆ ಅವಕಾಶವಿಲ್ಲ ಎಂದು ತೋರುತ್ತದೆ.
ಇದನ್ನೂ ಓದಿ: IND vs AUS: ಭಾರತ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಆಸೀಸ್ ಪಡೆಯಲ್ಲಿ ಬದಲಾವಣೆ ಖಚಿತ
ಗೆಲುವಿನ ಸಂಯೋಜನೆ ಬದಲಾಗುವ ಸಾಧ್ಯತೆಗಳಿಲ್ಲ
ಗೆಲುವಿನ ಸಂಯೋಜನೆಯನ್ನು ಅದರಲ್ಲೂ ಸೆಮಿಫೈನಲ್‌ನಂತಹ ಪ್ರಮುಖ ಪಂದ್ಯವಿರುವಾಗ ಯಾವ ತಂಡವೂ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆಯನ್ನು ತರುವುದಿಲ್ಲ. ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ಗೌತಮ್ ಗಂಭೀರ್ ಕೂಡ ಗೆಲುವಿನ ಸಂಯೋಜನೆಯನ್ನೇ ಕಣಕ್ಕಿಳಿಸಲು ಹೆಚ್ಚು ಒತ್ತು ನೀಡುತ್ತಾರೆ. ಹೀಗಾಗಿ ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ವಿರುದ್ಧ ಕಣಕ್ಕಿಳಿದಿದ್ದ ತಂಡವೇ ಆಡಲಿದೆ. ಇದರರ್ಥ ಹರ್ಷಿತ್ ರಾಣಾ ಸೆಮೀಸ್ ಪಂದ್ಯದಲ್ಲೂ ತಂಡದಿಂದ ಹೊರಗುಳಿಯಬೇಕಾಗುತ್ತದೆ. ಹಾಗೆಯೇ ಅರ್ಷದೀಪ್ ಸಿಂಗ್ ಮತ್ತು ರಿಷಭ್ ಪಂತ್ ಕೂಡ ಎಂದಿನಂತೆ ಬೆಂಚ್ ಕಾಯಬೇಕಾಗುತ್ತದೆ.
ಭಾರತ ಸಂಭಾವ್ಯ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ ಮತ್ತು ಮೊಹಮ್ಮದ್ ಶಮಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
