Rishabh Pant: ಜಗತ್ತಿನ ಅತಿದೊಡ್ಡ ಕ್ರೀಡಾ ಪ್ರಶಸ್ತಿಗೆ ರಿಷಭ್ ಪಂತ್ ನಾಮನಿರ್ದೇಶನ
Rishabh Pant: ರಿಷಭ್ ಪಂತ್ ಅವರು 2025 ರ ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಯ "ವರ್ಷದ ಕಮ್‌ಬ್ಯಾಕ್" ವಿಭಾಗಕ್ಕೆ ನಾಮನಿರ್ದೇಶನಗೊಂಡಿದ್ದಾರೆ. 2022 ರ ಡಿಸೆಂಬರ್ನಲ್ಲಿ ಗಂಭೀರ ಕಾರು ಅಪಘಾತಕ್ಕೀಡಾಗಿದ್ದ ಪಂತ್ ಮತ್ತೆ ಚೇತರಿಸಿಕೊಂಡು ಕ್ರಿಕೆಟ್ ಮರಳಿದ್ದೆ ರೋಚಕ ಇತಿಹಾಸ. ಅಲ್ಲದೆ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ನಾಲ್ಕನೇ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೂ ಪಂತ್ ಪಾತ್ರರಾಗಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy 2025) ಟೀಂ ಇಂಡಿಯಾದ ಭಾಗವಾಗಿರುವ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ (Rishabh Pant) ಇದುವರೆಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿಲ್ಲ. ಅನುಭವಿ ಕೆಎಲ್ ರಾಹುಲ್ ಮೇಲೆ ಹೆಚ್ಚಿನ ಭರವಸೆ ಇಟ್ಟಿರುವ ಆಯ್ಕೆ ಮಂಡಳಿ ಆಡಿರುವ ಮೂರು ಪಂದ್ಯಗಳಲ್ಲೂ ರಾಹುಲ್ರನ್ನು ಕಣಕ್ಕಿಳಿಸಿದೆ. ಹೀಗಾಗಿ ಎರಡನೇ ವಿಕೆಟ್ ಕೀಪರ್ ಆಗಿ ತಂಡಕ್ಕೆ ಆಯ್ಕೆಯಾಗಿದ್ದ ರಿಷಬ್ ಪಂತ್ ಬೆಂಚ್ ಕಾಯಬೇಕಾಗಿದೆ. ಈ ನಡುವೆ ರಿಷಭ್ ಪಂತ್‌ಗೆ ಒಂದು ಒಳ್ಳೆಯ ಸುದ್ದಿ ಸಿಕ್ಕಿದೆ. ವಾಸ್ತವವಾಗಿ, ರಿಷಭ್ ಪಂತ್ ಅವರನ್ನು 2025 ರ ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಗೆ ವರ್ಷದ ಕಮ್‌ಬ್ಯಾಕ್ ವಿಭಾಗದಲ್ಲಿ ನಾಮನಿರ್ದೇಶನ ಮಾಡಲಾಗಿದೆ. ಈ ವಿಭಾಗದಲ್ಲಿ ಒಟ್ಟು 6 ಆಟಗಾರರನ್ನು ನಾಮನಿರ್ದೇಶನ ಮಾಡಲಾಗಿದ್ದು, ಇದರಲ್ಲಿ ಪಂತ್ ಕೂಡ ಒಬ್ಬರಾಗಿದ್ದಾರೆ.
ಭಾರತೀಯ ಕ್ರಿಕೆಟ್‌ಗೆ ಮಹತ್ವದ ಕ್ಷಣ
ರಿಷಭ್ ಪಂತ್ ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಎರಡನೇ ಭಾರತೀಯ ಕ್ರಿಕೆಟಿಗ. 2020 ರ ಆರಂಭದಲ್ಲಿ, ಸಚಿನ್ ತೆಂಡೂಲ್ಕರ್ ಅವರನ್ನು ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಅದೇ ಸಮಯದಲ್ಲಿ, ಪಂತ್ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಭಾರತದ ನಾಲ್ಕನೇ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಪಂತ್ಗೂ ಮೊದಲು ಸಚಿನ್ ತೆಂಡೂಲ್ಕರ್, ನೀರಜ್ ಚೋಪ್ರಾ ಮತ್ತು ವಿನೇಶ್ ಫೋಗಟ್ ಕೂಡ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಪ್ರಶಸ್ತಿಗೆ ನಾಮನಿರ್ದೇಶಿತರು
ರೆಬೆಕ್ಕಾ ಆಂಡ್ರೇಡ್ (ಬ್ರೆಜಿಲ್) ಜಿಮ್ನಾಸ್ಟಿಕ್ಸ್
ಕೇಲೆಬ್ ಡ್ರೆಸ್ಸೆಲ್ (ಯುಎಸ್ಎ) ಈಜು
ಲಾರಾ ಗಟ್-ಟೆರುಲ್ (ಸ್ವಿಟ್ಜರ್ಲೆಂಡ್) ಆಲ್ಪೈನ್ ಸ್ಕೀಯಿಂಗ್
ಮಾರ್ಕ್ ಮಾರ್ಕ್ವೆಜ್ (ಸ್ಪೇನ್) ಮೋಟಾರ್‌ಸೈಕ್ಲಿಂಗ್
ರಿಷಭ್ ಪಂತ್ (ಭಾರತ) ಕ್ರಿಕೆಟ್
ಅರಿಯೇನ್ ಟಿಟ್ಮಸ್ (ಆಸ್ಟ್ರೇಲಿಯಾ) ಈಜು
ಕಾರು ಅಪಘಾತಕ್ಕೀಡಾಗಿದ್ದ ರಿಷಭ್ ಪಂತ್
ವಾಸ್ತವವಾಗಿ 2022 ರ ಡಿಸೆಂಬರ್ನಲ್ಲಿ ಪಂತ್, ರೂರ್ಕಿ ಬಳಿಯ ಹೆದ್ದಾರಿಯಲ್ಲಿ ಕಾರು ಅಪಘಾತಕ್ಕೀಡಾಗಿದ್ದರು. ಈ ಅಪಘಾತದಲ್ಲಿ ಪಂತ್ ಅವರ ತಲೆ, ಮೊಣಕಾಲು, ಕಾಲು ಮತ್ತು ಬೆನ್ನಿಗೆ ಗಂಭೀರ ಗಾಯಗಳಾಗಿದ್ದವು. ಇದಾದ ನಂತರ ಅವರು ಸುಮಾರು 15 ತಿಂಗಳು ಕ್ರಿಕೆಟ್‌ನಿಂದ ದೂರವಿದ್ದರು. ಆರಂಭದಲ್ಲಿ ಪಂತ್ ಮತ್ತೆ ಕ್ರಿಕೆಟ್ ಆಡುವುದು ಅಸಾಧ್ಯ ಎಂದು ಹೇಳಲಾಗುತ್ತಿತ್ತು. ಆದರೆ ಫಿನಿಕ್ಸ್ ಪಕ್ಷಿಯಂತೆ ಎದ್ದು ಬಂದಿದ್ದ ಪಂತ್ 2024 ರ ಐಪಿಎಲ್ ಮೂಲಕ ಮತ್ತೆ ಕ್ರಿಕೆಟ್‌ಗೆ ಮರಳಿದ್ದರು.
ಇದನ್ನೂ ಓದಿ: IPL 2025: ಲಕ್ನೋ ತಂಡಕ್ಕೆ ರಿಷಬ್ ಪಂತ್ ನಾಯಕ; ಅಧಿಕೃತ ಘೋಷಣೆ
ಇದಾದ ನಂತರ ಪಂತ್‌ಗೆ 2024 ರ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಕ್ಕಿತು. ಆ ಬಳಿಕ ಭಾರತ ಟೆಸ್ಟ್ ಮತ್ತು ಏಕದಿನ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡರು. ಇಂತಹ ಪರಿಸ್ಥಿತಿಯಲ್ಲಿ ಪಂತ್, ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿರುವುದು ಅತ್ಯಂತ ಗೌರವದ ವಿಷಯವಾಗಿದೆ. ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಯನ್ನು ಕ್ರೀಡಾ ಆಸ್ಕರ್ ಎಂದು ಕರೆಯಲಾಗುತ್ತದೆ. ಹೀಗಾಗಿ ಪಂತ್ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ಭಾರತ ಕ್ರಿಕೆಟ್‌ಗೆ ಸ್ಮರಣೀಯ ಕ್ಷಣವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:41 pm, Mon, 3 March 25