IPL 2025: ಆರ್ಸಿಬಿ ವಿರುದ್ಧದ ಸೋಲಿಗೆ ವಿಚಿತ್ರ ನೆಪ ಹೇಳಿದ ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್
RCB vs CSK: ಐಪಿಎಲ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭಾರಿ ಸೋಲು ಅನುಭವಿಸಿದೆ. ಪಂದ್ಯದ ಬಳಿಕ ಮಾತನಾಡಿರುವ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್, ಚೆಪಾಕ್ ಪಿಚ್ ಅನ್ನು ಅರ್ಥಮಾಡಿಕೊಳ್ಳಲು ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ. ಸ್ಪಿನ್ ಬೌಲರ್‌ಗಳಿಗೆ ಸಹಾಯ ಮಾಡುವ ಪಿಚ್ ಇದೀಗ ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿದೆ ಎಂದು ಅವರು ವಿವರಿಸಿದ್ದಾರೆ.

ಐಪಿಎಲ್ 2025 ರ (IPL 2025) ತನ್ನ ಎರಡನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ (RCB vs CSK) 50 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಈ ಪಂದ್ಯದಲ್ಲಿ ಸಿಎಸ್‌ಕೆ ಪ್ರದರ್ಶನ ವಿಶೇಷವೇನು ಆಗಿರಲಿಲ್ಲ. ತಂಡದ ಬ್ಯಾಟಿಂಗ್ ಸಂಪೂರ್ಣ ವಿಫಲವಾಗಿತ್ತು. ಹೀಗಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ತವರಿನಲ್ಲಿ ಅತ್ಯಂತ ದೊಡ್ಡ ಸೋಲನ್ನು ಎದುರಿಸಬೇಕಾಯಿತು. ಪಂದ್ಯದ ನಂತರ, ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಸೋಲಿಗೆ ಕಳಪೆ ಫೀಲ್ಡಿಂಗ್ ಕಾರಣ ಎಂದು ಹೇಳಿದ್ದರು. ಆದರೆ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ (Stephen Fleming) ಬೇರೆಯದೇ ಹೇಳಿಕೆ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಸಿಎಸ್‌ಕೆ ಸೋಲಿಗೆ ಫ್ಲೆಮಿಂಗ್ ಹೇಳಿದ್ದೇನು?
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ಕೋಚ್ ಸ್ಟೀಫನ್ ಫ್ಲೆಮಿಂಗ್, ಚೆಪಾಕ್ ಪಿಚ್ ಅನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸಿಎಸ್‌ಕೆ, ಚೆಪಾಕ್ ಪಿಚ್ ಅನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚೆಪಾಕ್ ಪಿಚ್ ಸ್ಪಿನ್ ಬೌಲರ್‌ಗಳಿಗೆ ಸಹಾಯಕವಾಗಿದೆ ಎಂದು ಪರಿಗಣಿಸಲಾಗಿದೆ. ಆದರೆ ಈ ಬಾರಿ ಬೇರೆಯದೇನೋ ಕಾಣುತ್ತಿದೆ. ಈ ಬಾರಿ ಸ್ಪಿನ್ನರ್‌ಗಳಿಗಿಂತ ವೇಗದ ಬೌಲರ್‌ಗಳಿಗೆ ಹೆಚ್ಚಿನ ಸಹಾಯ ಸಿಗುವಂತೆ ಕಾಣುತ್ತಿದೆ. ಆರ್‌ಸಿಬಿಯ ವೇಗದ ಬೌಲರ್‌ಗಳು ಇದರ ಸಂಪೂರ್ಣ ಲಾಭ ಪಡೆದರು. ಆದರೆ ಸಿಎಸ್‌ಕೆ ತಂಡದಲ್ಲಿ ಹೆಚ್ಚಿನ ಸ್ಪಿನ್ನರ್‌ಗಳಿದ್ದಾರೆ. ಇದು ತಂಡದ ಹಿನ್ನಡೆಗೆ ಕಾರಣವಾಯಿತು.
ನಾವು ಹಲವು ವರ್ಷಗಳಿಂದ ನಿಮಗೆ ಹೇಳುತ್ತಿರುವಂತೆ, ಚೆಪಾಕ್‌ನ ತವರು ಮೈದಾನದಲ್ಲಿ ಆಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನಾವು ಹಲವು ಬಾರಿ ತವರಿನ ಹೊರಗಿನ ಪಂದ್ಯಗಳನ್ನು ಗೆದ್ದಿದ್ದೇವೆ. ಆದರೆ ಚೆಪಾಕ್ ಪಿಚ್ ಅನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ. ನಾನು ತುಂಬಾ ಪ್ರಾಮಾಣಿಕನಾಗಿ ಹೇಳುತ್ತಿದ್ದೇನೆ, ಕಳೆದ ಕೆಲವು ವರ್ಷಗಳಿಂದ ನಾವು ಇಲ್ಲಿನ ವಿಕೆಟ್ ಅನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ.
IPL 2025: ಗುರಾಯಿಸಿದ ಖಲೀಲ್ಗೆ ಬಹಿರಂಗವಾಗಿಯೇ ವಾರ್ನಿಂಗ್ ಕೊಟ್ಟ ಕೊಹ್ಲಿ; ವಿಡಿಯೋ ವೈರಲ್
ಇಬ್ಬನಿ ಸಹಾಯ ಸಿಗಲಿಲ್ಲ
‘ಇದು ಹಳೆಯ ಚೆಪಾಕ್ ಅಲ್ಲ, ಹಿಂದಿನ ಪಿಚ್ನಲ್ಲಿ ನಾಲ್ಕು ಸ್ಪಿನ್ನರ್‌ಗಳನ್ನು ಆಡಿಸಬಹುದಾಗಿತ್ತು. ಆದರೆ ಈಗ ಪ್ರತಿಯೊಂದು ಪಿಚ್‌ನ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ನಾವು ನಿಜವಾಗಿಯೂ ಶ್ರಮಿಸಬೇಕು. ಈಗಿನ ಪಿಚ್ ತುಂಬಾ ಭಿನ್ನವಾಗಿರುತ್ತದೆ. ಮತ್ತೊಂದೆಡೆ, ಗುರಿ ಬೆನ್ನಟ್ಟುವ ತಂಡಕ್ಕೆ ಇಬ್ಬನಿ ಸಹಾಯ ಮಾಡುತ್ತದೆ ಎಂದು ನಾವು ಆಶಿಸಿದ್ದೇವು. ಆದರೆ ಇದು ಆಗಲಿಲ್ಲ, ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ ಇನ್ನಷ್ಟು ನಿಧಾನವಾಯಿತು. ಇದರಿಂದ ನಾವು ಗುರಿ ಬೆನ್ನಟ್ಟುವುದಕ್ಕೆ ಕಷ್ಟಪಡಬೇಕಾಯಿತು ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ