ಪಾಕ್ ರಾಷ್ಟ್ರೀಯ ತಂಡಕ್ಕಿಂತ ಲೋಕಲ್ ತಂಡವೇ ಮೇಲು ಎಂದ ಮಾಜಿ ಕ್ರಿಕೆಟಿಗ
Pakistan Team: ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ಗುಣಮಟ್ಟವು ತುಂಬಾ ಕೆಳಮಟ್ಟದಲ್ಲಿದೆ, ಸ್ಥಳೀಯ ತಂಡವೇ ಅವರಿಗಿಂತ ಉತ್ತಮವಾಗಿದೆ. ಪಾಕಿಸ್ತಾನ ಕ್ರಿಕೆಟ್‌ನ ಈ ಸ್ಥಿತಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಕಾರಣವೇ ಹೊರತು ಬೇರಾರೂ ಅಲ್ಲ. ತಂಡದ ಈ ಕಳಪೆ ಪ್ರದರ್ಶನಕ್ಕೆ ಪಿಸಿಬಿಯನ್ನು ದೂಷಿಸಬೇಕು ಎಂದು ಡ್ಯಾನಿಶ್ ಕನೇರಿಯಾ ಹೇಳಿದ್ದಾರೆ.

ಪ್ರಸ್ತುತ ಪಾಕಿಸ್ತಾನ ಕ್ರಿಕೆಟ್ ತಂಡ ಸೋಲುಗಳ ಸರಮಾಲೆಯನ್ನೇ ಹೊತ್ತು ನಿಂತಿದೆ. ದಿಗ್ಗಜ ಆಟಗಾರರು ತಂಡದಲ್ಲಿದ್ದ್ದರೂ ತಂಡದ ಪ್ರದರ್ಶನ ಮಾತ್ರ ಸುದಾರಿಸುತ್ತಿಲ್ಲ. ಈ ಮೊದಲು ಏಕದಿನ ಮತ್ತು ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಪಾಕ್ ತಂಡ ಆ ಬಳಿಕ ದ್ವಿಪಕ್ಷೀಯ ಸರಣಿಗಳಲ್ಲೂ ಕಳಪೆ ಪ್ರದರ್ಶನ ತೋರುತ್ತಿದೆ. ತಂಡದ ಈ ಕಳಪೆ ಪ್ರದರ್ಶನದಿಂದ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳು ಕೋಪಗೊಂಡಿದ್ದಲ್ಲದೆ, ತಂಡವು ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೂ ಗುರಿಯಾಗಿದೆ. ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರು ‘ಪಾಕಿಸ್ತಾನದ ರಾಷ್ಟ್ರೀಯ ತಂಡಕ್ಕಿಂತ ಸ್ಥಳೀಯ ತಂಡವೇ ಉತ್ತಮ’ ಎಂದು ಹೇಳಿಕೆ ನೀಡಿದ್ದು ಸಂಚಲನ ಮೂಡಿಸಿದ್ದಾರೆ.
ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿ ಸೋಲು
ಇತ್ತೀಚೆಗಷ್ಟೇ ಪಾಕಿಸ್ತಾನ ತಂಡ ತನ್ನ ಟೆಸ್ಟ್ ವೃತ್ತಿಜೀವನದ ಇತಿಹಾಸದಲ್ಲಿ ಮೊದಲ ಬಾರಿಗೆ ಬಾಂಗ್ಲಾದೇಶ ವಿರುದ್ಧ ಸೋತಿತ್ತು. ಮೊದಲ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿದ್ದ ಬಾಂಗ್ಲಾದೇಶ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಪಾಕಿಸ್ತಾನದ ವಿರುದ್ಧ ಗೆದ್ದಿತು. ಆ ಬಳಿಕ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲೂ ಬಾಂಗ್ಲಾದೇಶ ಅದ್ಭುತ ಪ್ರದರ್ಶನ ನೀಡಿ 6 ವಿಕೆಟ್‌ಗಳಿಂದ ಗೆದ್ದು ಇತಿಹಾಸ ನಿರ್ಮಿಸಿತ್ತು. ಅಲ್ಲದೆ ಪಾಕ್ ತಂಡವನ್ನು ಅವರ ತವರು ನೆಲದಲ್ಲಿಯೇ ಕ್ಲೀನ್ ಸ್ವೀಪ್ ಮಾಡಿತ್ತು. ಪಾಕ್ ತಂಡದ ಈ ಸೋಲು ಅಭಿಮಾನಿಗಳು ಹಾಗೂ ಮಾಜಿ ಆಟಗಾರರನ್ನು ಕೋಪಗೊಳ್ಳುವಂತೆ ಮಾಡಿದೆ.
ತೀವ್ರ ವಾಗ್ದಾಳಿ ನಡೆಸಿದ ಕನೇರಿಯಾ
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಸೋಲಿನ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಪಾಕಿಸ್ತಾನ ತಂಡದ ಮೇಲೆ ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಐಎಎನ್‌ಎಸ್‌ಗೆ ನೀಡಿದ ಸಂದರ್ಶನದಲ್ಲಿ ಡ್ಯಾನಿಶ್ ಕನೇರಿಯಾ, ‘ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ಗುಣಮಟ್ಟವು ತುಂಬಾ ಕೆಳಮಟ್ಟದಲ್ಲಿದೆ, ಸ್ಥಳೀಯ ತಂಡವೇ ಅವರಿಗಿಂತ ಉತ್ತಮವಾಗಿದೆ. ಪಾಕಿಸ್ತಾನ ಕ್ರಿಕೆಟ್‌ನ ಈ ಸ್ಥಿತಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಕಾರಣವೇ ಹೊರತು ಬೇರಾರೂ ಅಲ್ಲ. ತಂಡದ ಈ ಕಳಪೆ ಪ್ರದರ್ಶನಕ್ಕೆ ಪಿಸಿಬಿಯನ್ನು ದೂಷಿಸಬೇಕು.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಸರ್ಫರಾಜ್ ಅಹ್ಮದ್‌ನಿಂದ ನಾಯಕತ್ವವನ್ನು ಕಿತ್ತುಕೊಂಡು ಬಾಬರ್ ಆಝಂಗೆ ನೀಡುವ ಮೂಲಕ ತಪ್ಪು ನಿರ್ಧಾರ ತೆಗೆದುಕೊಂಡಿದೆ. ಸರ್ಫರಾಜ್ 2017 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನವನ್ನು ಗೆಲುವಿನತ್ತ ಮುನ್ನಡೆಸಿದ್ದರು ಮತ್ತು ಉತ್ತಮ ಪ್ರದರ್ಶನ ನೀಡಿದ್ದರು. ಅವರ ಉತ್ತಮ ನಾಯಕತ್ವದ ಹೊರತಾಗಿಯೂ, ಬಾಬರ್ ಆಝಂ ಅವರನ್ನು ಏಕೆ ನಾಯಕನನ್ನಾಗಿ ಮಾಡಲಾಯಿತು ಎಂಬುದಕ್ಕೆ ಯಾರೂ ಉತ್ತರಿಸಲು ಸಾಧ್ಯವಾಗಲಿಲ್ಲ. ಸದ್ಯ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿರುವ ಯಾವೊಬ್ಬ ಆಟಗಾರನೂ ನಾಯಕನಾಗಲು ಫಿಟ್ ಆಗಿಲ್ಲ ಎಂದು ಡ್ಯಾನಿಶ್ ಕನೇರಿಯಾ ಸಂದರ್ಶನದಲ್ಲಿ ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
