‘ಸೂರ್ಯ ನನಗೆ ಟ್ಯಾಟೂ ಹಾಕಿದ್ದಾನೆ’; ಪಡಿಕ್ಕಲ್ ಬೆನ್ನಿನ ಮೇಲೆ ಶ್ರೀಲಂಕಾದ ನೆನಪಿನ ಮುದ್ರೆ

India Sri Lanka Test Series: ಭಾರತವು ಶ್ರೀಲಂಕಾ ವಿರುದ್ಧ 1-0 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದುಕೊಂಡಿತು. ಕೊಲಂಬೊದಲ್ಲಿ ನಡೆದ ಎರಡನೇ ಟೆಸ್ಟ್ ಡ್ರಾನಲ್ಲಿ ಅಂತ್ಯಗೊಂಡರೂ, ತೀವ್ರ ಬಿಸಿಲಿನಲ್ಲಿ ಭಾರತೀಯ ಆಟಗಾರರು ಅಪಾರ ಶ್ರಮಪಟ್ಟರು. ದೇವದತ್ ಪಡಿಕ್ಕಲ್ ಅವರ ಬೆನ್ನಿನ ಮೇಲೆ ಸೂರ್ಯನಿಂದಾಗಿ ಜೆರ್ಸಿ ಸಂಖ್ಯೆ ಮತ್ತು ಹೆಸರಿನ 'ಟ್ಯಾಟೂ' ಮೂಡಿದ್ದು, ಅವರ ಸಮರ್ಪಣಾ ಭಾವಕ್ಕೆ ಸಾಕ್ಷಿಯಾಗಿದೆ. ಇದು ಆಟಗಾರರು ಅನುಭವಿಸಿದ ಕಠಿಣ ಪರಿಸ್ಥಿತಿಗಳನ್ನು ಬಿಂಬಿಸುತ್ತದೆ.

‘ಸೂರ್ಯ ನನಗೆ ಟ್ಯಾಟೂ ಹಾಕಿದ್ದಾನೆ’; ಪಡಿಕ್ಕಲ್ ಬೆನ್ನಿನ ಮೇಲೆ ಶ್ರೀಲಂಕಾದ ನೆನಪಿನ ಮುದ್ರೆ
Team India

Updated on: Aug 28, 2026 | 4:42 PM

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ (Team India) 1-0 ಅಂತರದಿಂದ ಗೆದ್ದುಕೊಂಡಿತು. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 165 ರನ್‌ಗಳಿಂದ ಗೆದ್ದುಕೊಂಡಿದ್ದ ಶುಭ್​ಮನ್ ಗೊಲ್ ಪಡೆ ಕೊಲಂಬೊದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಿತು. ಪೂರ್ಣ ಐದು ದಿನಗಳವರೆಗೆ ನಡೆದ ಈ ಪಂದ್ಯವನ್ನು ಗೆದ್ದುಕೊಳ್ಳಲು ಟೀಂ ಇಂಡಿಯಾ ಆಟಗಾರರು ಸಾಕಷ್ಟು ಬೆವರು ಹರಿಸಿದರು. ಸುಡುವ ಬಿಸಿಲಿನಲ್ಲಿ ಲಂಕಾ ಆಟಗಾರರ ವಿಕೆಟ್​ಗಾಗಿ ಕಾದು ಕಾದು ಹೈರಾಣಾಗಿ ಹೋದರು. ಆದರೆ ಲಂಕಾ ತಂಡ ಟೀಂ ಇಂಡಿಯಾದ ಗೆಲುವಿಗೆ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಟೀಂ ಇಂಡಿಯಾ ಕೊನೆಯ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡು ಮೈದಾನದಿಂದ ಹೊರನಡೆಯಿತು.

ಅತಿಯಾದ ಬಿಸಿಲು, ಮೈ ಮೇಲೆ ಗಾಯ

ಎರಡನೇ ಟೆಸ್ಟ್​ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 503 ರನ್ ಕಲೆಹಾಕಿ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿತು. ಆ ನಂತರ ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 290 ರನ್​ಗಳಿಗೆ ಆಲೌಟ್ ಆಯಿತು. ಹೀಗಾಗಿ ಟೀಂ ಇಂಡಿಯಾ, ಲಂಕಾ ಮೇಲೆ ಫಾಲೋ ಆನ್ ಹೇರಿತು. ಇದರರ್ಥ ಮೊದಲೆರಡು ದಿನಗಳನ್ನು ಬಿಟ್ಟರೆ ಉಳಿದ ಮೂರು ದಿನಗಳು ಟೀಂ ಇಂಡಿಯಾ ಆಟಗಾರರು ಮೈದಾನದಲ್ಲಿ ಸುಡುವ ಬಿಸಿಲಿನಲ್ಲಿ ಫಿಲ್ಡಿಂಗ್ ಮಾಡಬೇಕಾಯಿತು. ಇದೀಗ ಆ 3 ದಿನಗಳ ಫಿಲ್ಡಿಂಗ್ ಪರಿಣಾಮ ಟೀಂ ಇಂಡಿಯಾ ಆಟಗಾರರು ಹಂಚಿಕೊಂಡಿರುವ ಫೋಟೋಗಳಿಂದ ಹೊರಬಿದ್ದಿದೆ. ಟೀಂ ಇಂಡಿಯಾದ ಕೆಲವು ಆಟಗಾರರ ದೇಹದ ಮೇಲೆ ಮೂಗೇಟುಗಳಾಗಿರುವುದು. ಇನ್ನು ಕೆಲವರಿಗೆ ಗಾಯಗಳಾಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದರ ಜೊತೆಗೆ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ದೇವದತ್ ಪಡಿಕ್ಕಲ್ ಹಂಚಿಕೊಂಡಿರುವ ಫೋಟೋ ಶ್ರೀಲಂಕಾದಲ್ಲಿ ಬಿಸಿಲು ಯಾವ ಪ್ರಮಾಣದಲ್ಲಿತ್ತು ಎಂಬುದನ್ನು ಬಹಿರಂಗಪಡಿಸಿದೆ.

ಪಡಿಕ್ಕಲ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಬೆನ್ನಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಕೊಲಂಬೊದಲ್ಲಿ ಅತಿಯಾದ ಬಿಸಿಲಿನಿಂದ ಪಡಿಕ್ಕಲ್ ಅವರ ಬೆನ್ನಿನ ಮೇಲೆ ಜೆರ್ಸಿಯ ಮೇಲೆ ಮುದ್ರಿತಗೊಂಡಿರುವ ‘ದೇವ್’ ಎಂಬ ಹೆಸರು ಮತ್ತು ಅವರ ಜೆರ್ಸಿಯ 37 ನೇ ಸಂಖ್ಯೆ ಟ್ಯಾಟೂ ರೀತಿಯಲ್ಲಿ ಮುದ್ರಿತಗೊಂಡಿವೆ. ಅಭಿಮಾನಿಗಳು ಈ ನೈಸರ್ಗಿಕ ‘ಜೆರ್ಸಿ ಟ್ಯಾಟೂ’ವನ್ನು ಪಡಿಕ್ಕಲ್ ಅವರ ಸಮರ್ಪಣೆ ಮತ್ತು ಅವರು ಕ್ರೀಸ್‌ನಲ್ಲಿ ಕಳೆದ ಗಂಟೆಗಳ ಸಾಕ್ಷಿಯಾಗಿ ಪರಿಗಣಿಸುತ್ತಿದ್ದಾರೆ.

ಸರಣಿಯಿಂದ ಬಹಳಷ್ಟು ಕಲಿತಿದ್ದೇನೆ

ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡಿರುವ ಪಡಿಕ್ಕಲ್, ‘ಈ ಅವಕಾಶಕ್ಕಾಗಿ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ ಮತ್ತು ಹೆಚ್ಚಿನದನ್ನು ಮಾಡಲು ಎದುರು ನೋಡುತ್ತಿದ್ದೇನೆ. ನಾನು ತುಂಬಾ ಕಠಿಣ ಸರಣಿಯಿಂದ ಬಹಳಷ್ಟು ಕಲಿತಿದ್ದೇನೆ. ಈಗ ಮುಂದಿನ ಸವಾಲಿಗೆ ಸಿದ್ಧನಿದ್ದೇನೆ ಎಂದಿದ್ದಾರೆ. ಹಾಗೆಯೇ ಕೊನೆಯಲ್ಲಿ ಸೂರ್ಯ ನನಗೆ ಟ್ಯಾಟೂ ಹಾಕಿದ್ದಾನೆ’ ಎಂಬುದನ್ನು ಬರೆದುಕೊಂಡಿದ್ದಾರೆ.

ಭುಜದ ಮೇಲಿನ ಮೂಗೇಟು

ಪಂದ್ಯದ ನಂತರ, ರಿಷಭ್ ಪಂತ್ ಕೂಡ ತಮ್ಮ ಗಾಯಗಳನ್ನು ವಿವರಿಸುವ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಭುಜದ ಮೇಲಿನ ಮೂಗೇಟು ಮತ್ತು ಊತವು ಫೋಟೋಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ತಮ್ಮ ಗಂಭೀರ ಗಾಯದ ಬಗ್ಗೆ ಬರೆದುಕೊಂಡಿರುವ ಪಂತ್, ‘ಏರಿಳಿತಗಳು, ಮೈದಾನದಲ್ಲಿ ಮೋಜು, ಆತ್ಮವಿಶ್ವಾಸ ಮತ್ತು ಪ್ರತಿ ರನ್ ಮತ್ತು ವಿಕೆಟ್‌ಗೆ ಐದು ದಿನಗಳ ಹೋರಾಟ. ನಾವು 2-0 ಅಂತರದಲ್ಲಿ ಗೆಲ್ಲಬೇಕಿತ್ತು, ಆದರೆ ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳು ಅದ್ಭುತವಾಗಿ ಆಡಿದರು’ ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us