ಬೇಬಿ ಎಬಿ CSK ಪರ ಆಡುತ್ತಿರುವುದು ನಾಚಿಕೆಗೇಡು: ಎಬಿ ಡಿವಿಲಿಯರ್ಸ್
AB de Villiers: ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಎಬಿ ಡಿವಿಲಿಯರ್ಸ್ ಮುಂದಾಳತ್ವದ ಸೌತ್ ಆಫ್ರಿಕಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಟೂರ್ನಿಯ ಬಳಿಕ ಎಬಿಡಿ ನೀಡಿದ ಹೇಳಿಕೆಯೊಂದು ಭಾರೀ ವೈರಲ್ ಆಗಿದ್ದು, ಆರ್ಸಿಬಿ ತಂಡದ ಮಾಜಿ ಆಟಗಾರನ ಹೇಳಿಕೆಗೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

ಟಿ20 ಕ್ರಿಕೆಟ್ನ ಸಿಡಿಲಬ್ಬರದ ಸಿಡಿಲಮರಿ ಎಬಿ ಡಿವಿಲಿಯರ್ಸ್ ಮುಂದಿನ ಎಬಿಡಿ ಯಾರಾಗಲಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಈ ತಿಳಿಸುವಿಕೆಯೊಂದಿಗೆ ನೀಡಿದ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಯೂಟ್ಯೂಬ್ ಪೋಡ್ ಕಾಸ್ಟ್ವೊಂದರಲ್ಲಿ ಕಾಣಿಸಿಕೊಂಡ ಎಬಿಡಿಗೆ ಮುಂದಿನ 360 ಡಿಗ್ರಿ ಆಟಗಾರ ಯಾರಾಗಲಿದ್ದಾರೆ ಎಂಬ ಪ್ರಶ್ನೆಯನ್ನು ಮುಂದಿಡಲಾಗಿತ್ತು.
ಈ ಪ್ರಶ್ನೆಗೆ ಉ್ತತರಿಸಿದ ಎಬಿ ಡಿವಿಲಿಯರ್ಸ್, ಸೌತ್ ಆಫ್ರಿಕಾದಿಂದ ಡೆವಾಲ್ಡ್ ಬ್ರೆವಿಸ್ ಹೆಸರನ್ನು ಮುಂದಿಟ್ಟರು. ನನ್ನ ಪ್ರಕಾರ, ಡೆವಾಲ್ಡ್ ಮುಂದೆ 360 ಡಿಗ್ರಿ ಆಟಗಾರನಾಗಲಿದ್ದಾನೆ. ಆತ ತುಂಬಾ ಆಕ್ರಮಣಕಾರಿ ಬ್ಯಾಟ್ಸ್ಮನ್. ಇದಾಗ್ಯೂ ಅವನು ಇನ್ನೂ ಕಲಿಯಲು ಬಹಳಷ್ಟು ಇದೆ ಎಂದು ಅಭಿಪ್ರಾಯಪಟ್ಟರು.
ಅಲ್ಲದೆ ಡೆವಾಲ್ಡ್ ಬ್ರೆವಿಸ್ ಕೂಡ ನನ್ನಂತೆ 17ನೇ ನಂಬರ್ ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ ಎಂಬುದನ್ನು ಪ್ರಸ್ತಾಪಿಸಿದರು. ಇದೇ ವೇಳೆ ನಿರೂಪಕ, ಬ್ರೆವಿಸ್ ಐಪಿಎಲ್ನಲ್ಲಿ ಆರ್ಸಿಬಿ ಪರ ಅಲ್ಲ, ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ ಎಂದರು.
ಹೌದು, ಬ್ರೆವಿಸ್ ಆರ್ಸಿಬಿ ಪರ ಅಲ್ಲ, ಸಿಎಸ್ಕೆಗಾಗಿ ಆಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಎಬಿಡಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಇದೀಗ ಎಬಿ ಡಿವಿಲಿಯರ್ಸ್ ಅವರ ಈ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಂದಹಾಗೆ ಡೆವಾಲ್ಡ್ ಬ್ರೆವಿಸ್ ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ. ಕಳೆದ ಸೀಸನ್ನಲ್ಲಿ ಸಿಎಸ್ಕೆ ತಂಡದಲ್ಲಿದ್ದ ಗುರ್ಜಪಾನಿ ಸಿಂಗ್ ಗಾಯಗೊಂಡು ಹೊರಬಿದ್ದ ಬಳಿಕ ಬ್ರೆವಿಸ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು.
ಅದರಂತೆ ಐಪಿಎಲ್ 2025 ರಲ್ಲಿ ಸಿಎಸ್ಕೆ ಪರ 6 ಇನಿಂಗ್ಸ್ ಆಡಿದ್ದ ಡೆವಾಲ್ಡ್ ಬ್ರೆವಿಸ್ 2 ಅರ್ಧಶತಕಗಳೊಂದಿಗೆ ಒಟ್ಟು 225 ರನ್ ಕಲೆಹಾಕಿದ್ದರು. ಈ ವೇಳೆ ಬ್ರೆವಿಸ್ ಬ್ಯಾಟ್ನಿಂದ 17 ಸಿಕ್ಸ್ ಹಾಗೂ 13 ಫೋರ್ಗಳು ಮೂಡಿಬಂದಿದ್ದವು. ಹೀಗಾಗಿ ಮುಂಬರುವ ಸೀಸನ್ನಲ್ಲೂ ಡೆವಾಲ್ಡ್ ಬ್ರೆವಿಸ್ ಸಿಎಸ್ಕೆ ಪರ ಕಣಕ್ಕಿಳಿಯುವುದು ಖಚಿತ ಎನ್ನಬಹುದು.
ಎಬಿಡಿ ಅಭಿಮಾನಿ ಬ್ರೆವಿಸ್:
ಡೆವಾಲ್ಡ್ ಬ್ರೆವಿಸ್ ಎಬಿ ಡಿವಿಲಿಯರ್ಸ್ ಅವರ ಅಪ್ಪಟ ಅಭಿಮಾನಿ. ಎಬಿಡಿಯ ಬ್ಯಾಟಿಂಗ್ ಶೈಲಿಯನ್ನು ಅನುಕರಿಸುತ್ತಿರುವ ಯುವ ಆಟಗಾರನನ್ನು ಬೇಬಿ ಎಬಿ ಎಂದು ಕರೆಯಲಾಗುತ್ತಿದೆ. ಇದೀಗ ಖುದ್ದು ಎಬಿಡಿಯೇ ಮುಂಬರುವ ದಿನಗಳಲ್ಲಿ ಬ್ರೆವಿಸ್ 360 ಡಿಗ್ರಿ ಬ್ಯಾಟರ್ ಆಗಿ ಬದಲಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ಒಂದು ಶತಕದೊಂದಿಗೆ ಮೂವರ ವಿಶ್ವ ದಾಖಲೆ ಮುರಿದ ಜೋ ರೂಟ್
ಅತ್ತ ಬ್ರೆವಿಸ್ ಅವರನ್ನು ಹೊಗಳಿದ ಎಬಿಡಿ, ಸಿಎಸ್ಕೆ ಪರ ಕಣಕ್ಕಿಳಿಯುತ್ತಿರುವುದು ನಾಚಿಕೆಗೇಡು ಎಂದಿರುವುದು ಚರ್ಚೆಗೆ ಗ್ರಾಸವಾಗಿದೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯನ್ನು ತುಚ್ಛವಾಗಿ ಕಂಡಿರುವ ಡಿವಿಲಿಯರ್ಸ್ ವಿರುದ್ಧ ಸಿಎಸ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
Published On - 9:54 am, Mon, 4 August 25
