ದುಲೀಪ್ ಟ್ರೋಫಿ ಫೈನಲ್; ದಕ್ಷಿಣ ವಲಯ ತಂಡ ಸೇರಿದ ರಾಹುಲ್, ಪಡಿಕ್ಕಲ್, ಸಿರಾಜ್

ದುಲೀಪ್ ಟ್ರೋಫಿ 2026 ಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್ ನೇತೃತ್ವದ ಪೂರ್ವ ವಲಯ ಹಾಗೂ ತಿಲಕ್ ವರ್ಮಾ ನಾಯಕತ್ವದ ದಕ್ಷಿಣ ವಲಯ ತಂಡಗಳು ಸೆಪ್ಟೆಂಬರ್ 6 ರಿಂದ ಚೆನ್ನೈನಲ್ಲಿ ಮುಖಾಮುಖಿಯಾಗಲಿವೆ. ದಕ್ಷಿಣ ವಲಯ ತಂಡಕ್ಕೆ ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್ ಮತ್ತು ಮೊಹಮ್ಮದ್ ಸಿರಾಜ್ ಸೇರ್ಪಡೆಯಾಗಿದ್ದಾರೆ. ಸ್ಟಾರ್ ಆಟಗಾರರ ಆಗಮನದಿಂದ ದಕ್ಷಿಣ ವಲಯದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳು ಬಲಗೊಂಡಿದ್ದು, ಫೈನಲ್ ಪಂದ್ಯ ಇನ್ನಷ್ಟು ರೋಚಕವಾಗಲಿದೆ.

ದುಲೀಪ್ ಟ್ರೋಫಿ ಫೈನಲ್; ದಕ್ಷಿಣ ವಲಯ ತಂಡ ಸೇರಿದ ರಾಹುಲ್, ಪಡಿಕ್ಕಲ್, ಸಿರಾಜ್
Team India

Updated on: Sep 04, 2026 | 2:58 PM

ದುಲೀಪ್ ಟ್ರೋಫಿ 2026 ರ ಫೈನಲ್ ಪಂದ್ಯ ಸೆಪ್ಟೆಂಬರ್ 6 ರ ಭಾನುವಾರದಿಂದ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಇಶಾನ್ ಕಿಶನ್ ನಾಯಕತ್ವದ ಪೂರ್ವ ವಲಯ ಹಾಗೂ ತಿಲಕ್ ವರ್ಮಾ ನಾಯಕತ್ವದ ದಕ್ಷಿಣ ವಲಯ ತಂಡಗಳು ಮುಖಾಮುಖಿಯಾಗುತ್ತಿವೆ. ಒಂದೆಡೆ ಪೂರ್ವ ವಲಯ ತಂಡಕ್ಕೆ ವೈಭವ್ ಸೂರ್ಯವಂಶಿಯಂತಹ ಸ್ಫೋಟಕ ಬ್ಯಾಟರ್​ನ ಬೆಂಬಲವಿದ್ದರೆ, ಇನ್ನೊಂದೆಡೆ ದಕ್ಷಿಣ ವಲಯ ತಂಡಕ್ಕೆ ಸ್ಟಾರ್ ಆಟಗಾರರ ಕೊರತೆ ಎದ್ದು ಕಾಣುತ್ತಿತ್ತು. ಆದರೆ ಫೈನಲ್ ಪಂದ್ಯ ಆರಂಭಕ್ಕೆ ಎರಡು ದಿನ ಬಾಕಿ ಇರುವಾಗ ದಕ್ಷಿಣ ವಲಯ ತಂಡಕ್ಕೆ ಸ್ಟಾರ್ ಆಟಗಾರರ ಆಗಮನವಾಗಿದೆ. ಟೀಂ ಇಂಡಿಯಾದೊಂದಿಗೆ ಶ್ರೀಲಂಕಾ ಪ್ರವಾಸದಲ್ಲಿದ್ದ ಸ್ಟಾರ್ ಆಟಗಾರರಾದ ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್ ಹಾಗೂ ಮೊಹಮ್ಮದ್ ಸಿರಾಜ್ ದಕ್ಷಿಣ ವಲಯ ತಂಡವನ್ನು ಕೂಡಿಕೊಂಡಿದ್ದಾರೆ. ಇದು ತಂಡಕ್ಕೆ ಆನೆಬಲ ತಂದಿದೆ.

ದಕ್ಷಿಣ ವಲಯಕ್ಕೆ ಆನೆಬಲ

ದೇಶೀಯ ಕ್ರಿಕೆಟ್‌ನಲ್ಲಿ ಸ್ಟಾರ್ ಆಟಗಾರರು ಭಾಗವಹಿಸಬೇಕೆಂಬ ಬಿಸಿಸಿಐ ಆದೇಶದ ಪರಿಣಾಮವಾಗಿ ಈ ಫೈನಲ್‌ಗಾಗಿ ದಕ್ಷಿಣ ವಲಯ ತಂಡದಲ್ಲಿ ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಈ ಮೂವರು ಆಟಗಾರರು ಇತ್ತೀಚೆಗೆ ಶ್ರೀಲಂಕಾ ಪ್ರವಾಸಕ್ಕೆ ತಂಡದಲ್ಲಿದ್ದರು. ಅಲ್ಲಿ ನಡೆದ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಭಾರತ 1-0 ಅಂತರದಿಂದ ಗೆದ್ದಿತು. ಪಡಿಕ್ಕಲ್ ಅವರ ಉಪಸ್ಥಿತಿಯು ದಕ್ಷಿಣ ವಲಯ ತಂಡದ ಬಲ ಹೆಚ್ಚಿಸುವುದು ಖಚಿತ. ಏಕೆಂದರೆ ಅತ್ಯುತ್ತಮ ಫಾರ್ಮ್‌ನಲ್ಲಿರುವ ಪಡಿಕ್ಕಲ್ ಶ್ರೀಲಂಕಾದಲ್ಲಿ ಸತತ ಎರಡು ಶತಕಗಳನ್ನು ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇತ್ತ ಕೆಎಲ್ ರಾಹುಲ್ ಅವರ ಅನುಭವವೂ ದಕ್ಷಿಣ ವಲಯ ತಂಡಕ್ಕೆ ನೆರವಾಗಲಿದೆ.

ಇವರಿಬ್ಬರ ಆಗಮನ ದಕ್ಷಿಣ ವಲಯ ತಂಡದ ಬ್ಯಾಟಿಂಗ್‌ ವಿಭಾಗವನ್ನು ಬಲಪಡಿಸಿದೆ. ಇವರಿಬ್ಬರ ಜೊತೆಗೆ ನಾಯಕ ತಿಲಕ್ ವರ್ಮಾ ಕೂಡ ಅದ್ಭುತ ಫಾರ್ಮನಲ್ಲಿದ್ದಾರೆ. ತಿಲಕ್ ಈಗಾಗಲೇ ಸೆಮಿಫೈನಲ್‌ನಲ್ಲಿ ತಮ್ಮ ಬಲಿಷ್ಠ ಬ್ಯಾಟಿಂಗ್ ಮೂಲಕ ಪೂರ್ವ ವಲಯ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಒಂದು ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ತಿಲಕ್, ಇನ್ನೊಂದು ಇನ್ನಿಂಗ್ಸ್‌ನಲ್ಲಿ ಅಜೇಯ ಅರ್ಧಶತಕ ಕಲೆಹಾಕಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.

ಬೌಲಿಂಗ್​ನಲ್ಲಿ ಸಿರಾಜ್ ಬಲ

ಅಗ್ರ ಕ್ರಮಾಂಕದಲ್ಲಿ ಈ ಮೂವರ ಬಲಿಷ್ಠ ಬ್ಯಾಟ್ಸ್‌ಮನ್‌ಗಳ ಉಪಸ್ಥಿತಿಯು ಖಂಡಿತವಾಗಿಯೂ ತಂಡದ ಬ್ಯಾಟಿಂಗ್ ಲೈನ್‌ಅಪ್ ಅನ್ನು ಬಲಪಡಿಸುತ್ತದೆ. ಇದರ ಜೊತೆಗೆ ಇನ್ನೊಂದು ದೊಡ್ಡ ಸುದ್ದಿಯೆಂದರೆ ಸಿರಾಜ್ ಆಗಮನ. ಒಂದೆಡೆ ಪೂರ್ವ ವಲಯ ತಂಡದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ ಮತ್ತು ಮುಖೇಶ್ ಕುಮಾರ್​ರಂತಹ ಬೌಲರ್​ಗಳನ್ನು ಹೊಂದಿದ್ದರೆ, ದಕ್ಷಿಣ ವಲಯ ತಂಡಕ್ಕೆ ಅನುಭವಿ ಬೌಲರ್​ನ ಅವಶ್ಯಕತೆ ಇತ್ತು. ಅದರಂತೆ ಇದೀಗ ದಕ್ಷಿಣ ವಲಯ ತಂಡಕ್ಕೆ ಅನುಭವಿ ಮೊಹಮ್ಮದ್ ಸಿರಾಜ್ ಅವರ ಆಗಮನವಾಗಿದೆ. ಇದು ತಂಡದ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ.

ದುಲೀಪ್ ಟ್ರೋಫಿ ಫೈನಲ್​ಗೆ 2 ತಂಡಗಳು ಲಗ್ಗೆ; ಪ್ರಶಸ್ತಿ ಪಂದ್ಯ ಯಾವಾಗ?

ದಕ್ಷಿಣ ವಲಯ ತಂಡ: ತನಯ್ ತ್ಯಾಗರಾಜನ್, ಶ್ರೇಯಸ್ ಗೋಪಾಲ್, ಕೆಎಲ್ ರಾಹುಲ್,ಕರುಣ್ ನಾಯರ್,ರಿಕಿ ಭೂಯಿ, ಎಂ. ಡಿ. ನಿಧೀಶ, ನಾರಾಯಣ್ ಜಗದೀಶನ್, ದೇವದತ್ತ್ ಪಡಿಕ್ಕಲ್, ಅಮನ್ ಹಕೀಮ್ ಖಾನ್, ವಿಧ್ವತ್ ಕಾವೇರಪ್ಪ, ತಿಲಕ್ ವರ್ಮಾ (ನಾಯಕ), ಸ್ಮರಣ್ ರವಿಚಂದ್ರನ್, ಶೈಕ್ ರಶೀದ್,ತ್ರಿಪುರಾಣ ವಿಜಯ, ಕಾವೂರಿ ಸಾಯಿತೇಜ, ಕೋಡಿಮೇಲ ಮಧುಸೂಧನ್ ಹಿಮತೇಜ, ಅಭಿನವ್ ತೇಜ್ರಾನಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Fri, 4 September 26

Loading...
Unable to load recommendations.
Follow Us