AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಲೀಪ್ ಟ್ರೋಫಿ ಫೈನಲ್​ಗೆ 2 ತಂಡಗಳು ಲಗ್ಗೆ; ಪ್ರಶಸ್ತಿ ಪಂದ್ಯ ಯಾವಾಗ?

2026ರ ದುಲೀಪ್ ಟ್ರೋಫಿಯ ಸೆಮಿಫೈನಲ್ ಮುಕ್ತಾಯಗೊಂಡಿದ್ದು, ಪೂರ್ವ ವಲಯ ಮತ್ತು ದಕ್ಷಿಣ ವಲಯ ತಂಡಗಳು ಫೈನಲ್​ಗೆ ಪ್ರವೇಶಿಸಿವೆ. 13 ವರ್ಷಗಳ ಬಳಿಕ ಪೂರ್ವ ವಲಯ ಫೈನಲ್ ಪ್ರವೇಶಿಸಿದ್ದು, ಸೆಪ್ಟೆಂಬರ್ 6ರಂದು ಆರಂಭವಾಗಲಿರುವ ಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್ ನಾಯಕತ್ವದ ಪೂರ್ವ ವಲಯ ಹಾಗೂ ತಿಲಕ್ ವರ್ಮಾ ನಾಯಕತ್ವದ ದಕ್ಷಿಣ ವಲಯ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.

ದುಲೀಪ್ ಟ್ರೋಫಿ ಫೈನಲ್​ಗೆ 2 ತಂಡಗಳು ಲಗ್ಗೆ; ಪ್ರಶಸ್ತಿ ಪಂದ್ಯ ಯಾವಾಗ?
Duleep TrophyImage Credit source: BCCI X
ಪೃಥ್ವಿಶಂಕರ
|

Updated on:Sep 02, 2026 | 4:54 PM

Share

2026ರ ದುಲೀಪ್ ಟ್ರೋಫಿಯ ಸೆಮಿಫೈನಲ್ ಸುತ್ತು ಮುಗಿದಿದೆ. ಈ ಸುತ್ತಿನಲ್ಲಿ ಗೆಲುವು ಸಾಧಿಸಿದ ಎರಡು ತಂಡಗಳು ಫೈನಲ್​ನಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿವೆ. ಬೆಂಗಳೂರಿನಲ್ಲಿ ನಡೆದ ದುಲೀಪ್ ಟ್ರೋಫಿ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕೇಂದ್ರ ವಲಯ ತಂಡವನ್ನು ಮಣಿಸಿದ ಪೂರ್ವ ವಲಯ ತಂಡ 13 ವರ್ಷಗಳ ಬಳಿಕ ಫೈನಲ್​ಗೆ ಅರ್ಹತೆಗಿಟ್ಟಿಸಿಕೊಂಡಿದ್ದರೆ, ಇತ್ತ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಉತ್ತರ ವಲಯ ತಂಡವನ್ನು 7 ವಿಕೆಟ್​ಗಳಿಂದ ಸೋಲಿಸಿದ ದಕ್ಷಿಣ ವಲಯ ತಂಡ ಎರಡನೇ ತಂಡವಾಗಿ ಫೈನಲ್​ಗೆ ಟಿಕೆಟ್ ಪಡೆದುಕೊಂಡಿದೆ. ಹೀಗಾಗಿ ಸೆಪ್ಟೆಂಬರ್ 6ರ ಭಾನುವಾರದಿಂದ ಆರಂಭವಾಗಲಿರುವ ಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್ ನಾಯಕತ್ವದ ಪೂರ್ವ ವಲಯ ಹಾಗೂ ತಿಲಕ್ ವರ್ಮಾ ನಾಯಕತ್ವದ ದಕ್ಷಿಣ ವಲಯ ತಂಡ ಪರಸ್ಪರ ಮುಖಾಮುಖಿಯಾಗಲಿವೆ.

ಸುಲಭವಾಗಿ ಗೆದ್ದ ದಕ್ಷಿಣ ವಲಯ

ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದ ಕೊನೆಯ ದಿನದಂದು ದಕ್ಷಿಣ ವಲಯ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತರ ವಲಯವ ತಂಡವನ್ನು 297 ರನ್‌ಗಳಿಗೆ ಆಲೌಟ್ ಮಾಡಿತು. ದಕ್ಷಿಣ ವಲಯ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 117 ರನ್‌ಗಳ ಮುನ್ನಡೆ ಸಾಧಿಸಿದ್ದ ಕಾರಣದಿಂದಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 182 ರನ್‌ಗಳ ಗುರಿ ಪಡೆಯಿತು. ಈ ಗುರಿ ಬೆನ್ನಟ್ಟಿದ ತಿಲಕ್ ವರ್ಮಾ ಪಡೆ ಕೇವಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ನಗೆ ಬೀರಿತು. ತಂಡದ ಗೆಲುವಿನಲ್ಲಿ ನಾಯಕ ತಿಲಕ್ ಪ್ರಮುಖ ಪಾತ್ರವಹಿಸಿದರು. ಅವರಿಗಿಂತ ಮೊದಲು, ಆರಂಭಿಕರಾದ ರಿಕಿ ಭೂಯಿ ಮತ್ತು ನಾರಾಯಣ್ ಜಗದೀಶನ್ 64 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡು ತಂಡದ ಗೆಲುವನ್ನು ಖಚಿತಪಡಿಸಿದರು.

ತಿಲಕ್- ಕಿಶನ್ ಮುಖಾಮುಖಿ

ಈ ಬಾರಿಯ ದುಲೀಪ್ ಟ್ರೋಫಿ ಫೈನಲ್ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಏಕೆಂದರೆ ಎರಡೂ ತಂಡಗಳನ್ನು ಪ್ರಸ್ತುತ ಟಿ20 ತಂಡದ ಭಾಗವಾಗಿರುವ ಮತ್ತು ಭವಿಷ್ಯದ ನಾಯಕರು ಎಂದು ಪರಿಗಣಿಸಲಾಗುವ ಆಟಗಾರರು ಮುನ್ನಡೆಸುತ್ತಿದ್ದಾರೆ. ತಿಲಕ್ ವರ್ಮಾ ಟಿ20 ತಂಡದ ಉಪನಾಯಕರಾಗಿದ್ದು, ಇತ್ತೀಚಿನ ವರದಿ ಪ್ರಕಾರ ಅವರನ್ನು 2027 ರ ಏಕದಿನ ವಿಶ್ವಕಪ್‌ಗೆ ಬ್ಯಾಕಪ್ ಆಗಿ ಪರಿಗಣಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇತ್ತ ಇಶಾನ್ ಕಿಶನ್ ವಿಶ್ವಕಪ್‌ನಲ್ಲಿ ವಿಕೆಟ್ ಕೀಪರ್ ಆಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ಆದ್ದರಿಂದ, ಈ ಫೈನಲ್ ಮತ್ತು ಆಯಾ ತಂಡಗಳಿಗೆ ಪ್ರಶಸ್ತಿ ಗೆಲುವು ಎರಡೂ ತಂಡಗಳಿಗೆ ಒಂದು ಪ್ರಮುಖ ಅವಕಾಶವಾಗಿದೆ.

ದುಲೀಪ್ ಟ್ರೋಫಿ ಫೈನಲ್ ಯಾವಾಗ?

2026ರ ದುಲೀಪ್ ಟ್ರೋಫಿ ಫೈನಲ್ ಪಂದ್ಯವು ಸೆಪ್ಟೆಂಬರ್ 6 ರಂದು ನಡೆಯಲಿದೆ. ಈ ಫೈನಲ್ ಪಂದ್ಯಕ್ಕೆ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣ ಆತಿಥ್ಯವಹಿಸಲಿದೆ. ಪೂರ್ವ ವಲಯ ತಂಡವು 14 ವರ್ಷಗಳಿಂದ ದುಲೀಪ್ ಟ್ರೋಫಿ ಪ್ರಶಸ್ತಿಗಾಗಿ ಕಾಯುತ್ತಿದೆ. ತಂಡವು ಕೊನೆಯದಾಗಿ 2012-13 ರಲ್ಲಿ ಪ್ರಶಸ್ತಿಯನ್ನು ಗೆದ್ದಿತ್ತು. ಇತ್ತ ದಕ್ಷಿಣ ವಲಯ ತಂಡವು ಕೊನೆಯ ಬಾರಿಗೆ 2023 ರಲ್ಲಿ ಪ್ರಶಸ್ತಿಯನ್ನು ಗೆದ್ದಿತ್ತು. ಇಶಾನ್ ಕಿಶನ್ ನಾಯಕತ್ವದಲ್ಲಿ ತಂಡವು ಚಾಂಪಿಯನ್ ಆದರೆ, ಸೈಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಹಜಾರೆ ನಂತರ ದುಲೀಪ್ ಟ್ರೋಫಿ ಗೆದ್ದ ಸಾಧನೆಯನ್ನು ಕಿಶನ್ ಮಾಡಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:29 pm, Wed, 2 September 26

Follow Us