ಇಂಗ್ಲೆಂಡ್ ತಂಡ ಪ್ರಕಟ: ಐಪಿಎಲ್ ಆಟಗಾರರಿಗೆ ವಿನಾಯಿತಿ ಇಲ್ಲ
England vs West Indies series: ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಣ ಸರಣಿ ಮೇ 29 ರಿಂದ ಶುರುವಾಗಲಿದೆ. ಈ ಸರಣಿಗೆ ಆಯ್ಕೆಯಾಗಿರುವ ಆಟಗಾರರು ಅರ್ಧದಲ್ಲೇ ಐಪಿಎಲ್ ತೊರೆಯುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಕೆಲ ತಂಡಗಳ ಪ್ರಮುಖ ಆಟಗಾರರು ಪ್ಲೇಆಫ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಪ್ರಸ್ತುತ IPL 2025 ರಲ್ಲಿ ಭಾಗವಹಿಸುತ್ತಿರುವ ಆಟಗಾರರಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಯಾವುದೇ ವಿನಾಯಿತಿ ನೀಡಿಲ್ಲ. ಅಂದರೆ ಮೇ 29 ರೊಳಗೆ ರಾಷ್ಟ್ರೀಯ ತಂಡವನ್ನು ಕೂಡಿಕೊಳ್ಳಬೇಕು ಎಂದು ಐಪಿಎಲ್ನಲ್ಲಿರುವ ಇಂಗ್ಲೆಂಡ್ ಆಟಗಾರರಿಗೆ ಸೂಚಿಸಲಾಗಿದೆ. ಹೀಗಾಗಿ ಐಪಿಎಲ್ನಲ್ಲಿರುವ ಇಂಗ್ಲೆಂಡ್ ಆಟಗಾರರು ಪ್ಲೇಆಫ್ ಪಂದ್ಯಗಳಿಗೆ ಅಲಭ್ಯರಾಗುವುದು ಖಚಿತ ಎನ್ನಬಹುದು.
ಇಂಗ್ಲೆಂಡ್-ವೆಸ್ಟ್ ಇಂಡೀಸ್ ಸರಣಿ ಯಾವಾಗ ಶುರು?
ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವಣ ಏಕದಿನ ಸರಣಿಯು ಮೇ 29 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಒಟ್ಟು 3 ಪಂದ್ಯಗಳನ್ನಾಡಲಾಗುತ್ತದೆ. ಇದಾದ ಬಳಿಕ ಜೂನ್ 6 ರಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಹೀಗಾಗಿ ಐಪಿಎಲ್ನಲ್ಲಿರುವ ಇಂಗ್ಲೆಂಡ್ ಆಟಗಾರರು ಈ ಸರಣಿಗಳಿಗಾಗಿ ರಾಷ್ಟ್ರೀಯ ತಂಡಕ್ಕೆ ಮರಳಬೇಕಾಗುತ್ತದೆ.
ಇಸಿಬಿ ಸ್ಪಷನೆ:
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಆರಂಭದಲ್ಲಿ ಆಟಗಾರರಿಗೆ ಐಪಿಎಲ್‌ನಲ್ಲಿ ಭಾಗವಹಿಸಲು ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (NOCs) ನೀಡಿತ್ತು. ಅದರಂತೆ ಮೇ 25 ರವರೆಗೆ ಅನುವು ಮಾಡಿಕೊಡಲಾಗಿತ್ತು. ಹೀಗಾಗಿಯೇ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಣ ಸರಣಿಯನ್ನು ಮೇ 29 ರಿಂದ ಆರಂಭಿಸಲು ನಿರ್ಧರಿಸಲಾಗಿದೆ.
ಆದರೆ ಇದೀಗ ಐಪಿಎಲ್ನ ಕೊನೆಯ ಹಂತದ ವೇಳಾಪಟ್ಟಿ ಬದಲಾಗಿದೆ. ಪಂದ್ಯಾವಳಿಯನ್ನು ಜೂನ್ 3ರವರೆಗೆ ವಿಸ್ತರಿಸಲಾಗಿದೆ. ಇದಾಗ್ಯೂ ಈ ಹಿಂದಿನ ಈ NOCಗಳನ್ನು ಪರಿಷ್ಕರಿಸಲಾಗುವುದಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ದೃಢಪಡಿಸಿದೆ. ಇದೇ ಕಾರಣದಿಂದ ಇಂಗ್ಲೆಂಡ್ ಆಟಗಾರರು ಮೇ 25 ರಂದು ತವರಿಗೆ ಮರಳುವ ಸಾಧ್ಯತೆ ಹೆಚ್ಚಿದೆ.
ಇಂಗ್ಲೆಂಡ್ ತಂಡಗಳು:
ಇಂಗ್ಲೆಂಡ್ ಏಕದಿನ ತಂಡ: ಹ್ಯಾರಿ ಬ್ರೂಕ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಟಾಮ್ ಬ್ಯಾಂಟನ್, ಜೇಕಬ್ ಬೆಥೆಲ್, ಜೋಸ್ ಬಟ್ಲರ್ , ಬ್ರೈಡನ್ ಕಾರ್ಸ್, ಬೆನ್ ಡಕೆಟ್, ಟಾಮ್ ಹಾರ್ಟ್ಲಿ, ವಿಲ್ ಜಾಕ್ಸ್, ಸಾಕಿಬ್ ಮಹಮೂದ್, ಮ್ಯಾಥ್ಯೂ ಪಾಟ್ಸ್, ಜೇಮೀ ಓವರ್ಟನ್ , ಆದಿಲ್ ರಶೀದ್, ಜೋ ರೂಟ್, ಜೇಮೀ ಸ್ಮಿತ್.
ಇಂಗ್ಲೆಂಡ್ ಟಿ20 ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಟಾಮ್ ಬ್ಯಾಂಟನ್, ಜೇಕಬ್ ಬೆಥೆಲ್ , ಜೋಸ್ ಬಟ್ಲರ್, ಬ್ರೈಡನ್ ಕಾರ್ಸೆ, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್ , ಸಾಕಿಬ್ ಮಹಮೂದ್, ಮ್ಯಾಥ್ಯೂ ಪಾಟ್ಸ್, ಜೇಮೀ ಓವರ್ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಲ್ಯೂಕ್ ವುಡ್.
ಇದನ್ನೂ ಓದಿ: IPL 2025: ಕೇವಲ 2 ಮ್ಯಾಚ್ಗೆ ಮಾತ್ರ: ಉಳಿದ ಪಂದ್ಯಗಳಿಂದ RCB ಆಟಗಾರ ಔಟ್
ಐಪಿಎಲ್ನಲ್ಲಿರುವ ಇಂಗ್ಲೆಂಡ್ ತಂಡದ ಆಟಗಾರರು:
- ಜೋಫ್ರಾ ಆರ್ಚರ್ (ರಾಜಸ್ಥಾನ್ ರಾಯಲ್ಸ್)
- ಜೇಕಬ್ ಬೆಥೆಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
- ಜೋಸ್ ಬಟ್ಲರ್ (ಗುಜರಾತ್ ಟೈಟಾನ್ಸ್)
- ವಿಲ್ ಜಾಕ್ಸ್ (ಮುಂಬೈ ಇಂಡಿಯನ್ಸ್),
- ಫಿಲ್ ಸಾಲ್ಟ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು).
- ಜೇಮೀ ಓವರ್ಟನ್ (ಚೆನ್ನೈ ಸೂಪರ್ ಕಿಂಗ್ಸ್).
