ಹೆಡ್ ಕೋಚ್ ಹುದ್ದೆಯಿಂದ ಗಂಭೀರ್ ತಲೆದಂಡ? ಸ್ಪಷ್ಟನೆ ನೀಡಿದ ಬಿಸಿಸಿಐ
Gautam Gambhir Test Coach Future: ಗೌತಮ್ ಗಂಭೀರ್ ಟೀಂ ಇಂಡಿಯಾ ಮುಖ್ಯ ಕೋಚ್ ಆದ ಬಳಿಕ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ತವರಿನಲ್ಲಿ ಸೌತ್ ಆಫ್ರಿಕಾ ವಿರುದ್ಧ ಸೋತ ಬಳಿಕ ಅವರನ್ನು ಟೆಸ್ಟ್ ಕೋಚ್ ಸ್ಥಾನದಿಂದ ತೆಗೆದುಹಾಕಿ ವಿವಿಎಸ್ ಲಕ್ಷ್ಮಣ್ ಅವರನ್ನು ನೇಮಿಸುವ ಬಗ್ಗೆ ವದಂತಿಗಳು ಹಬ್ಬಿದ್ದವು. ಆದರೆ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ವರದಿಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಸದ್ಯಕ್ಕೆ ಗಂಭೀರ್ ಅವರೇ ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ.

ಗೌತಮ್ ಗಂಭೀರ್ (Gautam Gambhir) ಟೀಂ ಇಂಡಿಯಾ ಮುಖ್ಯ ಕೋಚ್ ಆದ ಬಳಿಕ ತಂಡದ ಪ್ರದರ್ಶನದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಟಿ20 ಹಾಗೂ ಏಕದಿನ ಮಾದರಿಯಲ್ಲಿ ತಂಡದ ಪ್ರದರ್ಶನ ಉತ್ತಮವಾಗಿದ್ದರೂ, ಟೆಸ್ಟ್‌ನಲ್ಲಿ ಮಾತ್ರ ತಂಡದ ಪ್ರದರ್ಶನ ಕಳಪೆಯಾಗಿದೆ. ಅದರಲ್ಲೂ ತವರಿನಲ್ಲೇ ಕ್ಲೀನ್ ಸ್ವೀಪ್ ಮುಜುಗರಕ್ಕೆ ಒಳಗಾಗುವಷ್ಟು ಮಟ್ಟಕ್ಕೆ ತಂಡದ ಪ್ರದರ್ಶನ ಕುಸಿದಿದೆ. ಹೀಗಾಗಿ ಗಂಭೀರ್ ಅವರನ್ನು ಟೆಸ್ಟ್ ತಂಡದಿಂದ ಮುಖ್ಯ ಕೋಚ್ ಹುದ್ದೆಯಿಂದ ಹೊರಗಿಡಬೇಕು ಎಂಬ ಕೂಗು ಜೋರಾಗಿದೆ. ಇದೆಲ್ಲದರ ನಡುವೆ, ಗಂಭೀರ್ ಅವರನ್ನು ಟೆಸ್ಟ್ ತಂಡದಿಂದ ಹೊರಗಿಡುವ ಬಗ್ಗೆ ಬಿಸಿಸಿಐ (BCCI) ಚಿಂತಿಸುತ್ತಿದ್ದು, ಅವರ ಬದಲಿಗೆ ವಿವಿಎಸ್ ಲಕ್ಷ್ಮಣ್ (VVS Laxman) ಅವರನ್ನು ಈ ಸ್ಥಾನಕ್ಕೆ ತಂದುಕೂರಿಸಲು ಬಿಸಿಸಿಐ ಚಿಂತಿಸುತ್ತಿದೆ ಎಂದು ಕೆಲವು ದಿನಗಳಿಂದ ವರದಿಯಾಗುತ್ತಿದೆ. ಆದರೀಗ ಈ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಇದೆಲ್ಲ ಕೇವಲ ಊಹಾಪೋಹ ಎಂದಿದ್ದಾರೆ.
ವಿವಿಎಸ್ ಲಕ್ಷ್ಮಣ್ ಮುಂದಿನ ಕೋಚ್
ದಕ್ಷಿಣ ಆಫ್ರಿಕಾ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿ ಸೋಲಿನ ನಂತರ ಬಿಸಿಸಿಐ ಮಾಜಿ ಸ್ಟಾರ್ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಅವರನ್ನು ಸಂಪರ್ಕಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆಯ ಇತ್ತೀಚಿನ ವರದಿ ತಿಳಿಸಿತ್ತು. ವರದಿಯ ಪ್ರಕಾರ, ಮಂಡಳಿಯ ಅಧಿಕಾರಿಯೊಬ್ಬರು ಲಕ್ಷ್ಮಣ್ ಅವರೊಂದಿಗೆ ಟೆಸ್ಟ್ ತಂಡಕ್ಕೆ ತರಬೇತಿ ನೀಡುವ ಸಾಧ್ಯತೆಯ ಬಗ್ಗೆ ಅನೌಪಚಾರಿಕವಾಗಿ ಚರ್ಚಿಸಿದ್ದಾರೆ. ಆದರೆ ಲಕ್ಷ್ಮಣ್ ಮಾತ್ರ ಬಿಸಿಸಿಐ ಆಹ್ವಾನವನ್ನು ನಿರಾಕರಿಸಿದ್ದು, ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲೇ ತಾನು ಮುಂದುವರೆಯುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿತ್ತು.
ಗಂಭೀರ್‌ಗೆ ಬಿಸಿಸಿಐ ಬೆಂಬಲ
ಆದಾಗ್ಯೂ ಈ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅಧಿಕೃತ ಹೇಳಿಕೆಯನ್ನು ನೀಡುವ ಮೂಲಕ ಈ ಊಹಾಪೋಹಗಳಿಗೆ ಅಂತ್ಯ ಹಾಡಲು ಪ್ರಯತ್ನಿಸಿದ್ದಾರೆ. ಲಕ್ಷ್ಮಣ್ ಅವರನ್ನು ಕೋಚ್ ಆಗಿ ನೇಮಕ ಮಾಡಲು ಕೇಳಲಾಗಿದೆ ಎಂಬ ಹೇಳಿಕೆಯನ್ನು ಸೈಕಿಯಾ ತಳ್ಳಿಹಾಕಿದ್ದು, ‘ಹರಿದಾಡುತ್ತಿರುವ ಎಲ್ಲಾ ವರದಿಗಳು ಸುಳ್ಳು ಮತ್ತು ಕೇವಲ ಊಹಾಪೋಹಗಳು. ಈ ವರದಿಗಳು ಪ್ರಮುಖ ಮಾಧ್ಯಮಗಳಲ್ಲಿಯೂ ಕಾಣಿಸಿಕೊಂಡಿವೆ, ಆದರೆ ಅಂತಹ ಹೇಳಿಕೆಗಳಲ್ಲಿ ಯಾವುದೇ ಸತ್ಯವಿಲ್ಲ. ಬಿಸಿಸಿಐ ಈ ವರದಿಗಳನ್ನು ಸಂಪೂರ್ಣವಾಗಿ ನಿರಾಕರಿಸುತ್ತದೆ ಮತ್ತು ಅಂತಹ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಹೇಳಿದ್ದಾರೆ.
IND vs SA: ‘ನೀವು ಆತ್ಮಾವಲೋಕನ ಮಾಡಿಕೊಳ್ಳಬೇಕು’; ಗಂಭೀರ್ ತಂತ್ರವನ್ನು ಪ್ರಶ್ನಿಸಿದ ಕುಂಬ್ಳೆ
ಸಧ್ಯಕ್ಕೆ ದೇವಜಿತ್ ಸೈಕಿಯಾ ಅವರ ಸ್ಪಷ್ಟನೆಯ ನಂತರ ಟೆಸ್ಟ್ ತಂಡದಲ್ಲೂ ಗಂಭೀರ್ ಅವರೇ ಮುಖ್ಯ ಕೋಚ್ ಆಗಿ ಮುಂದುವರೆಯಲಿದ್ದಾರೆ ಎಂಬುದು ಖಚಿತವಾಗಿದೆ. ಆದರೆ ಮುಂದಿನ ಕೆಲವು ತಿಂಗಳುಗಳಲ್ಲಿ ಈ ಪರಿಸ್ಥಿತಿ ಮುಂದುವರಿಯುತ್ತದೆಯೇ? ಎಂಬುದು ಪ್ರಶ್ನೆಯಾಗಿದೆ. ಏಕೆಂದರೆ ಗಂಭೀರ್ ಅವರನ್ನು ಮೂರು ವರ್ಷಗಳಿಗೆ ಮಾತ್ರ ಈ ಹುದ್ದೆಗೆ ನೇಮಕ ಮಾಡಲಾಗಿದೆ. ಅದರಂತೆ ಅವರ ಅಧಿಕಾರಾವಧಿಯು 2027 ರ ವಿಶ್ವಕಪ್ವರೆಗೆ ಇರುತ್ತದೆ. ಆದಾಗ್ಯೂ, ಈ ಮಧ್ಯೆ ಟೀಂ ಇಂಡಿಯಾ ಟಿ20 ವಿಶ್ವಕಪ್ ಅನ್ನು ಸಹ ಆಡಲಿದೆ, ನಂತರ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನ ಬದಲಾಗದಿದ್ದರೆ, ಗಂಭೀರ್ ಸ್ಥಾನಕ್ಕೆ ಕುತ್ತು ಬರುವುದು ಖಚಿತ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:36 pm, Sun, 28 December 25
