T20 Blast Final: ರಣರೋಚಕ ಫೈನಲ್: ಗೆದ್ದು ಸಂಭ್ರಮಿಸಿದ ಬಳಿಕ ಅಂಪೈರ್ ನೋಬಾಲ್ ಅಂದ್ರು..!
T20 Blast Final: ಈ ಸಾಧಾರಣ ಸವಾಲು ಬೆನ್ನತ್ತಿದ ಲಾಂಕಾಶೈರ್ ತಂಡ ಕೂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಮೊದಲ ಓವರ್‌ನಲ್ಲಿ ಸ್ಪೋಟಕ ಬ್ಯಾಟ್ಸ್ಮನ್ ಫಿಲಿಪ್ ಸಾಲ್ಟ್ ವಿಕೆಟ್ ಪಡೆದು ಕ್ರಿಸ್ ವುಡ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.
ಇಂಗ್ಲೆಂಡ್ನಲ್ಲಿ ನಡೆದ ಟಿ20 ಬ್ಲಾಸ್ಟ್ ಫೈನಲ್ ಪಂದ್ಯದಲ್ಲಿ ಲಂಕಾಶೈರ್ ವಿರುದ್ದ ಕೇವಲ 1 ರನ್ಗಳ ರೋಚಕ ಜಯ ಸಾಧಿಸುವ ಮೂಲಕ ಹ್ಯಾಂಪ್ಶೈರ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಹ್ಯಾಂಪ್ಶೈರ್ ತಂಡದ ನಾಯಕ ಜೆ ವಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಲಂಕಾಶೈರ್ ಬೌಲರ್ಗಳ ಕರಾರುವಾಕ್ ದಾಳಿಗೆ ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಹ್ಯಾಂಪ್ಶೈರ್ ತಂಡದ ಮೊತ್ತ 15 ಆಗುವಷ್ಟರಲ್ಲೇ ಪ್ರಮುಖ 2 ವಿಕೆಟ್ ಕಳೆಕೊಂಡಿತು. ಇದಾಗ್ಯೂ ಆರಂಭಿಕ ಆಟಗಾರ ಬೆನ್ ಮೆಕ್ಡೆಮಾರ್ಟ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ ಮತ್ತೊಂದು ತುದಿಯಿಂದ ಉತ್ತಮ ಸಾಥ್ ಸಿಕ್ಕಿರಲಿಲ್ಲ. ಪರಿಣಾಮ 90 ರನ್ಗಳಿಗೆ ಹ್ಯಾಂಪ್ಶೈರ್ ತಂಡವು ಪ್ರಮುಖ 5 ವಿಕೆಟ್ ಕಳೆದುಕೊಂಡಿತು.
ಆರಂಭದಿಂದಲೇ ಮೇಲುಗೈ ಸಾಧಿಸಿದ್ದ ಲಂಕಾಶೈರ್ ಬೌಲರ್ಗಳ ವಿರುದ್ದ ಏಕಾಂಗಿ ಹೋರಾಟ ಮುಂದುವರೆಸಿದ ಮೆಕ್ಡೆಮಾರ್ಟ್ 36 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 4 ಫೋರ್ನೊಂದಿಗೆ 62 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನಿಂದಾಗಿ ಹ್ಯಾಂಪ್ಶೈರ್ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 152 ರನ್ ಕಲೆಹಾಕಿತು.
ಈ ಸಾಧಾರಣ ಸವಾಲು ಬೆನ್ನತ್ತಿದ ಲಾಂಕಾಶೈರ್ ತಂಡ ಕೂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಮೊದಲ ಓವರ್‌ನಲ್ಲಿ ಸ್ಪೋಟಕ ಬ್ಯಾಟ್ಸ್ಮನ್ ಫಿಲಿಪ್ ಸಾಲ್ಟ್ ವಿಕೆಟ್ ಪಡೆದು ಕ್ರಿಸ್ ವುಡ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದಾಗ್ಯೂ ಕೇಟನ್ ಜೆನ್ನಿಂಗ್ಸ್ (24) ಹಾಗೂ ಸ್ಟೀವನ್ ಕ್ರಾಫ್ಟ್ (36) 2ನೇ ವಿಕೆಟ್ಗೆ 60 ರನ್ಗಳ ಜೊತೆಯಾಟವಾಡಿದರು.
ಆದರೆ ದಿಢೀರ್ ಕುಸಿತಕ್ಕೊಳಗಾದ ಲಂಕಾಶೈರ್ 124 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಹ್ಯಾಂಪ್ಶೈರ್ ಬೌಲರ್ಗಳು ಕಠಿಣ ಪೈಪೋಟಿ ನೀಡಿದರು. ಪರಿಣಾಮ ಪಂದ್ಯದ ಕೊನೆಯ ಓವರ್‌ನಲ್ಲಿ ಲಂಕಾಶೈರ್ಗೆ ಗೆಲ್ಲಲು 11 ರನ್ಗಳ ಅವಶ್ಯಕತೆಯಿತ್ತು.
ನಾಥನ್ ಎಲ್ಲಿಸ್ ಎಸೆದ ಅಂತಿಮ ಓವರ್ನ ಮೊದಲ 3 ಎಸೆತಗಳಲ್ಲಿ 4 ರನ್ ಕಲೆಹಾಕಲಾಯಿತು. ಆದರೆ ನಾಲ್ಕನೇ ಎಸೆತದಲ್ಲಿ ಲ್ಯೂಕ್ ವುಡ್ ರನ್ ಔಟ್ ಆದರು. 5ನೇ ಎಸೆತದಲ್ಲಿ 2 ರನ್ ಗಳಿಸಿದರು. ಕೊನೆಯ ಒಂದು ಎಸೆತದಲ್ಲಿ 5 ರನ್ ಬೇಕಿತ್ತು. ನಾಥನ್ ಎಲ್ಲಿಸ್ ಎಸೆದ 6ನೇ ಎಸೆತದಲ್ಲಿ ಗ್ಲೀಸನ್ ಕ್ಲೀನ್ ಬೌಲ್ಡ್ ಆದರು. ಇತ್ತ ಹ್ಯಾಂಪ್ಶೈರ್ ಸಂಭ್ರಮಿಸುತ್ತಿದ್ದಂತೆ ಅಂಪೈರ್ ನೋಬಾಲ್ ಎಂದರು. ಮತ್ತೆ ಕೊನೆಯ ಎಸೆತದಲ್ಲಿ 3 ರನ್ ಗಳ ಗುರಿ ಪಡೆದ ಲಂಕಾಶೈರ್ ತಂಡವು 2 ರನ್ ಓಡಿದರು. ಇದರೊಂದಿಗೆ ಹ್ಯಾಂಪ್ಶೈರ್ ತಂಡವು 1 ರನ್ಗಳಿಂದ ರೋಚಕ ಜಯ ಸಾಧಿಸಿತು.
A no ball. A no ball.
The utter, utter drama of #Blast22.
What a match.#FinalsDay pic.twitter.com/cRYkesYjYr
— Vitality Blast (@VitalityBlast) July 16, 2022
1 ರನ್ಗಳಿಂದ ಚಾಂಪಿಯನ್ ಪಟ್ಟ ಅಲಂಕರಿಸಿದ ಹ್ಯಾಂಪ್ಶೈರ್ ಪರ ಸ್ಪೋಟಕ ಅರ್ಧಶತಕ ಸಿಡಿಸಿದ್ದ ಬೆನ್ ಮೆಕ್ಡೆಮಾರ್ಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.