AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದಲಾಗದ ಸೋಲಿನ ಕಾರಣ: ಹಾರ್ದಿಕ್ ಪಾಂಡ್ಯ ಬೇಸರ

IPL 2026 KKR vs MI: ಕೊಲ್ಕತ್ತಾದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 18.5 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 148 ರನ್ ಬಾರಿಸಿ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಬದಲಾಗದ ಸೋಲಿನ ಕಾರಣ: ಹಾರ್ದಿಕ್ ಪಾಂಡ್ಯ ಬೇಸರ
Hardik Pandya
ಝಾಹಿರ್ ಯೂಸುಫ್
|

Updated on: May 21, 2026 | 8:26 AM

Share

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 65ನೇ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್ ತಂಡ ಸೋಲನುಭವಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ ಕಲೆಹಾಕಿದ್ದು 147 ರನ್​ಗಳು ಮಾತ್ರ. ಈ ಗುರಿಯನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 18.5 ಓವರ್​ಗಳಲ್ಲಿ ಚೇಸ್ ಮಾಡಿ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ತಂಡವು ಎದುರಿಸಿದ ಹಿನ್ನಡೆಗೆ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ವಿಭಾಗದ ತಪ್ಪುಗಳೇ ಕಾರಣ ಎಂದು ಅವರು ಒಪ್ಪಿಕೊಂಡಿದ್ದಾರೆ.

ಬ್ಯಾಟಿಂಗ್ ವೈಫಲ್ಯ ಮತ್ತು ಪವರ್‌ಪ್ಲೇ ಕುಸಿತ:

ಈ ಪಂದ್ಯದಲ್ಲಿ ನಮ್ಮ ತಂಡವು ನಿರೀಕ್ಷಿತ ಮೊತ್ತಕ್ಕಿಂತ ಸುಮಾರು 20 ರನ್ ಕಡಿಮೆ ಗಳಿಸಿತು. ಮೊದಲ 6 ಓವರ್​ಗಳ ಅವಧಿಯಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತು. ಮಧ್ಯಮ ಕ್ರಮಾಂಕದಲ್ಲಿ ತಾವಾಗಲಿ ಅಥವಾ ತಿಲಕ್ ವರ್ಮಾ ಅವರಾಗಲಿ ದೀರ್ಘಾವಧಿ ಕ್ರೀಸ್‌ನಲ್ಲಿ ಉಳಿದು ದೊಡ್ಡ ಜೊತೆಯಾಟ ಆಡಿದ್ದರೆ, ಪಂದ್ಯವನ್ನು ಗೆಲ್ಲುವ ಉತ್ತಮ ಅವಕಾಶ ಇರುತ್ತಿತ್ತು ಎಂದು ಹಾರ್ದಿಕ್ ಪಾಂಡ್ಯ ಅಭಿಪ್ರಾಯಪಟ್ಟಿದ್ದಾರೆ.

ಬೌಲರ್‌ಗಳಿಗೆ ಸಹಕಾರಿಯಾದ ಪಿಚ್‌:

ಇತ್ತೀಚಿನ ಐಪಿಎಲ್ ಪಂದ್ಯಗಳು ಸಂಪೂರ್ಣವಾಗಿ ಬ್ಯಾಟರ್‌ಗಳ ಪರವಾಗಿರುತ್ತಿದ್ದು, ಬೌಲರ್‌ಗಳು ಅಸಹಾಯಕರಾಗುತ್ತಿದ್ದಾರೆ. ಆದರೆ, ಈ ಪಂದ್ಯದ ಪಿಚ್ ಬೌಲರ್‌ಗಳಿಗೂ ಸ್ವಲ್ಪ ಸಹಾಯ ಮಾಡಿತು. ಇಂತಹ ಸವಾಲಿನ ಪಿಚ್‌ಗಳಲ್ಲಿ ಆಡುವುದನ್ನು ತಾವು ಇಷ್ಟಪಡುವುದಾಗಿ ಹಾರ್ದಿಕ್ ಹೇಳಿದ್ದಾರೆ.

ಇದು ಬ್ಯಾಟರ್‌ಗಳು ಉತ್ತಮ ಕ್ರಿಕೆಟ್ ಆಡಿ ರನ್ ಗಳಿಸುವಂತೆ ಪ್ರೇರೇಪಿಸುತ್ತದೆ ಮತ್ತು ಪಂದ್ಯದಲ್ಲಿ ಸಮಬಲದ ಪೈಪೋಟಿ ತರುತ್ತದೆ ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ಕಳಪೆ ಫೀಲ್ಡಿಂಗ್:

ಈ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಅತ್ಯಂತ ಕಳಪೆಯಾಗಿದೆ ಎಂದು ನಾಯಕ ಬೇಸರ ವ್ಯಕ್ತಪಡಿಸಿದ್ದಾರೆ. ಪಂದ್ಯವನ್ನು ಗೆಲ್ಲಬೇಕಾದರೆ ಸಿಗುವ  ಅವಕಾಶಗಳನ್ನೂ ಬಳಸಿಕೊಳ್ಳಬೇಕು. ಆದರೆ, ಈ ಪಂದ್ಯದಲ್ಲೂ ಪ್ರಮುಖ ಕ್ಯಾಚ್‌ಗಳನ್ನು ಕೈಬಿಟ್ಟಿದ್ದರಿಂದ, ಪಂದ್ಯದುದ್ದಕ್ಕೂ ಎದುರಾಳಿ ತಂಡವನ್ನು ಬೆನ್ನಟ್ಟುವ ಪರಿಸ್ಥಿತಿ ನಿರ್ಮಾಣವಾಯಿತು. ಫೀಲ್ಡಿಂಗ್ ತಪ್ಪುಗಳಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ.

ನಮ್ಮ ತಂಡ ಈ ಬಾರಿಯ ಹೆಚ್ಚಿನ ಪಂದ್ಯಗಳನ್ನು ಸೋತಿರುವುದು ಬ್ಯಾಟಿಂಗ್ ವೈಫಲ್ಯ ಮತ್ತು ಕಳಪೆ ಫೀಲ್ಡಿಂಗ್​ನಿಂದ. ಅದು ಈ ಪಂದ್ಯದಲ್ಲೂ ಮುಂದುವರೆದಿದೆ. ಅಂದರೆ ನಮ್ಮ ಸೋಲಿನ ಕಾರಣ ಬದಲಾಗಿಲ್ಲ.  ಇದನ್ನು ಒಪ್ಪಿಕೊಳ್ಳಲೇಬೇಕು ಎಂದು ಹಾರ್ದಿಕ್ ಪಾಂಡ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಕೊನೆಯ ಪಂದ್ಯ ಗೆಲ್ಲಲೇಬೇಕು:

ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಮ್ಯಾಚ್​ನಲ್ಲಿ ಗೆದ್ದು, ಗೆಲುವಿನೊಂ ಸೀಸನ್​ ಮುಗಿಸಲು ಬಯಸಿದೆ. ಮುಂದಿನ ಪಂದ್ಯವು’ESA – Education and Sports for All ಯೋಜನೆಯಡಿ ನಡೆಯಲಿದ್ದು, ಕ್ರೀಡಾಂಗಣಕ್ಕೆ ಬರಲಿರುವ 25,000 ಬಡ ಮತ್ತು ವಿಶೇಷ ಮಕ್ಕಳಿಗೆ ಉತ್ತಮ ಮನರಂಜನೆ ನೀಡುವುದು ನಮ್ಮ ಗುರಿಯಾಗಿದೆ. ಅವರ ಮುಖದಲ್ಲಿ ನಗು ಮೂಡಿಸಿ, ಅವರಿಗೊಂದು ಜೀವಮಾನದ ನೆನಪು ನೀಡುವುದಾಗಿ ಹಾರ್ದಿಕ್ ಪಾಂಡ್ಯ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಐಪಿಎಲ್​ನಲ್ಲಿ ಹೊಸ ಇತಿಹಾಸ ಬರೆದ ಮನೀಶ್ ಪಾಂಡೆ

ಒಟ್ಟಾರೆಯಾಗಿ ಹೇಳುವುದಾದರೆ, ಮುಂಬೈ ಇಂಡಿಯನ್ಸ್ ತಂಡದ ಈ ಸೀಸನ್‌ನ ಪ್ರದರ್ಶನವು ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂಬುದನ್ನು ನಾಯಕ ಹಾರ್ದಿಕ್ ಪಾಂಡ್ಯ ಅವರ ಮಾತುಗಳೇ ಸ್ಪಷ್ಟಪಡಿಸುತ್ತವೆ. ಪವರ್‌ಪ್ಲೇನಲ್ಲಿನ ವಿಕೆಟ್ ಕುಸಿತ, ನಿರಂತರ ಕ್ಯಾಚ್ ಕೈಚೆಲ್ಲುವಿಕೆ ಮತ್ತು ಪ್ರಮುಖ ಸಂದರ್ಭಗಳಲ್ಲಿ ಜೊತೆಯಾಟದ ಕೊರತೆಯೇ ತಂಡದ ಹಿನ್ನಡೆಗೆ ಮುಖ್ಯ ಕಾರಣಗಳಾಗಿವೆ.

ಅಲ್ಲದೆ ಈ ಹಿಂದಿನತಪ್ಪುಗಳಿಂದ ಪಾಠ ಕಲಿತು ಮುನ್ನಡೆಯುವ ಭರವಸೆ ಹೊಂದಿರುವ ಮುಂಬೈ ತಂಡ, ತನ್ನ ಮುಂದಿನ ಇಎಸ್‌ಎ (ESA) ಪಂದ್ಯದಲ್ಲಿ ಕ್ರೀಡಾಂಗಣಕ್ಕೆ ಬರಲಿರುವ ಸಾವಿರಾರು ಮಕ್ಕಳನ್ನು ರಂಜಿಸಿ, ಸೀಸನ್ ಅನ್ನು ಸಕಾರಾತ್ಮಕವಾಗಿ ಮತ್ತು ಗೆಲುವಿನೊಂದಿಗೆ ಮುಗಿಸುವ ತವಕದಲ್ಲಿದೆ.

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More