ಭಾರತದಲ್ಲಿ ಕ್ರಿಕೆಟ್ ಕಲಿತು, ಭಾರತದ ವಿರುದ್ಧವೇ ಅಬ್ಬರಿಸಿದ ಹರ್‌ಪ್ರೀತ್

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026ರಲ್ಲಿ ಯುಎಇ ಪರ ಹರ್‌ಪ್ರೀತ್ ಸಿಂಗ್ ಭಾಟಿಯಾ ಭಾರತ ಎ ವಿರುದ್ಧ ಶತಕ ಸಿಡಿಸಿದ್ದಾರೆ. ತಮ್ಮ ಹುಟ್ಟಿದ ದೇಶದ ವಿರುದ್ಧವೇ ಶತಕ ಗಳಿಸಿದ ಹರ್‌ಪ್ರೀತ್, 120 ಎಸೆತಗಳಲ್ಲಿ ಮೂರಂಕಿ ಗಡಿ ತಲುಪಿದರು. ಈ ಮಾಜಿ ಅಂಡರ್-19 ಭಾರತೀಯ ಆಟಗಾರ ಮತ್ತು ಐಪಿಎಲ್ ಅನುಭವ ಹೊಂದಿರುವ ಭಾಟಿಯಾ, ಯುಎಇ ತಂಡಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಇದು ಯುಎಇ ಪರ ಅವರ ಮೊದಲ ಶತಕ.

ಭಾರತದಲ್ಲಿ ಕ್ರಿಕೆಟ್ ಕಲಿತು, ಭಾರತದ ವಿರುದ್ಧವೇ ಅಬ್ಬರಿಸಿದ ಹರ್‌ಪ್ರೀತ್
Harpreet Singh Bhatia

Updated on: Nov 24, 2026 | 3:24 PM

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026ರ 11ನೇ ಪಂದ್ಯದಲ್ಲಿ ಯುಎಇ ತಂಡದ ಬ್ಯಾಟ್ಸ್‌ಮನ್ ಹರ್‌ಪ್ರೀತ್ ಸಿಂಗ್ ಭಾಟಿಯಾ ಭರ್ಜರಿ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಭಾರತ ಎ ತಂಡದ ಬೌಲರ್‌ಗಳ ವಿರುದ್ಧ ಅಬ್ಬರಿಸಿದ ಎಡಗೈ ಬ್ಯಾಟ್ಸ್‌ಮನ್, ಕೇವಲ 120 ಎಸೆತಗಳಲ್ಲಿ ಶತಕ ಪೂರೈಸಿದರು. ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಹರ್‌ಪ್ರೀತ್ ಮೂರಂಕಿ ಗಡಿ ತಲುಪಿದ್ದು ವಿಶೇಷವಾಗಿತ್ತು. ಇನ್ನೊಂದು ವಿಶೇಷವೆಂದರೆ, ಹರ್‌ಪ್ರೀತ್ ತಾವು ಹುಟ್ಟಿದ ದೇಶವಾದ ಭಾರತದ ವಿರುದ್ಧವೇ ಈ ಶತಕ ಸಿಡಿಸಿದ್ದಾರೆ. ಛತ್ತೀಸ್‌ಗಢ ಮೂಲದವರಾದ ಹರ್‌ಪ್ರೀತ್, ಹಲವು ವರ್ಷಗಳ ಕಾಲ ಭಾರತದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು. ಬಳಿಕ ಭಾರತವನ್ನು ತೊರೆದು ಯುಎಇ ತಂಡದ ಪರ ಆಡಲು ಆರಂಭಿಸಿದರು. ಇದೀಗ ಯುಎಇ ಪರ ತಮ್ಮ ಮೊದಲ ಶತಕ ದಾಖಲಿಸಿ ಗಮನ ಸೆಳೆದಿದ್ದಾರೆ.

ಅಂಡರ್-19 ವಿಶ್ವಕಪ್ ಆಡಿದ್ದ ಹರ್‌ಪ್ರೀತ್

ಹರ್‌ಪ್ರೀತ್ ಸಿಂಗ್ ಭಾಟಿಯಾ 2010ರ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಆ ತಂಡದಲ್ಲಿ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಮತ್ತು ಹರ್ಷಲ್ ಪಟೇಲ್ ಅವರಂತಹ ಆಟಗಾರರೂ ಇದ್ದರು. ಈ ಟೂರ್ನಿಯಲ್ಲಿ ಹರ್‌ಪ್ರೀತ್ ಮೂರು ಇನ್ನಿಂಗ್ಸ್‌ಗಳಲ್ಲಿ 23.33ರ ಸರಾಸರಿಯಲ್ಲಿ 70 ರನ್ ಗಳಿಸಿದ್ದರು. ಇನ್ನು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ತಂಡಗಳ ಪರ ಒಟ್ಟು 86 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಹರ್‌ಪ್ರೀತ್, 45.40ರ ಸರಾಸರಿಯಲ್ಲಿ 5,403 ರನ್ ಕಲೆಹಾಕಿದ್ದಾರೆ. ಇದರಲ್ಲಿ 16 ಶತಕಗಳು ಸೇರಿವೆ. ಲಿಸ್ಟ್ ಎ ಕ್ರಿಕೆಟ್‌ನಲ್ಲೂ ಭಾರತ ಪರ ಆರು ಶತಕಗಳನ್ನು ಬಾರಿಸಿರುವ ಅವರು, ಇದೀಗ ಯುಎಇ ಪರ ಮತ್ತೊಂದು ಶತಕ ದಾಖಲಿಸಿದ್ದಾರೆ.

Loading...

ತಿಲಕ್ ಶತಕದಿಂದ ತಂಡಕ್ಕೇನು ಲಾಭ? ಮಾಜಿ ಕೋಚ್ ಅಸಮಾಧಾನ

ಐಪಿಎಲ್‌ನಲ್ಲೂ ಆಡಿರುವ ಅನುಭವ

ಹರ್‌ಪ್ರೀತ್ ಸಿಂಗ್‌ಗೆ ಐಪಿಎಲ್‌ನಲ್ಲೂ ಆಡಿದ ಅನುಭವವಿದೆ. ಅವರು ಪಂಜಾಬ್ ಕಿಂಗ್ಸ್, ಪುಣೆ ವಾರಿಯರ್ಸ್ ಇಂಡಿಯಾ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಪರ ಕಣಕ್ಕಿಳಿದಿದ್ದಾರೆ. ಕೆಕೆಆರ್ ಪರ ಕೇವಲ ಒಂದು ಪಂದ್ಯವನ್ನಾಡಿದ್ದ ಅವರು, ಆ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿರಲಿಲ್ಲ. ಪುಣೆ ವಾರಿಯರ್ಸ್ ಇಂಡಿಯಾ ಪರ ಮೂರು ಪಂದ್ಯಗಳು ಹಾಗೂ ಪಂಜಾಬ್ ಕಿಂಗ್ಸ್ ಪರ ಐದು ಪಂದ್ಯಗಳಲ್ಲಿ ಆಡಿದ್ದಾರೆ. ಒಟ್ಟಾರೆ ಒಂಬತ್ತು ಐಪಿಎಲ್ ಪಂದ್ಯಗಳಲ್ಲಿ 17.57ರ ಸರಾಸರಿಯಲ್ಲಿ 123 ರನ್ ಗಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us